ಕೊರೋನಾ ವೈರಸ್ ನಿಯಂತ್ರಣಕ್ಕೆ ಹೇರಲಾಗಿರುವ ಲಾಕ್‌ಡೌನ್‌ನಿಂದ ಬಾಧಿತರಾಗಿರುವ ಬಡವರು ಹಾಗೂ ವಲಸಿಗ ಕಾರ್ಮಿಕರು ಕೊರೋನಾ ತಗ್ಗದಿದ್ದರೆ ಬಡವರಿಗೆ ನಗದು ವರ್ಗ?|
ನವದೆಹಲಿ(ಮೇ.30): ಕೊರೋನಾ ವೈರಸ್ ನಿಯಂತ್ರಣಕ್ಕೆ ಹೇರಲಾಗಿರುವ ಲಾಕ್‌ಡೌನ್‌ನಿಂದ ಬಾಧಿತರಾಗಿರುವ ಬಡವರು ಹಾಗೂ ವಲಸಿಗ ಕಾರ್ಮಿಕರಿಗೆ ಸರ್ಕಾರ ನೇರ ನಗದು ವರ್ಗಾವಣೆ ಘೋಷಣೆ ಮಾಡುವ ಚಿಂತನೆಯಲ್ಲಿದೆ. ಪರಿಸ್ಥಿತಿ ಇನ್ನೂ ವಿಷಮಿಸಿದರೆ ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವಿತ್ತ ಸಚಿವಾಲಯದ ಮೂಲಗಳು ಹೇಳಿವೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿದ 20 ಲಕ್ಷ ಕೋಟಿ ರು. ಉತ್ತೇಜಕ ಪ್ಯಾಕೇಜ್‌ನಲ್ಲಿ ನಗದು ಪರಿಹಾರದ ಪ್ರಸ್ತಾಪ ಇರಲಿಲ್ಲ. ಸಾಲ ನೀಡಿಕೆಯ ಪ್ರಸ್ತಾಪ ಇತ್ತು. ಇದು ವಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. ‘ಸಂಕಷ್ಟದ ಸಂದರ್ಭದಲ್ಲಿ ಸರ್ಕಾರವು, ನಗದು ಪರಿಹಾರ ಘೋಷಿಸಬೇಕೇ ವಿನಾ ಸಾಲವನ್ನಲ್ಲ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಆಗ್ರಹಕ್ಕೆ ಮಣಿದಂತೆ ಕಾಣುತ್ತಿರುವ ವಿತ್ತ ಸಚಿವಾಲಯ, ‘ಲಾಕ್‌ಡೌನ್ ವೇಳೆ ಎಷ್ಟುಜನ ಉದ್ಯೋಗ ಕಳೆದುಕೊಂಡರು ಹಾಗೂ ಎಷ್ಟುಜನ ಸಂಬಳ ಕಡಿತಕ್ಕೆ ತುತ್ತಾಗಿದ್ದಾರೆ ಎಂಬ ಮಾಹಿತಿ ನೀಡಿ ಎಂದು ಕಾರ್ಮಿಕ ಸಚಿವಾಲಯಕ್ಕೆ ಸೂಚಿಸಿದೆ’ ಎಂದು ಮೂಲಗಳು ತಿಳಿಸಿವೆ.
ಇನ್ನು ವಿತ್ತೀಯ ಕೊರತೆ ಸರಿದೂಗಿಸಲು ಹೆಚ್ಚು ನೋಟು ಮುದ್ರಣ ಮಾಡುವ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಅಂಥ ಪರಿಸ್ಥಿತಿ ಬಂದಾಗ ಆ ಬಗ್ಗೆ ಯೋಚಿಸುತ್ತೇವೆ. ಇನ್ನೂ ಆ ಪರಿಸ್ಥಿತಿ ಉದ್ಭವಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.