Fact Check| 500ರ ನೋಟಲ್ಲಿ ಹಸಿರು ಗೆರೆ ಗಾಂಧಿ ಪಕ್ಕದಲ್ಲಿದ್ದರೆ ಅದು ನಕಲಿ?

By Web DeskFirst Published Aug 29, 2019, 11:50 AM IST
Highlights

500ರ ನೋಟಲ್ಲಿ ಹಸಿರು ಗೆರೆ ಗಾಂಧಿ ಪಕ್ಕದಲ್ಲಿದ್ದರೆ ಅದು ನಕಲಿ?  ಇದು ನಿಜಾನಾ? ಇಲ್ಲಿದೆ ಈ ಸುದ್ದಿ ಹಿಂದಿನ ವಾಸ್ತವತೆ

ನವದೆಹಲಿ[ಆ.29]: 500 ರು. ಮುಖಬೆಲೆಯ ನೋಟಿನಲ್ಲಿರುವ ಹಸಿರು ಗೆರೆಯನ್ನಾಧರಿಸಿ ಅದು ನಕಲಿ ನೋಟೇ ಅಥವಾ ಅಸಲೀ ನೋಟೇ ಎಂದು ಪತ್ತೆ ಮಾಡಬಹುದು ಎಂಬರ್ಥದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗಾಂಧಿ ಪಕ್ಕದಲ್ಲಿ ಹಸಿರು ಗೆರೆ ಇರುವ ನೋಟು ಮತ್ತು ಆರ್‌ಬಿಐ ಗವರ್ನರ್‌ ಸಹಿಯ ಪಕ್ಕದಲ್ಲಿ ಹಸಿರು ಗೆರೆ ಇರುವ ಎರಡು ನೋಟುಗಳನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗಿದೆ; ‘500 ಮುಖಬೆಲೆಯ ನೋಟುಗಳ ಬಗ್ಗೆ ಎಚ್ಚರದಿಂದಿರಿ. ಗಾಂಧಿ ಚಿತ್ರದ ಪಕ್ಕ ಹಸಿರು ಗೆರೆ ಇರುವ ನೋಟುಗಳನ್ನು ಸ್ವೀಕರಿಸಬೇಡಿ. ಇಂತಹ ನೋಟುಗಳು ನಕಲಿ ನೋಟುಗಳು. ಗವರ್ನರ್‌ ಸಹಿ ಪಕ್ಕದಲ್ಲಿ ಹಸಿರು ಗೆರೆ ಇರುವ ನೋಟು ಅಸಲಿ ನೋಟು. ಈ ಸಂದೇಶವನ್ನು ಸಾಧ್ಯವಾದಷ್ಟುಜನರಿಗೆ ತಲುಪಿಸಿ’ ಎಂದು ಹೇಳಲಾಗಿದೆ.

ಆದರೆ ಈ ಸುದ್ದಿ ನಿಜವೇ ಎಂದು ರಿಸವ್‌ರ್‍ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನಕಲಿ ನೋಟುಗಳ ಪತ್ತೆ ಹೇಗೆಂದು ಪರಿಶೀಲಿಸಿದಾಗ ಈ ರೀತಿಯ ಯಾವುದೇ ಮಾಹಿತಿ ಅದರಲ್ಲಿ ಇರಲಿಲ್ಲ. ಈ ಬಗ್ಗೆ ಆರ್‌ಬಿಐಗೆ ಇ-ಮೇಲ್‌ ಮಾಡಿ, 500 ರು. ಮುಖಬೆಲೆ ನೋಟಿನ ಹಸಿರು ಗೆರೆಯು ನಕಲಿ ನೋಟನ್ನು ಪತ್ತೆ ಹಚ್ಚುವ ವಿಧಾನವೇ ಎಂದು ಪ್ರಶ್ನಿಸಿದಾಗ ಆರ್‌ಬಿಐ ಇದನ್ನು ನಿರಾಕರಿಸಿದೆ. ಹಾಗೆಯೇ ಹಸಿರುವ ಗೆರೆಯ ಜಾಗವು ಬದಲಾಗುತ್ತದೆ. ಹಾಗಂತ ಅದನ್ನು ನಕಲಿ ನೋಟೆಂದು ಪರಿಗಣಿಸಲಾಗುವುದಿಲ್ಲ ಎಂದಿದೆ. ಬಳಿಕ ನಕಲಿ ನೋಟನ್ನು ಪತ್ತೆ ಹಚ್ಚುವುದು ಹೇಗೆಂದು ತಿಳಿಸಿ ಲಿಂಕ್‌ವೊಂದನ್ನು ಶೇರ್‌ ಮಾಡಿದೆ.

ಹಾಗಾಗಿ ಗಾಂಧಿ ಪಕ್ಕದಲ್ಲಿ ಹಾದುಹೋಗಿರುವ ಹಸಿರು ಗೆರೆ ಇರುವ 500 ರು. ನೋಟು ನಕಲಿ ಎಂದು ಹೇಳಲಾದ ಸಂದೇಶ ಸುಳ್ಳು ಎಂಬುದು ಸ್ಪಷ್ಟ.

click me!