ಜಿಎಸ್ಟಿಯಿಂದ ಮಾಸಿಕ 320 ರು. ಉಳಿತಾಯ

By Kannadaprabha News  |  First Published Dec 2, 2019, 7:42 AM IST

ಕೇಂದ್ರ ಸರ್ಕಾರ ಲೆಕ್ಕವೊಂದನ್ನು ಮುಂದೆ ಇಟ್ಟಿದೆ. ಆ ಪ್ರಕಾರ, ಜಿಎಸ್‌ಟಿಯಿಂದಾಗಿ ದೇಶದ ಪ್ರತಿ ಕುಟುಂಬಕ್ಕೂ ಸರಾಸರಿ ಮಾಸಿಕ 320 ರು. ಉಳಿತಾಯವಾಗಿದೆ!


ನವದೆಹಲಿ (ಡಿ.01): ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ ಜಾರಿಗೆ ಬಂದು ಈಗಾಗಲೇ ಎರಡೂವರೆ ವರ್ಷಗಳು ಉರುಳಿವೆ. ಇದರಿಂದ ನಮಗೆ ಆದ ಲಾಭ ಏನು ಎಂಬ ಪ್ರಶ್ನೆ ಏನಾದರೂ ನಿಮ್ಮಲ್ಲಿ ಮೂಡಿದ್ದರೆ, ಅದಕ್ಕೆ ಕೇಂದ್ರ ಸರ್ಕಾರ ಲೆಕ್ಕವೊಂದನ್ನು ಮುಂದೆ ಇಟ್ಟಿದೆ. ಆ ಪ್ರಕಾರ, ಜಿಎಸ್‌ಟಿಯಿಂದಾಗಿ ದೇಶದ ಪ್ರತಿ ಕುಟುಂಬಕ್ಕೂ ಸರಾಸರಿ ಮಾಸಿಕ 320 ರು. ಉಳಿತಾಯವಾಗಿದೆ!

ಹೌದು. 2017 ರ ಜು.1 ರಿಂದ ಜಾರಿಯಾಗಿರುವ ಜಿಎಸ್‌ಟಿಯಿಂದ ದೇಶದ ಕುಟುಂಬಗಳು ತಿಂಗಳಿಗೆ 320 ರು.ಗಳನ್ನು ಉಳಿತಾಯ ಮಾಡುತ್ತಿವೆ ಎಂದು ಹಣಕಾಸು ಸಚಿವಾಲಯ ಸಿದ್ಧಪಡಿಸಿರುವ ಆಂತರಿಕ ಟಿಪ್ಪಣಿ ಹೇಳುತ್ತದೆ.

Latest Videos

ಧಾನ್ಯಗಳು, ಖಾದ್ಯ ತೈಲ, ಸಕ್ಕರೆ ಮತ್ತು ಸಿಹಿತಿಂಡಿಗಳ ಬಳಕೆಯಿಂದ ಕುಟುಂಬ ಗಳಿಗೆ ಸರಾಸರಿ ಮಾಸಿಕ ಇಷ್ಟು ಹಣ ಉಳಿತಾಯ ಆಗುತ್ತಿದೆ. ಅಕ್ಕಿ ಮತ್ತು ವಿವಿಧ ಬೆಳೆಗಳಿಗೆ ಯಾವುದೇ ಜಿಎಸ್‌ಟಿ ವಿಧಿಸದ ಕಾರಣ ಅವುಗಳ ಬಳಕೆಯಿಂದ ಮನೆಯೊಂದಕ್ಕೆ ತಿಂಗಳಿಗೆ 94 ರುಪಾಯಿ
ಉಳಿತಾಯವಾಗುತ್ತಿದೆ. 

ಜಿಎಸ್‌ಟಿ ಜಾರಿಗೂ ಮುನ್ನ ಗೋಧಿ, ಅಕ್ಕಿ ಮತ್ತು ಸಿರಿಧಾನ್ಯಗಳಿಗೆ ಕ್ರಮವಾಗಿ 2.5%, 2.75% ಮತ್ತು 3.5% ತೆರಿಗೆಯನ್ನು ವಿಧಿಸಲಾಗುತ್ತಿತ್ತು ಎಂದು ಸರ್ಕಾರದ ಟಿಪ್ಪಣಿಯಲ್ಲಿದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ. ಜಿಎಸ್‌ಟಿ ಪರಿಚಯಿಸಿದ ನಂತರ ಖಾದ್ಯತೈಲ ಮತ್ತು ಸಕ್ಕರೆ ಖರೀದಿ ಮೇಲೆ ಪ್ರತಿ ಮನೆಗೆ ತಿಂಗಳಿಗೆ ಕ್ರಮವಾಗಿ 15 ರು. ಮತ್ತು 6 ರು. ಉಳಿತಾಯವಾಗುತ್ತಿದೆ. ಚಾಕೋಲೇಟ್‌ನಿಂದ ತಿಂಗಳಿಗೆ 25 ರು., ಸ್ನ್ಯಾಕ್ಸ್ ಸೇವನೆಯಿಂದ ತಿಂಗಳಿಗೆ 13 ರು. ಉಳಿತಾಯವಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಸೌಂದರ್ಯ ವರ್ಧಕಗಳು ಮತ್ತು ಸೋಪು, ಶಾಂಪುಗಳ ಮೇಲಿನ ತೆರಿಗೆ ಪ್ರಮಾಣವು 27 %ನಿಂದ 18 %ಗೆ ಇಳಿಕೆಯಾಗಿದ್ದರಿಂದ ಪ್ರತಿ ಮನೆಗೆ ತಿಂಗಳಿಗೆ 19 ರು. ಮತ್ತು ಡಿಟರ್ಜೆಂಟ್ ಬಳಕೆಯಿಂದ ತಿಂಗಳಿಗೆ 11 ರು., ಟೈಲ್ಸ್ ಖರೀದಿಯಿಂದ 43 ರು., ನೈರ್ಮಲ್ಯ ಸಾಮಗ್ರಿಗಳು ಮತ್ತು ಪೀಠೋಪಕರಣಗಳ ಖರೀದಿಯಿಂದ ತಿಂಗಳಿಗೆ ೨೪ ರು. ಉಳಿತಾಯವಾಗುತ್ತಿದೆ ಎಂದು ಹಣಕಾಸು ಸಚಿವಾಲಯದ ಟಿಪ್ಪಣಿ ತಿಳಿಸಿದೆ.

ಹಾಗೆಯೇ, ಮಸಾಲೆ ಪದಾರ್ಥಗಳು, ಹೇರ್ ಆಯಿಲ್, ಟೂತ್‌ಪೇಸ್ಟ್, ರಬ್ಬರ್ ಬ್ಯಾಂಡ್, ಪಾದರಕ್ಷೆ, ಪೊರಕೆ ಮತ್ತು ಸ್ಕೂಲ್ ಬ್ಯಾಗ್‌ಗಳಂತಹ ಇತರ ಉತ್ಪನ್ನಗಳ ಮೇಲೆ ಪ್ರತಿ ಕುಟುಂಬವು ತಿಂಗಳಿಗೆ 70 ರು. ಉಳಿತಾಯ ಮಾಡುತ್ತಿದೆ ಎಂದು ತಿಳಿಸಲಾಗಿದೆ. ಜಿಎಸ್‌ಟಿಯು ಸಣ್ಣಉದ್ಯಮಗಳ ಮೇಲಿನ ಹೊರೆಯನ್ನು ಹೆಚ್ಚಿಸಿದೆ ಎಂದು ಎನ್‌ಡಿಎ ಸರ್ಕಾರವನ್ನು ಟೀಕಿಸುತ್ತಿದ್ದ ವಿಪಕ್ಷಗಳ ಬಾಯಿ ಮುಚ್ಚಿಸುವ ಸಲುವಾಗಿ ಹಣಕಾಸು ಇಲಾಖೆ ಈ ಆಂತರಿಕ ಟಿಪ್ಪಣಿಯನ್ನು ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ.

click me!