ಆದಾಯ ತೆರಿಗೆ ಇಲಾಖೆ ಇತ್ತೀಚಿನ ದಿನಗಳಲ್ಲಿ ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಹಾಗೂ ತೆರಿಗೆ ಪ್ರಕ್ರಿಯೆಗಳನ್ನು ಸರಳಗೊಳಿಸಲು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತಿದೆ. ಇದಕ್ಕೆ ಪೂರಕವಾಗಿ ಎಐಎಸ್ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದೆ. ಈ ಆ್ಯಪ್ ತೆರಿಗೆದಾರರಿಗೆ ತಮ್ಮ ವಾರ್ಷಿಕ ಮಾಹಿತಿ ಸ್ಟೇಟ್ಮೆಂಟ್ (ಎಐಎಸ್) ನಲ್ಲಿರುವ ಮಾಹಿತಿಯನ್ನು ನೋಡಲು ಅವಕಾಶ ಕಲ್ಪಿಸುತ್ತದೆ.
ನವದೆಹಲಿ (ಮಾ.23): ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ 'ಎಐಎಸ್ ಫಾರ್ ಟ್ಯಾಕ್ಸ್ ಪೇಯರ್' ಎಂಬ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಇದು ತೆರಿಗೆದಾರರಿಗೆ ತಮ್ಮ ವಾರ್ಷಿಕ ಮಾಹಿತಿ ಸ್ಟೇಟ್ಮೆಂಟ್ (ಎಐಎಸ್) ನಲ್ಲಿರುವ ಮಾಹಿತಿಯನ್ನು ನೋಡಲು ಅವಕಾಶ ಕಲ್ಪಿಸುತ್ತದೆ. ಈ ಅಪ್ಲಿಕೇಷನ್ ಗೂಗಲ್ ಪ್ಲೇ ಹಾಗೂ ಆ್ಯಪ್ ಸ್ಟೋರ್ ನಲ್ಲಿ ಲಭ್ಯವಿದೆ. ಈ ಆ್ಯಪ್ ತೆರಿಗೆದಾರರಿಗೆ ಎಐಎಸ್/ ಟಿಐಎಸ್ ಕುರಿತು ತೆರಿಗೆದಾರರಿಗೆ ಸಂಪೂರ್ಣ ಚಿತ್ರಣ ಒದಗಿಸುವ ಗುರಿ ಹೊಂದಿದೆ. ತೆರಿಗೆದಾರರಿಗೆ ಸಂಬಂಧಿಸಿ ವಿವಿಧ ಮೂಲಗಳಿಂದ ಕಲೆ ಹಾಕಿರುವ ಮಾಹಿತಿಯನ್ನು ಇದು ತೋರಿಸುತ್ತದೆ. ತೆರಿಗೆದಾರರು ಈ ಮೊಬೈಲ್ ಆ್ಯಪ್ ಬಳಸಿ ಟಿಡಿಎಸ್/ ಟಿಸಿಎಸ್, ಡಿವಿಡೆಂಡ್ಸ್, ಷೇರು ವಹಿವಾಟುಗಳು, ತೆರಿಗೆ ಪಾವತಿಗಳು, ಆದಾಯ ತೆರಿಗೆ ರೀಫಂಡ್ಸ್ ಹಾಗೂ ಎಐಎಸ್/ಟಿಐಎಸ್ ನಲ್ಲಿರುವ ಇತರ ಮಾಹಿತಿ ನೋಡಬಹುದು. ಹಾಗೆಯೇ ಆ್ಯಪ್ ನಲ್ಲಿ ಲಭ್ಯವಿರುವ ಮಾಹಿತಿ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲು ಕೂಡ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಎಐಎಸ್ ಆ್ಯಪ್ ಮೂಲಕ ತೆರಿಗೆದಾರರು ತಮ್ಮ ತೆರಿಗೆ ಪ್ರೊಫೈಲ್ ಅನ್ನೇ ನೋಡಬಹುದಾಗಿದೆ. ಇದರಿಂದ ತೆರಿಗೆ ಪಾವತಿಗೆ ಸಂಬಂಧಿಸಿದ ಗೊಂದಲಗಳು ಕೂಡ ತಗ್ಗಲಿವೆ.
ಎಐಎಸ್ ಅಂದ್ರೇನು
ಫಾರ್ಮ್ 26ASನಲ್ಲಿರುವ ತೆರಿಗೆದಾರನ ಸಂಪೂರ್ಣ ಮಾಹಿತಿಯನ್ನು ಒದಗಿಸುವ ಸೌಲಭ್ಯವೇ ವಾರ್ಷಿಕ ಮಾಹಿತಿ ವ್ಯವಸ್ಥೆ (AIS).ಇದರಲ್ಲಿ ಲಭ್ಯವಾಗುವ ಮಾಹಿತಿಗೆ ಸಂಬಂಧಿಸಿ ಅಭಿಪ್ರಾಯ ತಿಳಿಸಲು ತೆರಿಗೆದಾರರಿಗೆ ಅವಕಾಶವಿದೆ. ಈ ಅಭಿಪ್ರಾಯ ಅಥವಾ ಪೀಡ್ ಬ್ಯಾಕ್ ಬಳಿಕದ ರಿಪೋರ್ಟೆಡ್ ವ್ಯಾಲ್ಯೂ ಹಾಗೂ ಮಾಡಿಫೈಡ್ ವ್ಯಾಲ್ಯೂ ಅಂದರೆ ಪ್ರತಿ ವರ್ಗದಲ್ಲಿ ತೆರಿಗೆದಾರರ ಫೀಡ್ ಬ್ಯಾಕ್ ಪರಿಗಣಿಸಿದ ಬಳಿಕದ ವ್ಯಾಲ್ಯೂ ಇರುತ್ತದೆ.
EPF ಬಡ್ಡಿ ಮೊತ್ತದ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ? ಲೆಕ್ಕಾಚಾರ ಹೇಗೆ? ಇಲ್ಲಿದೆ ಮಾಹಿತಿ
ಉದ್ದೇಶವೇನು?
ತೆರಿಗೆದಾರರಿಗೆ ಅನ್ ಲೈನ್ ಫೀಡ್ ಬ್ಯಾಕ್ ಅವಕಾಶದ ಜೊತೆಗೆ ತೆರಿಗೆ ಕುರಿತು ಸಂಪೂರ್ಣ ಮಾಹಿತಿ ಒದಗಿಸೋದು ಎಐಎಸ್ ಉದ್ದೇಶವಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯನ್ನು ಇನ್ನಷ್ಟು ಸುಗಮವಾಗಿಸಲು ಎಐಎಸ್ ನೆರವು ನೀಡುತ್ತದೆ.
ಬಳಸೋದು ಹೇಗೆ?
ಈ ಮೊಬೈಲ್ ಆ್ಯಪ್ ಬಳಸಲು ತೆರಿಗೆದಾರರು ಮೊದಲಿಗೆ ಪ್ಯಾನ್ ಸಂಖ್ಯೆ ನೀಡುವ ಮೂಲಕ ಆ್ಯಪ್ ನಲ್ಲಿ ನೋಂದಣಿ ಮಾಡಿಸಬೇಕು. ಇದಾದ ಬಳಿಕ ತೆರಿಗೆದಾರರ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಗೆ ಕಳುಹಿಸಿರುವ ಒಟಿಪಿ ಬಳಸಿ ದೃಢೀಕರಿಸಬೇಕು. ಒಮ್ಮೆ ದೃಢೀಕರಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತೆರಿಗೆದಾರ ನಾಲ್ಕು ಅಂಕೆಯ ಪಿನ್ ಅಥವಾ ಪಾಸ್ ವರ್ಡ್ ಅನ್ನು ಅಳವಡಿಸಬೇಕು. ಈ ಪಿನ್ ಮೂಲಕವೇ ಮೊಬೈಲ್ ಆ್ಯಪ್ ಗೆ ಲಾಗಿನ್ ಆಗಬಹುದು.
Annual Closing: ಮಾ.31ರವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳು ಓಪನ್!
ಎರಡು ವರ್ಗದ ಮಾಹಿತಿ
ಎಐಎಸ್ ನಲ್ಲಿ ಕಾಣಸಿಗುವ ಮಾಹಿತಿಯನ್ನು ಎರಡು ವರ್ಗಗಳಾಗಿ ವಿಂಗಡಿಸಬಹುದು. ಒಂದು ಸಾಮಾನ್ಯ ಮಾಹಿತಿ ಹಾಗೂ ಇನ್ನೊಂದು ಟಿಡಿಎಸ್/ ಟಿಸಿಎಸ್ ಮಾಹಿತಿ. ಸಾಮಾನ್ಯ ಮಾಹಿತಿಯಲ್ಲಿ ತೆರಿಗೆದಾರರ ಹೆಸರು, ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ, ಜನ್ಮದಿನಾಂಕ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಮನೆ ವಿಳಾಸ ಇತ್ಯಾದಿ ಮಾಹಿತಿ ಇರುತ್ತದೆ. ಇನ್ನೊಂದು ವರ್ಗದಲ್ಲಿ ಟಿಡಿಎಸ್ ಅಥವಾ ಟಿಸಿಎಸ್ ಮಾಹಿತಿಯಿರುತ್ತದೆ. ತೆರಿಗೆ ಪಾವತಿ, ಎಸ್ ಎಫ್ ಟಿ ಮಾಹಿತಿ, ಡಿಮ್ಯಾಂಡ್ ಹಾಗೂ ರೀಫಂಡ್ ಮತ್ತಿತರ ಮಾಹಿತಿ ಇರುತ್ತದೆ. ಇದರಲ್ಲಿನ ಇತರ ಮಾಹಿತಿಯಲ್ಲಿ ರೀಫಂಡ್ ಮೇಲಿನ ಬಡ್ಡಿ, ವಿದೇಶಿ ಕರೆನ್ಸಿ ಖರೀದಿ, ವಿದೇಶಗಳಿಗೆ ಹಣ ವರ್ಗಾವಣೆ ಮಾಹಿತಿ ಇರುತ್ತದೆ. ಎಐಎಸ್ ಆ್ಯಪ್ ನಿಂದ ತೆರಿಗೆದಾರರು ತೆರಿಗೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಕ್ಷಣಕ್ಕೆ ನೋಡಲು ಸಾಧ್ಯವಾಗಲಿದೆ.