ಚೆನ್ನೈ ಮೂಲದ ಐಟಿ ಕಂಪನಿಯೊಂದು ಕಳೆದ ವರ್ಷ ತನ್ನ 100 ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡಿತ್ತು. ಈ ಬಾರಿ ಂಪಿಯ ಶೇ.33ರಷ್ಟು ಷೇರುಗಳನ್ನು ಉದ್ಯೋಗಿಗಳಿಗೆ ಹಂಚಿಕೆ ಮಾಡುತ್ತಿದೆ.
ಚೆನ್ನೈ (ಜ.3): ಚೆನ್ನೈ ಮೂಲದ ಐಟಿ ಸಂಸ್ಥೆಯೊಂದು ಕಳೆದ ವರ್ಷ 100 ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸುದ್ದಿಯಾಗಿತ್ತು. ಈ ವರ್ಷ 150 ಉದ್ಯೋಗಿಗಳಿಗೆ ಕಂಪನಿಯ ಶೇ.33ರಷ್ಟು ಷೇರುಗಳನ್ನು ಹಂಚಿಕೆ ಮಾಡಲು ಕಂಪನಿ ಯೋಜನೆ ರೂಪಿಸಿದೆ. ಚೆನ್ನೈ ಮೂಲದ ಐಡಿಯಾಸ್ 2 ಐಟಿ ಟೆಕ್ನಾಲಜೀಸ್ ತನ್ನ ಉದ್ಯೋಗಿಗಳಿಗೆ ಪ್ರತಿವರ್ಷ ಇಂಥ ವಿಶಿಷ್ಟ ಉಡುಗೊರೆಗಳನ್ನು ನೀಡುವ ಮೂಲಕ ಗಮನ ಸೆಳೆಯುತ್ತಿದೆ. ಐಡಿಯಾಸ್ 2 ಐಟಿ ಟೆಕ್ನಾಲಜೀಸ್ ಮೌಲ್ಯ 100 ಮಿಲಿಯನ್ ಡಾಲರ್ ಇದ್ದು, ವಿಶಿಷ್ಟ ಉದ್ಯೋಗಿಗಳ ಮಾಲೀಕತ್ವ ಕಾರ್ಯಕ್ರಮವನ್ನು ಘೋಷಿಸಿದೆ. ಇದರಡಿಯಲ್ಲಿ ಉದ್ಯೋಗಗಳಿಗೆ ಕಂಪನಿಯ ಶೇ.33ರಷ್ಟು ಷೇರುಗಳನ್ನು ಹಂಚಿಕೆ ಮಾಡಲಾಗುತ್ತದೆ. ಕಾರ್ಪೋರೇಟ್ ವಲಯದಲ್ಲಿ ಇಂಥದೊಂದು ಪ್ರಯತ್ನ ನಡೆಯುತ್ತಿರೋದು ಇದೇ ಮೊದಲು ಎಂದು ಹೇಳಲಾಗಿದೆ. ಅಲ್ಲದೆ, ಇದು ಕಾರ್ಪೋರೇಟ್ ವಲಯದಲ್ಲಿ ಸಂಪತ್ತಿನ ಹಂಚಿಕೆಯ ಅರ್ಥಕ್ಕೆ ಹೊಸ ರೂಪ ನೋಡಿದೆ. ಈ ತನಕ ಕಾರ್ಪೋರೇಟ್ ವಲಯದಲ್ಲಿನ ಲಾಭ ಗಳಿಕೆಯನ್ನು ಉದ್ಯೋಗಿಗಳಿಗೆ ಇಎಸ್ಒಪಿಎಸ್, ಬೋನಸ್ ಹಾಗೂ ಇನ್ಸಿಟಿವ್, ಲಾಭ ಹಂಚಿಕೆ ಅಥವಾ ತರ ಷೇರು ಆಯ್ಕೆಗಳ ವಿಧಾನದ ಮೂಲಕ ಹಂಚಲಾಗುತ್ತಿತ್ತು.
ಐಡಿಯಾಸ್ 2 ಐಟಿ ಟೆಕ್ನಾಲಜೀಸ್ ಶೇ.33ರಷ್ಟು ಷೇರುಗಳನ್ನು ಮೊದಲಿಗೆ ದೀರ್ಘಕಾಲದಿಂದ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಹಂಚಿಕೆ ಮಾಡಲಿದೆ. ದೀರ್ಘಸಮಯದಿಂದ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 50 ಉದ್ಯೋಗಿಗಳಿಗೆ ಮೊದಲ ಹಂತದಲ್ಲಿ ಷೇರುಗಳನ್ನು ಕಂಪನಿ ವಿತರಿಸಲಿದೆ. ಆ ಬಳಿಕ ಮತ್ತೆ 100 ಉದ್ಯೋಗಿಗಳಿಗೆ ಷೇರು ಹಂಚಿಕೆ ಮಾಡಲಾಗುತ್ತದೆ. 700ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಅತ್ಯುತ್ತಮ ಪ್ರಾಡಕ್ಟ್ ಇಂಜಿನಿಯರಿಂಗ್ ಕಂಪನಿಯಾಗಿ ಬೆಳೆಯುವ ಗುರಿ ಹೊಂದಿದೆ.
ರಿಲಯನ್ಸ್‌ನಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿ; ಅಬ್ಬಬ್ಬಾ ದಿನಕ್ಕೆ ಇಷ್ಟೊಂದು ಸ್ಯಾಲರೀನಾ?
ಐಡಿಯಾಸ್ 2 ಐಟಿ ಟೆಕ್ನಾಲಜೀಸ್ ಕಂಪನಿಯನ್ನು 2009ರಲ್ಲಿ ಮುರಳಿ ವಿವೇಕಾನಂದನ್ ಹಾಗೂ ಭವಾನಿ ರಾಮನ್ ಎಂಬುವರು ಜೊತೆಯಾಗಿ ಸ್ಥಾಪಿಸಿದರು. ಈ ಕಂಪನಿ ಮೈಕ್ರೋಸಾಫ್ಟ್, ಇರಿಕ್ಸನ್, ಸಿಮೆನ್ಸ್ ಹಾಗೂ ರೊಚೆ ಮುಂತಾದ ಪ್ರತಿಷ್ಟಿತ ಕಂಪನಿಗಳಿಗೆ ಸ್ಕೇಲೇಬಲ್ ಸಾಫ್ಟ್ ವೇರ್ ಡೆಲಿವರಿ ಮಾಡುತ್ತದೆ.
'ವಿಶಿಷ್ಟ ಪ್ರತಿಭೆಗಳನ್ನು ಬೆಳೆಸಲು ಹಾಗೂ ಅನ್ವೇಷಣೆಗೆ ಇಂಬು ನೀಡುವ ಕಾರ್ಯಸ್ಥಳವನ್ನು ರೂಪಿಸಲು ನಮ್ಮ ಉದ್ಯೋಗಿಗಳು ಮಾಲೀಕತ್ವದ ಮಾಲೀಕತ್ವದ ಅನುಭವ ಹೊಂದುವುದು ಅಗತ್ಯ ಎಂದು ನಾವು ನಂಬಿದ್ದೇವೆ. ಈ ಅಭೂತಪೂರ್ವ ಕಾರ್ಯದ ಹಿಂದಿನ ಪ್ರೇರಣೆ ಭಾರತದಿಂದ ಒಂದು ಟಾಪ್ ಟೈರ್ ಪ್ರಾಡಕ್ಟ್ ಇಂಜಿನಿಯರಿಂಗ್ ಕಂಪನಿ ಸ್ಥಾಪಿಸಬೇಕೆಂಬ ಬಯಕೆ. ಇದಕ್ಕಾಗಿ ಉದ್ಯೋಗಿಗಳನ್ನು ನಿಜವಾದ ಪಾಲುದಾರರನ್ನಾಗಿ ಮಾಡಿಕೊಳ್ಳುವುದು ನಮ್ಮ ಉದ್ದೇಶ' ಎಂದು ಐಡಿಯಾಸ್ 2 ಐಟಿ ಟೆಕ್ನಾಲಜೀಸ್ ಸ್ಥಾಪಕ ಮುರಳಿ ವಿವೇಕಾನಂದನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2022ರಲ್ಲಿ ಉದ್ಯೋಗಿಗಳಿಗೆ ಕಾರು ಉಡುಗೊರೆ
ಐಡಿಯಾಸ್ 2 ಐಟಿ ಟೆಕ್ನಾಲಜೀಸ್ 2022ರಲ್ಲಿ ತನ್ನ 100 ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡಿತ್ತು. ಇನ್ನು ಈ ವರ್ಷ ಇದಕ್ಕೆ ಇನ್ನೂ 50 ಕಾರುಗಳನ್ನು ಸೇರಿಸಿ ಕಂಪನಿ ಉದ್ಯೋಗಿಗಳಿಗೆ ಉಡುಗೊರೆ ನೀಡಲಿದೆ.
ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟೆಕ್ ಉದ್ಯೋಗಿ, ದಿನಕ್ಕೆ ಭರ್ತಿ 5 ಕೋಟಿ ಗಳಿಸೋಕೆ ಕಾರಣವಾಗಿದ್ದೇ ಹೆಂಡ್ತಿ!
ಉದ್ಯೋಗಿಗಳ ಮಾಲೀಕತ್ವ ಕಾರ್ಯಕ್ರಮ ಸಾಂಪ್ರದಾಯಿಕ ಇಎಸ್ ಒಪಿ ಹಾಗೂ ಈಕ್ವಿಟಿ ಶೇರಿಂಗ್ ಯೋಜನೆಗಳಿಂದ ಭಿನ್ನವಾಗಿರಲಿದೆ. ಈ ಹಿಂದೆ ಕಂಪನಿಗಳು ಅನುಸರಿಸುತ್ತಿದ್ದ ಯೋಜನೆಗಳು ಸಮಯವನ್ನು ಅವಲಂಬಿಸಿದ್ದವು. ಆದರೆ, ಇದು ನೇರವಾದ ಈಕ್ವಿಟಿ ಮಾಲೀಕತ್ವವನ್ನು ನೀಡುತ್ತದೆ. ಐಡಿಯಾಸ್ 2ಐಟಿ ಉದ್ಯೋಗಿಗಳಿಗೆ ಕೇವಲ ಷೇರುಗಳನ್ನು ಮಾತ್ರ ಹಂಚಿಕೆ ಮಾಡುತ್ತಿಲ್ಲ. ಬದಲಿಗೆ ನಿಜವಾದ ಸ್ಥಾಪಕರಿಗೆ ಸಿಗುವ ಗೌರವವನ್ನು ಕೂಡ ನೀಡುತ್ತಿದೆ. ಪ್ರತಿವರ್ಷ ಉದ್ಯೋಗಿಗಳಿಗೆ ಈ ರೀತಿ ವಿಶಿಷ್ಟ ಕೊಡುಗೆಗಳನ್ನು ನೀಡುವ ಉದ್ದೇಶದಿಂದಲೇ ಈ ಕಾರ್ಯಕ್ರಮವನ್ನು ಕಂಪನಿ ರೂಪಿಸಿದೆ. ಹೀಗಾಗಿ ಇದು ಪ್ರತಿವರ್ಷ ನಿರಂತರವಾಗಿ ಮುಂದುವರಿಯಲಿದೆ.