
ಮುಂಬೈ: ಕಳೆದ 25 ವರ್ಷಗಳಲ್ಲಿ ಷೇರು ಮಾರುಕಟ್ಟೆ ಸೇರಿದಂತೆ ಉಳಿದೆಲ್ಲ ಆಸ್ತಿಗಳ ಮೇಲಿನ ಹೂಡಿಕೆಗಿಂತ ಚಿನ್ನ ಮತ್ತು ಬೆಳ್ಳಿ ಲೋಹಗಳ ಮೇಲಿನ ಹೂಡಿಕೆಯು ಹೂಡಿಕೆದಾರರಿಗೆ ಅತಿ ಹೆಚ್ಚಿನ ಲಾಭ ತಂದುಕೊಟ್ಟಿದೆ ಎಂಬ ಕುತೂಹಲಕರ ವಿಚಾರ ಲಭ್ಯವಾಗಿದೆ. ಚಿನ್ನ-ಬೆಳ್ಳಿ ದರ ಗಗನಕ್ಕೇರಿರುವ ನಡುವೆಯೇ ಇದು ಗೊತ್ತಾಗಿದೆ.
1999ರಲ್ಲಿ 10 ಗ್ರಾಂ.ಗೆ 4,400 ಇದ್ದ ಚಿನ್ನದ ಬೆಲೆ ಇದೀಗ ಇದೀಗ 1.4 ಲಕ್ಷ ರು. ತಲುಪಿದೆ. ಈ ಮೂಲಕ ಶೇ.14.3ರಷ್ಟು ಕ್ರೋಡೀಕೃತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) ದಾಖಲಿಸಿದೆ. 1999ರಲ್ಲಿ ಕೆ.ಜಿ.ಗೆ 8,100 ರು. ಇದ್ದ ಬೆಳ್ಳಿ ದರವು ಇದೀಗ 2.5 ಲಕ್ಷ ರು. ಸಮೀಪಿಸಿದೆ. ಈ ಮೂಲಕ ಶೇ.14.1ರಷ್ಟು ಸಿಎಜಿಆರ್ ದಾಖಲಿಸಿದೆ.
ಇದೇ ಅವಧಿಯಲ್ಲಿ ನಿಫ್ಟಿ (ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ) ಶೇ.11.7ರಷ್ಟು ಸಿಎಜಿಆರ್ ದಾಖಲಿಸಿದರೆ, ಸೆನ್ಸೆಕ್ಸ್ (ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ) ಶೇ.11.5ರಷ್ಟು ಬೆಳವಣಿಗೆ ಕಂಡಿದೆ. ಅಂದರೆ ಷೇರುಮಾರುಕಟ್ಟೆಗೆ ಹೋಲಿಸಿದರೆ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆ ಹೆಚ್ಚು ಲಾಭ ತಂದುಕೊಟ್ಟಿದೆ.
ಚಿನ್ನ-ಬೆಳ್ಳಿಯಷ್ಟೇ ಲಾಭ ತಂದುಕೊಂಡಲು ಷೇರುಪೇಟೆಯೂ ಇರಬೇಕಾಗಿದ್ದರೆ ಈಗಿನ 80 ಸಾವಿರದ ಬದಲು ಸೆನ್ಸೆಕ್ಸ್ ಸೂಚ್ಯಂಕ 1.6 ಲಕ್ಷ ಇರಬೇಕಿತ್ತು.
ನಿಪ್ಪಾನ್ ಇಂಡಿಯಾ ಮ್ಯೂಚುವಲ್ ಫಂಡ್‌ನ ವಿಕ್ರಂ ಧವನ್ ಅವರ ಪ್ರಕಾರ, ಅಲ್ವಾವಧಿಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಳಿತಗಳಿಂದ ಕೂಡಿದ್ದರೂ ವಿಭಿನ್ನ ಆಸ್ತಿಗಳಲ್ಲಿ ಹೂಡಿಕೆ ಮಾಡುವವರ ಪಾಲಿಗೆ ಅಂದರೆ ಹೂಡಿಕೆಯನ್ನು ಡೈವರ್ಸಿಫೈ ಮಾಡುವವರಿಗೆ ಚಿನ್ನ ಮತ್ತ ಬೆಳ್ಳಿ ಈಗಲೂ ಅತ್ಯುತ್ತಮ ಆಯ್ಕೆಯಾಗಿಯೇ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಚಿನ್ನ, ಬೆಳ್ಳಿ ಮೇಲಿನ ಬೇಡಿಕೆ ಹೆಚ್ಚಾಗಿ ಆಭರಣಗಳಿಂದಾಗಿ ಬಂದರೂ ಇತ್ತೀಚೆಗೆ ಇಟಿಎಫ್ (ಎಕ್ಸ್‌ಚೇಂಜ್ ಟ್ರೇಡೆಟ್ ಫಂಡ್)ಗಳ ಮೂಲಕವೂ ಹೂಡಿಕೆ ಹೆಚ್ಚಾಗುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.