ಕನ್ಸಲ್ಟನ್ಸಿ ಸಂಸ್ಥೆಯಿಂದ ಹೆಚ್‌ಡಿಎಫ್‌ಸಿ ಗೆ ಮೋಸ: ಪ್ರಕರಣ ದಾಖಲು!

By Web DeskFirst Published Oct 31, 2018, 4:55 PM IST
Highlights

ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ಸಲ್ಟನ್ಸಿ ಸಂಸ್ಥೆಯಿಂದ ಮೋಸ! ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಹೆಚ್ ಡಿಎಫ್ ಸಿ ಬ್ಯಾಂಕ್! ಸುಳ್ಳು ದಾಖಲೆ ಸೃಷ್ಟಿಸಿ 68 ಸಿಬ್ಬಂದಿ ನೇಮಕ ಆರೋಪ!ಗುರುಗ್ರಾಮ ಮೂಲದ ಅಡೆಕೋ ಕನ್ಸಲ್ಟನ್ಸಿ ಸಂಸ್ಥೆ ವಿರುದ್ಧ ಪ್ರಕರಣ

ಗುರುಗ್ರಾಮ(ಅ.31): ದೇಶದ ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್ ಭಾರೀ ವಂಚನೆಗೆ ಗುರಿಯಾಗಿದೆ. ಬ್ಯಾಂಕ್‌ಗೆ ಸಿಬ್ಬಂದಿ ನೇಮಕಾತಿ ನಡೆಸುವ ಗುರುಗ್ರಾಮ ಮೂಲದ ಕನ್ಸಲ್ಟನ್ಸಿ ಸಂಸ್ಥೆಯೊಂದು ನೇಮಕಾತಿ ಪ್ರಕ್ರಿಯೆಯಲ್ಲಿ ವಂಚನೆ ಎಸಗಿದ ಆರೋಪ ಕೇಳಿ ಬಂದಿದೆ. ಈ ಕುರಿತು ಬ್ಯಾಂಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಗುರುಗ್ರಾಮ ಮೂಲದ ಕನ್ಸಲ್ಟನ್ಸಿ ಸಂಸ್ಥೆ ಅಡೆಕೋ ಕನ್ಸಲ್ಟನ್ಸಿ ಸಂಸ್ಥೆ  ಹೆಚ್‌ಡಿಎಫ್‌ಸಿ ಬ್ಯಾಂಕ್‌ಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಲ್ಲಿ ಅಕ್ರಮ ಎಸಗಿದೆ ಎನ್ನಲಾಗಿದೆ.

ಒಟ್ಟು 68 ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮವಾಗಿದ್ದು, ಇದರಲ್ಲಿ ಅಸಿಸ್ಟಂಟ್ ಮ್ಯಾನೇಜರ್, ಬ್ರ್ಯಾಂಚ್ ಮ್ಯಾನೇಜರ್ ಹುದ್ದೆಗಳೂ ಸೇರಿವೆ ಎನ್ನಲಾಗಿದೆ. ಅಭ್ಯರ್ಥಿಗಳಿಂದ ಲಂಚ ಪಡೆದು, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ ನೇಮಕವಾಗುವಂತೆ ಮಾಡಿರುವ ಆರೋಪ ಅಡೆಕೋ ಕನ್ಸಲ್ಟನ್ಸಿ ಸಂಸ್ಥೆ ವಿರುದ್ಧ ಕೇಳಿ ಬಂದಿದೆ.

ಗೀತಾಂಜಲಿ ಬಗ್ಗಾ ಎಂಬ ಅಸಿಸ್ಟಂಟ್ ಮ್ಯಾನೇಜರ್‌ವೋರ್ವರ ದಾಖಲೆಗಳನ್ನು ಮರು ಪರಿಶೀಲನೆಗೆ ಒಳಪಡಿಸಿದಾಗ ಅಕ್ರಮ ಬೆಳಕಿಗೆ ಬಂದಿದೆ ಎಂದು ಹೆಚ್‌ಡಿಎಫ್‌ಸಿ ಬ್ಯಾಂಕ್ ತಿಳಿಸಿದೆ.

ದೇಶದ ವಿವಿಧ ಬ್ರ್ಯಾಂಚ್‌ಗಳಲ್ಲಿ ಒಟ್ಟು 68 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇವರೆಲ್ಲರ ದಾಖಲಾತಿಗಳು ನಕಲಿ ಎಂಬುದು ಸಾಬೀತಾಗಿದೆ. ಅಲ್ಲದೇ ಇವರಲ್ಲಿ ಕೆಲವರು ತಾವು ಲಂಚ ಕೊಟ್ಟು ನೇಮಕವಾಗಿರುವ ಕುರಿತು ತಪ್ಪೊಪ್ಪಿಕೊಂಡಿದ್ದಾರೆಂದೂ ಬ್ಯಾಂಕ್ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸುಳ್ಳು ದಾಖಲಾತಿ ಸೃಷ್ಟಿ, ಲಂಚ ಪಡೆದ ಆರೋಪದ ಮೇಲಚ್ ಹೆಚ್‌ಡಿಎಫ್‌ಸಿ ಬ್ಯಾಂಕ್ ಅಡೆಕೋ ಕನ್ಸಲ್ಟನ್ಸಿ ಸಂಸ್ಥೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

click me!