ಚಿಕನ್ ಹಾಗೂ ಮೊಟ್ಟೆ ದರದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗುತ್ತಿದೆ. ಗಣೇಶ ಹಬ್ಬದ ಬಳಿಕ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿದೆ
ಜಗದೀಶ ವಿರಕ್ತಮಠ
ಬೆಳಗಾವಿ(ಆ.28): ಹಿಂದುಗಳಿಗೆ ಶ್ರಾವಣ ಮಾಸ ಪವಿತ್ರವಾದದು. ಈ ವೇಳೆ ಬಹುತೇಕರು ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಗಳಾಗುತ್ತಾರೆ. ಹೀಗಾಗಿ ಈ ಮಾಸದಲ್ಲಿ ಕುಕ್ಕುಟೋದ್ಯಮ ನೆಲಕಚ್ಚಿತ್ತು. ಇದರಿಂದ ಮೊಟ್ಟೆ, ಚಿಕನ್ ದರ ಕೂಡ ಕಡಿಮೆಯಾಗಿ ವ್ಯಾಪಾರ ನಿಧಾನವಾಗಿ ಸಾಗಿತ್ತು. ಆದರೆ, ಇದೀಗ ಶ್ರಾವಣ ಮಾಸ ಮುಗಿದಿದ್ದು, ಇದರಿಂದ ಕುಕ್ಕುಟೋದ್ಯಮಕ್ಕೆ ನವ ಚೈತನ್ಯ ಬಂದಂತಾಗಿದೆ. ಚಿಕನ್, ಮಟನ್, ಮೊಟ್ಟೆ ವ್ಯಾಪಾರ ಚುರುಕಾಗಿದೆ.
ಶ್ರಾವಣ ಮಾಸದಲ್ಲಿ ಇಡೀ ಒಂದು ತಿಂಗಳು ಮೊಟ್ಟೆ ಹಾಗೂ ಮಾಂಸಾಹಾರ ಪ್ರಿಯರು ಮಾಂಸದಿಂದ ದೂರವಿರುತ್ತಾರೆ. ಶ್ರಾವಣ ಮಾಸದಲ್ಲಿವಿಡೀ ಪ್ರವಚನ ಹಾಗೂ ಧಾರ್ಮಿಕರ ಚಟುವಟಿಕೆ ನಡೆಸಲಾಗುತ್ತಿದೆ. ಇದರಿಂದಾಗಿ ಮೊಟ್ಟೆ ಹಾಗೂ ಮಾಂಸಾಹಾರ ಸೇವನೆ ಮಾಡುವವರು ಒಂದು ತಿಂಗಳ ಮಟ್ಟಿಗೆ ಮಾಂಸಾಹಾರ ತ್ಯಜಿಸಿ, ಸಸ್ಯಾಹಾರದತ್ತ ಮುಖ ಮಾಡುತ್ತಾರೆ. ಇದರಿಂದಾಗಿ ಮೊಟ್ಟೆ ಹಾಗೂ ಮಾಂಸದ ವ್ಯಾಪಾರದಲ್ಲಿ ಗಣನೀಯವಾಗಿ ಕುಸಿತ ಕಂಡಿತ್ತು. ಇದರ ಜತೆಗೆ ಬೆಲೆಯಲ್ಲಿಯೂ ಕಡಿಮೆಯಾಗಿತ್ತು.
ಪತ್ತೆಯಾಗದ ಚಾಲಾಕಿ ಚಿರತೆ ಬಗ್ಗೆ ಟ್ರೋಲ್: ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಸಮೇತ ಬೆಳಗಾವಿ ರಾಜಕಾರಣಕ್ಕೂ ಎಂಟ್ರಿ!
ಶ್ರಾವಣ ಮಾಸ ಆರಂಭಕ್ಕೂ ಮೊದಲು ಪ್ರತಿ ಕೆಜಿಗೆ .280 ಇದ್ದ ಚಿಕನ್, ಶ್ರಾವಣ ಮಾಸದಲ್ಲಿ 160ಕ್ಕೆ ಏಕಾಏಕಿ ಕುಸಿದಿತ್ತು. ಇದೀಗ ಅಮವಾಸ್ಯೆ ಮುಕ್ತಾದ ನಂತರ ಸಂಪನ್ನಗೊಳ್ಳುವ ಶ್ರಾವಣ ಮಾಸದ ಆಚರಣೆಯಿಂದಾಗಿ ಕಳೆದ ಎರಡ್ಮೂರು ದಿನಗಳಲ್ಲಿ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ವಾರದಲ್ಲಿ .160 ಇದ್ದ ಚಿಕನ್ ಹಂತ ಹಂತವಾಗಿ .10 ನಂತೆ ಹೆಚ್ಚಳವಾಗುತ್ತಿದೆ. ಶನಿವಾರ .180ಗೆ ತಲುಪಿದ್ದು, ಅಮವಾಸ್ಯೆ ಮಾರನೆ ದಿನ .200ಕ್ಕೂ ಅಧಿಕವಾಗಲಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.
ಸಾಮಾನ್ಯವಾಗಿ ರಿಟೇಲ್ ಮಾರುಕಟ್ಟೆಯಲ್ಲಿ ಜುಲೈ ತಿಂಗಳಲ್ಲಿ ಮೊಟ್ಟೆಯ ದರ ಒಂದಕ್ಕೆ .6ರಿಂದ .7 ನಷ್ಟಿತ್ತು. ಇದೀಗ ಗಣನೀಯವಾಗಿ ಇಳಿಕೆಯಾಗಿದೆ. ಮೊದಲು ಹೋಲ್‌ಸೇಲ್ ಒಂದು ಗೂಡ್ಸ್ ವಾಹನದಲ್ಲಿ 25 ರಿಂದ 30 ಸಾವಿರ ಮೊಟ್ಟೆಗಳನ್ನು ಕಳುಹಿಸಿದ್ದರು, ಶ್ರಾವಣದಲ್ಲಿ 10 ರಿಂದ 12 ಸಾವಿರಕ್ಕೆ ಇಳಿಕೆಯಾಗಿದೆ. ಮೊಟ್ಟೆಗಳ ಕಳುಹಿಸಲು ಗೂಡ್‌್ಸ ವಾಹನಕ್ಕೆ ಪ್ರತಿ ಬಾರಿಗೆ 5 ರಿಂದ 10 ಸಾವಿರದವರೆಗೂ ಬಾಡಿಗೆ ಕೊಡಲಾಗುತ್ತಿದೆ. ವ್ಯಾಪಾರ ಹಾಗೂ ಮೊಟ್ಟೆಗಳ ಸರಬರಾಜು ಪ್ರಮಾಣ ಕಡಿಮೆಯಾಗಿದ್ದರೂ, ಬಾಡಿಗೆ ದರದಲ್ಲಿ ಕಡಿಮೆಯಾಗಿಲ್ಲ. ಶ್ರಾವಣಕ್ಕೂ ಮೊದಲು ಹೋಲ್‌ಸೇಲ್ ವ್ಯಾಪಾರಸ್ಥರಲ್ಲಿ .4.50 ರಿಂದ .5 ಆಸುಪಾಸಿನಲ್ಲಿದ್ದ ಮೊಟ್ಟೆದರ, ಚಿಲ್ಲರೆ ಮಾರುಕಟ್ಟೆಯಲ್ಲಿ .6 ರಿಂದ .7 ವರೆಗೂ ಮಾರಾಟ ಮಾಡಲಾಗುತ್ತಿತ್ತು. ಶ್ರಾವಣ ಮಾಸದ ಆರಂಭವಾದಾಗಿನಿಂದ ಸಗಟು ವ್ಯಾಪಾರದಲ್ಲಿ .3.90ಗೆ ಕುಸಿತ ಕಂಡಿದೆ. ಇದೀಗ .4.50ಗೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆ.5 ದಾಟಿದೆ.
ಬೆಳಗಾವಿ: ಮರದಲ್ಲಿ ನೇತು ಹಾಕಿದ್ದ ಚೀಲದಲ್ಲಿ ಗಂಡು ಶಿಶು ಪತ್ತೆ
ಇನ್ನೊಂದು ವಾರದಲ್ಲಿ ಬೆಲೆ, ವ್ಯಾಪಾರ ಹೆಚ್ಚಳ!
ಕೆಲವರು ನಿಯಮಿತವಾಗಿ ಮೊಟ್ಟೆ ಹಾಗೂ ಮಾಂಸಾಹಾರ ಸೇವಿಸುತ್ತಾರೆ. ಅದರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವ ಮರಾಠಾ ಸಮುದಾಯವರು ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಮೊಟ್ಟೆ, ಮಾಂಸಾಹಾರ ಸೇವಿಸುವುದನ್ನು ನಿಲ್ಲಿಸುತ್ತಾರೆ. ಮರಾಠ ಸಮುದಾಯ ಹೊರತುಪಡಿಸಿ ಇನ್ನುಳಿದ ಮೊಟ್ಟೆ ಹಾಗೂ ಮಾಂಸಾಹಾರ ಪ್ರಿಯರು ಶ್ರಾವಣ ಮಾಸದ ಮುಕ್ತಾಯ ಅಮಾವಾಸ್ಯೆ ಮುಗಿಯುತ್ತಿದ್ದಂತೆ ಎಂದಿನಂತೆ ತಮ್ಮ ಸೇವನೆ ಮುಂದುವರಿಸುತ್ತಾರೆ. ಆದರೆ ಮರಾಠಾ ಸಮುದಾಯರವು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಣೇಶ ಪ್ರತಿಷ್ಠಾಪನೆಗೊಂಡ ಎರಡನೇ ದಿನವಾಗಿರುವ ಇಲಿಯ ವಾರದಂದು, ಶ್ರಾವಣ ಮಾಸದ ಪಾಲನೆಯನ್ನು ಕೈ ಬಿಟ್ಟು ಮಾಂಸ ಹಾಗೂ ಮೊಟ್ಟೆಯನ್ನು ಸೇವನೆ ಮಾಡಲು ಆರಂಭಿಸುತ್ತಾರೆ. ಇದರಿಂದಾಗಿ ಚಿಕನ್, ಮೊಟ್ಟೆಸೇರಿದಂತೆ ಇನ್ನಿತರೆ ಮಾಂಸಾಹಾರದ ದರ ಹಾಗೂ ವ್ಯಾಪಾರ ವಹಿವಾಟಿನಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ. ಆದ್ದರಿಂದ ವ್ಯಾಪಾರಿಗಳು ಎಂದಿನಂತೆ ತಮ್ಮ ವ್ಯಾಪಾರ ವಹಿವಾಟು ನಡೆಸಲು ಇನ್ನೂ ಒಂದು ವಾರಗಳ ಕಾಲ ಕಾಯುವುದು ಅನಿವಾರ್ಯ.
ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಮೊಟ್ಟೆ ಹಾಗೂ ಚಿಕನ್ ವ್ಯಾಪಾರದಲ್ಲಿ ಗಣನೀಯವಾಗಿ ಕುಸಿತ ಕಂಡಿತ್ತು. ಇದರಿಂದಾಗಿ ಗೂಡ್ಸ್ ವಾಹನದ ಬಾಡಿಗೆ, ಅಂಗಡಿಯ ಬಾಡಿಗೆ ಜತೆಗೆ ಕೆಲಸಗಾರರ ಸಂಬಳ ನೀಡುವುದು ಕಷ್ಟವಾಗಿತ್ತು. ಇಂದು ತಿಂಗಳ ಅವಧಿಯಲ್ಲಿ ನೋ ಪ್ರಾಫಿಟ್, ನೋ ಲಾಸ್ ಎಂಬಂತೆ ವ್ಯಾಪಾರ, ವಹಿವಾಟನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ಚಿಕನ್ ಹಾಗೂ ಮೊಟ್ಟೆ ದರದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗುತ್ತಿದೆ. ಗಣೇಶ ಹಬ್ಬದ ಬಳಿಕ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿದೆ ಎಂಬ ಆಶಾಭಾವನೆ ಇಟ್ಟುಕೊಳ್ಳಲಾಗಿದೆ ಅಂತ ಮೊಟ್ಟೆ, ಚಿಕನ್ ವ್ಯಾಪಾರಿ ಪ್ರಶಾಂತ ಭಾದವನಕರ ತಿಳಿಸಿದ್ದಾರೆ.