ಯೂಟ್ಯೂಬರ್ ಯದುಪ್ರಿಯಂ ಮೆಹ್ತಾ ಇತ್ತೀಚೆಗೆ 60,000ರೂ. ಮೌಲ್ಯದ ಒಂದು ಟವೆಲ್ ಖರೀದಿಸಿದ ವಿಡಿಯೋ ಹಂಚಿಕೊಂಡಿದ್ದರು.ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು,ರಿಚ್ ಕಿಡ್ಸ್ ಆಫ್ ಇಂಡಿಯಾ ಎಂಬ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಕೂಡ ಶೇರ್ ಆಗಿದ್ದು,ಇದಕ್ಕೆ ಸಾಕಷ್ಟು ಜನರು ಕಾಮೆಂಟ್ ಗಳನ್ನು ಮಾಡಿದ್ದಾರೆ.
Business Desk: ಕೆಲವರಿಗೆ ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎಂಬುದೇ ತಿಳಿಯೋದಿಲ್ಲ.ಐಷಾರಾಮಿ ಜೀವನಶೈಲಿ ಅನುಸರಿಸೋರು ಕೈಯಲ್ಲಿ ದುಡ್ಡಿರೋದೇ ಖರ್ಚು ಮಾಡೋಕೆ ಎಂಬ ಮನೋಭಾವ ಹೊಂದಿರುತ್ತಾರೆ.ಇನ್ನು ಇತ್ತೀಚಿನ ದಿನಗಳಲ್ಲಿ ಕೆಲವು ಯೂಟ್ಯೂಬರ್ಸ್ ಗಳು ಇಂಥ ಐಷಾರಾಮಿ ಜೀವನಶೈಲಿ ಬಗ್ಗೆಯೇ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುವ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ ಕೂಡ. ಲಕ್ಸುರಿ ಜೀವನಶೈಲಿಗೆ ಸಂಬಂಧಿಸಿದ ವಿಡಿಯೋಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಯೂಟ್ಯೂಬರ್ ಯದುಪ್ರಿಯಂ ಮೆಹ್ತಾ ಇತ್ತೀಚೆಗೆ 60,000 ರೂ. ಬೆಲೆಬಾಳುವ ಹರ್ಮೆಸ್ ಟವಲ್ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಇವರ ಈ ದುಬಾರಿ ಟವಲ್ ಖರೀದಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಿಚ್ ಕಿಡ್ಸ್ ಎಬ ಹೆಸರಿನ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಯದುಪ್ರಿಯಂ ಮೆಹ್ತಾ ತನ್ನ ತಾಯಿ ಜೊತೆಗೆ ಈ ದುಬಾರಿ ಟವಲ್ ಖರೀದಿಸುತ್ತಿರುವ ವಿಡಿಯೋ ಪೋಸ್ಟ್ ಮಾಡಲಾಗಿದೆ. ಅಲ್ಲದೆ, ಈ ವಿಡಿಯೋಗೆ ' ಹೌ ಮಚ್ ಲಕ್ಸುರಿ ಈಸ್ ಟೂ ಮಚ್ ಲಕ್ಸುರಿ' ಎಂಬ ಶೀರ್ಷಿಕೆ ಕೂಡ ನೀಡಲಾಗಿದೆ. ಈ ವಿಡಿಯೋಗೆ ಸಾಕಷ್ಟು ಜನರು ಕಾಮೆಂಟ್ ಗಳನ್ನು ಕೂಡ ಮಾಡಿದ್ದಾರೆ.
ಯದುಪ್ರಿಯಂ ಚಿರತೆಯ ಚಿತ್ರವಿರುವ ಟವಲ್ ಅನ್ನು 60,000ರೂ. ನೀಡಿ ಖರೀದಿಸಿದ್ದಾರೆ.ಈ ವಿಡಿಯೋಗೆ ಅನೇಕರು ನಾನಾ ವಿಧದಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬರು ಇದನ್ನು ಆತ ವಾಲ್ ಪೇಟಿಂಗ್ ಆಗಿ ಬಳಸುತ್ತಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇಡಿ ಯಾಕೆ ಇಂಥ ಯೂಟ್ಯೂಬರ್ ಗಳ ಮೇಲೆ ಕಣ್ಣಿಡುವುದಿಲ್ಲ? ಇವರ ಮೇಲೇಕೆ ದಾಳಿ ನಡೆಸೋದಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಯಾರು ಈ ಯದುಪ್ರಿಯಂ ಮೆಹ್ತಾ?
'ವೈಪಿಎಂ ವ್ಲಾಗ್' ಎಂಬ ಯೂಟ್ಯೂಬ್ ಚಾನಲ್ ನೋಡಿರೋರಿಗೆ ಯದುಪ್ರಿಯಂ ಮೆಹ್ತಾ ಬಗ್ಗೆ ತಿಳಿದೇ ಇರುತ್ತದೆ. ವೈಪಿಎಂ ವ್ಲಾಗ್ ನಲ್ಲಿರುವ ಕಂಟೆಂಟ್ ಗಳು ಐಷಾರಾಮಿ ಜೀವನಶೈಲಿಗೇ ಸಂಬಂಧಿಸಿದ್ದಾಗಿವೆ. ಇದರ ಜೊತೆಗೆ ದುಬಾರಿ ಕಾರು, ಬೈಕ್ ಹಾಗೂ ಪ್ರವಾಸದ ವಿಡಿಯೋಗಳನ್ನು ಕೂಡ ಇದರಲ್ಲಿ ಪೋಸ್ಟ್ ಮಾಡುತ್ತಾರೆ. ಯದುಪ್ರಿಯಂ ತಮ್ಮ ಐಷಾರಾಮಿ ಜೀವನಶೈಲಿಯನ್ನು ಈ ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. 2017ರ ಸೆಪ್ಟೆಂಬರ್ ನಲ್ಲಿ 'ವೈಪಿಎಂ ವ್ಲಾಗ್' ಎಂಬ ಯೂಟ್ಯೂಬ್ ಚಾನಲ್ ಪ್ರಾರಂಭಿಸಿದರು. ವಿಭಿನ್ನ ಹಾಗೂ ಆಕರ್ಷಕ ಕಂಟೆಂಟ್ ಗಳ ಮೂಲಕ ಬಹುಬೇಗನೆ ಹೆಚ್ಚಿನ ಫಾಲೋವರ್ಸ್ ಸಂಪಾದಿಸುವ ಜೊತೆಗೆ ಜನಪ್ರಿಯತೆ ಕೂಡ ಗಳಿಸಿದ್ದಾರೆ. ಪ್ರಸ್ತುತ ಇವರ ಯೂಟ್ಯೂಬ್ ಚಾನಲ್ ಗೆ 1.45 ಮಿಲಿಯನ್ ಸಬ್ ಸ್ಕ್ರೈಬರ್ಸ್ ಇದ್ದಾರೆ. ಇವರ ಚಾನಲ್ 357 ಮಿಲಿಯನ್ ಗೂ ಅಧಿಕ ಬಾರಿ ವೀಕ್ಷಿಸಲ್ಪಟ್ಟಿದೆ. ಕೇವಲ 23 ವರ್ಷದ ಯದುಪ್ರಿಯಂ ಮೆಹ್ತಾ ಅತ್ಯಂತ ಕಿರಿಯ ವಯಸ್ಸಿನಲ್ಲೇ ಭಾರತದ ಯಶಸ್ವಿ ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದಾರೆ.
ಯದುಪ್ರಿಯಂ ಹಿನ್ನೆಲೆ
ನವದೆಹಲಿಯಲ್ಲಿ 2000ರ ನವೆಂಬರ್ 19ರಂದು ಜನಿಸಿದ ಯದುಪ್ರಿಯಂ, ಉದ್ಯಮ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಇವರ ಕುಟುಂಬ ಗುಜರಾತ್ ಮೂಲವನ್ನು ಹೊಂದಿದ್ದು, ಉದ್ಯಮದಲ್ಲಿ ಯಶಸ್ಸು ಸಾಧಿಸಿದೆ. ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರುವ ಯದುಪ್ರಿಯಂ ಮೆಹ್ತಾ, ಸಣ್ಣ ವಯಸ್ಸಿನಲ್ಲೇ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು, ಯೂಟ್ಯೂಬರ್, ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಹಾಗೂ ಪ್ರಮುಖ ಕಂಟೆಂಟ್ ಕ್ರಿಯೇಟರ್ ಆಗಿ ಜನಪ್ರಿಯತೆ ಗಳಿಸಿದ್ದಾರೆ.
ಐಷಾರಾಮಿ ಜೀವನಶೈಲಿ, ಪ್ರವಾಸದ ವಿಡಿಯೋಗಳು
ವೈಪಿಎಂ ವ್ಲಾಗ್ ಐಷಾರಾಮಿ ಜೀವನಶೈಲಿ ಹಾಗೂ ಪ್ರವಾಸದ ಕಂಟೆಂಟ್ ಗಳಿಗಾಗಿಯೇ ಮೀಸಲಿರುವ ಯೂಟ್ಯೂಬ್. ಯದುಪ್ರಿಯಂ ಬಳಿ ಆಡಿ ಆರ್ 8, ಲ್ಯಾಂಬೋರ್ಗಿನಿ ಗಲ್ಲಾರ್ಡೋ, ಕ್ವಾಸ್ಕಿ ನಿಂಜಾ ಎಚ್ 2 ಸೇರಿದಂತೆ ಅನೇಕ ಐಷಾರಾಮಿ ಕಾರುಗಳು ಹಾಗೂ ಬೈಕ್ ಗಳಿವೆ. ಇವೆಲ್ಲವನ್ನೂ ವೈಪಿಎಂ ವ್ಲಾಗ್ ನಲ್ಲಿ ತೋರಿಸಿದ್ದಾರೆ. ಇನ್ನು ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ವಿಡಿಯೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ.
ಲಂಡನ್‌ನಲ್ಲಿ ಕೆಫೆ ಆರಂಭಿಸಿದ ಪಾಕ್ ನೀಲಿ ಕಣ್ಣಿನ ಚಾಯ್‌ವಾಲ, ಫೋಟೋದಿಂದ ಬದಲಾಯ್ತು ಅದೃಷ್ಠ!
ವೈಪಿಎಂ ವ್ಲಾಗ್ ಆದಾಯವೆಷ್ಟು?
ವೈಪಿಎಂ ವ್ಲಾಗ್ ಮೂಲಕ ಯದುಪ್ರಿಯಂ ತಿಂಗಳಿಗೆ ಸುಮಾರು 10ಲಕ್ಷ ರೂ. ಸಂಪಾದಿಸುತ್ತಾರೆ. ಇನ್ನು ಉದ್ಯಮಿಯಾಗಿರುವ ಯದುವೀರಂ ತಂದೆಯ ಆದಾಯ ತಿಂಗಳಿಗೆ 1 ಕೋಟಿ ರೂ. ಇದೆ.