
ಐಐಟಿ ಬಾಂಬೆಯಂತಹ ದೇಶದ ಅತ್ಯುನ್ನತ ತಂತ್ರಜ್ಞಾನ ಸಂಸ್ಥೆಯಲ್ಲಿ ಪದವಿ ಪಡೆದ ತಕ್ಷಣ ಯಾರಿಗಾದರೂ ಸುಲಭವಾಗಿ ಉದ್ಯೋಗ ಸಿಗುತ್ತದೆ, ಜೀವನ ಸೆಟಲ್ ಆಗುತ್ತದೆ ಎಂಬ ಬಲವಾದ ನಂಬಿಕೆಯಿದೆ. ಆದರೆ, ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದ ಅನಿಶ್ಚಿತತೆಯ ನಡುವೆ 21 ವರ್ಷದ ಐಐಟಿ ಬಾಂಬೆ ಪದವೀಧರ ಸೋಹಮ್ ಅವರ ಜೀವನ ಸಂಪೂರ್ಣ ವಿಭಿನ್ನವಾದ ಹಾದಿಯನ್ನು ತುಳಿದಿದೆ. ಇಂಟರ್ನ್‌ಶಿಪ್, ಸ್ವಂತ ಸ್ಟಾರ್ಟ್‌ಅಪ್ ಪ್ರಯೋಗ, ಕನಸಿನ ಕೆಲಸದ ಲಭ್ಯತೆ, ನಂತರ ಕೆಲವೇ ತಿಂಗಳಲ್ಲಿ ಉದ್ಯೋಗ ಕಳೆದುಕೊಂಡ ಆಘಾತ ಹೀಗೆ ತಮ್ಮ ರೋಲರ್‌ಕೋಸ್ಟರ್ ವೃತ್ತಿಜೀವನದ ಪ್ರಯಾಣವನ್ನು ಅವರು 'X' (ಟ್ವಿಟರ್) ತಾಣದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಅಖಿಲ ಭಾರತ ಮಟ್ಟದ JEE ಪರೀಕ್ಷೆಯಲ್ಲಿ 1296ನೇ ರ್ಯಾಂಕ್ ಗಳಿಸಿದ ಸೋಹಮ್, ಐಐಟಿ ಬಾಂಬೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗಕ್ಕೆ ಪ್ರವೇಶ ಪಡೆದರು. ವ್ಯಾಸಂಗ ಮಾಡುವ ಅವಧಿಯಲ್ಲೇ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಮತ್ತು ಗಣಿತ ಬೋಧಿಸುತ್ತಿದ್ದರು. ಜೊತೆಗೆ 'ಮ್ಯಾಟಿಕ್ಸ್' ಮತ್ತು 'ವೈ ಸಿ ಶಾರ್ಟ್‌ಲಿಸ್ಟ್' ಹೊಂದಿದ್ದ ಸಂಸ್ಥೆ 'ರಾವೆನ್'ನಲ್ಲಿ ಇಂಟರ್ನ್‌ಶಿಪ್ ಪೂರೈಸಿದರು.
ನಂತರ ತಮ್ಮದೇ ಆದ ಸ್ವಂತ ಪ್ರಾಜೆಕ್ಟ್ ಒಂದನ್ನು ಪ್ರಾರಂಭಿಸಲು ನಿರ್ಧರಿಸಿದರು. ಡೊಮೇನ್ ಮತ್ತು ಹೋಸ್ಟಿಂಗ್ ಖರೀದಿಸಲು ಹಣವಿಲ್ಲದೆ ರೆಡ್ಡಿಟ್ (Reddit) ಸಮುದಾಯದ ನೆರವು ಕೋರಿದರು. ಹಲವು ಸುತ್ತಿನ ಚರ್ಚೆಗಳ ನಂತರ ಹೂಡಿಕೆದಾರರೊಬ್ಬರು ಇವರ ಕಲ್ಪನೆಗೆ ಬೆಂಬಲ ನೀಡಿದರು. ಈ ಉತ್ಪನ್ನವು 700ಕ್ಕೂ ಹೆಚ್ಚು ಡೌನ್‌ಲೋಡ್ ಹಾಗೂ 60 ದೈನಂದಿನ ಸಕ್ರಿಯ ಬಳಕೆದಾರರನ್ನು ತಲುಪಿತಾದರೂ, ಅಂತಿಮವಾಗಿ 6 ತಿಂಗಳ ನಂತರ ಆ ಪ್ರಾಜೆಕ್ಟ್ ಅನ್ನು ಸ್ಥಗಿತಗೊಳಿಸಬೇಕಾಯಿತು.
ಕಾಲೇಜು ಕ್ಯಾಂಪಸ್ ಪ್ಲೇಸ್‌ಮೆಂಟ್ ಸಮಯದಲ್ಲಿ, ಮೆಕ್ಯಾನಿಕಲ್ ವಿಭಾಗದಿಂದ 'ಫಿನ್‌ಟೆಕ್' ದೈತ್ಯ 'ಸ್ಟ್ರೈಪ್' (Stripe) ಕಂಪನಿಯ ಸಂದರ್ಶನಕ್ಕೆ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಸೋಹಮ್. ಮೂರು ಸುತ್ತುಗಳನ್ನು ಯಶಸ್ವಿಯಾಗಿ ಪೂರೈಸಿದರೂ ಅಂತಿಮ ಸುತ್ತಿನಲ್ಲಿ ಹಿನ್ನಡೆಯಾಯಿತು. ಆದರೆ, ಶೀಘ್ರದಲ್ಲೇ ಅವರಿಗೆ 'ಕ್ರಾನಿಕಲ್' ಕಂಪನಿಯಿಂದ ತಿಂಗಳಿಗೆ ಸುಮಾರು ₹1.65 ಲಕ್ಷ ವೇತನದ 'ಕನಸಿನ ಹುದ್ದೆ' ಅರಸಿಬಂತು. ಜನವರಿ 2026 ರಲ್ಲಿ ಅಂತಿಮ ಸೆಮೆಸ್ಟರ್‌ನಲ್ಲಿದ್ದಾಗಲೇ ಅವರು ಕಂಪನಿಯನ್ನು ಸೇರಿಕೊಂಡರು.
ಅಂದುಕೊಂಡಂತೆ ಎಲ್ಲವೂ ಸಾಗುತ್ತಿದ್ದರೂ, ಕೆಲವೇ ತಿಂಗಳಲ್ಲಿ ಕಂಪನಿಯ ಸನ್ನಿವೇಶ ಹಠಾತ್ತಾಗಿ ಬದಲಾಯಿತು. ಜೂನ್ 2026 ರಲ್ಲಿ ನಮ್ಮ ತಂಡದ ಗಾತ್ರ 20 ರಿಂದ ಏಕಾಏಕಿ 4 ಕ್ಕೆ ಕುಸಿಯಿತು. ದುರದೃಷ್ಟವಶಾತ್, ಉಳಿದುಕೊಂಡ ಆ ನಾಲ್ಕು ಜನರಲ್ಲಿ ನಾನಿರಲಿಲ್ಲ ಎಂದು ಸೋಹಮ್ ತಮ್ಮ ಲೇ-ಆಫ್ ಅನುಭವವನ್ನು ಹಂಚಿಕೊಂಡಿದ್ದಾರೆ.
ಉದ್ಯೋಗ ಕಳೆದುಕೊಂಡ ನಂತರ, ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. 'ವೈ ಕಾಂಬಿನೇಟರ್' (YC) ಹೂಡಿಕೆ ಹೊಂದಿರುವ ವಿವಿಧ ಕಂಪನಿಗಳ ಸಂಸ್ಥಾಪಕರಿಗೆ 200ಕ್ಕೂ ಹೆಚ್ಚು 'ಕೋಲ್ಡ್ ಇಮೇಲ್'ಗಳನ್ನು ಕಳುಹಿಸಿದರು. 10ಕ್ಕೂ ಹೆಚ್ಚು ಸಂದರ್ಶನಗಳಿಗೆ ಹಾಜರಾದರೂ ತಕ್ಷಣಕ್ಕೆ ಯಾವುದೇ ಉದ್ಯೋಗ ಕೈಗೂಡಲಿಲ್ಲ.
ಮತ್ತೊಬ್ಬರ ಕಂಪನಿಯಲ್ಲಿ ಕೆಲಸಕ್ಕಾಗಿ ಕಾಯುವ ಬದಲು, ತಾವೇ ಸ್ವತಃ ಸಾಫ್ಟ್‌ವೇರ್ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು (Ship) ನಿರ್ಧರಿಸಿದರು. ಕೇವಲ ಒಂದೇ ತಿಂಗಳ ಅವಧಿಯಲ್ಲಿ 6 ಸಣ್ಣ ಸಾಫ್ಟ್‌ವೇರ್ ಉತ್ಪನ್ನಗಳನ್ನು ನಿರ್ಮಿಸಿ ಬಿಡುಗಡೆ ಮಾಡಿದರು. ಕೇವಲ 2 ಗಂಟೆಗಳಲ್ಲಿ ನಿರ್ಮಿಸಿದ ಸಣ್ಣ ಉತ್ಪನ್ನವೊಂದರಿಂದ 50 ಡಾಲರ್ ಗಳಿಸುವ ಮೂಲಕ ಶುಭಾರಂಭ ಮಾಡಿದರು. ಇವರ ಈ ನಿರಂತರ ಪ್ರಯತ್ನಗಳನ್ನು ಕಂಡು 'X' ತಾಣದಲ್ಲಿ ಇವರ ಫಾಲೋವರ್ಸ್ ಸಂಖ್ಯೆ ಸೊನ್ನೆಯಿಂದ 4,000ಕ್ಕೂ ಅಧಿಕಕ್ಕೆ ಏರಿಕೆಯಾಯಿತು.
ಪ್ರಸ್ತುತ ಮೂರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಕ್ರಿಯವಾಗಿದ್ದರೂ, ಕಾಗದದ ಮೇಲೆ ತಾವು ಇಂದಿಗೂ ನಿರುದ್ಯೋಗಿ ಎಂದೇ ಅವರು ಬರೆದುಕೊಂಡಿದ್ದಾರೆ.
ಸೋಹಮ್ ಅವರ ಈ ಪ್ರಾಮಾಣಿಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದೆ. "ನೀವು ಕಾಗದದ ಮೇಲೆ ಮಾತ್ರ ನಿರುದ್ಯೋಗಿ. ಆದರೆ ನೈಜ ಜಗತ್ತಿನಲ್ಲಿ ಹೊಸ ಉತ್ಪನ್ನಗಳನ್ನು ಕಟ್ಟುವುದು, ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಮತ್ತು ಗಳಿಸುವುದನ್ನು ಮಾಡುತ್ತಿದ್ದೀರಿ. ಇದು ಯಾವುದೇ ಕಾರ್ಪೊರೇಟ್ ಉದ್ಯೋಗದ ಶೀರ್ಷಿಕೆಗಿಂತ ದೊಡ್ಡ ಕಥೆಯನ್ನು ಹೇಳುತ್ತದೆ," ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
"21ನೇ ವಯಸ್ಸಿನಲ್ಲಿ ಎಂತಹ ಅದ್ಭುತ ಪಯಣ! ಹೊಸ ಉತ್ಪನ್ನಗಳನ್ನು ನಿರ್ಮಿಸುವುದನ್ನು ಮುಂದುವರಿಸಿ, ಇದು ಕೇವಲ ಆರಂಭವಷ್ಟೇ," ಎಂದು ಮತ್ತೊಬ್ಬರು ಪ್ರೋತ್ಸಾಹಿಸಿದ್ದಾರೆ.
ಐಐಟಿ ಬಾಂಬೆಯಂತಹ ಪ್ರತಿಷ್ಠಿತ ಸಂಸ್ಥೆಯ ಪದವಿ ಇದ್ದರೂ, ಕಾರ್ಪೊರೇಟ್ ಉದ್ಯೋಗದ ಬೆನ್ನತ್ತದೆ ಸ್ವತಂತ್ರ 'ಇಂಡೀ-ಡೆವಲಪರ್' (Indie Developer) ಹಾದಿ ಆಯ್ಕೆ ಮಾಡಿಕೊಂಡ ಸೋಹಮ್ ಅವರ ಧೈರ್ಯಕ್ಕೆ ನೆಟ್ಟಿಗರು ಜೈಕಾರ ಹಾಕಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.