
ಹಳದಿ ಲೋಹದ ಮೇಲಿನ ವ್ಯಾಮೋಹ ದಿನದಿಂದ ದಿನಕ್ಕೆ ತುಂಬಾನೇ ಜಾಸ್ತಿಯಾಗ್ತಿದೆ. ಜನಸಾಮಾನ್ಯರು ಬಂಗಾರವನ್ನು ಕೊಳ್ಳುವುದು ಅಸಾಧ್ಯವಾಗ್ತಿದೆ. ಒಂದು ಗ್ರಾಂ ಚಿನ್ನದ ಬೆಲೆ 16 ಸಾವಿರ ರೂಪಾಯಿ ತಲುಪಿದ್ದು, ಶುಭಸಮಾರಂಭಗಳಿಗೆ ಒಡವೆಗಳನ್ನು ಕೊಳ್ಳದಂತೆ ಆಗ್ತಿದೆ. ಇತ್ತ ವಂಗ ಬಾಬಾ ಬಂಗಾರ ಬಗ್ಗೆ ನುಡಿದಿದ್ದ ಭವಿಷ್ಯವಾಣಿ ನಿಜವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದುಬಾರಿಯಾಗುತ್ತಾ. ಇಳಿಕೆಯಾಗುತ್ತಾ ಅನ್ನೋದನ್ನ ಸೆಂಟ್ರಲ್ ಬಜೆಟ್ ನಿರ್ಧರಿಸಲಿದೆ. ಆದ್ರೆ, ಜಾಗತಿಕ ಆರ್ಥಿಕತೆ ಚಿನ್ನದ ಭವಿಷ್ಯವನ್ನು ಬೇರೆಯೇ ಹೇಳುತ್ತಿದೆ. ಏನು ಅನ್ನೋದಕ್ಕೆ ಈ ಸ್ಟೋರಿ ನೋಡಿ.
ಇವತ್ತು ನಿಮ್ಮೆಲ್ಲರ ಕುತೂಹಲವನ್ನ ಹೆಚ್ಚಿಸುವ ಸುದ್ದಿಯೊಂದನ್ನ ಹೊತ್ತು ತಂದಿದ್ದೇವೆ. ಈ ಸುದ್ದಿಯ ಮೇಲೆ ಕಣ್ಣಾಡಿಸದ ಹಾಗೂ ಕುತೂಹಲವಿರದ ಮನುಷ್ಯನೇ ಈ ಭೂಮಿಯ ಮೇಲೆ ಇಲ್ಲ ಅನಿಸುತ್ತದೆ. ಈ ಕಾರಣಕ್ಕಾಗಿಯೇ ಈ ಒಂದು ಸುದ್ದಿ ತುಂಬಾನೇ ಮಹತ್ವ ಪಡೆದುಕೊಂಡಿದ್ದು, ಪ್ರತಿ ಸಲನೂ ಜನ್ರು ಕಣ್ಣರಳಿಸಿಕೊಂಡು ಈ ಸುದ್ದಿಯನ್ನು ನೋಡ್ತಿರ್ತಾರೆ.
ಮನೆಯಲ್ಲಿ ನಡೆಯೋ ಶುಭಸಮಾರಂಭಗಳಿಗೆ ಚಿನ್ನ ಖರೀದಿ ಮಾಡದಿದ್ರೆ ಹೇಗೆ ಹೇಳಿ? ಅದ್ರಲ್ಲೂ ಭಾರತೀಯರ ಮನೆ ಕಾರ್ಯಕ್ರಮಗಳಿಗೆ ಚಿನ್ನ ಬೇಕೆಬೇಕು. ಅದು ಮದ್ವೆಯಾಗಲಿ, ಗೃಹಪ್ರವೇಶ, ನಾಮಕರಣ, ಮುಂಜಿ ಅಥ್ವಾ ಇನ್ಯಾವುದೇ ಕಾರ್ಯಕ್ರಮ ನಡೆದ್ರು ಅದಕ್ಕೆ ಚಿನ್ನ ಖರೀದಿ ಆಗಲೇಬೇಕು. ಹೀಗಾಗಿ ಎಲ್ಲರೂ ಚಿನ್ನದಂಗಡಿಗಳಿಗೆ ಮುಗಿಬಿದ್ದು ಖರೀದಿ ಮಾಡ್ತಿದ್ದಾರೆ. ಇದ್ರಿಂದಾಗಿ ಚಿನ್ನದ ರೇಟ್ ಗಗನ ಕುಸುಮವಾಗಿಬಿಟ್ಟಿದೆ..
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗ್ತಾನೆ ಇದೆ. ಹೀಗಾಗಿ ಚಿನ್ನದ ಒಡವೆಗಳ ಮೇಲಿನ ಒಲವು ಮೈ ಸುಡುವುದಕ್ಕೆ ಕಾರಣವಾಗಿದೆ. ಬಂಗಾರ ದುಬಾರಿಯಾಗಿ ಹೋಗಿದೆ. ಹಾಗಂತ ನಾವು ನೀವು ಅಲಂಕಾರವನ್ನು ಮಾಡಿಕೊಳ್ಳೊದು ಬಿಡೋದಕ್ಕೆ ಆಗುತ್ತಾ? ಚಿನ್ನ ಇಲ್ಲದಿದ್ರೆ, ಬೆಳ್ಳಿಯ ಒಡವೆಗಳನ್ನೇ ಧರಿಸುವ ಮನಸು ಮಾಡ್ಬಹುದು. ಆದ್ರೆ, ಬೆಳ್ಳಿ ಬೆಲೆ ಕೂಡ ಚಿನ್ನಕ್ಕೆ ಪೈಪೋಟಿ ಕೊಡುವಂತೆ ಏರಿಕೆಯಾಗಿದೆ. ಚಿನ್ನದ ಬದಲಿ ಲೋಹ ಅನ್ನೋ ರೀತಿಯಲ್ಲಿ ಜನ್ರು ಬೆಳ್ಳಿಯತ್ತ ಮುಖ ಮಾಡಿದ್ದಾರೆ. ಕಡಿಮೆ ಬೆಲೆಗೆ ಸಿಗ್ತಿದ್ದ ಬೆಳ್ಳಿ ಇದೀಗ ಚಿನ್ನಕ್ಕೆ ಪೈಪೋಟಿ ನೀಡುವಂತೆ ಬೆಲೆ ಏರಿಕೆ ಕಾಣ್ತಿದೆ.
ಕಳೆದ ಮೂರು ವರ್ಷದಲ್ಲಿ ಬಂಗಾರದ ಬೆಲೆಯ ಗ್ರಾಫ್ ಹೇಗಿದೆ ಅಂತ ನೋಡಿದ್ರೆ, ಮೂರು ಪಟ್ಟು ಚಿನ್ನದ ಬೆಲೆ ಜಾಸ್ತಿಯಾಗಿದೆ. ವರ್ಷದಿಂದ ವರ್ಷಕ್ಕೆ ಶೇಕಡಾ 20 ರಷ್ಟು ದುಡಿಮೆ ಅಥ್ವಾ ವೇತನ ಜಾಸ್ತಿಯಾಗೋದೆ ಕಷ್ಟ, ಅಂತಹದ್ರಲ್ಲಿ ಚಿನ್ನದ ಬೆಲೆ ಡಬಲ್ ಅಲ್ಲ, ಮೂರು ವರ್ಷದಲ್ಲಿ ತ್ರಿಬಲ್ ಆಗ್ಬಿಟ್ಟಿದೆ. ಹೀಗಾದ್ರೆ, ಜನ್ರು ಉಳಿತಾಯ ಮಾಡಿ ಕೂಡ ಬಂಗಾರವನ್ನು ಖರೀದಿ ಮಾಡೋದಕ್ಕೆ ಸಾಧ್ಯವಾಗ್ತಿಲ್ಲ ಅಂತ ಮಾತ್ನಾಡಿಕೊಳ್ತಿದ್ದಾರೆ.
ಕಳೆದ ಮೂರು ವರ್ಷದಲ್ಲಿನ ಚಿನ್ನದ ರೇಟ್ ನೋಡುವುದಾದ್ರೆ, 24 ಕ್ಯಾರೆಟ್ನ 10 ಗ್ರಾಂ ಚಿನ್ನ 2022ರ ಸೆಪ್ಟಂಬರ್ ವೇಳೆಗೆ 50 ಸಾವಿರ ಗಡಿಯನ್ನು ದಾಟುವ ಮೂಲಕ ವರ್ಷಾಂತ್ಯಕ್ಕೆ 52 ಸಾವಿರದ 670 ರೂಪಾಯಿಗಳಾಗಿತ್ತು. ಇನ್ನು 2023ರವೇಳೆಗೆ 65 ಸಾವಿರದ 330 ರೂಪಾಯಿಗಳಿತ್ತು. ಹಾಗಿಯೇ 2024ರ ವರ್ಷಾಂತ್ಯಕ್ಕೆ 77 ಸಾವಿರದ 913 ರೂಪಾಯಿಗಳಾಗಿತ್ತು. ಇನ್ನು ಕಳೆದ ವರ್ಷಾಂತ್ಯಕ್ಕೆ ಒಂದು ಲಕ್ಷದ ಗಡಿಯನ್ನು ದಾಟಿ 1 ಲಕ್ಷದ 30 ಸಾವಿರ ರೂಪಾಯಿಗಳನ್ನುಮುಟ್ಟಿತ್ತು. ಈ ವರ್ಷದ ಆರಂಭದಲ್ಲಿಯೇ ಒಂದೂವರೆ ಲಕ್ಷವನ್ನು ದಾಟಿದ್ದು, ಇದೀಗ ಒಂದು ಲಕ್ಷದ 60 ಸಾವಿರದ 270 ರೂಪಾಯಿಯನ್ನು ಮುಟ್ಟಿದೆ.
ಬಲ್ಗೇರಿಯಾದ ಬಾಬಾ ವಂಗಾ ಭವಿಷ್ಯವಾಣಿಯ ಬಗ್ಗೆ ಎಲ್ರಿಗೂ ಗೊತ್ತಿದೆ. 12 ವರ್ಷದವಳಿದ್ದಾಗಲೇ ಪ್ರಾಕೃತಿಕ ವಿಕೋಪದಿಂದಾಗಿ ಕಣ್ಣು ಕಳೆದುಕೊಂಡ ಆಕೆಗೆ ಅತೀಂದ್ರಿಯ ಶಕ್ತಿಯೊಂದು ಪ್ರಾಪ್ತಿಯಾಗಿತ್ತು. ಮುಂದೇನಾಗುತ್ತದೆ ಅನ್ನೋದೆಲ್ಲವೂ ಆಕೆಗೆ ತಿಳಿದಿತ್ತು ಅನ್ನೋದು ಮಧ್ಯ ಪ್ರಾಚ್ಯದೇಶಗಳ ಬಲವಾದ ನಂಬಿಕೆ. ಹೀಗಾಗಿ ಆಕೆಯ ಭವಿಷ್ಯವಾಣಿಗಳ ಬಗ್ಗೆ ಎಲ್ಲಿಲ್ಲದ ಕುತೂಹಲವಿತ್ತು. 1991ರಲ್ಲಿ ಸೋವಿಯತ್ ಒಕ್ಕೂಟದ ವಿಭಜನೆ ಬಗೆಗಿನ ಭವಿಷ್ಯ ನಿಜವಾದ್ಮೇಲೆ ಜಾಗತಿಕವಾಗಿ ಆಕೆಯ ಭವಿಷ್ಯವನ್ನು ನಂಬುವುದಕ್ಕೆ ಶುರುವಾಯ್ತು. 1996ರಲ್ಲಿ ಆಕೆ ಸಾವಗೀಡಾದ್ರೂ ಮುಂದಿನ ಮೂರು ಸಾವಿರ ವರ್ಷಗಳವರೆಗಿನ ಭವಿಷ್ಯವನ್ನು ಆಕೆ ನಿಖರವಾಗಿ ತಿಳಿಸಿಹೋಗಿದ್ದಾರಂತೆ. ಹೀಗಾಗಿ ಪ್ರತಿ ವರ್ಷವೂ ಆಕೆಯ ಭವಿಷ್ಯವನ್ನು ಇಡೀ ಜಗತ್ತು ಕಾದು ನೋಡುತ್ತಿರುತ್ತದೆ.
ಬಾಬಾ ವಂಗ ಭವಿಷ್ಯವಾಣಿಯಲ್ಲಿ ಬಂಗಾರದ ಬೆಲೆಯ ಬಗ್ಗೆ ಪ್ರಸ್ತಾಪವಾಗಿತ್ತು. ಈ ವರ್ಷ 2026 ರಲ್ಲಿ ಜಾಗತಿಕ ಆರ್ಥಿಕತೆಯು ತೀವ್ರ ಒತ್ತಡವನ್ನು ಎದುರಿಸಲಿದೆ. ಅದರ ಪ್ರಭಾವದಿಂದಾಗಿ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ ಎಂದು ಬಾಬಾ ವಂಗಾ ಭವಿಷ್ಯವಾಣಿಯು ಕಳೆದ ವರ್ಷವೇ ಹೇಳಿತ್ತು. ಅದರಂತೆಯೇ ಇದೀಗ ಹಳದಿ ಲೋಹದ ಬೆಲೆ ಗಗನಮುಖಿಯಾಗಿ ಬೆಳೆಯುತ್ತಿದೆ.
ಬಾಬಾ ಭವಿಷ್ಯವಾಣಿಯಂತೆಯೇ ಜಾಗತಿಕ ಮಟ್ಟದಲ್ಲಿ ಚಿನ್ನದ ಹೂಡಿಕೆ ಹೆಚ್ಚಾಗುತ್ತ ಹೋಗುತ್ತಿದೆ. ಅಮೆರಿಕಾದ ತೆರಿಗೆ ನೀತಿಯು ವಿಶ್ವದ ಆರ್ಥಿಕತೆಯನ್ನು ಅಸ್ಥಿರ ಮಾಡಿದೆ. ಇದ್ರ ಪರಿಣಾಮವಾಗಿ ಜಾಗತಿಕ ಹೂಡಿಕೆದಾರರು ನೇರವಾಗಿ ಚಿನ್ನದ ಮೇಲೆ ಮಾತ್ರವೇ ಹೂಡಿಕೆ ಮಾಡ್ತಿದ್ದಾರೆ. ಹೀಗಾಗಿ ಚಿನ್ನದ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಜಾಸ್ತಿಯಾಗ್ತಾನೆ ಇದೆ. ಜಾಗತಿಕ ಆರ್ಥಿಕತೆಯ ಅಸ್ಥಿರತೆಯಿಂದಾಗಿ ಹೂಡಿಕೆದಾರರು ವಿವಿಧ ಷೇರುಗಳ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಈ ಹಿಂದಿನಿಂದಲೂ ಹೂಡಿಕೆಯಲ್ಲಿ ನಂಬಿಕೆ ಉಳಿಸಿಕೊಂಡು ಬಂದಿರುವ ಚಿನ್ನದ ಮೇಲಷ್ಟೆ ಹೂಡಿಕೆಗೆ ಒಲವು ತೋರುತ್ತಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.