* ಕಂದಾಯ ಸಚಿವಾಲಯದ ಕಾರ್ಯದರ್ಶಿ ಬಜಾಜ್ ಹೇಳಿಕೆ
* ಕ್ರಿಪ್ಟೋಗೆ ತೆರಿಗೆ ವಿಧಿಸಲು ಬಜೆಟ್‌ನಲ್ಲಿ ತೆರಿಗೆ ಕಾಯ್ದೆ ತಿದ್ದು
ನವದೆಹಲಿ(ನ.20): ಕ್ರಿಪ್ಟೋಕರೆನ್ಸಿಯನ್ನು (Cryptocurrency) ತೆರಿಗೆ ವ್ಯಾಪ್ತಿಗೆ ತರುವ ಸಲುವಾಗಿ, ಮುಂಬರುವ ಬಜೆಟ್‌ನಲ್ಲಿ ಆದಾಯ ತೆರಿಗೆ ಕಾನೂನಿಗೆ (Tax Law) ಸೂಕ್ತ ತಿದ್ದುಪಡಿ ತರುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ ಎಂದು ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ ತರುಣ್ ಬಜಾಜ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು ‘ಈಗಾಗಲೇ ಕೆಲ ಜನರು ಕ್ರಿಪ್ಟೋಕರೆನ್ಸಿಯ ಆದಾಯಕ್ಕೆ ಕ್ಯಾಪಿಟಲ್ ಗೇನ್ಸ್ ತೆರಿಗೆಯನ್ನು (Capital Gains Tax) ಪಾವತಿ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋ ವಹಿವಾಟು ದೊಡ್ಡದಾಗಿ ಬೆಳೆದಿದೆ. ಹೀಗಾಗಿ ನಾವು ಆದಾಯ ತೆರಿಗೆ ವಿಷಯದಲ್ಲಿ ಏನಾದರೂ ಬದಲಾವಣೆ ತರಬೇಕೋ ಅಥವಾ ಬೇಡವೋ ಎಂಬುದನ್ನು ಪರಿಶೀಲಿಸಲಿದ್ದೇವೆ. ಆದರೆ ಇವೆಲ್ಲವೂ ಬಜೆಟ್‌ನ ಭಾಗವಾಗಿರಲಿದೆ. ನಾವು ಈಗಾಗಲೇ ಬಜೆಟ್‌ಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆ ಹಂತದಲ್ಲಿ ನಾವು ಈ ವಿಷಯಗಳನ್ನೆಲ್ಲಾ ಪರಿಗಣಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.
undefined
ಜೊತೆಗೆ ಈಗಾಗಲೇ ಟ್ರೇಡಿಂಗ್ ಫ್ಲಾಟ್‌ಫಾರ್ಮ್ (Trading Platform) ಸೇವೆ ನೀಡುತ್ತಿರುವವರು, ಬ್ರೊಕರೇಜ್ ಸಂಸ್ಥೆಗಳು ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆ. ತೆರಿಗೆ ಕಾಯ್ದೆಗೆ ತಿದ್ದುಪಡಿ ಬಳಿಕ ಈ ಸೇವಾ ಸಂಸ್ಥೆಗಳೂ ತಮ್ಮ ಹೆಸರು ನೊಂದಾಯಿಸಿ ಸೂಕ್ತ ತೆರಿಗೆ ಪಾವತಿಸಬೇಕಾಗಿ ಬರಲಿದೆ ಎಂದು ತಿಳಿಸಿದ್ದಾರೆ.
ಕ್ರಿಪ್ಟೋಕರೆನ್ಸಿ ದುರ್ಬಳಕೆ ತಡೆಯಿರಿ : ಮೋದಿ ಕರೆ
ದೇಶದಲ್ಲಿ ಬಿಟ್ ಕಾಯಿನ್‌ನಂತಹ (Bit coin) ಕ್ರಿಪ್ಟೋ ಕರೆನ್ಸಿಗಳ (Cryptocurrency) ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿ (Prime Narendra modi) ಇದೇ ಮೊದಲ ಬಾರಿ ಈ ಡಿಜಿಟಲ್ ಕರೆನ್ಸಿಯ (Digital Currency) ಸುರಕ್ಷತೆಯ ಕುರಿತು ಮಾತನಾಡಿದ್ದು, ಪ್ರಜಾಪ್ರಭುತ್ವ ರಾಷ್ಟ್ರಗಳೆಲ್ಲ ಸೇರಿ ಒಟ್ಟಾಗಿ ಕ್ರಿಪ್ಟೋ ಕರೆನ್ಸಿಗಳು ಕೆಟ್ಟಕೈಗಳಿಗೆ ಸಿಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಇಂದು ತಂತ್ರಜ್ಞಾನ ಮತ್ತು ದತ್ತಾಂಶಗಳು ಹೊಸ ಅಸ್ತ್ರಗಳಾಗುತ್ತಿವೆ. ತಂತ್ರ ಜ್ಞಾನದಿಂದ ಲಭಿಸುವ ಶಕ್ತಿಯು ದೇಶ ದೇಶಗಳ ನಡುವೆ ಸಹಕಾರದ ಸಾಧನವಾಗುತ್ತದೆಯೋ ಅಥವಾ ಸಂಘರ್ಷದ ಸಾಧನ ವಾಗುತ್ತದೆಯೋ ಎಂಬುದು ನಾವು ಅದನ್ನು ಹೇಗೆ ಬಳಸಿ ಕೊಳ್ಳುತ್ತೇವೆ ಎಂಬುದರ ಮೇಲೆ ನಿಂತಿದೆ. ನಾವೆಲ್ಲ ಒಟ್ಟಾಗಿ ಭವಿಷ್ಯದ (Future) ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರಯತ್ನಿಸಬೇಕು. ಕ್ರಿಪ್ಟೋ ಕರೆನ್ಸಿ ಮುಂತಾದ ಹೊಸ ತಂತ್ರಜ್ಞಾನಗಳು ತಪ್ಪು ಕೈಗಳಿಗೆ ಸೇರದಂತೆ ವಿಶ್ವಾಸಾರ್ಹ ಉತ್ಪಾದನೆ ಮತ್ತು ಪೂರೈಕೆಯ ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳಬೇಕು. ಏಕೆಂದರೆ ಇಂತಹ ತಂತ್ರಜ್ಞಾನಗಳು ನಮ್ಮ ಯುವಕರನ್ನು ಹಾಳು ಮಾಡಬಲ್ಲವು ಎಂದು ಹೇಳಿದ್ದಾರೆ.
‘ಸಿಡ್ನಿ ಡೈಲಾಗ್’ ಶೃಂಗದಲ್ಲಿ ಗುರುವಾರ ವರ್ಚುವಲ್ ಆಗಿ ಪಾಲ್ಗೊಂಡು ಮಾತನಾಡಿದ ಅವರು ದೇಶದಲ್ಲಿ ಇತ್ತೀಚೆಗೆ ಕ್ರಿಪ್ಟೋ ಕರೆನ್ಸಿಯ ಕುರಿತು ಯುವಜನರಲ್ಲಿ ಎದ್ದಿರುವ ಹೊಸ ಆಸಕ್ತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಭಾರಿ ಲಾಭ ಬರುತ್ತದೆ ಎಂಬ ದಾರಿ ತಪ್ಪಿಸುವ ಪ್ರಚಾರ, ಕ್ರಿಪ್ಟೋ ಕರೆನ್ಸಿಯನ್ನು ಹವಾಲಾಕ್ಕೆ ಅಥವಾ ಭಯೋತ್ಪಾದನೆಗೆ ಬಳಸಿಕೊಳ್ಳುವುದು ಮುಂತಾದ ಆತಂಕಗಳ ಕುರಿತು ಕಳೆದ ವಾರವಷ್ಟೇ ಮೋದಿ (Modi) ಅವರು ಉನ್ನತ ಮಟ್ಟದ ಸಭೆ ನಡೆಸಿದ್ದರು. ಇದೀಗ ಮೊದಲ ಬಾರಿ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಕರೆ ನೀಡಿರುವುದು ಮಹತ್ವ ಪಡೆದಿದೆ.
ತಂತ್ರಜ್ಞಾನದಲ್ಲಿ ಭಾರತದ ಹೂಡಿಕೆ: ಭಾರತವು (India) ಸ್ವದೇಶಿ 5ಜಿ ಮ್ತು 6ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಭಾರಿ ಹೂಡಿಕೆ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ ಕುರಿತ ಸಂಶೋಧನೆ, ಮಷಿನ್ ಲರ್ನಿಂಗ್, ಮಾನವ ಕೇಂದ್ರಿತ ಯಾಂತ್ರಿಕ ಕಲಿಕೆ ಹಾಗೂ ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆಯ ವಿಷಯದಲ್ಲಿ ಭಾರತವು ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ದೇಶ ದೇಶಗಳ ನಡುವಿನ ಸ್ಪರ್ಧೆಯಲ್ಲಿ ತಂತ್ರಜ್ಞಾನವು ಈಗಾಗಲೇ ಪ್ರಮುಖ ಸಾಧನವಾಗಿದೆ. ಭವಿಷ್ಯದ ಜಗತ್ತನ್ನು ರೂಪಿಸುವಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ ಎಂದು ಮೋದಿ ಹೇಳಿದರು.