
Business Desk:ಕಷ್ಟಪಟ್ಟು ದುಡಿದ ಹಣಕ್ಕೆ ಆದಾಯ ತೆರಿಗೆ ಕಟ್ಟುವಾಗ ಹೊಟ್ಟೆಯುರಿಯದೆ ಇರುತ್ತಾ? ಅದಾಯ ತೆರಿಗೆಯಿಂದ ಬಚಾವಾಗಲು ದುಡಿದ ಹಣದಲ್ಲಿ ಬಹುಪಾಲನ್ನು ಹೂಡಿಕೆ ಮಾಡಬೇಕಾದ ಅನಿವಾರ್ಯತೆ ಕೂಡ ಇದೆ. ಆದರೆ, ಎಷ್ಟೋ ಬಾರಿ ಇಂಥ ಹೂಡಿಕೆಯಿಂದ ತಕ್ಷಣದ ಅಗತ್ಯಗಳನ್ನು ಪೂರೈಸಿಕೊಳ್ಳಲು ಕಷ್ಟವಾಗುತ್ತದೆ. ಇನ್ನು ಹೂಡಿಕೆ ಮಾಡಿಲ್ಲವೆಂದ್ರೆ ಆದಾಯ ತೆರಿಗೆ ಹೆಸರಿನಲ್ಲಿ ಹಣ ಕೈಜಾರುತ್ತದೆ. ಒಟ್ಟಾರೆ ಅಡ್ಡಕತ್ತರಿಯಲ್ಲಿ ಸಿಲುಕಿದ ಸ್ಥಿತಿ. ಇದು ಭಾರತದಲ್ಲಿ ತಿಂಗಳ ವೇತನ ಪಡೆಯುವ ಬಹುಪಾಲು ಉದ್ಯೋಗಿಗಳ ಪಾಡು. ಹೂಡಿಕೆ ಮಾಡದೆಯೂ ಕೆಲವೊಂದು ಮಾರ್ಗಗಳ ಮೂಲಕ ತೆರಿಗೆ ಹಣ ಉಳಿತಾಯ ಮಾಡಲು ಸಾಧ್ಯವಿದೆ. ಆದರೆ, ಕೆಲವರಿಗೆ ಈ ಬಗ್ಗೆ ಮಾಹಿತಿಯಿರೋದಿಲ್ಲ. ಹೀಗಾಗಿ ಹೂಡಿಕೆ ಮಾಡೋದು ಅನಿವಾರ್ಯ ಎಂದು ಭಾವಿಸಿರುತ್ತಾರೆ. ನಿಮ್ಮ ವೇತನ ಕಡಿಮೆ ಆದಾಯ ತೆರಿಗೆ ಮಿತಿಯಲ್ಲಿದ್ದರೆ ಹೂಡಿಕೆ ಮಾಡದೆ ಆದಾಯ ತೆರಿಗೆ ಉಳಿತಾಯ ಮಾಡಲು ಸಾಧ್ಯವಿದೆ. ಹಾಗಾದ್ರೆ ಹೂಡಿಕೆ ಮಾಡದೆ ಆದಾಯ ತೆರಿಗೆ ಉಳಿತಾಯ ಮಾಡೋದು ಹೇಗೆ? ಈ ಕೆಳಗೆ ನೀಡಿರುವ ಐದು ಟಿಪ್ಸ್ ಫಾಲೋ ಮಾಡಿದ್ರೆ ನೀವು ತೆರಿಗೆ ಉಳಿತಾಯ ಮಾಡಬಹುದು.
1.ಎಚ್ ಆರ್ ಎ ಕ್ಲೇಮ್ ಮಾಡಿ
ಒಂದು ವೇಳೆ ನೀವು ತಿಂಗಳ ವೇತನ ಪಡೆಯುವ ಉದ್ಯೋಗಿಯಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10(13A)ಅಡಿಯಲ್ಲಿ ಮನೆ ಬಾಡಿಗೆ ಭತ್ಯೆ (HRA)ಕ್ಲೇಮ್ ಮಾಡಬಹುದು. ಇನ್ನು ಎಷ್ಟು ಮೊತ್ತವನ್ನು ನೀವು ಕ್ಲೇಮ್ ಮಾಡಬಹುದು ಎಂಬುದು ನಿಮ್ಮ ವೇತನ ಹಾಗೂ ಮನೆ ಬಾಡಿಗೆಯನ್ನು ಅವಲಂಬಿಸಿದೆ. ಈ ಪ್ರಯೋಜನವನ್ನು ಬಳಸಿಕೊಳ್ಳುವ ಮೂಲಕ ನೀವು ನಿರ್ದಿಷ್ಟ ಮೊತ್ತದ ತೆರಿಗೆ ಉಳಿತಾಯ ಮಾಡಬಹುದು.
ಮಹಿಳೆ ದುಡಿದ್ರೆ ಸಾಕಾ, ಉಳಿಸೋದು ಬೇಡ್ವಾ?ಈ ಎಲ್ಲ ಕಾರಣಕ್ಕೆ ಆಕೆ ಫೈನಾನ್ಷಿಯಲ್ ಪ್ಲ್ಯಾನಿಂಗ್ ಮಾಡ್ಲೇಬೇಕು!
2.ಎಲ್ ಟಿಎ ಕ್ಲೇಮ್
ನಿಮ್ಮ ವೇತನ ಪ್ಯಾಕೇಜ್ ನಲ್ಲಿ ಉದ್ಯೋಗದಾತ ಸಂಸ್ಥೆ ರಜೆ ಪ್ರವಾಸ ಭತ್ಯೆ (LTA) ಒದಗಿಸಿದ್ದರೆ, ನೀವು ಭಾರತದೊಳಗೆ ಪ್ರವಾಸ ಮಾಡಲು ಇದನ್ನು ಬಳಸಿದ್ದರೆ ಈ ಮೊತ್ತದ ಮೇಲೆ ತೆರಿಗೆ ವಿನಾಯ್ತಿ ಪಡೆಯಹುದು. ಈ ವಿನಾಯ್ತಿ ನಾಲ್ಕು ವರ್ಷಗಳಲ್ಲಿ ಎರಡು ಬಾರಿಯಷ್ಟೇ ಪಡೆಯಲು ಸಾಧ್ಯ. ಹೀಗಾಗಿ ನೀವು ಈ ಅವಧಿಗೆ ಅನುಗುಣವಾಗಿ ಪ್ರವಾಸದ ಯೋಜನೆ ರೂಪಿಸಿದರೆ ನಿಮ್ಮ ಎಲ್ ಟಿಎ ಮೇಲಿನ ತೆರಿಗೆ ಉಳಿತಾಯ ಮಾಡಬಹುದು.
3.ಸಾಮಾಜಿಕ ಕಾರ್ಯಗಳಿಗೆ ದಾನ
ನೀವು ಯಾವುದೋ ಸಮಾಜಮುಖಿ ಕಾರ್ಯಕ್ಕಾಗಿ ಹಣ ದಾನ ಮಾಡುವ ಮೂಲಕ ತೆರಿಗೆ ಉಳಿತಾಯ ಮಾಡಬಹುದು. ದಾನ ಪುಣ್ಯದ ಕೆಲಸವೂ ಹೌದು ಜೊತೆಗೆ ತೆರಿಗೆ ಕೂಡ ಉಳಿಸಬಹುದು. ನಿರ್ದಿಷ್ಟ ನಿಧಿ ಹಾಗೂ ಚಾರಿಟೇಬಲ್ ಸಂಸ್ಥೆಗಳಿಗೆ ದಾನ ಮಾಡಿದ ಹಣಕ್ಕೆ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಅರ್ಹ ಸಂಸ್ಥೆಗಳಿಗೆ ಹಣವನ್ನು ದಾನ ಮಾಡುವ ಮೂಲಕ ನೀವು ನಿಮ್ಮ ಮೇಲಿನ ತೆರಿಗೆ ಭಾರ ತಗ್ಗಿಸಿಕೊಳ್ಳಬಹುದು.
ಮಾ.31ರೊಳಗೆ ಈ ನಾಲ್ಕು ಕೆಲಸಗಳನ್ನು ಮಾಡಿ ಮುಗಿಸದಿದ್ರೆ ಜೇಬಿಗೆ ಹೊರೆ ಖಚಿತ!
4.ವೈದ್ಯಕೀಯ ವೆಚ್ಚಗಳು
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಡಿ ಅಡಿಯಲ್ಲಿ ನಿಮ್ಮ ಹಾಗೂ ಕುಟುಂಬ ಸದಸ್ಯರ ವೈದ್ಯಕೀಯ ವೆಚ್ಚಗಳಿಗೆ ತೆರಿಗೆ ಕಡಿತವನ್ನು ಕ್ಲೇಮ್ ಮಾಡಬಹುದು. ನೀವು ಎಷ್ಟು ಮೊತ್ತದ ತೆರಿಗೆ ಕಡಿತವನ್ನು ಕ್ಲೇಮ್ ಮಾಡಬಹುದು ಎಂಬುದು ನಿಮ್ಮ ವಯಸ್ಸು ಹಾಗೂ ನೀವು ಹೊಂದಿರುವ ಆರೋಗ್ಯ ವಿಮೆಯನ್ನು ಅವಲಂಬಿಸಿದೆ. ನಿಮ್ಮ ವೈದ್ಯಕೀಯ ವೆಚ್ಚಗಳ ದಾಖಲೆಗಳನ್ನು ಸಂಗ್ರಹಿಸಿಡುವ ಮೂಲಕ ನೀವು ತೆರಿಗೆ ಕಡಿತಕ್ಕೆ ಕ್ಲೇಮ್ ಮಾಡಬಹುದು.
5.ಶೈಕ್ಷಣಿಕ ಸಾಲದ ಬಡ್ಡಿ
ಒಂದು ವೇಳೆ ನಿಮ್ಮಅಥವಾ ನಿಮ್ಮ ಸಂಗಾತಿ ಅಥವಾ ಮಕ್ಕಳ ಹೆಸರಿನಲ್ಲಿ ಶೈಕ್ಷಣಿಕ ಸಾಲವಿದ್ರೆ ಅದರ ಮೇಲಿನ ಬಡ್ಡಿ ಮೇಲೆ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಈ ಕಡಿತವು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಇ ಅಡಿಯಲ್ಲಿ ಸಿಗಲಿದೆ. ಮರುಪಾವತಿ ಪ್ರಾರಂಭವಾದ ದಿನಾಂಕದಿಂದ ಗರಿಷ್ಠ ಎಂಟು ವರ್ಷಗಳ ತನಕ ತೆರಿಗೆ ಕ್ಲೇಮ್ ಮಾಡಬಹುದು. ಈ ತೆರಿಗೆ ಕಡಿತವನ್ನು ಕ್ಲೇಮ್ ಮಾಡುವ ಮೂಲಕ ನೀವು ತೆರಿಗೆ ಉಳಿತಾಯ ಮಾಡಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.