LPG ಗ್ರಾಹಕರಿಗೆ ಶುಭಸುದ್ದಿ; ಅಡುಗೆ ಅನಿಲ ಸಿಲಿಂಡರ್ ಗೆ ಇನ್ನೂಒಂದು ವರ್ಷ ಸಿಗಲಿದೆ 200ರೂ. ಸಬ್ಸಿಡಿ

By Suvarna NewsFirst Published Mar 25, 2023, 11:59 AM IST
Highlights

ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ  ಪ್ರತಿ ಎಲ್ ಪಿಜಿ ಸಿಲಿಂಡರ್ ಮೇಲಿನ 200ರೂ. ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಇನ್ನೂ ಒಂದು ವರ್ಷಗಳ ಕಾಲ ವಿಸ್ತರಿಸಿದೆ. ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿ ಪಿಎಂಯುವೈ ಫಲಾನುಭವಿಗಳಿಗೆ 14.2 ಕೆಜಿ ಪ್ರತಿ ಎಲ್ ಪಿಜಿ ಸಿಲಿಂಡರ್ ಮೇಲೆ 200ರೂ. ಸಬ್ಸಿಡಿಯನ್ನು ವರ್ಷಕ್ಕೆ 12 ರೀಫಿಲ್ಸ್ ಗೆ ಒದಗಿಸಲು ಅನುಮೋದನೆ ನೀಡಿದೆ

ನವದೆಹಲಿ (ಮಾ.25): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಶುಕ್ರವಾರ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ  ಪ್ರತಿ ಎಲ್ ಪಿಜಿ ಸಿಲಿಂಡರ್ ಮೇಲಿನ 200ರೂ. ಸಬ್ಸಿಡಿಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಿದೆ. ಇದರಿಂದ 9.6 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿ ಪಿಎಂಯುವೈ ಫಲಾನುಭವಿಗಳಿಗೆ 14.2 ಕೆಜಿ ಪ್ರತಿ ಎಲ್ ಪಿಜಿ ಸಿಲಿಂಡರ್ ಮೇಲೆ 200ರೂ. ಸಬ್ಸಿಡಿಯನ್ನು ವರ್ಷಕ್ಕೆ 12 ರೀಫಿಲ್ಸ್ ಗೆ ಒದಗಿಸಲು ಅನುಮೋದನೆ ನೀಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. ಈ ನಿರ್ಧಾರದಿಂದ ಸುಮಾರು  9.6 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ.  2022-23ನೇ ಸಾಲಿನಲ್ಲಿ ಈ ಸಬ್ಸಿಡಿ ಒದಗಿಸಲು ಒಟ್ಟು 6,100 ಕೋಟಿ ರೂ. ವೆಚ್ಚವಾಗಿದೆ. ಇನ್ನು 2023-24ನೇ ಆರ್ಥಿಕ ಸಾಲಿನಲ್ಲಿ  7,680 ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ. ಈ ಸಬ್ಸಿಡಿ ಮೊತ್ತವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ.  2023ರ ಮಾರ್ಚ್ 1ಕ್ಕೆ ಅನ್ವಯವಾಗುವಂತೆ 9.59 ಕೋಟಿ ಪಿಎಂಯುವೈ ಫಲಾನುಭವಿಗಳಿದ್ದರು.

ಪಿಎಂಯುವೈ ಗ್ರಾಹಕರು ನಿರಂತರವಾಗಿ ಎಲ್ ಪಿಜಿ ಬಳಸಲು ಬೆಂಬಲ ನೀಡುವ ಉದ್ದೇಶವನ್ನು ಈ ಸಬ್ಸಿಡಿಯೋಜನೆ ಹೊಂದಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. 'ಪಿಎಂಯುವೈ ಗ್ರಾಹಕರು ಸುಸ್ಥಿರ ಎಲ್ ಪಿಜಿ ಅಳವಡಿಕೆ ಹಾಗೂ ಬಳಕೆ ಮಾಡೋದನ್ನು ಖಚಿತಪಡಿಸೋದು ಮುಖ್ಯವಾಗಿದ್ದು, ಆ ಮೂಲಕ ಅವರು ಶುದ್ಧವಾದ ಅಡುಗೆ ಇಂಧನಕ್ಕೆ ಸಂಪೂರ್ಣವಾಗಿ ವರ್ಗಾವಣೆ ಹೊಂದುವಂತೆ ಮಾಡಲು ಸಾಧ್ಯವಾಗುತ್ತದೆ' ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪಿಎಂಯುವೈ ಗ್ರಾಹಕರ ಸರಾಸರಿ ಎಲ್ ಪಿಜಿ ಬಳಕೆಯಲ್ಲಿ ಶೇ.20ರಷ್ಟು ಏರಿಕೆಯಾಗಿದೆ. ಹೀಗಾಗಿ 2019-20ನೇ ಸಾಲಿನಲ್ಲಿ  3.01 ರೀಫಿಲ್ಸ್ ನಿಂದ 2021-22ನೇ ಸಾಲಿನಲ್ಲಿ 3.68 ರೀಫಿಲ್ಸ್ ಗೆ ಏರಿಕೆಯಾಗಿದೆ. ಎಲ್ಲ ಪಿಎಂಯುವೈ ಫಲಾನುಭವಿಗಳು ನಿಗದಿತ ಸಬ್ಸಿಡಿ ಪಡೆಯಲು ಅರ್ಹತೆ ಗಳಿಸಿದ್ದಾರೆ.

ಕೇಂದ್ರ ಸರ್ಕಾರಿ ನೌಕರರು,ಪಿಂಚಣಿದಾರರಿಗೆ ಬಂಪರ್ ಗಿಫ್ಟ್, ತುಟ್ಟಿಭತ್ಯೆ ಶೇ. 4 ರಿಂದ 42ಕ್ಕೆ ಏರಿಕೆ!

ಗ್ರಾಮೀಣ ಪ್ರದೇಶದ ಜನರು ಅಡುಗೆಗೆ ಸಾಂಪ್ರದಾಯಿಕ ಇಂಧನಗಳನ್ನು ಬಳಕೆ ಮಾಡುತ್ತಿದ್ದರು. ಈ ಜನರಿಗೆ ಶುದ್ಧವಾದ ಅಡುಗೆ ಇಂಧನ ದೊರಕುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೂ ಅಡುಗೆ ಅನಿಲ ದೊರಕಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪರಿಚಯಿಸಿತು. ಇದರ ಮೂಲಕ ಗ್ರಾಮೀಣ ಭಾಗದ ಬಡ ಕುಟುಂಬದ ಹಿರಿಯ ಮಹಿಳೆಯರಿಗೆ ಉಚಿತ ಠೇವಣಿಯ ಎಲ್ ಪಿಜಿ ಸಂಪರ್ಕ ಪಡೆಯಲು ಅವಕಾಶ ಕಲ್ಪಿಸಲಾಯಿತು.

ಲೋಕಸಭೆಯಲ್ಲಿ ಹಣಕಾಸು ಮಸೂದೆ 2023 ಅಂಗೀಕಾರ; ಪ್ರಮುಖ ತಿದ್ದುಪಡಿಗಳೇನು?

ಗ್ಯಾಸ್‌ ಸಿಲಿಂಡರ್‌ ದರ ಏರಿಕೆ
ಈ ತಿಂಗಳ ಅಂದರೆ ಮಾರ್ಚ್ ಮೊದಲ ದಿನ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಹೆಚ್ಚಳ ಮಾಡಲಾಗಿತ್ತು. 14.2 ಕೆಜಿ ಗೃಹಬಳಕೆಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (Liquified Petroleum Gas) (ಎಲ್‌ಪಿಜಿ) (LPG) ಸಿಲಿಂಡರ್‌ನ (Cylinder)ಬೆಲೆ ₹ 50 ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರ ಮೇಲಿನ ಹೊರೆ ಮತ್ತಷ್ಟು ಹೆಚ್ಚಿದೆ. ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ  ₹ 1103 ಆಗಿದೆ. ಮುಂಬೈನಲ್ಲಿ ಈ ಸಿಲಿಂಡರ್ ₹ 1102.5 ಕ್ಕೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ  ₹1129 ಹಾಗೂ ಚೆನ್ನೈನಲ್ಲಿ  ₹1118.5 ಇದೆ. ಸ್ಥಳೀಯ ತೆರಿಗೆಗಳಿಂದಾಗಿ (Taxes) ದೇಶೀಯ ಅಡುಗೆ ಅನಿಲದ ಬೆಲೆಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ ಬದಲಾಗುತ್ತವೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಣೆ ಮಾಡುತ್ತಾರೆ.
 

click me!