ಚೀನಾಕ್ಕೆ ಶಾಕ್‌ ನೀಡಲು ತೈವಾನ್‌, ಭಾರತ ಒಪ್ಪಂದ?

By Kannadaprabha NewsFirst Published Oct 21, 2020, 7:46 AM IST
Highlights

ಗಡಿಯಲ್ಲಿ ಕ್ಯಾತೆ, ಉಗ್ರರ ವಿಷಯದಲ್ಲಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಬೆಂಬಲ| ಚೀನಾಕ್ಕೆ ಶಾಕ್‌ ನೀಡಲು ತೈವಾನ್‌, ಭಾರತ ಒಪ್ಪಂದ?| ಎರಡೂ ದೇಶಗಳ ನಡುವೆ ವ್ಯಾಪಾರ ಒಪ್ಪಂದ ಸಂಭವ

ನವದೆಹಲಿ(ಅ.21): ಗಡಿಯಲ್ಲಿ ಕ್ಯಾತೆ, ಉಗ್ರರ ವಿಷಯದಲ್ಲಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಮೂಲಕ ಭಾರತಕ್ಕೆ ಮಗ್ಗುಲ ಮುಳ್ಳಾಗಿರುವ ಚೀನಾ ವಿರುದ್ಧ ತೈವಾನ್‌ ಅಸ್ತ್ರವನ್ನು ಪ್ರಯೋಗಿಸುವ ಬಗ್ಗೆ ಭಾರತ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ತೈವಾನ್‌ ಜೊತೆಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆಯಾದರೂ, ಸರ್ಕಾರದಲ್ಲಿ ಇದೀಗ ಇಂತಹ ಬೇಡಿಕೆ ಇಡುವವರ ಪರ ಬೆಂಬಲ ಹೆಚ್ಚಾಗಿದೆ ಎನ್ನಲಾಗಿದೆ. ಹೀಗಾಗಿ ಒಂದು ವೇಳೆ ವಿಶ್ವ ವ್ಯಾಪಾರ ಸಂಘಟನೆಯ ಮೂಲಕ ಉಭಯ ದೇಶಗಳು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದಲ್ಲಿ, ಅದು ಚೀನಾಕ್ಕೆ ಭರ್ಜರಿ ಸಂದೇಶ ರವಾನಿಸುವುದರ ಜೊತೆಗೆ ಭಾರತಕ್ಕೆ ಹೆಚ್ಚಿನ ಬಂಡವಾಳ ಆಕರ್ಷಣೆಗೂ ನೆರವಾಗಲಿದೆ.

ತೈವಾನ್‌ ಸ್ವತಂತ್ರ ದೇಶವಲ್ಲ. ಅದು ತನ್ನ ದೇಶದ ಭಾಗ ಎಂಬುದು ಚೀನಾದ ವಾದ. ಹೀಗಾಗಿ ಇದುವರೆಗೂ ಭಾರತ ತೈವಾನ್‌ ಅನ್ನು ಪ್ರತ್ಯೇಕ ದೇಶ ಎಂದು ಒಪ್ಪಿಕೊಂಡಿಲ್ಲ. ಆದರೆ ಪರಸ್ಪರ ದೇಶಗಳಲ್ಲಿ ಪ್ರತಿನಿಧಿ ಕಚೇರಿಗಳನ್ನು ಹೊಂದುವ ಮೂಲಕ ಅನಧಿಕೃತವಾಗಿ ವಿದೇಶಾಂಗ ಸಂಬಂಧ ಕಾಪಾಡಿಕೊಂಡು ಬಂದಿವೆ. ತೈವಾನ್‌ಗೆ ಯಾವುದೇ ದೇಶ ಮಾನ್ಯತೆ ನೀಡುವುದಕ್ಕೆ ಚೀನಾದ ವಿರೋಧವಿದೆ. ಅಂಥದ್ದರಲ್ಲೇ ತೈವಾನ್‌ಗೆ ಸಬ್‌ಮರೀನ್‌ ನೀಡುವ ನಿರ್ಧಾರವನ್ನು ಭಾರತ ಇತ್ತೀಚೆಗೆ ಕೈಗೊಂಡಿತ್ತು. ಅದಕ್ಕೂ ಕೆಲ ದಿನಗಳ ಮೊದಲು ತೈವಾನ್‌ ಫಾಕ್ಸ್‌ಕಾನ್‌ ಕಂಪನಿಗೆ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಿತ್ತು. ಅದರ ಬೆನ್ನಲ್ಲೇ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಮಾತು ಕೇಳಿಬಂದಿದೆ.

2019ರಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟಿನ ಮೊತ್ತ ಶೇ.18ರಷ್ಟುಏರಿಕೆಯಾಗಿ 7.2 ಶತಕೋಟಿ ಡಾಲರ್‌ಗೆ ತಲುಪಿತ್ತು.

click me!