
ನವದೆಹಲಿ[ಜೂ.17]: ‘ತೆರಿಗೆ ವಂಚಕರ ಸ್ವರ್ಗ’ ಎಂದೇ ಕುಖ್ಯಾತಿಗೀಡಾಗಿರುವ ಸ್ವಿಸ್ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ 50 ಉದ್ಯಮಿಗಳ ಹೆಸರನ್ನು ಭಾರತಕ್ಕೆ ಹಸ್ತಾಂತರಿಸಲು ಸ್ವಿಜರ್ಲೆಂಡ್ ಸರ್ಕಾರ ಮುಂದಾಗಿದೆ. ಇದರಿಂದಾಗಿ ಅಕ್ರಮ ಹಾದಿಯಲ್ಲಿ ಹಣ ದುಡಿದು, ಸ್ವಿಸ್ ಬ್ಯಾಂಕುಗಳಲ್ಲಿ ಬಚ್ಚಿಟ್ಟಿರುವ ವ್ಯಕ್ತಿಗಳಿಗೆ ನಡುಕ ಶುರುವಾಗಿದೆ.
50 ಮಂದಿ ಪಟ್ಟಿಯಲ್ಲಿ ಬೆಂಗಳೂರು, ದೆಹಲಿ, ಗುಜರಾತ್, ಕೋಲ್ಕತಾ ಹಾಗೂ ಮುಂಬೈ ವ್ಯಕ್ತಿಗಳೂ ಇದ್ದಾರೆ. ರಿಯಲ್ ಎಸ್ಟೇಟ್, ಹಣಕಾಸು ಸೇವೆಗಳು, ತಂತ್ರಜ್ಞಾನ, ದೂರಸಂಪರ್ಕ, ಪೇಂಟ್ಸ್, ಗೃಹ ಅಲಂಕಾರ, ಜವಳಿ, ಎಂಜಿನಿಯರಿಂಗ್ ಸರಕು, ಆಭರಣ ತಯಾರಿಕೆ ಕ್ಷೇತ್ರದ ಉದ್ಯಮಿಗಳ ಹೆಸರೂ ಇದೆ ಎಂದು ಹೇಳಲಾಗಿದೆ.
ಕಳೆದೊಂದು ವರ್ಷದ ಅವಧಿಯಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ 100 ಭಾರತೀಯರ ಹೆಸರನ್ನು ಅಲ್ಲಿನ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿತ್ತು. ಈಗ ಇನ್ನೂ 50 ಮಂದಿಯ ಹೆಸರನ್ನು ಭಾರತಕ್ಕೆ ನೀಡುವ ಪ್ರಕ್ರಿಯೆಯಲ್ಲಿ ತೊಡಗಿದೆ. ಇದಕ್ಕೂ ಮುನ್ನ ಸಂಬಂಧಿಸಿದ ಉದ್ಯಮಿಗಳಿಗೆ ಕಾಲಾವಕಾಶ ನೀಡಲಾಗಿತ್ತು. ಅವರು ಸೂಕ್ತ ದಾಖಲೆಗಳೊಂದಿಗೆ ತಮ್ಮ ಮಾಹಿತಿ ಭಾರತಕ್ಕೆ ಹಸ್ತಾಂತರವಾಗದಂತೆ ನೋಡಿಕೊಳ್ಳಬಹುದಿತ್ತು. 50 ಉದ್ಯಮಿಗಳ ಪೈಕಿ ಕೆಲವರು ಮಾತ್ರ ಮೇಲ್ಮನವಿ ಸಲ್ಲಿಸಿದ್ದರು. ಅವರ ದಾಖಲೆ ಸರಿ ಇಲ್ಲದ ಕಾರಣ ತಿರಸ್ಕರಿಸಲಾಗಿದೆ ಎಂದು ತಿಳಿದುಬಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.