ರಷ್ಯಾ ಮೇಲಿನ ಆರ್ಥಿಕ ನಿರ್ಬಂಧ ಡಾಲರ್ ಗೆ ಮುಳುವಾಯ್ತಾ? ಭಾರತವೂ ಸೇರಿ ಕೆಲವು ರಾಷ್ಟ್ರಗಳಿಂದ ಅನ್ಯ ಕರೆನ್ಸಿ ಬಳಕೆ!

Published : Mar 10, 2023, 12:53 PM IST
ರಷ್ಯಾ ಮೇಲಿನ ಆರ್ಥಿಕ ನಿರ್ಬಂಧ ಡಾಲರ್ ಗೆ ಮುಳುವಾಯ್ತಾ? ಭಾರತವೂ ಸೇರಿ ಕೆಲವು ರಾಷ್ಟ್ರಗಳಿಂದ ಅನ್ಯ ಕರೆನ್ಸಿ ಬಳಕೆ!

ಸಾರಾಂಶ

ಜಾಗತಿಕ ವಹಿವಾಟು ಡಾಲರ್ ಅನ್ನು ಅವಲಂಬಿಸಿದೆ ಎಂಬುದು ಗೊತ್ತಿರುವ ವಿಚಾರವೇ. ಆದರೆ, ರಷ್ಯಾದ ಮೇಲಿನ ನಿರ್ಬಂಧದ ಬಳಿಕ ಡಾಲರ್ ಬಳಕೆ ತಗ್ಗುತ್ತಿದೆ ಎಂದು ಹೇಳಲಾಗಿದೆ. ಭಾರತ, ಚೀನಾ, ಅರ್ಜೆಂಟೈನಾ, ಬ್ರೆಜಿಲ್, ದಕ್ಷಿಣ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಡಾಲರ್ ಮೇಲಿನ ತಮ್ಮ ಅವಲಂಬನೆಯನ್ನು ತಗ್ಗಿಸುವ ಪ್ರಯತ್ನಕ್ಕೆ ಇತ್ತೀಚೆಗೆ ವೇಗ ನೀಡಿವೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕವೆಂಬಂತೆ  ರಷ್ಯಾದೊಂದಿಗಿನ ವಹಿವಾಟಿಗೆ ಭಾರತ ಈಗ ಡಾಲರ್ ಬಳಸುತ್ತಿಲ್ಲ. 

ನವದೆಹಲಿ (ಮಾ.10): ದ್ವಿತೀಯ ವಿಶ್ವ ಯುದ್ಧದ ಬಳಿಕ ಸುಮಾರು ಎಂಟು ದಶಕಗಳಿಂದ ಆರ್ಥಿಕ ಜಗತ್ತನ್ನು ಅಮೆರಿಕದ ಕರೆನ್ಸಿ ಡಾಲರ್ ಆಳುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆರ್ಥಿಕ ಜಗತ್ತಿನಲ್ಲಿ ಡಾಲರ್ ಪ್ರಾಬಲ್ಯ ಕುಸಿಯುತ್ತಿದೆಯಾ ಎಂಬ ಸಣ್ಣ ಅನುಮಾನವೊಂದು ಮೂಡುತ್ತಿದೆ. ಇದಕ್ಕೆ ಕಾರಣ ಉಕ್ರೇನ್ ಜೊತೆಗಿನ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಹೇರಲಾಗಿರುವ ಆರ್ಥಿಕ ನಿರ್ಬಂಧ. ರಷ್ಯಾದ ಮೇಲಿನ ಆರ್ಥಿಕ ನಿರ್ಬಂಧ ಡಾಲರ್ ಗೆ ಏಟು ನೀಡಿದೆ. ಭಾರತ ಸೇರಿದಂತೆ ಕೆಲವು ರಾಷ್ಟ್ರಗಳು ಅಂತಾರಾಷ್ಟ್ರೀಯ ವಹಿವಾಟಿಗೆ ಡಾಲರ್ ಬದಲು ಇತರ ಕರೆನ್ಸಿಗಳನ್ನು ಬಳಕೆ ಮಾಡುತ್ತಿವೆ. ಇದು ಭವಿಷ್ಯದಲ್ಲಿ ಜಾಗತಿಕ ಕರೆನ್ಸಿ ಸ್ಥಾನದಿಂದ ಡಾಲರ್ ಕೆಳಗಿಳಿಯುವಂತೆ ಮಾಡಲಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ರಷ್ಯಾ ಭಾರತ, ಚೀನಾ ಸೇರಿದಂತೆ  ಕೆಲವು ರಾಷ್ಟ್ರಗಳಿಗೆ ಕಚ್ಚಾ ತೈಲ ಪೂರೈಕೆ ಮಾಡುತ್ತಿದೆ. ಈ ವಹಿವಾಟುಗಳಿಗೆ ಡಾಲರ್ ಹೊರತುಪಡಿಸಿದ ಕರೆನ್ಸಿಗಳಲ್ಲೇ ಪಾವತಿ ಮಾಡಲಾಗುತ್ತಿದೆ. ಭಾರತ ಮತ್ತು ಚೀನಾ ಮಾತ್ರವಲ್ಲ, ಅರ್ಜೆಂಟೈನಾ, ಬ್ರೆಜಿಲ್, ದಕ್ಷಿಣ ಅಮೆರಿಕ, ಮಧ್ಯಪೂರ್ವ, ಈಶಾನ್ಯ ಏಷ್ಯಾದ ರಾಷ್ಟ್ರಗಳು ಡಾಲರ್ ಮೇಲಿನ ತಮ್ಮ ಅವಲಂಬನೆಯನ್ನು ತಗ್ಗಿಸುವ ಪ್ರಯತ್ನಕ್ಕೆ ಕಳೆದ ಕೆಲವು ತಿಂಗಳಿಂದ ವೇಗ ನೀಡಿವೆ. 

ರಷ್ಯಾಕ್ಕೆ ಡಾಲರ್ ನಲ್ಲಿ ಪಾವತಿ ಮಾಡದ ಭಾರತ
ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ನ್ಯಾಟೋ ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧ ವಿಧಿಸಿದ್ದರೂ ಭಾರತ ರಷ್ಯಾದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಿಲ್ಲ. ಇದರಿಂದ ವಿಶ್ವದಲ್ಲಿ ಅತೀಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತಕ್ಕೆ ರಷ್ಯಾ ಅತೀಹೆಚ್ಚು ಕಚ್ಚಾ ತೈಲ ಪೂರೈಕೆ ಮಾಡುವ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧದ ಹಿನ್ನೆಲೆಯಲ್ಲಿ ಭಾರತ ರಷ್ಯಾದ ಕಚ್ಚಾ ತೈಲಕ್ಕೆ ಡಾಲರ್ ಹೊರತುಪಡಿಸಿ ಬೇರೆ ಕರೆನ್ಸಿಗಳಲ್ಲಿ ಪಾವತಿ ಮಾಡುತ್ತಿದೆ. ಯುಎಇ ಕರೆನ್ಸಿ ದಿರ್ಹಂ ಹಾಗೂ ರಷ್ಯಾ ಕರೆನ್ಸಿ ರೂಬಲ್ ನಲ್ಲಿಯೇ ಭಾರತ ಪಾವತಿ ಮಾಡುತ್ತಿದೆ. ಕಳೆದ ಮೂರು ತಿಂಗಳಲ್ಲಿ ಎರಡೂ ದೇಶಗಳ ವಹಿವಾಟಿನ ಮೊತ್ತ ಶತಕೋಟಿ ಡಾಲರ್ ಮೀರಿದೆ. ಇದು ಸಹಜವಾಗಿಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೇಲೆ ಪರಿಣಾಮ ಬೀರಿದೆ. 

ಕ್ರಿಪ್ಟೋ ವ್ಯವಹಾರಗಳ ಮೇಲೆ ಇನ್ನು ಕೇಂದ್ರ ಸರ್ಕಾರ ನಿಗಾ: ಅಕ್ರಮ ಹಣ ವರ್ಗಾವಣೆ ಕಾಯ್ದೆ ವ್ಯಾಪ್ತಿಗೆ ಕ್ರಿಪ್ಟೋ..!

ಕುಸಿಯುತ್ತಿದೆಯಾ ಡಾಲರ್ ಪ್ರಾಬಲ್ಯ?
ಹಾಗಾದ್ರೆ ಜಾಗತಿಕ ವಹಿವಾಟಿನ ಕರೆನ್ಸಿ ಸ್ಥಾನವನ್ನು ಡಾಲರ್ ಕಳೆದುಕೊಳ್ಳುತ್ತಾ? ಸದ್ಯದಲ್ಲಿ ಅಂಥ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು. ಡಾಲರ್ ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ಪ್ರಮುಖ ಕರೆನ್ಸಿಯಾಗಿರಲಿದೆ ಎಂದು ತಜ್ಞರು ತಿಳಿಸಿದ್ದಾರೆ.  ಬೇರೆ ಯಾವುದೇ ಕರೆನ್ಸಿ ಆ ಸ್ಥಾನ ಆಕ್ರಮಿಸೋದು ಸದ್ಯ ಕಷ್ಟಸಾಧ್ಯ ಎಂದಿದ್ದಾರೆ. ಆದರೆ, ಹೆಚ್ಚಿನ ರಾಷ್ಟ್ರಗಳು ಡಾಲರ್ ಹೊರತುಪಡಿಸಿ ಇತರ ಕರೆನ್ಸಿಗಳಲ್ಲಿ ವ್ಯವಹಾರ ನಡೆಸಲು ಪ್ರಾರಂಭಿಸಿದರೆ ಡಾಲರ್ ಮೌಲ್ಯ ತಗ್ಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರ  ಡಾಲರ್ ನಿಧಾನಗತಿಯಲ್ಲಿ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.  ವಿಶ್ವದ ಕೇಂದ್ರೀಯ ಬ್ಯಾಂಕ್ ಗಳು ನಿರ್ವಹಣೆ ಮಾಡುತ್ತಿರುವ ಸುಮಾರು ಶೇ.60ಷ್ಟು ವಿದೇಶಿ ವಿನಿಮಯ ಸಂಗ್ರಹಗಳು ಡಾಲರ್ ನಲ್ಲೇ ಇವೆ. ಆದರೆ, ೀ ಪ್ರಮಾಣ 2000ನೇ ಸಾಲಿನಲ್ಲಿ ಶೇ.70ರಷ್ಟಿತ್ತು. ಅಂದರೆ ಶೇ.10ರಷ್ಟು ಕುಸಿತ ಕಂಡಿದೆ. ಇದೇ ಸಮಯದಲ್ಲಿ ಯುರೋಪಿಯನ್ ಒಕ್ಕೂಟಗಳ ಕರೆನ್ಸಿ ಯುರೋ ಪ್ರಮಾಣ ಹೆಚ್ಚಿದೆ. ಯುರೋ ಪ್ರಮಾಣ ಶೇ.18ರಿಂದ ಶೇ.20ಕ್ಕೆ ಸಮೀಪ ಹೆಚ್ಚಿದೆ. ಜಾಗತಿಕ ವಿದೇಶಿ ವಿನಿಮಯ ಸಂಗ್ರಹಣೆಯಲ್ಲಿ ಚೀನಾದ ಕರೆನ್ಸಿ ಯುವಾನ್ ಪ್ರಮಾಣ ಶೇ.3ರಷ್ಟಿದ್ದರೂ  2016ರ ಬಳಿಕ  ವೇಗವಾದ ಬೆಳವಣಿಗೆ ದಾಖಲಿಸಿದೆ. 

ಒಂದೇ ತಿಂಗಳಲ್ಲಿ ಬರೀ ಎರಡು ಷೇರುಗಳಿಂದ 650 ಕೋಟಿ ರೂ. ಗಳಿಸಿದ ರೇಖಾ ಜುಂಜುನ್ ವಾಲಾ!

ಡಾಲರ್ ಕುಸಿದ್ರೆ ಭಾರತಕ್ಕೇನು ಲಾಭ?
ಡಾಲರ್ ಮೌಲ್ಯ ಕುಸಿದಾಗ ಸಹಜವಾಗಿಯೇ ರೂಪಾಯಿ ಮೌಲ್ಯ ಹೆಚ್ಚುತ್ತದೆ. ಇದ್ರಿಂದ ಭಾರತದ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಲಿದೆ. ಹಾಗೆಯೇ ಚಾಲ್ತಿ ಖಾತೆ ಕೊರತೆ ತಗ್ಗಲಿದೆ. ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಬೆಲೆ ಮೇಲೆ ಕೂಡ ಇದು ಪರಿಣಾಮ ಬೀರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುತೇಕ ವಹಿವಾಟುಗಳು ಡಾಲರ್ ನಲ್ಲೇ ನಡೆಯುವ ಕಾರಣ ಮೌಲ್ಯ ಕುಸಿದಾಗ ಆಮದು ಮಾಡಿಕೊಳ್ಳುವ ಸರಕಿನ ಬೆಲೆ ಕೂಡ ತಗ್ಗುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!