
ನವದೆಹಲಿ (ಜ.18): ಒಂದು ವರ್ಷದಲ್ಲಿ 6000 ರೂಪಾಯಿಗಳ ನಗದು ಲಾಭಕ್ಕೆ ಅರ್ಹರಾಗಿರುವ ಲಕ್ಷಾಂತರ ಭಾರತೀಯ ರೈತರಿಗೆ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಖುಷಿ ಸುದ್ದಿ ನೀಡುವ ಸಾಧ್ಯತೆ ಇದೆ. ವಿವಿಧ ಮಾಧ್ಯಮ ವರದಿಗಳ ಪ್ರಕಾರ ಸರ್ಕಾರವು ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕ ಆರ್ಥಿಕ ಲಾಭದ ಮೊತ್ತವನ್ನು 8,000 ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. 8000 ರೂ.ಗಳನ್ನು ಅರ್ಹ ರೈತರ ಖಾತೆಗೆ 4 ಸಮಾನ ಕಂತುಗಳಲ್ಲಿ ವಿತರಿಸಲಾಗುವುದು ಎಂದು ವರದಿಗಳು ತಿಳಿಸಿವೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು, ಕೆಲವು ವಿನಾಯಿತಿಗಳಿಗೆ ಒಳಪಟ್ಟು ಕೃಷಿಯೋಗ್ಯ ಭೂಮಿಯೊಂದಿಗೆ ದೇಶಾದ್ಯಂತ ಎಲ್ಲಾ ಭೂಮಾಲೀಕ ರೈತ ಕುಟುಂಬಗಳಿಗೆ ಆದಾಯ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಯೋಜನೆಯಡಿಯಲ್ಲಿ, ಪ್ರತಿ ವರ್ಷಕ್ಕೆ ರೂ 6000 ಮೊತ್ತವನ್ನು ಮೂರು 4 ಮಾಸಿಕ ಕಂತುಗಳಲ್ಲಿ ತಲಾ ರೂ 2000 ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಲಕ್ಷಗಟ್ಟಲೆ ಉತ್ಸುಕ ರೈತರು ತಮ್ಮ ಖಾತೆಯಲ್ಲಿ 2,000 ರೂ.ಗಳ ವಿತರಣೆಗಾಗಿ ಕಾಯುತ್ತಿರುವಾಗ, ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗದ ಹಲವಾರು ರೈತರಿದ್ದಾರೆ.
ಫಲಾನುಭವಿಗಳ ಪಟ್ಟಿ: ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತ್ ಗಳ ನೋಟಿಸ್ ಬೋರ್ಡ್ ಗಳಲ್ಲಿ ಪ್ರಕಟಿಸಲಾಗುತ್ತದೆ. ಹೀಗಾಗಿ ಈ ಯೋಜನೆಯ ಪ್ರಯೋಜನ ಪಡೆಯುವ ರೈತ ಕುಟುಂಬಗಳು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಪರಿಶೀಲಿಸಬಹುದು. ಇಲ್ಲವೇ ಆನ್ ಲೈನ್ ನಲ್ಲಿ ಕೂಡ ಫಲಾನುಭವಿಗಳ ಪಟ್ಟಿಯನ್ನು ಚೆಕ್ ಮಾಡಬಹುದು. ಇವೆರಡರ ಹೊರತಾಗಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೂಡ ಅರ್ಹ ರೈತರಿಗೆ ಎಸ್ ಎಂಎಸ್ ಅಲರ್ಟ್ ಕಳುಹಿಸುತ್ತವೆ.
ಆನ್ ಲೈನ್ ನಲ್ಲಿ ಪರಿಶೀಲಿಸೋದು ಹೇಗೆ?
ಹಂತ 1: ಪಿಎಂ ಕಿಸಾನ್ ಸಮ್ಮಾನ್ ನಿಧಿಯ ವೆಬ್‌ಸೈಟ್ pmkisan.gov.inಗೆ ಭೇಟಿ ನೀಡಿ.
ಹಂತ 2: ಮುಖಪುಟದಿಂದ ನಿಮಗೆ ರೈತರ ಕಾರ್ನರ್ (Farmers Corner) ಎಂಬ ಪ್ರತ್ಯೇಕ ವಿಭಾಗ ಕಾಣಿಸುತ್ತದೆ.
ಹಂತ 3: ರೈತರ ಕಾರ್ನರ್ ವಿಭಾಗದಲ್ಲಿ 'ಫಲಾನುಭವಿ ಸ್ಥಿತಿ' (Beneficiary Status) ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಇಲ್ಲವೇ ನೀವು ನೇರವಾಗಿ https://pmkisan.gov.in/BeneficiaryStatus.aspx ಲಿಂಕ್ ಗೆ ಭೇಟಿ ನೀಡಬಹುದು.
ಹಂತ 5: ಈಗ ನೀವು ಆಧಾರ್ ಸಂಖ್ಯೆ, ಪಿಎಂ ಕಿಸಾನ್ ಖಾತೆ ಸಂಖ್ಯೆ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ -ಇವುಗಳಲ್ಲಿ ಯಾವುದಾದರೂ ಒಂದು ಮಾಹಿತಿಯನ್ನು ಆಯ್ಕೆ ಮಾಡಿ ಭರ್ತಿ ಮಾಡಿ.
ಹಂತ 6: ಮಾಹಿತಿಗಳನ್ನು ಭರ್ತಿ ಮಾಡಿದ ಬಳಿಕ 'ಡೇಟಾ ಪಡೆಯಿರಿ' (Data option) ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಫಲಾನುಭವಿ ಸ್ಥಿತಿ ಬಗ್ಗೆ ಮಾಹಿತಿ ಸಿಗುತ್ತದೆ.
ನೀವು ಪಿಎಂ ಕಿಸಾನ್ ಯೋಜನೆ ಪ್ರಯೋಜನ ಪಡೆಯಲು ಅರ್ಹರಾಗಿದ್ದು, ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ್ದರು ಕೂಡ ಒಂದು ವೇಳೆ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಸರ್ಕಾರಕ್ಕೆ ನೇರವಾಗಿ ದೂರು ನೀಡಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.