
ಮುಂಬೈ/ದೆಹಲಿ: ಭಾರತೀಯ ಹೂಡಿಕೆದಾರರಲ್ಲಿ ಚಿನ್ನದ ಮೇಲಿನ ಆಕರ್ಷಣೆ ಹೆಚ್ಚುತ್ತಿದೆ. 2025 ರ ವರ್ಷದಲ್ಲಿ ಚಿನ್ನವು ಷೇರುಗಳು ಸೇರಿದಂತೆ ಇತರ ಹೂಡಿಕೆ ಸಾಧನಗಳನ್ನು ಮೀರಿಸಿ ಹೆಚ್ಚು ಆದ್ಯತೆಯ ಹೂಡಿಕೆಯಾಗಿ ಹೊರಹೊಮ್ಮಿದೆ. ಏಪ್ರಿಲ್‌ನಲ್ಲಿ 10 ಗ್ರಾಂಗೆ ₹100,000 ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ನಂತರವೂ, ಹಳದಿ ಲೋಹವು ಸತತವಾಗಿ ಹೊಸ ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪುತ್ತಿದೆ.
ಮದುವೆ ಸೀಸನ್‌ನಿಂದಾಗಿ ಹೆಚ್ಚಿದ ಬೇಡಿಕೆ ಮತ್ತು ಜಾಗತಿಕ ಅಂಶಗಳಿಂದಾಗಿ ಚಿನ್ನದ ಬೆಲೆಗಳು ಭಾರಿ ಏರಿಕೆ ಕಂಡಿವೆ.
ಮಂಗಳವಾರ (ನವೆಂಬರ್ 25) ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹3,500 ರಷ್ಟು ಏರಿಕೆಯಾಗಿ ₹1,28,900 ಕ್ಕೆ ತಲುಪಿದೆ (ತೆರಿಗೆಗಳನ್ನು ಹೊರತುಪಡಿಸಿ, 99.5% ಶುದ್ಧ ಚಿನ್ನದ ಬೆಲೆ ₹1,28,300).
ಚಿನ್ನದ ಜೊತೆಗೆ ಬೆಳ್ಳಿಯೂ ಏರಿಕೆ ಕಂಡಿದ್ದು, ಪ್ರತಿ ಕಿಲೋಗ್ರಾಂಗೆ ₹5,800 ರಷ್ಟು ಹೆಚ್ಚಾಗಿ ₹1,60,800 ಕ್ಕೆ ತಲುಪಿದೆ (ತೆರಿಗೆ ಸೇರಿದಂತೆ).
ಮೂರು ದಿನಗಳ ಇಳಿಕೆಯ ಟ್ರೆಂಡ್ ಅನ್ನು ಮುರಿದು, ಸ್ಥಳೀಯ ಆಭರಣ ವ್ಯಾಪಾರಿಗಳಿಂದ ಮದುವೆ ಋತುವಿನಲ್ಲಿ ಬಂದ ಹೆಚ್ಚಿದ ಬೇಡಿಕೆಯು ಬೆಲೆಗಳು ಬಲಗೊಳ್ಳಲು ಸಹಾಯ ಮಾಡಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಚಿನ್ನದ ಬೆಲೆ ಏರಿಕೆಗೆ ಕಾರಣವೇನು?
ಚಿನ್ನವನ್ನು ಸಾಂಪ್ರದಾಯಿಕವಾಗಿ 'ಸುರಕ್ಷಿತ ಹೂಡಿಕೆ' (Safe Haven Investment) ಎಂದು ಪರಿಗಣಿಸಲಾಗುತ್ತದೆ. ಜಾಗತಿಕ ಮತ್ತು ದೇಶೀಯ ಆರ್ಥಿಕ ಪರಿಸ್ಥಿತಿಗಳಲ್ಲಿನ ನಿರಂತರ ಬದಲಾವಣೆಗಳು ಚಿನ್ನದ ಬೇಡಿಕೆಯನ್ನು ಹೆಚ್ಚಿಸಿವೆ.
ಹಣದುಬ್ಬರ (Inflation): ಹೆಚ್ಚುತ್ತಿರುವ ಹಣದುಬ್ಬರದಿಂದ ರಕ್ಷಣೆ ಪಡೆಯಲು ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಿದ್ದಾರೆ.
ಜಾಗತಿಕ ಅಸ್ಥಿರತೆ ಮತ್ತು ಆರ್ಥಿಕ ಅನಿಶ್ಚಿತತೆ: ಈ ಅಂಶಗಳು ಚಿನ್ನವನ್ನು ಮತ್ತಷ್ಟು ಆಕರ್ಷಕ ಹೂಡಿಕೆಯನ್ನಾಗಿ ಮಾಡಿವೆ.
2030 ರ ವೇಳೆಗೆ ಲಾಭ ಎಷ್ಟು?
ಚಿನ್ನದ ನಿರಂತರ ಬೆಳವಣಿಗೆಯ ಇತಿಹಾಸವು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ. 2000 ರಿಂದ 2025 ರವರೆಗೆ, ಚಿನ್ನದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (CAGR) ಸುಮಾರು 14% ರಷ್ಟಿದೆ. ಈ 25 ವರ್ಷಗಳಲ್ಲಿ ಕೇವಲ ಮೂರು ವರ್ಷಗಳು (2013, 2015, 2021) ಮಾತ್ರ ಬೆಲೆ ಇಳಿಕೆ ಕಂಡಿವೆ.
25 ವರ್ಷಗಳ ಬದಲಾವಣೆ: 2000 ರಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹4,400 ಇತ್ತು, ಅದು ಈಗ ಸುಮಾರು ₹1.25 ಲಕ್ಷಕ್ಕೆ ಏರಿದೆ. ಹಾಗಾದರೆ ಭವಿಷ್ಯ ಇನ್ನೈದು ವರ್ಷಗಳಲ್ಲಿ ಬೆಲೆ ಎಷ್ಟು ಏರಿಕೆ ಎಷ್ಟಾಗಬಹುದು? ಮಾರುಕಟ್ಟೆ ತಜ್ಞರ ಪ್ರಕಾರ, ಚಿನ್ನವು ಮುಂದಿನ ದಿನಗಳಲ್ಲಿ ಬಲವಾದ ಲಾಭವನ್ನು ನೀಡುವ ಸಾಧ್ಯತೆಯಿದೆ. ಪ್ರಸ್ತುತದ ಪ್ರವೃತ್ತಿ ಮುಂದುವರಿದರೆ, ಇಂದು ₹5 ಲಕ್ಷ ಹೂಡಿಕೆ ಮಾಡಿದರೆ ಅದು 2030 ರ ವೇಳೆಗೆ ಎರಡುಪಟ್ಟು ಹೆಚ್ಚಾಗಬಹುದು.
ಕೆಲವು ವರದಿಗಳು ಪ್ರಕಾರ, 2030 ರ ವೇಳೆಗೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹250,000 ತಲುಪಬಹುದು ಎಂದು ಅಂದಾಜಿಸಿವೆ. ಮತ್ತಷ್ಟು ಜಾಗತಿಕ ಅನಿಶ್ಚಿತತೆಗಳು ಮುಂದುವರಿದರೆ, ಕೆಲ ತಜ್ಞರ ಪ್ರಕಾರ ಇದು ₹700,000 ರಿಂದ ₹750,000 ತಲುಪಬಹುದು ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ಹೂಡಿಕೆದಾರರಿಗೆ ಇದು ಉತ್ತಮ ಆದಾಯ ಗಳಿಸುವ ಸಾಧ್ಯತೆಗಳನ್ನು ಬಲಪಡಿಸುತ್ತಿರುವುದಂತೂ ಸ್ಪಷ್ಟ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.