ಕೊರೋನಾ ನಿಧಿ ಸಂಗ್ರಹಿಸಲು ಶ್ರೀಮಂತರಿಗೆ 40% ತೆರಿಗೆ ಹಾಕಿ| ಕೇಂದ್ರಕ್ಕೆ 50 ತೆರಿಗೆ ಅಧಿಕಾರಿಗಳ ಶಿಫಾರಸು| ವಿದೇಶಿ ಕಂಪನಿ ಮೇಲಿನ ತೆರಿಗೆ ಶೇ.5ಕ್ಕೇರಿಸಿ| ಈ ಶಿಫಾರಸಿಗೆ ಕೇಂದ್ರ ಸರ್ಕಾರ ಗರಂ
ಮುಂಬೈ(ಏ.27): ಕೊರೋನಾದಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಎದುರಿಸುವುದಕ್ಕೆ ನಿಧಿ ಸಂಗ್ರಹಿಸಲು ಶ್ರೀಮಂತರಿಗೆ ಶೇ.40ರಷ್ಟು‘ಸೂಪರ್ ರಿಚ್’ ತೆರಿಗೆ ವಿಧಿಸಬೇಕು, ಕೊರೋನಾ ಸೆಸ್ ಹೇರಬೇಕು ಎಂದು 50 ಉನ್ನತ ತೆರಿಗೆ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಆದರೆ ಈ ಶಿಫಾರಸಿಗೆ ಕೇಂದ್ರ ಸರ್ಕಾರ ತೀವ್ರ ಕಿಡಿಕಾರಿದೆ. ಅಧಿಕಾರಿಗಳ ಈ ವರ್ತನೆ ತಪ್ಪುಗ್ರಹಿಕೆಯಿಂದ ಕೂಡಿದೆ. ಇದು ಅಶಿಸ್ತಿನ ವರ್ತನೆ ಜತೆಗೆ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕೊರೋನಾ ಎಫೆಕ್ಟ್: ಭಾರತದ ಜಿಡಿಪಿ ಶೇ.1ಕ್ಕಿಂತ ಕೆಳಕ್ಕೆ ಕುಸಿಯುವ ಸಂಭವ
ಕೊರೋನಾ ಹಿನ್ನೆಲೆಯಲ್ಲಿ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಗಳು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಗೆ 44 ಪುಟಗಳ ಶಿಫಾರಸು ಸಲ್ಲಿಸಿದ್ದಾರೆ. ‘ವಿತ್ತೀಯ ಆಯ್ಕೆಗಳು ಮತ್ತು ಕೋವಿಡ್ ವ್ಯಾಧಿಗೆ ಪ್ರತಿಕ್ರಿಯೆ’ (ಫೋರ್ಸ್) ಎಂಬ ವರದಿ ಇದಾಗಿದೆ. ವರ್ಷಕ್ಕೆ 1 ಕೋಟಿ ರು.ಗಿಂತ ಅಧಿಕ ಆದಾಯವಿರುವ ಶ್ರೀಮಂತರಿಗೆ ಈಗ ವಿಧಿಸುತ್ತಿರುವ ಶೇ.30ರ ಆದಾಯ ತೆರಿಗೆಯ ಬದಲು ಶೇ.40 ಆದಾಯ ತೆರಿಗೆ ವಿಧಿಸಬೇಕು. 5 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಶ್ರೀಮಂತರಿಗೆ ಸಂಪತ್ತಿನ ತೆರಿಗೆ ವಿಧಿಸಬೇಕು. ಹಾಗೆಯೇ, ಭಾರತದಲ್ಲಿ ಉದ್ದಿಮೆ ನಡೆಸುತ್ತಿರುವ ವಿದೇಶಿ ಕಂಪನಿಗಳ ಆದಾಯದ ಮೇಲೆ ವಿಧಿಸುತ್ತಿರುವ ಮೇಲ್ತೆರಿಗೆಯನ್ನು ಈಗಿನ ಶೇ.2ರಿಂದ ಶೇ.5ಕ್ಕೆ ಏರಿಸಬೇಕು. ಕೊರೋನಾ ಸೆಸ್ ವಿಧಿಸಬೇಕು ಎಂದು ಸಲಹೆ ಮಾಡಿದ್ದಾರೆ.
ಚಿನ್ನದ ದರ 82,000 ರು.!: ಏನಿದರ ಲೆಕ್ಕಾಚಾರ?
ವಿವರಣೆ ಕೊಡಿ- ಕೇಂದ್ರ:
ಅಧಿಕಾರಿಗಳ ಈ ವರ್ತನೆ ಹಣಕಾಸು ಸಚಿವಾಲಯದ ಸಿಟ್ಟಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರ ಯಾವುದೇ ವರದಿ ಕೇಳಿಲ್ಲ. ಇಂತಹ ವರದಿ ಸಿದ್ಧಪಡಿಸುವುದು ಈ ಅಧಿಕಾರಿಗಳ ಕೆಲಸದ ಭಾಗವೂ ಆಗಿರಲಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಈ ವರ್ತನೆ ಅಶಿಸ್ತಿನದ್ದು. ಸರ್ಕಾರದ ಅನುಮತಿ ಪಡೆಯದೆಯೇ ಮಾಧ್ಯಮಗಳ ಮುಂದೆ ಅಧಿಕೃತ ವಿಚಾರಗಳ ಕುರಿತಂತೆ ವೈಯಕ್ತಿಕ ಅಭಿಪ್ರಾಯ ಹೇಳಬಾರದು ಎಂಬ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳಿಂದ ವಿವರಣೆ ಪಡೆಯಿರಿ ಎಂದು ಸಿಬಿಡಿಟಿ ಮುಖ್ಯಸ್ಥರಿಗೆ ಹಣಕಾಸು ಸಚಿವಾಲಯ ಸೂಚಿಸಿದೆ ಎಂದು ಮೂಲಗಳು ಹೇಳಿವೆ.