ಮಾರುತಿ: 3000 ಸಿಬ್ಬಂದಿ ಔಟ್| 9ನೇ ತಿಂಗಳೂ ಕಾರು ಮಾರಾಟ ಕುಸಿತ ಹಿನ್ನೆಲೆ ಹಂಗಾಮಿ ಸಿಬ್ಬಂದಿ ನೌಕರಿ ಕಟ್
ನವದೆಹಲಿ[ಆ.29]: ದೇಶದ ಆಟೋಮೊಬೈಲ್ ವಲಯದ ಬೆಳವಣಿಗೆ ಕಳೆದ 19 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದ ವರದಿಗಳ ಬೆನ್ನಲ್ಲೇ, ಇದೀಗ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಝುಕಿ, 3000 ಹಂಗಾಮಿ ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಾರುಗಳ ಬೇಡಿಕೆ ಮತ್ತು ಮಾರಾಟದಲ್ಲಿ ಭಾರೀ ಮಹಾ ಕುಸಿತವಾಗಿದ್ದು, ಕಾರುಗಳ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಕಾರಣಕ್ಕಾಗಿ ಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಗುತ್ತಿಗೆಯನ್ನು ನವೀಕರಿಸಿಲ್ಲ ಎಂದು ಸ್ವತಃ ಮಾರುತಿ ಕಂಪನಿ ಹೇಳಿದೆ. ಆದರೆ, ಸಂಸ್ಥೆಯಲ್ಲಿ ಕಾರ್ಯಪ್ರವೃತ್ತರಾಗಿರುವ 16,050 ಮಂದಿ ಕಾಯಂ ಉದ್ಯೋಗಿಗಳನ್ನು ಹುದ್ದೆಯಿಂದ ತೆಗೆಯುವ ಪ್ರಸ್ತಾವನೆ ತನ್ನ ಮುಂದಿಲ್ಲ. ಹಾಗಾಗಿ, ಕಾಯಂ ನೌಕರರು ಆತಂಕ ಪಡುವ ಅಗತ್ಯವಿಲ್ಲ ಎಂದು ಕಂಪನಿ ಅಭಯ ನೀಡಿದೆ.
undefined
ಭಾರತದಲ್ಲಿ ಆರ್ಥಿಕ ಹಿಂಜರಿತ: ಎಲ್ಲಾ ಸುದ್ದಿಗಳಿಗಗಿ ಇಲ್ಲಿ ಕ್ಲಿಕ್ಕಿಸಿ
ಕಠಿಣ ಸುರಕ್ಷತಾ ನಿಯಮಗಳು ಹಾಗೂ ಹೆಚ್ಚು ತೆರಿಗೆಗಳಿಂದ ಕಾರುಗಳ ದರ ಏರಿಕೆಗೆ ಕಾರಣವಾಗಿತ್ತು. ಅಲ್ಲದೆ, ಇದರಿಂದ ಸತತ 9ನೇ ತಿಂಗಳಾದ ಜುಲೈನಲ್ಲಿಯೂ ಕಾರುಗಳ ಮಾರಾಟ ಕುಸಿತದ ಹಾದಿಯೇ ಹಿಡಿದಿತ್ತು ಎಂದು ಮಾರುತಿ ಸುಜುಕಿ ಇಂಡಿಯಾ ಲಿ. ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರಿಗೆ ಕಂಪನಿಯ ಅಧ್ಯಕ್ಷ ಆರ್.ಸಿ ಭಾರ್ಗವ ತಿಳಿಸಿದರು. ಹಾಗಾಗಿ, ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗುತ್ತಿಗೆಯನ್ನು ನವೀಕರಿಸಲಾಗಲಿಲ್ಲ. ಆದರೆ, ಇತ್ತೀಚೆಗೆ ಆಟೋಮೊಬೈಲ್ ವಲಯದ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಬ್ಯಾಂಕ್‌ಗಳು ಹಲವು ಕ್ರಮಗಳನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾರು ಮಾರಾಟ ಚುರುಕು ಪಡೆಯುವ ಸಾಧ್ಯತೆಯಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.