2022-23ನೇ ಹಣಕಾಸು ಸಾಲಿನ ವಿಳಂಬ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ಗಡುವು. ವಿಳಂಬ ಐಟಿಆರ್ ಸಲ್ಲಿಕೆಗೆ ದಂಡ ಪಾವತಿಸಬೇಕು. ಹಾಗಾದ್ರೆ ಈ ದಂಡವನ್ನು ಪಾವತಿಸೋದು ಎಲ್ಲಿ, ಹೇಗೆ?
Business Desk: 2022-23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಅಂತಿಮ ಗಡುವಾಗಿತ್ತು. ಈ ಅವಧಿಯೊಳಗೆ ಐಟಿಆರ್ ಸಲ್ಲಿಕೆ ಮಾಡಲು ವಿಫಲರಾದವರು ವಿಳಂಬ ಐಟಿಆರ್ ಸಲ್ಲಿಕೆ ಮಾಡಬಹುದು. ವಿಳಂಬ ಐಟಿಆರ್ ಸಲ್ಲಿಕೆಗೆ 2023ರ ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ವಿಳಬ ಐಟಿಆರ್ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 234F ಅಡಿಯಲ್ಲಿ ತೆರಿಗೆದಾರ ದಂಡ ಪಾವತಿಸಬೇಕು. ಒಟ್ಟು 5ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ತೆರಿಗೆದಾರರು ಜು.31ರ ಬಳಿಕ ವಿಳಂಬ ಐಟಿಆರ್ ಸಲ್ಲಿಕೆ ಮಾಡಿದ್ರೆ 5,000ರೂ. ದಂಡ ಪಾವತಿಸಬೇಕು.ಇನ್ನು ಯಾರು ವಾರ್ಷಿಕ ಒಟ್ಟು 5ಲಕ್ಷ ರೂ.ಕ್ಕಿಂತ ಕಡಿಮೆ ಆದಾಯ ಹೊಂದಿದ್ದಾರೋ ಅವರು 1,000ರೂ. ದಂಡ ಪಾವತಿಸಬೇಕು. ಒಂದು ವೇಳೆ ನಿಮ್ಮ ಆದಾಯ ಮೂಲ ತೆರಿಗೆ ವಿನಾಯ್ತಿ ಮಿತಿಯಿಂದ ಕಡಿಮೆಯಿದ್ದರೆ ಆಗ ವಿಳಂಬ ಐಟಿಆರ್ ಸಲ್ಲಿಕೆ ಮಾಡುವಾಗ ನೀವು ಯಾವುದೇ ದಂಡ ಪಾವತಿಸಬೇಕಾಗಿಲ್ಲ.
ವಿಳಂಬ ಐಟಿಆರ್ ಗೆ ದಂಡ ಪಾವತಿ ಹೇಗೆ?
ವಿಳಂಬ ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ತೆರಿಗೆದಾರ ಸೆಕ್ಷನ್ 234F ಅಡಿಯಲ್ಲಿ ದಂಡ ಪಾವತಿಸಬಹುದು. ಅಥವಾ ದಂಡ ಹಾಗೂ ಯಾವುದೇ ಹೆಚ್ಚುವರಿ ತೆರಿಗೆ ಮೊತ್ತವ್ನು ಇ-ಫೈಲ್ಲಿಂಗ್ ಪೋರ್ಟಲ್ ನಲ್ಲಿ ವಿಳಂಬ ಐಟಿಆರ್ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಪಾವತಿಸಬಹುದು. ದಂಡ ಪಾವತಿಸಿದ ಚಲನ್ ಮಾಹಿತಿಯನ್ನು ಐಟಿಆರ್ ಅರ್ಜಿಯಲ್ಲಿ 'ತೆರಿಗೆ ಪಾವತಿ' ಶೆಡ್ಯೂಲ್ ನಲ್ಲಿ ನಮೂದಿಸಬೇಕು. ಐಟಿಆರ್ ಅರ್ಜಿಯಲ್ಲಿ 'ತೆರಿಗೆ ಪಾವತಿ' ಶೆಡ್ಯೂಲ್ ನಲ್ಲಿ ದಂಡ ಪಾವತಿ ಮಾಹಿತಿಯನ್ನು ನೀಡದೆ ವಿಳಂಬ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಿಲ್ಲ.
ಆದಾಯ ತೆರಿಗೆ ರೀಫಂಡ್‌ಗೆ ಕಾಯ್ತಿದ್ದೀರಾ..? ನಿಮಗೂ ಈ ರೀತಿ ಸಂದೇಶ ಬರ್ಬೋದು ಎಚ್ಚರ!
ವಿಳಂಬ ಐಟಿಆರ್ ಸಲ್ಲಿಕೆ ಮುನ್ನ ದಂಡ ಪಾವತಿ
ಒಂದು ವೇಳೆ ನೀವು ವಿಳಂಬ ಐಟಿಆರ್ ಸಲ್ಲಿಕೆ ಮುನ್ನ ದಂಡ ಪಾವತಿಸೋದಾದ್ರೆ ಆದಾಯ ತೆರಿಗೆ ಇ-ಫೈಲ್ಲಿಂಗ್ ಪೋರ್ಟಲ್ ನಲ್ಲಿರುವ ಇ-ಪಾವತಿ ತೆರಿಗೆ ಸೌಲಭ್ಯ ಬಳಸಿಕೊಳ್ಳಬೇಕು. ಇ- ಪಾವತಿ ತೆರಿಗೆ ಸೌಲಭ್ಯವನ್ನು ( e-pay tax facility) ಆದಾಯ ತೆರಿಗೆ ಪೋರ್ಟಲ್ ನಲ್ಲಿರುವ ನಿಮ್ಮ ಖಾತೆಗೆ ಲಾಗಿನ್ ಆಗಿ ಅಥವಾ ಆಗದೆ ಕೂಡ ಬಳಸಿಕೊಳ್ಳಬಹುದು. ಹಾಗಾದ್ರೆ ಆದಾಯ ತೆರಿಗೆ ಇ-ಫೈಲ್ಲಿಂಗ್ ಪೋಟರ್ಲ್ ನಲ್ಲಿ ಖಾತೆಗೆ ಲಾಗಿನ್ ಆಗದೆ ದಂಡ ಪಾವತಿಸೋದು ಹೇಗೆ? ಇಲ್ಲಿದೆ ಮಾಹಿತಿ.
*https://www.incometax.gov.in/iec/foportal/ ಭೇಟಿ ನೀಡಿ. ಅದಾದ ಬಳಿಕ ‘Quick Links’ಅಡಿಯಲ್ಲಿ ‘e-pay tax’ಆಯ್ಕೆ ಆರಿಸಿ.
*ನಂತರ ನಿಮ್ಮ ಪ್ಯಾನ್, ಮೊಬೈಲ್ ಸಂಖ್ಯೆ ನಮೂದಿಸಿ. continue ಮೇಲೆ ಕ್ಲಿಕ್ ಮಾಡಿ.
*ನಿಮ್ಮ ಮೊಬೈಲ್ ಗೆ OTP ಬರುತ್ತದೆ. ಅದನ್ನು ನಮೂದಿಸಿ.
*ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ಸಂಬಂಧಪಟ್ಟ ಮೌಲ್ಯಮಾಪನ ವರ್ಷ ಆಯ್ಕೆ ಮಾಡಿ.
*ಈಗ ಪಾವತಿ ವಿಧಾನ ಆಯ್ಕೆ ಮಾಡಿ. continue ಮೇಲೆ ಕ್ಲಿಕ್ ಮಾಡಿ.
*ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ದಂಡದ ಮೊತ್ತ ಪಾವತಿಸಿ. ಒಂದು ವೇಳೆ ಯಾವುದೇ ಹೆಚ್ಚುವರಿ ತೆರಿಗೆ ಬಾಕಿಗಳಿದ್ದರೆ ಅದನ್ನು ಕೂಡ ನಮೂದಿಸಿ. ಆ ಬಳಿಕ continue ಮೇಲೆ ಕ್ಲಿಕ್ ಮಾಡಿ.
ಐಟಿಆರ್ ಸಲ್ಲಿಕೆ ವೇಳೆ ನೀವು ಈ ತಪ್ಪು ಮಾಡಿದ್ರೆ ಬೀಳುತ್ತೆ ಭಾರೀ ದಂಡ!
*ಈಗ ಪಾವತಿ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ಡೆಬಿಟ್ ಕಾರ್ಡ, ನೆಟ್ ಬ್ಯಾಂಕಿಂಗ್, ಪೇಮೆಂಟ್ ಗೆಟ್ ವೇ ಆಪ್ ಲೈನ್ ಬ್ಯಾಂಕ್ ಚಲನ್, ಆರ್ ಟಿಜಿಎಸ್/ ಎನ್ ಇಎಫ್ ಟಿ ಬಳಸಿಕೊಂಡು ದಂಡ ಪಾವತಿಸಬಹುದು.
*ಪಾವತಿ ಮಾಡಿದ ಬಳಿಕ ಟ್ಯಾಕ್ಸ್ ಪೇಮೆಂಟ್ ಸಮ್ಮರಿ ಚಲನ್ ಡೌನ್ಲೋಡ್ ಮಾಡಿ. ವಿಳಂಬ ಐಟಿಆರ್ ಸಲ್ಲಿಕೆ ಮಾಡುವಾಗ ಈ ಚಲನ್ ಅಗತ್ಯ.