ಭಾರತೀಯರ ದೈವ ನಂಬಿಕೆ ಮುಂದೆ 27 ಟ್ರಿಲಿಯನ್ ಅಮೆರಿಕನ್ ಆರ್ಥಿಕತೆ ತೃಣಕ್ಕೆ ಸಮಾನ

By Suvarna NewsFirst Published Jan 22, 2024, 10:53 AM IST
Highlights

ಭಾರತದ ಎಲ್ಲಾ ಮಹಾನ್ ದೇವಸ್ಥಾನಗಳನ್ನೂ ಅಯೋಧ್ಯಾ ರಾಮ ಮಂದಿರದ ರೀತಿಯಲ್ಲಿ ಪುನರ್ಜಿವಗೊಳಿಸಿದರೆ ಭಾರತೀಯರಲ್ಲಿ ಶಿಸ್ತು ಮೂಡುತ್ತದೆ. ಭಾರತೀಯರ ಬ್ರಿಟಿಷ್ ದಾಸ್ಯ ಸ್ಥಿತಿ ಅಂತ್ಯವಾಗಲಿದೆ. ಭಾರತದ ಆರ್ಥಿಕತೆ ಟ್ರಿಲಿಯನ್ ಮಟ್ಟದಲ್ಲಿ ಏರುವುದು ಗ್ಯಾರಂಟಿ.

-ರಂಗಸ್ವಾಮಿ ಮೂಕನಹಳ್ಳಿ

ಸಾಮಾನ್ಯ ಹಿಂದೂ ಅತಿ ಭಾವುಕ ಜೀವಿ. ಆತ ಎಂದಿಗೂ ಯಾವ ಧರ್ಮವನ್ನೂ ಹೀಯಾಳಿಸಿದವನಲ್ಲ. ಈ ವಿಶಾಲವಾದ ಭೂಮಿಯಲ್ಲಿ ನಾವೆಲ್ಲರೂ ಒಟ್ಟಾಗಿ ಬಾಳಲು ಸಾಧ್ಯ ಎಂದು ನಂಬಿದವನು. ಹೇಗೆ ಅತಿಯಾದ ಅಹಿಂಸೆ ಭೋದನೆಯಿಂದ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಕುಸಿತವನ್ನು ಕಂಡವು ಥೇಟ್ ಹಾಗೆ ಹಿಂದೂವಿನ ಅತಿ ಭಾವುಕತೆ, ಅತಿ ಒಳ್ಳೆಯತನವೇ ಅವನಿಗೆ ಮಾರಕವಾಯಿತು. ತನ್ನ ನೆಲದಲ್ಲೇ ಅವನು ಪರಕೀಯನಂತೆ ಬದುಕುವ ಮಟ್ಟಕ್ಕೆ ಕುಸಿದು ಬಿಟ್ಟದ್ದು ಮಾತ್ರ ವಿಪರ್ಯಾಸ. ಬ್ರಿಟಿಷ್ ಇತಿಹಾಸಕಾರರು ಬರೆಯುತ್ತಾರೆ 'ಒಂದು ಸುಳ್ಳು , ಕೇವಲ ಒಂದು ಸುಳ್ಳು ಹೇಳುವುದರ ಮೂಲಕ ತಮ್ಮ ಜೀವವನ್ನು ಉಳಿಸಿಕೊಳ್ಳುವ ಅವಕಾಶ ಇದ್ದರೂ, ಹಿಂದೂ ಕ್ರಾಂತಿಕಾರಿಗಳು ಸುಳ್ಳು ಹೇಳುತ್ತಿರಲಿಲ್ಲ, ನಗುನಗುತ್ತಾ ನೇಣಿನ ಕುಣಿಕೆಗೆ ಕೊರಳು ಕೊಡುತ್ತಿದ್ದರು,' ಎಂದು. ಬ್ರಿಟಿಷರಿಗೆ ಭಾರತದಲ್ಲಿದ್ದ ಈ ಮಾರಲ್ ಕಾನೂನು, ದೈವದ ಹೆಸರಿನಲ್ಲಿ ಜನ ನಡೆದುಕೊಳ್ಳುತ್ತಿದ್ದ ರೀತಿ ಆಶ್ಚರ್ಯ ತರಿಸುತ್ತದೆ. ನೂರಾರು ಪೀನಲ್ ಕೋಡ್‌ಗಳು, ಶಿಕ್ಷೆಯ ಭಯ ಅವರ ಸಮಾಜದಲ್ಲಿ, ಜನರಲ್ಲಿ ತರಲಾಗದ ಶಿಸ್ತು, ಭಾರತದಲ್ಲಿ ದೇವರ ಹೆಸರಿನಲ್ಲಿ ಹೆಚ್ಚು ಅಬ್ಬರವಿಲ್ಲದೆ ಜಾರಿಯಾಗಿ ಬಿಡುತ್ತಿತ್ತು. ನೈತಿಕತೆಯ ತಾಕತ್ತು ಅದು. 

Latest Videos

ಎಂದೂ ಆಗಿ ಹೋದ ಕಥೆಯಿಂದ ಈಗೇನು ಪ್ರಯೋಜನ ಎನ್ನುವ ಜನರಿಗಾಗಿ, ಸ್ವಾಮಿ ದೈವ ಕೃಪೆಯಿಂದ ಇಲ್ಲಿಯವರೆಗೆ  ಜಗತ್ತಿನ ಮೂರನೇ ಭಾಗ ದೇಶಗಳನ್ನು ನೋಡುವ ಅವಕಾಶ ನನ್ನದಾಗಿದೆ. ಭಾರತದಲ್ಲಿ ಇದ್ದಂತಹ (ಇಂದಿನ ಸ್ಥಿತಿ ಬೇರೆಯಿದೆ) ಬಡತನದ ಮಧ್ಯದಲ್ಲೂ ಇಲ್ಲಿನ ಕ್ರೈಂ ರೇಟ್ ನಗಣ್ಯ ಎನ್ನಬಹುದು. ಸಣ್ಣ ಪುಟ್ಟ ವಿಷಯಗಳಿಗೆ ಕಾದಾಡುವ , ಜೀವ ತೆಗೆಯುವ ಸೌತ್ ಅಮೆರಿಕನ್ ದೇಶಗಳು, ಸಬ್ ಸಹರಿಯನ್ ದೇಶಗಳನ್ನು ನೋಡಿದಾಗ, ಭಾರತ ಇಷ್ಟೊಂದು ಸಮಸ್ಯೆಗಳ ನಡುವೆಯೂ ಇಂದಿಗೂ ಆ ಮಟ್ಟದ ಕ್ರೈಂ ಇಲ್ಲದೆ ಇರುವುದಕ್ಕೆ ಕಾರಣ ದೈವ ಭಕ್ತಿ. ತಪ್ಪು ಮಾಡಿದರೆ ದೈವ ಶಿಕ್ಷಿಸುತ್ತದೆ ಎನ್ನುವ ನಂಬಿಕೆ. ಬದುಕು ನಿಂತಿರುವುದೇ ಭಕ್ತಿಯ ಮೇಲೆ. ಬ್ರಿಟಿಷರು, ಮೊಘಲರು ಭಾರತವನ್ನು ಗೆಲ್ಲಲು ಸಾಧ್ಯವಾದದ್ದು ನಮ್ಮ ನಂಬಿಕೆಯ ಮೇಲೆ ಘಾಸಿಮಾಡಿದ್ದರಿಂದ ಮಾತ್ರ . 
ನಮ್ಮ ಅತಿ ಮುಖ್ಯ ದೇವಸ್ಥಾನಗಳು ಇರುವ ಜಾಗವಿದೆಯಲ್ಲ ಅದು ಸುಮ್ಮನೆ ಆಯ್ದು ಕಟ್ಟಿದವಲ್ಲ, ಆ ನೆಲದಲ್ಲಿ ಅಂತಹ ವೈಬ್ರೇಶನ್, ಶಕ್ತಿ ಇರುವ ಕಾರಣ ಅಲ್ಲಿ ಮಂದಿರವನ್ನು ನಿರ್ಮಿಸಲಾಯಿತು. ಭಾರತದಲ್ಲಿ ಅಂತಹ ಐದು ಮಂದಿರಗಳ ಮೇಲೆ ಮೊಘಲರು ದಾಳಿ ಮಾಡುತ್ತಾರೆ. ಅವರಿಗೆ ಗೊತ್ತಿತ್ತು, ಮೂಲ ಶಕ್ತಿ ಕೇಂದ್ರಗಳನ್ನು ಉರುಳಿಸಿ ಬಿಟ್ಟರೆ ಸಾಕು, ಉಳಿದದ್ದು ತಾನಾಗೇ ಅವನತಿ ಹೊಂದುತ್ತವೆ ಎಂದು, ಹೀಗಾಗಿ ಅವರು ಅದನ್ನು ಮಾಡಿದರು. 

ವಿಶ್ವಕ್ಕೆ ಭಾರತ ಭರವಸೆಯ ಆಶಾಕಿರಣ: ಪ್ರಧಾನಿ ಮೋದಿ; ನಾನು ಹೆಮ್ಮೆಯ ಗುಜರಾತಿ ಎಂದ ಅಂಬಾನಿ

ಧ್ವಜವೆಂದರೆ ಬಟ್ಟೆಯಲ್ಲ
ಶ್ರೀ ಸಂತೋಷ್ ಅವರು 'ಧ್ವಜವೆಂದರೆ ಬಟ್ಟೆಯಲ್ಲ' ಎನ್ನುವ ಪುಸ್ತಕದಲ್ಲಿ ಮೊಘಲರು ಭಾರತಕ್ಕೆ ಮೊದಲು ಕಾಲಿಟ್ಟ ಬಗ್ಗೆ ರೋಚಕವಾಗಿ ವಿವರಣೆ ನೀಡಿದ್ದಾರೆ. ಅಲ್ಲಿ ಅವರು ಬರೆಯುತ್ತಾರೆ 'ಧ್ವಜದ ಬಗ್ಗೆ ನಮಗಿದ್ದ ಅಪಾರ ನಂಬಿಕೆ ನಮ್ಮ ಕುಸಿತಕ್ಕೂ ಕಾರಣವಾಯ್ತು,  ಎಂದು. ಯುದ್ಧದಲ್ಲಿ ಮೊಘಲರು ಗೆಲ್ಲಲು ಪ್ರಯತ್ನಿಸುವ ಬದಲಿಗೆ ಧ್ವಜವನ್ನು ನೆಲಕ್ಕೆ ಬೀಳಿಸುವುದರಲ್ಲಿ ಹೆಚ್ಚು ಗಮನ ನೀಡುತ್ತಾರೆ. ಧ್ವಜವನ್ನು ಕೆಳಕ್ಕೆ ಬೀಳಿಸುತ್ತಾರೆ. ಧ್ವಜ ಕೆಳಕ್ಕೆ ಬಿದ್ದರೆ ಅಪಶಕುನ, ಸೋಲು ಗ್ಯಾರಂಟಿ ಎನ್ನುವ ನಂಬಿಕೆಯಿಂದ, ಯುದ್ಧ ಗೆಲ್ಲುವ ಹಂತದದಲ್ಲಿದ್ದೂ ಸಾಮಾನ್ಯ ಹಿಂದೂ ಸೈನಿಕರು ಓಡಿ ಹೋಗುತ್ತಾರೆ. ಅದು ಮೊಘಲರಿಗೆ ಭಾರತದ ಬಾಗಿಲು ತೆರೆದುಕೊಡುತ್ತದೆ. 

ಹೆಚ್ಚಾಯ್ತು ತನ್ನ ತನದ ನಂಬಿಕೆ
ಇವತ್ತಿನ ದಿನಕ್ಕೆ ಮರಳಿ ಬಂದರೆ , ಸಾಮಾನ್ಯ ಹಿಂದುವಿನಲ್ಲಿ ಮತ್ತೆ ತನ್ನತನವನ್ನು , ನಂಬಿಕೆಯನ್ನು ಮರಳಿ ಕೊಡಲಾಗಿದೆ. ಗಂಟೆ ಗಂಟೆಗೂ ದುಪ್ಪಟ್ಟಾಗುತ್ತಿರುವ ರಾಮಮಂದಿರಕ್ಕೆ ಬರುತ್ತಿರುವ ದೇಣಿಗೆ ಅದಕ್ಕೆ ಸಾಕ್ಷಿ. ಕೇವಲ ಹತ್ತು ವರ್ಷದ ಕೆಳಗೆ ಬಾರ್ಬಿ ಬೋಂಬೆ ಕೈಲಿಡಿದು ಆಡುತ್ತಿದ್ದ ಮಕ್ಕಳ ಕೈಯಲ್ಲಿ ಈಗ ರಾಮ , ಸೀತೆ , ಲಕ್ಷ್ಮಣ , ಹನುಮರ ಬೊಂಬೆಗಳು ಬಂದಿವೆ , ಬರಲಿವೆ. ಸಾಲದಕ್ಕೆ ಅವುಗಳ ಬಾಯಲ್ಲಿ ಶ್ಲೋಕಗಳು ಬರಲಿವೆ. ಐ ಆಮ್ ಆ ಬಾರ್ಬಿ ಡಾಲ್ ಎನ್ನುವ ಹಾಡು ದೂರಾಗಲಿದೆ. ಅಲ್ಲಿ ಬಂಡವಾಳ ಹೂಡಿದ್ದ ಜನ ಈಗ ರಾಮ , ಹನುಮರ ಬೊಂಬೆ ನಿರ್ಮಿಸಲು ಬರುತ್ತಾರೆ. ಇದು ನಿಜವಾದ ಬದಲಾವಣೆ. 

ನಂಬಿಕೆ ಜೊತೆಗೆ ಬೆಳವಣಿಗೆ ಮಾತ್ರ ಸುಸ್ಥಿರ
ಐದು ಶಕ್ತಿ ಕೇಂದ್ರಗಳಲ್ಲಿ ರಾಮನ ಮಂದಿರವೂ ಒಂದು. ಇಂದು ಅಲ್ಲಿ ಮರಳಿ ಶಕ್ತಿಯನ್ನು ತುಂಬುವ ಕಾರ್ಯವಾಗುತ್ತಿದೆ. ಇದು ನಿರ್ವಿಘ್ನವಾಗಿ ಪೂರ್ಣಗೊಂಡರೆ ಅಲ್ಲಿಗೆ ಭಾರತಕ್ಕೆ ಮರಳಿ ತನ್ನ ಶಕ್ತಿಯನ್ನು ದೊರಕಿಸಿದಂತೆ! ಮುಂಬರುವ 15-20 ವರ್ಷಗಳಲ್ಲಿ ಭಾರತ ವಿಶ್ವ ಪಥವನ್ನು ನಿರ್ಧರಿಸುವ ದೇಶವಾಗಿ ಬದಲಾಗಲಿದೆ. ಈಗ ನೀವು ಕೇಳುತ್ತಿರುವ 27 ಟ್ರಿಲಿಯನ್ ಅಮೆರಿಕನ್ ಆರ್ಥಿಕತೆ 18 ಟ್ರಿಲಿಯನ್ ಚೀನಾ ಆರ್ಥಿಕತೆ ಎಲ್ಲವೂ ತೃಣಕ್ಕೆ ಸಮಾನ. ನಂಬಿಕೆಯ ಜೊತೆಗೆ ಬೆಳವಣಿಗೆ ಮಾತ್ರ ಸುಸ್ಥಿರ. ನಂಬಿಕೆ ಇಲ್ಲದ ಸಿರಿತನ ಡಿಪ್ರೆಶನ್ ತರುತ್ತದೆ ಅಷ್ಟೇ, ಭಾರತದಲ್ಲಿನ ದೈವದ ಮೇಲಿನ ನಂಬಿಕೆ ಮಾನಸಿಕ ಅರೋಗ್ಯ ಕಾಪಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ, ವಹಿಸಲಿದೆ. ಐನೂರಕ್ಕೂ ಹೆಚ್ಚು ವರ್ಷದ ನಂತರ ಸಾಮಾನ್ಯ ಹಿಂದೂವಿನ ಪಾಲಿಗೆ ಮತ್ತೆ ಮರಳಿ ಸುದಿನಗಳು ಸಿಕ್ಕಿವೆ. ಇದಕ್ಕಿಂತ ಹೆಚ್ಚಿನದು ಇನ್ನೇನು ಬೇಕು. 

ರಾಷ್ಟ್ರ ಮಂದಿರ ರಾಮ ಮಂದಿರಕ್ಕೆ ನಿಮ್ಮ ಸಂಕಲ್ಪ ಹೀಗಿರಲಿ!

ಭಾರತದ ಎಲ್ಲಾ ಮಹಾನ್ ದೇವಸ್ಥಾನಗಳನ್ನೂ ಈ ರೀತಿಯಲ್ಲಿ ಪುನರ್ಜಿವಗೊಳಿಸಿ, ಆರ್ಥಿಕತೆ ಟ್ರಿಲಿಯನ್ ಮಟ್ಟದಲ್ಲಿ ಏರದೆ ಹೋದರೆ ಮತ್ತೆ ಕೇಳಿ. 
ರಾಮ ಎನ್ನುವ ಪುರುಷೋತ್ತಮ ಭಾರತದಂತಹ ಅತಿ ದೊಡ್ಡ ದೇಶವನ್ನು ಒಗ್ಗೂಡಿಸುವ ರೀತಿ ಕಂಡಾಗ ವಿಸ್ಮಯವಾಗುತ್ತದೆ. ನೂರಾರು ವರ್ಷಗಳ ನಂತರವೂ ಒಬ್ಬ ವ್ಯಕ್ತಿ ತನ್ನ ಗುಣ ಮತ್ತು ನಡತೆಯಿಂದ ಜನ ಮಾನಸದಲ್ಲಿ ಉಳಿದುಕೊಳ್ಳಲು ಸಾಧ್ಯ ಎನ್ನುವುದಕ್ಕೆ ರಾಮ ಜೀವಂತ ಉದಾಹರಣೆ. ಇವತ್ತು ಕೋಟ್ಯಾಂತರ ಹಿಂದೂಗಳಂತೆ ನನ್ನ ಪಾಲಿಗೂ ಐತಿಹಾಸಿಕ ದಿನ. 

click me!