ಹಣ ಉಳಿಸಿಕೊಳ್ಳಿ: ಟಿವಿ, ಫ್ರಿಡ್ಜ್‌, ಕಾರು ಖರೀದಿ ಬೇಡವೆಂದು ಅಮೆಜಾನ್‌ ಸಂಸ್ಥಾಪಕ ಸಲಹೆ..!

By BK AshwinFirst Published Nov 20, 2022, 1:37 PM IST
Highlights

ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಹಾಗೂ ಬರುವ ತಿಂಗಳುಗಳಲ್ಲಿ ಅನವಶ್ಯಕವಾಗಿ ಖರ್ಚು ಮಾಡುವುದನ್ನು ತಪ್ಪಿಸಬೇಕೆಂದು ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಸಲಹೆ ನೀಡಿದ್ದಾರೆ

ಅಮೆಜಾನ್‌ (Amazon) ಸಂಸ್ಥಾಪಕ ಹಾಗೂ ಬಿಲಿಯನೇರ್‌ ಉದ್ಯಮಿ ಜೆಫ್‌ ಬೆಜೋಸ್‌ (Jeff Bezos) ಇತ್ತೀಚೆಗೆ ಗ್ರಾಹಕರು (Consumers) ಹಾಗೂ ಉದ್ಯಮಗಳಿಗೆ (Businesses) ಎಚ್ಚರಿಕೆ ನೀಡಿದ್ದಾರೆ. ಆರ್ಥಿಕ ಹಿಂಜರಿತ (Economic Recession) ಬರುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಈ ರಜಾ ಸಮಯದಲ್ಲಿ (Holiday Season) (ಕ್ರಿಸ್‌ಮಸ್‌, ಹೊಸ ವರ್ಷದ ಸಮಯದಲ್ಲಿ ಅಮೆರಿಕ ಸೇರಿ ಹಲವೆಡೆ ರಜೆಯ ಕಾಲ) ದೊಡ್ಡ ಮಟ್ಟದ ಖರೀದಿ ಮುಂದೂಡುವುದನ್ನು ಪರಿಗಣಿಸಬೇಕೆಂದು ಜೆಫ್‌ ಬೆಜೋಸ್‌ ಸಲಹೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮ ಸಿಎನ್‌ಎನ್‌ ಜತೆಗೆ ಮಾತನಾಡಿದ ಶ್ರೀಮಂತ ಉದ್ಯಮಿ, ಗ್ರಾಹಕರಿಗೆ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ ಹಾಗೂ ಬರುವ ತಿಂಗಳುಗಳಲ್ಲಿ ಅನವಶ್ಯಕವಾಗಿ ಖರ್ಚು (Unnecessary Spending) ಮಾಡುವುದನ್ನು ತಪ್ಪಿಸಬೇಕೆಂದು ಅವರು ತಿಳಿಸಿದ್ದಾರೆ.

ಹೊಸ ಕಾರುಗಳು, ಟಿವಿಗಳಮತಹ ದೊಟ್ಟ ಮೊತ್ತದ ವಸ್ತುಗಳ ಖರೀದಿಯನ್ನು ಅಮೆರಿಕದ ಕುಟುಂಬಗಳು ತಡೆಯಬೇಕು ಎಂದು ಅವರು ಶಿಫಾರಸು ಮಾಡಿದ್ದಾರೆ. ಅಮೆರಿಕ ಹಿಂಜರಿತದ ಭೀತಿ ಅನುಭವಿಸಿರುವುದರಿಂದ ಜೆಫ್‌ ಬೆಜೋಸ್‌ ಈ ಸಲಹೆ ನೀಡಿದ್ದಾರೆ. ಜನರು ಕೆಲವು ರಿಸ್ಕ್‌ ತೆಗೆದುಕೊಳ್ಳಬೇಕೆಂದು ಸಹ ಬೆಜೋಸ್‌ ಹೇಳಿದ್ದು,  ಇನ್ನೂ ಹೆಚ್ಚಿನ ಆರ್ಥಿಕ ತೊಂದರೆಗಳು ಎದುರಾದಲ್ಲಿ ಸ್ವಲ್ಪ ಅಪಾಯದ ಕಡಿತವು ಆ ಸಣ್ಣ ವ್ಯಾಪಾರಕ್ಕೆ ವ್ಯತ್ಯಾಸವನ್ನು ಉಂಟುಮಾಡಬಹುದು ಎಂದೂ ಅಮೆಜಾನ್‌ ಸಂಸ್ಥಾಪಕ ಸಲಹೆ ನೀಡಿದ್ದಾರೆ. 

ಇದನ್ನು ಓದಿ: ಶೀಘ್ರದಲ್ಲೇ 10,000 ಅಮೆಜಾನ್‌ ಸಿಬ್ಬಂದಿ ವಜಾ..! ಮೆಟಾ, ಟ್ವಿಟ್ಟರ್‌ ಬಳಿಕ ಮತ್ತೊಂದು ದೊಡ್ಡ ಶಾಕ್‌

ನೀವು ವೈಯಕ್ತಿಕವಾಗಿ ದೊಡ್ಡ ಸ್ಕ್ರೀನ್‌ನ ಟಿವಿ ತೆಗೆದುಕೊಳ್ಳಬೇಕೆಂದು ಯೋಚಿಸುತ್ತಿದ್ದಲ್ಲಿ, ನೀವು ಕೆಲ ಕಾಲ ತಡೆಯಬಹುದು. ನಿಮ್ಮ ಹಣವನ್ನು  ಹಿಡಿದಿಟ್ಟುಕೊಳ್ಳಿ, ಮತ್ತು ಏನಾಗುತ್ತದೆ ಎಂಬುದನ್ನು ನೋಡಿ. ಹೊಸ ಆಟೋಮೊಬೈಲ್, ರೆಫ್ರಿಜರೇಟರ್‌, ಅಥವಾ ಏನಾದರೂ ಆಗಲಿ ಇದಕ್ಕೂ ಅದೇ ಅನ್ವಯಿಸುತ್ತದೆ. ಸಮೀಕರಣದಿಂದ ಕೆಲವು ಅಪಾಯವನ್ನು ತೆಗೆದುಹಾಕಿ ಎಂದೂ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ಜೆಫ್‌ ಬೆಜೋಸ್‌ ತಿಳಿಸಿದ್ದಾರೆ. 

ಅಲ್ಲದೆ, ಆರ್ಥಿಕತೆ ಸದ್ಯ ಉತ್ತಮ ಸ್ಥಿತಿಯಲ್ಲಿ ಕಾಣಿಸುತ್ತಿಲ್ಲ. ವಿಷಯಗಳು ನಿಧಾನಗೊಳ್ಳುತ್ತಿವೆ. ಆರ್ಥಿಕತೆಯ ಹಲವು ವಲಯಗಳಲ್ಲಿ ನೀವು ಉದ್ಯೋಗ ಕಡಿತವನ್ನು ನೋಡುತ್ತಿದ್ದೀರಿ ಎಂದೂ ಜೆಫ್‌ ಬೆಜೋಸ್‌ ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ: ಮತಾಂತರಕ್ಕೆ ಅಮೆಜಾನ್‌ ನೆರವು..? ಆರೆಸ್ಸೆಸ್‌ ಸಂಬಂಧಿತ ಮಾಸಿಕ ‘ಆರ್ಗನೈಸರ್‌’ ಗಂಭೀರ ಆರೋಪ

ಇನ್ನು, ಅದೇ ಸಂದರ್ಶನದಲ್ಲಿ ತಮ್ಮ ಸಂಪತ್ತಿನ ಹೆಚ್ಚು ಪಾಲು ಆಸ್ತಿಯನ್ನು ದಾನ ಮಾಡುವುದಾಗಿಯೂ ಅಮೆಜಾನ್‌ ಸಂಸ್ಥಾಪಕ ಹೇಳಿಕೊಂಡಿದ್ದಾರೆ. ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಹೆಚ್ಚುತ್ತಿರುವ ಸಾಮಾಜಿಕ ಹಾಗೂ ರಾಜಕೀಯ ವಿಭಜನೆಗಳ ನಡುವೆ ಮಾನವೀಯತೆಯನ್ನು ಏಕೀಕರಿಸುವ ಜನರನ್ನು ಬೆಂಬಲಿಸಲು ತನ್ನ 124 ಬಿಲಿಯನ್‌ ಡಾಲರ್‌ ನಿವ್ವಳ ಮೌಲ್ಯದ ಬಹುಪಾಲು ಹಣವನ್ನು ದತ್ತಿ ಸಂಸ್ಥೆಗಳಿಗೆ ದಾನ ಮಾಡುವುದಾಗಿ ಹೇಳಿದರು. ಆದರೆ, ಜೆಫ್‌ ಬೆಜೋಸ್ ಅವರು ತಮ್ಮ ಸಂಪತ್ತಿನ ಎಷ್ಟು ಭಾಗ ನೀಡಲು ಯೋಜಿಸುತ್ತಿದ್ದಾರೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ. ಆದರೂ, ಅವರು ತಮ್ಮ ಜೀವಿತಾವಧಿಯಲ್ಲಿ ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ದಾನ ಮಾಡುತ್ತೀರಾ ಎಂದು ಕೇಳಿದಾಗ, ಅವರು "ಹೌದು, ನಾನು ಮಾಡುತ್ತೇನೆ" ಎಂದು ಸಿಎನ್‌ಎನ್‌ ಮಾಧ್ಯಮದ ಸಂದರ್ಶನದಲ್ಲಿ ಉತ್ತರಿಸಿದ್ದಾರೆ. 

ಅಮೆಜಾನ್‌ ಸಿಇಒ ಸ್ಥಾನದಿಂದ ಜೆಫ್‌ ಬೆಜೋಸ್‌ ಕಳೆದ ವರ್ಷವೇ ಕೆಳಗಿಳಿದಿದ್ದು, ಸದ್ಯ ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ. ಈ ಮಧ್ಯೆ, ಅಮೆಜಾನ್‌ ಸಹ ಸುಮಾರು 10 ಸಾವಿರ ಸಿಬ್ಬಂದಿಯ ಉದ್ಯೋಗ ಕಡಿತ ಮಾಡಲಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಈ ಪೈಕಿ ಈಗಾಗಲೇ 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯ ಉದ್ಯೋಗ ಕಡಿತ ಮಾಡಿದೆ. ಅಮೆಜಾನ್‌ ಮಾತ್ರವಲ್ಲದೆ, ಟೆಕ್‌ ದೈತ್ಯ ಕಂಪನಿಗಳು ಎನಿಸಿಕೊಂಡಿರುವ ಟ್ವಿಟ್ಟರ್‌, ಮೆಟಾ, ಮೈಕ್ರೋಸಾಫ್ಟ್‌ ಸೇರಿ ಹಲವು ಕಂಪನಿಗಳು ಸಹ ಸಾವಿರಾರು ಉದ್ಯೋಗಿಗಳಿಗೆ ಪಿಂಕ್‌ ಸ್ಲಿಪ್‌ ನೀಡಿದೆ. 

ಇದನ್ನೂ ಓದಿ: ಟ್ವಿಟರ್‌, ಮೆಟಾ ಆಯ್ತು.. ಈಗ ಅಮೆಜಾನ್‌ನಿಂದ 3766 ಉದ್ಯೋಗಿಗಳ ವಜಾ!

click me!