
ನವದೆಹಲಿ (ಫೆ.28): ಕೇಂದ್ರ ಸರ್ಕಾರವು ದಕ್ಷಿಣದ ರಾಜ್ಯಗಳಿಗೆ ತೆರಿಗೆ ಹಾಗೂ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗುತ್ತಿದೆ ಎಂಬ ಕೂಗು ಹೆಚ್ಚುತ್ತಿರುವ ನಡುವೆಯೇ ಇದೀಗ ಮುಂದಿನ ಹಣಕಾಸು ವರ್ಷದಿಂದ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು ಶೇ.1ರಷ್ಟು ಕಡಿತ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇದು ಜಾರಿಯಾದರೆ ರಾಜ್ಯ ಸರ್ಕಾರಗಳಿಗೆ ಹಾಲಿ ಸಿಗುತ್ತಿರುವ ತೆರಿಗೆ ಪಾಲು 35 ಸಾವಿರ ಕೋಟಿ ರು.ನಷ್ಟು ಕಡಿತವಾಗಲಿದೆ.
ಸದ್ಯ ಕೇಂದ್ರದ ತೆರಿಗೆಯಲ್ಲಿ ಶೇ.41ರಷ್ಟು ಪಾಲನ್ನು ರಾಜ್ಯಗಳಿಗೆ ನೀಡಲಾಗುತ್ತಿದೆ. ಇದರಲ್ಲಿ ಶೇ.1ರಷ್ಟು ಕಡಿತ ಮಾಡಿ ಶೇ.40ಕ್ಕೆ ಇಳಿಸುವ ಚಿಂತನೆ ಇದೆ. ಇದರ ಜತೆಗೆ ಮನಸೋ ಇಚ್ಛೆ ಉಚಿತಗಳನ್ನು ಘೋಷಿಸುವ ರಾಜ್ಯಗಳಿಗೆ ಒಂದಷ್ಟು ಮೂಗುದಾರ ಹಾಕುವ ಯೋಚನೆಯೂ ಕೇಂದ್ರಕ್ಕಿದೆ ಎಂದು ಹೇಳಲಾಗಿದೆ. ಇಂಥದ್ದೊಂದು ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಮಾರ್ಚ್ ಅಂತ್ಯದ ವೇಳೆಗೆ ಒಪ್ಪಿಗೆ ನೀಡುವ ನಿರೀಕ್ಷೆ ಇದ್ದು, ನಂತರ ಅದನ್ನು ಹಣಕಾಸು ಆಯೋಗಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಮಾಧ್ಯಮ ವರದಿಗಳು ಹೇಳಿವೆ.
ಮುಸ್ಲಿಮರನ್ನು ಬ್ರದರ್ಸ್ ಎಂದಿದ್ದ ಡಿಸಿಎಂ ಹೊಸ ಅವತಾರ: ಡಿ.ಕೆ.ಶಿವಕುಮಾರ್ ಹಿಂದೂ ಮಂತ್ರ ಏಕೆ?
ನಂತರ ಅರ್ಥಶಾಸ್ತ್ರಜ್ಞ ಅರವಿಂದ ಪಾನಾಗಾಢಿಯಾ ನೇತೃತ್ವದ ಹಣಕಾಸು ಆಯೋಗವು ತನ್ನ ಶಿಫಾರಸುಗಳನ್ನು ಅ.31ರೊಳಗೆ ಸಲ್ಲಿಸುವ ಸಾಧ್ಯತೆ ಇದೆ. ಈ ಶಿಫಾರಸುಗಳು 2026-27ರ ಹಣಕಾಸು ವರ್ಷದಲ್ಲೇ ಜಾರಿಯಾಗುವ ನಿರೀಕ್ಷೆಗಳಿವೆ. ಒಂದು ವೇಳೆ ಇದೇನಾದರೂ ಜಾರಿಯಾದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಈಗ ನಡೆಯುತ್ತಿರುವ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆ ಇದೆ.
ಕಡಿತಕ್ಕೆ ಕಾರಣ ಏನು?: ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು 1980ರಲ್ಲಿ ಶೇ.20ರಷ್ಟಿತ್ತು. ಇದೀಗ ಅದು ಶೇ.41ಕ್ಕೆ ತಲುಪಿದೆ. ಆದರೆ, ಆರ್ಥಿಕತೆಯು ವೇಗ ಕಳೆದುಕೊಳ್ಳುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವೆಚ್ಚ ಮಾತ್ರ ಹೆಚ್ಚಾಗಿದೆ. ಇದು ರಾಜ್ಯದ ತೆರಿಗೆ ಪಾಲು ಕಡಿತ ಮಾಡುವ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಸಾಮಾನ್ಯವಾಗಿ ಸರ್ಕಾರಿ ವೆಚ್ಚದಲ್ಲಿ ಶೇ.60ರಷ್ಟನ್ನು ಆರ್ಥಿಕತೆ ಮತ್ತು ಆರೋಗ್ಯ, ಶಿಕ್ಷಣದಂಥ ಸಾಮಾಜಿಕ ಮೂಲಸೌಲಭ್ಯಗಳಿಗೆ ರಾಜ್ಯಗಳು ವಿನಿಯೋಗಿಸುತ್ತವೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಭೌತಿಕ ಮೂಲಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಜಿಎಸ್‌ಟಿ ಜಾರಿ ಬಳಿಕ ರಾಜ್ಯಗಳಿಗೆ ಬರುವ ಆದಾಯ ಹೆಚ್ಚಿಸುವ ಸಾಧ್ಯತೆಗಳು ಕಡಿಮೆಯಾಗಿವೆ.
ದಲಿತರ ಹಣ ಗ್ಯಾರಂಟಿಗೆ ಬಳಕೆ: ದಿನೇಶ್ ಗುಂಡೂರಾವ್ ಸಮರ್ಥನೆ
ಉಚಿತಗಳಿಗೆ ಕಡಿವಾಣ ಹಾಕಲು ಕ್ರಮ?: ರಾಜ್ಯಗಳಲ್ಲಿ ರಾಜಕೀಯ ಲಾಭಕ್ಕಾಗಿ ಗೃಹಲಕ್ಷ್ಮೀಯಂಥ ಯೋಜನೆಗಳಡಿ ಫಲಾನುಭವಿಗಳಿಗೆ ನೇರವಾಗಿ ಹಣ ನೀಡುವ, ಸಾಲಮನ್ನಾ, ವಿವಿಧ ಉಚಿತಗಳ ಘೋಷಣೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಪರೋಕ್ಷ ತಂತ್ರಗಳನ್ನು ಅನುಸರಿಸುವ ನಿರೀಕ್ಷೆ ಇದೆ. ರಾಜ್ಯಗಳಿಗೆ ತೆರಿಗೆ ಆದಾಯ ಕೊರತೆಯಾದಾಗ ಷರತ್ತುಗಳನ್ನು ವಿಧಿಸಿ ಕೇಂದ್ರದಿಂದ ಅನುದಾನ ನೀಡಲು ಚಿಂತನೆ ನಡೆಸಿದೆ. ಈ ಪರಿಸ್ಥಿತಿಯಲ್ಲಿ ನಿಗದಿತ ನಿಬಂಧನೆಗಳನ್ನು ಈಡೇರಿಸಿದಾಗ ಮಾತ್ರ ಅನುದಾನ ನೀಡಲು ಅವಕಾಶವಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.