ಟೀವಿ, ಫ್ರಿಜ್, ವಾಷಿಂಗ್‌ಮಷಿನ್, ಮೊಬೈಲ್‌ನಿಂದ ಹಿಡಿದು ವಿವಿಧ ಉತ್ಪನ್ನಗಳಿಂದ ಮನೆಮಾತಾದವರು ಟಿಪಿಜಿ. ಲಕ್ಷಾಂತರ ಜನಕ್ಕೆ ಉದ್ಯೋಗ ನೀಡಿ, ಭಾರತೀಯ ಗ್ರಾಹಕರ ಮನೆಮಾತಾಗಿದ್ದ ಇಂಥ ಉದ್ಯಮಿ ಶುಕ್ರವಾರ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರು ಟಿಪಿಜಿ ನಂಬಿಯಾರ್. ಇವರು ಭಾರತದ ಮನೆಮಾತಾಗಿದ್ದ ಬಿಪಿಎಲ್ ಕಂಪನಿಯ ಸಂಸ್ಥಾಪಕರು. ಟೀವಿ, ಫ್ರಿಜ್, ವಾಷಿಂಗ್‌ಮಷಿನ್, ಮೊಬೈಲ್‌ನಿಂದ ಹಿಡಿದು ವಿವಿಧ ಉತ್ಪನ್ನಗಳಿಂದ ಮನೆಮಾತಾದವರು. ಲಕ್ಷಾಂತರ ಜನಕ್ಕೆ ಉದ್ಯೋಗ ನೀಡಿ, ಭಾರತೀಯ ಗ್ರಾಹಕರ ಮನೆಮಾತಾಗಿದ್ದ ಇಂಥ ಉದ್ಯಮಿ ಶುಕ್ರವಾರ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಸಾಧನೆಯ ಕಿರುಮಾಹಿತಿ ಇಲ್ಲಿದೆ.
ರಕ್ಷಣಾ ಉತ್ಪನ್ನಗಳೇ ಬಿಪಿಎಲ್ ಮೊದಲ ಉತ್ಪನ್ನಗಳು: ಟಿ.ಪಿ. ಗೋಪಾಲನ್ ನಂಬಿಯಾರ್ ಅವರು ಬ್ರಿಟಿಷ್ ಫಿಸಿಕಲ್ ಲ್ಯಾಬೋ ರೇಟರೀಸ್ ಪ್ರೈವೇಟ್ ಲಿಮಿಟೆಡ್ (ಬಿಪಿಎಲ್) ಸಂಸ್ಥಾಪಕರು. ನಂಬಿಯಾರ್ ಅವರ ಪ್ರಯಾಣವು ಇಂಗ್ಲೆಂಡ್‌ನಲ್ಲಿ ಪ್ರಾರಂಭವಾಯಿತು, ಅಲ್ಲಿ ಅವರು ಬ್ರಿಟಿಷ್ ಫಿಸಿಕಲ್ ಲ್ಯಾಬೊರೇಟರಿಯೊಂದಿಗೆ ಹವಾನಿಯಂತ್ರಣ ಮತ್ತು ಶೈತ್ಯೀಕರಣದಲ್ಲಿ ಪರಿಣತಿಯನ್ನು ಪಡೆದರು. ಭಾರತಕ್ಕೆ ಹಿಂತಿರುಗಿದ ಅವರು ಸ್ವದೇಶಿ ಎಲೆಕ್ಟ್ರಾನಿಕ್ ಉತ್ಪಾದನೆಗೆ ದಿಟ್ಟ ಗುರಿಯನ್ನು ಹೊಂದಿದ್ದರು, ಕೇರಳದ ಪಾಲಕ್ಕಾಡ್‌ನಲ್ಲಿ 1963ರಲ್ಲಿ ಬಿಪಿಎಲ್‌ನ ಮೊದಲ ಕಾರ್ಖಾನೆಯನ್ನು ಸ್ಥಾಪಿಸಿದರು ಮತ್ತು ದೇಶಾದ್ಯಂತ ಲಕ್ಷಾಂತರ ಜನರು ನಂಬುವ ಬ್ರ್ಯಾಂಡ್ ಅನ್ನು ರಚಿಸಿದರು. ಆರಂಭದಲ್ಲಿ, ಇದು ಸಣ್ಣ ರಕ್ಷಣಾ ಸಾಧನಗಳನ್ನು ಸಿದ್ಧಪಡಿಸುತ್ತಿತ್ತು. ರಕ್ಷಣಾ ಸಾಧನಗಳೇ ಕಂಪನಿಯ ಮೊದಲ ಉತ್ಪನ್ನಗಳು.
ಜ್ಞಾನ, ವಿಜ್ಞಾನದ ಭಾಷೆಯಾಗಿ ಕನ್ನಡ: ಕನ್ನಡ ರಾಜ್ಯೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ವಿಶೇಷ ಲೇಖನ
ಟೀವಿ ರಂಗದಲ್ಲಿ ಬಿಪಿಎಲ್ ಕ್ರಾಂತಿ: 1980ರ ದಶಕದ ಆರಂಭದಲ್ಲಿ ಅರ್ಥಾತ್ 1982ರ ಏಷ್ಯನ್ ಗೇಮ್ಸ್ ನಂತರ ಕಲರ್ ಟೀವಿಗಳು ಮತ್ತು ವೀಡಿಯೊ ಕ್ಯಾಸೆಟ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗೋಪಾಲನ್ ನಂಬಿಯಾರ್ ಅವರು ಮನಗಂಡರು. ಅಂದಿನಿಂದ ರಕ್ಷಣಾ ಸಲಕರಣೆಗಳ ಜತೆಗೆ ಗ್ರಾಹಕ ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕೆಯತ್ತ ಬಿಪಿಎಲ್ ಅನ್ನು ವಿಸ್ತರಿಸಿದರು ಹಾಗೂ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಬಿಪಿಎಲ್ ಎಲೆಕ್ಟ್ರಾನಿಕ್ಸ್ ಕೇಂದ್ರ ಕಚೇರಿಯನ್ನು ಸ್ಥಾಪಿಸಿದರು. 1990ರ ಹೊತ್ತಿಗೆ, ಬಿಪಿಎಲ್ ಭಾರತೀಯ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ದೈತ್ಯನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿತು. ಅಲ್ಲದೆ, ದೂರಸಂಪರ್ಕ, ಸಾಫ್ಟ್ ಎನರ್ಜಿ ಮತ್ತು ಎಲೆಕ್ಟ್ರಾನಿಕ್ ಘಟಕಗಳಿಗೆ ವಿಸ್ತರಿಸಿತು.
ಯಾರದ್ದೇ ಮನೆಗೆ ಹೋಗಲಿ.. ಆ ಮನೆಯಲ್ಲಿ ಬಿಪಿಎಲ್ ಟೀವಿ ಇರುವುದು ಮಾಮೂಲಿಯಾಗಿತ್ತು. ಬಿಪಿಎಲ್ ಅಷ್ಟರ ಮಟ್ಟಿಗೆ 90ರ ದಶಕದಲ್ಲಿ ಮನೆಮಾತಾಗಿಬಿಟ್ಟಿತು. ಆರ್ಥಿಕ ಉದಾರೀಕರಣದ ಕಾರಣ ಸ್ಯಾಮ್ಸಂಗ್ ಹಾಗೂ ಎಲ್‌ಜಿಯಂಥ ಕಂಪನಿಗಳು ಭಾರತಕ್ಕೆ ಕಾಲಿಟ್ಟರೂ ಬಿಪಿಎಲ್ ತನ್ನದೇ ಆದ ಗ್ರಾಹಕರನ್ನು ಹೊಂದಿತ್ತು. ಆ ಸಮಯದಲ್ಲಿ ಟೀವಿ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದ ಬಿಪಿಎಲ್, ಟೀವಿ ಕ್ಷೇತ್ರದಲ್ಲಿ ದೇಶದ ಅಗ್ರ 10 ಪ್ರಮುಖ ಕಂಪನಿಗಳಲ್ಲಿ ಸ್ಥಾನ ಪಡೆದಿತ್ತು ಹಾಗೂ ಟೀವಿ ವಲಯದಲ್ಲಿ ಶೇ.15ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿತ್ತು. 90ರ ದಶಕದಲ್ಲಿ ಕಂಪನಿಯ ಆದಾಯ ವಾರ್ಷಿಕ ಸುಮಾರು 4300 ಕೋಟಿ ರು. ತಲುಪಿತು. ಟೀವಿಯನ್ನು ವಿದೇಶಕ್ಕೆ ರಫ್ತು ಮಾಡುವ ಭಾರತದ ಅತಿದೊಡ್ಡ ಕಂಪನಿ ಎಂಬ ಖ್ಯಾತಿ ಪಡೆದಿತ್ತು.
ದೇಶದ ಮೊದಲ ಮೊಬೈಲ್ ಕಂಪನಿ ಬಿಪಿಎಲ್: 90ರ ದಶಕದ ನಂತರ ಆರ್ಥಿಕ ಉದಾರೀಕರಣ ಯುಗ ಆರಂಭವಾಗಿ ಭಾರತಕ್ಕೆ ವಿದೇಶಿ ಕಂಪನಿಗಳು ಕಾಲಿಟ್ಟವು. ಹೀಗಾಗಿ ಇಂಥ ಉದಾರೀಕರಣದ ಯುಗದಲ್ಲಿ ವಿದೇಶಿ ಸಂಸ್ಥೆಗಳಿಂದ ಹೆಚ್ಚುತ್ತಿರುವ ಗಮನಿಸಿದ ಬಿಪಿಎಲ್, ಬದಲಾದ ಕಾಲಕ್ಕೆ ತಕ್ಕಂತೆ ಕಂಪನಿಯ ಆದ್ಯತೆಯನ್ನು ದೂರಸಂಪರ್ಕ ಮತ್ತು ಮೊಬೈಲ್ ತಂತ್ರಜ್ಞಾನಕ್ಕೆ ವಿಸ್ತರಿಸಿತು. ನಂಬಿಯಾರ್ ಅವರ ಅಳಿಯ ರಾಜೀವ್ ಚಂದ್ರಶೇಖರ್ ಸಾರಥ್ಯದಲ್ಲಿ ಬಿಪಿಎಲ್ ಮೊಬೈಲ್ ಫೋನ್ ವಲಯದಲ್ಲಿ ವಿಶಿಷ್ಟ ಕ್ರಾಂತಿಯನ್ನು ತರಲು ಪ್ರಮುಖ ಕಾರಣವಾಯಿತು. 1994ರಲ್ಲಿ ಬಿಪಿಎಲ್ ಮೊಬೈಲ್ ಕಾರ್ಯಾಚರಣೆ ಆರಂಭಿಸಿತು ಹಾಗೂ ದೇಶದ ಮೊದಲ ಮೊಬೈಲ್ ನೆಟ್‌ವರ್ಕ್ ಕಂಪನಿ ಎನ್ನಿಸಿಕೊಂಡಿತು. ಲಕ್ಷಾಂತರ ಗ್ರಾಹಕರನ್ನು ಹೊಂದಿದ್ದ ಅದು 2009ರಲ್ಲಿ ಲೂಪ್ ಮೊಬೈಲ್ ಎಂದು ಹೆಸರು ಬದಲಿಸಿಕೊಂಡಿತು.
ರಾಜ್ಯದಲ್ಲಿ ಹಿಂಸೆಗೆ ತಿರುಗಿದ ವಕ್ಫ್ ಗದ್ದಲ: ಬೂದಿಮುಚ್ಚಿದ ಕೆಂಡದ ಸ್ಥಿತಿ
ಈಗಲೂ ಮಾರುಕಟ್ಟೆಯಲ್ಲಿ ಬಿಪಿಎಲ್ ಮಿಂಚು: ನಂಬಿಯಾರ್ ಸ್ಥಾಪಿಸಿದ ಬಿಪಿಎಲ್, ಟೀವಿ, ಮೊಬೈಲ್ ಹಾಗೂ ಇತರ ವಿದ್ಯುನ್ಮಾನ ಉತ್ಪನ್ನ ವಲಯದಲ್ಲಿ ಕ್ರಾಂತಿ ಸೃಷ್ಟಿಸಿದ ಬೆನ್ನಲ್ಲೇ ಈಗ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳತ್ತ ತನ್ನ ಗಮನ ಹರಿಸಿದೆ. ಇದರ ಜತೆಗೆ ಪ್ರಸ್ತುತ, ಎಲ್‌ಇಡಿ ಟಿವಿ, ರೆಫ್ರಿಜರೇಟರ್, ಎಸಿ, ಮಿಕ್ಸರ್ ಗ್ರೈಂಡರ್, ವಾಷಿಂಗ್ ಮೆಷಿನ್, ವೈರ್‌ಲೆಸ್ ಹೆಡ್ ಸೆಟ್, ಬಿಪಿಎಲ್ ಬ್ಲೂಟೂತ್ ನೆಕ್‌ಬ್ಯಾಂಡ್, ಫ್ಯಾನ್ಸ್, ಹೋಮ್ ಥಿಯೇಟರ್ ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದು ಟೆಲಿಕಾಂ, ವೈದ್ಯಕೀಯ ಉತ್ಪನ್ನಗಳು ಮತ್ತು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಉತ್ಪಾದನಾ ವಲಯದಲ್ಲಿಯೂ ಇದೆ. ಟಿಪಿಜಿ ನಂಬಿಯಾರ್ ಅವರ ಪುತ್ರ ಅಜಿತ್ ನಂಬಿಯಾರ್ ಪ್ರಸ್ತುತ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಬಿಪಿಎಲ್ ಎನ್‌ಎಸ್‌ಇ ಮತ್ತು ಬಿಎಸ್‌ಇಯಲ್ಲಿ ವಹಿವಾಟು ನಡೆಸುವ ಲಿಸ್ಟೆಡ್ ಕಂಪನಿಯಾಗಿದೆ. ಮಾರುಕಟ್ಟೆ ಮೌಲ್ಯ 530 ಕೋಟಿ ರು. ಆಗಿದೆ.