ಗೋದ್ರೇಜ್‌ ಆಹಾರ ಟ್ರೆಂಡ್‌ ವರದಿ ಬಿಡುಗಡೆ: ಪಾಕಪ್ರಿಯರನ್ನು ಆಕರ್ಷಿಸಿದ ಬ್ಯಾಡಗಿ ಮೆಣಸಿಕಾಯಿ ಸಾಸ್‌

By Kannadaprabha News  |  First Published Apr 6, 2024, 9:00 AM IST

2024ರ ಭಾರತದ ಪಾಕಶಾಲೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸಲಿದ್ದಾರೆ. ಆಹಾರ ಉದ್ಯಮಿಗಳು, ಬಾಣಸಿಗರು, ಬಾರ್‌ ಟೆಂಡರ್‌ಗಳಾಗಿ, ಮಹಿಳೆಯರು ಭಾರತೀಯ ಆಹಾರ ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿದ್ದಾರೆ.


ಕೆ.ಪಿ.ಪ್ರಶಾಂತ್

ಮುಂಬೈ(ಏ.06):  ಬಹುನಿರೀಕ್ಷಿತ ಗೋದ್ರೇಜ್‌ ಆಹಾರ ಟ್ರೆಂಡ್‌ 2024ರ ವರದಿ ಬಿಡುಗಡೆ ಆಗಿದೆ. ಭಾರತದ ಪ್ರಾಚೀನ ಆಹಾರ ಪದ್ಧತಿಯಲ್ಲಿ ಅತೀ ಹೆಚ್ಚು ಬಳಕೆ ಆಗುವ ತುಪ್ಪ ಮತ್ತೆ ಪ್ರಾಮುಖ್ಯತೆ ಪಡೆಯಲಿದೆ. ಅಲ್ಲದೆ ಬ್ಯಾಡಗಿ ಮೆಣಸಿಕಾಯಿ ಸೇರಿದಂತೆ ಭಾರತದ ವಿಭಿನ್ನ ರುಚಿ ಹೊಂದಿರುವ ಮೆಣಸಿಕಾಯಿ ಸಾಸ್‌ಗಳು ಮುನ್ನೆಲೆಗೆ ಬರಲಿದೆ.

Latest Videos

undefined

ಮುಂಬೈನ ಗೋದ್ರೇಜ್‌ -1 ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ವರದಿಯನ್ನು ಗೋದ್ರೇಜ್‌ ಇಂಡಸ್ಟ್ರೀಸ್‌ ಮತ್ತು ಅಸೋಸಿಯೇಟ್ಸ್‌ ಕಂಪನಿಯ(ಜಿಐಎಲ್‌ಎಸಿ) ಕಾರ್ಯನಿರ್ವಾಹಕ ನಿರ್ದೇಶಕಿ ತಾನ್ಯ ದುಭಾಶ್‌ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ, 7ನೇ ವರ್ಷದ ಬಹು ನಿರೀಕ್ಷಿತ ಆಹಾರ ಟ್ರೆಂಡ್‌ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತೀಯ ಪಾಕಶಾಲೆಯಲ್ಲಿ 2024ರಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಳ್ಳುವ ಆಹಾರದ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

ಭಾರತದ ಚಿನ್ನ ಮೀಸಲೀಗ 812 ಟನ್: ಜನವರಿಯಲ್ಲಿ 8.7 ಟನ್‌ ಗೋಲ್ಡ್‌ ಖರೀದಿಸಿ ಇಟ್ಟ ಆರ್‌ಬಿಐ!

ಈ ವೇಳೆ ಗೋದ್ರೇಜ್‌ ಆಹಾರ ಟ್ರೆಂಡ್‌ ವರದಿಯ ಸಂಪಾದಕಿ ರುಶಿಯಾ ಮನ್ಶಾವ್‌ ಗಿಲ್ಡಿಯಲ್‌ ಮಾತನಾಡಿ, ದೇಶದ ವಿವಿಧೆಡೆಯಿಂದ 190ಕ್ಕೂ ಹೆಚ್ಚು ಆಹಾರ ತಜ್ಞರು, ಹೆಸರಾಂತ ಬಾಣಸಿಗರು, ಪ್ರಭಾವಿ ಬ್ಲಾಗರ್‌ಗಳು ಮತ್ತು ರೆಸ್ಟೋರೆಂಟ್ ಮಾಲೀಕರನ್ನು ಸಂದರ್ಶಿಸಿ ವರದಿಯನ್ನು ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.
2024ರಲ್ಲಿ ಟ್ರೆಂಡ್‌ ಆಗುವ ಆಹಾರಗಳು ಇಂತಿವೆ.

1.ಪ್ರವಾಸಿಗರಿಂದ ಸ್ಥಳೀಯ ಆಹಾರ ಪದ್ಧತಿಗೆ ಆದ್ಯತೆ

2024ರಲ್ಲಿ ಪ್ರವಾಸಿಗರು ವಿಶೇಷವಾಗಿ ಸ್ಥಳೀಯ ಆಹಾರ ಪದ್ಧತಿಗೆ ಆದ್ಯತೆ ನೀಡಲಿದ್ದಾರೆ. ಸ್ಥಳೀಯ ಸಂಸ್ಕೃತಿ, ಪಾಕಪದ್ಧತಿ ಮತ್ತು ಸುವಾಸನೆ ಈ ಬಾರಿ ಟ್ರೆಂಡ್‌ ಆಗಲಿದೆ. ಸ್ಥಳೀಯ ಊಟದ ಅನುಭವಗಳು, ನಗರ ಆಹಾರ ಪದ್ಧತಿ, ಖಾದ್ಯಗಳು ಪ್ರವಾಸಿಗರ ಲೀಸ್ಟ್‌ನಲ್ಲಿ ಇರಲಿವೆ.

2.ಚಿಲ್ಲಿ ಸಾಸ್‌ಗಳು

ಕರಿದ ತಿಂಡಿಗಳನ್ನು ಇನ್ನಷ್ಟು ಸ್ವಾದಿಷ್ಟ ಮಾಡಲು ಬಳಸುವ ಚಿಲ್ಲಿ ಸಾಸ್‌ಗಳು ಈ ಬಾರಿ ಪ್ರಾಮುಖ್ಯತೆ ಪಡೆಯಲಿವೆ. ಮನೆ ಮತ್ತು ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಸ್ಥಳೀಯವಾಗಿ ಬೆಳೆದ ಮೆಣಸಿನಕಾಯಿ ಬಳಸಿ ತಯಾರಿಸಿದ ಚಿಲ್ಲಿ ಸಾಸ್‌ಗಳು ಪಾಕಪ್ರಿಯರನ್ನು ಆಕರ್ಷಿಸಲಿವೆ.

3.ತುಪ್ಪಕ್ಕೆ ಮತ್ತೆ ಬೇಡಿಕೆ

ಆರೋಗ್ಯ ಪ್ರಜ್ಞೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ತುಪ್ಪವು ಮತ್ತೆ ಮುನ್ನೆಲೆಗೆ ಬರಲಿದೆ. ತುಪ್ಪದ ನೈಸರ್ಗಿಕ ಗುಣ, ಆಯುರ್ವೇದದಲ್ಲಿ ಹೆಚ್ಚು ಬಳಕೆ ಆಗುವ, ಜೀರ್ಣಕ್ರಿಯೆಯನ್ನು ಹೆಚ್ಚಿಸುವ, ಆಹಾರದ ರುಚಿ ಹೆಚ್ಚಿಸುವ ತುಪ್ಪವು 2024ರಲ್ಲಿ ಆರೋಗ್ಯಕರ ಅಡುಗೆಯೊಂದಿಗೆ ಪ್ರಾಮುಖ್ಯತೆ ಪಡೆಯಲಿದೆ.

4. ಇತಿಹಾಸ ಹಿನ್ನಲೆಯ ಆಹಾರಕ್ಕೆ ಆದ್ಯತೆ

ಸಾಂಸ್ಕೃತಿಕ, ಇತಿಹಾಸ ಹಿನ್ನೆಲೆ ಇರುವ ಆಹಾರಗಳು ಮುನ್ನೆಲೆಗೆ ಬರಲಿವೆ. ಇದು ಆಹಾರದ ಗಮ್ಮತ್ತನ್ನು ಮತ್ತಷ್ಟು ಹೆಚ್ಚಿಸಲಿದೆ.

5.ಕಾಕ್‌ಟೈಲ್ಸ್‌ ಪಾನೀಯಗಳು

2024ರಲ್ಲಿ ಕೌಶಲ್ಯದಿಂದ ತಯಾರಿಸಿದ ಕಾಕ್‌ಟೈಲ್‌ ಪಾನೀಯಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಸ್ಥಳೀಯ ಪದಾರ್ಥಗಳು ಮತ್ತು ವಿಧಾನಗಳಿಂದ ತಯಾರಿಸಿದ ಪಾನೀಯಗಳಿಗೆ ಜನರು ಹೆಚ್ಚಿನ ಆದ್ಯತೆ ನೀಡಲಿದ್ದಾರೆ.

6. ಪದಾರ್ಥಗಳು ಪ್ರವರ್ಧಮಾನಕ್ಕೆ

2024ರಲ್ಲಿ ಆಹಾರ ಪದಾರ್ಥಗಳು ಮುಖ್ಯವಾಹಿನಿಗೆ ಬರುತ್ತವೆ. ಆಹಾರ ಪದಾರ್ಥಗಳು ಕೃಷಿ ಭೂಮಿಯಿಂದ ನೇರ ತಟ್ಟೆಗೆ ಎಂಬ ಕಲ್ಪನೆ ಪ್ರವರ್ಧಮಾನಕ್ಕೆ ಬರಲಿದೆ.

7.ಮನಸ್ಸಿನ ಅನುಕೂಲ ಹೊಸ ಮಂತ್ರ

2024ರಲ್ಲಿ ಅಡುಗೆ ಮನೆಯಲ್ಲಿ ಆರೋಗ್ಯ, ಪೋಷಣೆ, ಗುಣಮಟ್ಟವನ್ನು ಒತ್ತಿಹೇಳುವ ಅನುಕೂಲ ಆಧಾರಿತ ಆಹಾರ ಉತ್ಪನ್ನಗಳನ್ನು ಅಳವಡಿಸಿಕೊಳ್ಳುತ್ತಾರೆ. ಜಾಗರೂಕತೆಯ ಆಹಾರದ ಮೇಲಿನ ಜನರ ಗಮನವು ಸಾಂಪ್ರದಾಯಿಕ ಸುವಾಸನೆ, ಆರೋಗ್ಯಕರ ಪದಾರ್ಥಗಳು ಮತ್ತು ಪಾರದರ್ಶಕ ಪೂರೈಕೆಗೆ ಆದ್ಯತೆ ನೀಡುತ್ತದೆ.

8.ಸಿಹಿತಿಂಡಿಗಳ ಮರು ಪ್ರವೇಶ

ಸಿಹಿತಿಂಡಿಗಳು ಸುವಾಸನೆಗಳು ಮತ್ತು ವಿನ್ಯಾಸಗಳಲ್ಲಿ ಬದಲಾವಣೆ ಕಾಣಲಿವೆ. ಇದು ಆಶ್ಚರ್ಯಕರ, ಕೌಶಲ್ಯಪೂರ್ಣ ಆಗಲಿದೆ. ನೈಸರ್ಗಿಕ ಸಿಹಿ ಬಳಕೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ.

9.ಭಾರತೀಯ ಚಾಕೋಲೆಟ್‌ಗೆ ಬೇಡಿಕೆ

ಭಾರತೀಯ ಚಾಕೋಲೆಟ್‌ಗಳು ಈ ವರ್ಷ ಹೆಚ್ಚು ಬೇಡಿಕೆಯನ್ನು ಸೃಷ್ಟಿಸಿಕೊಳ್ಳಲಿವೆ. ಸ್ಥಳೀಯವಾಗಿ ಬೆಳೆದ, ಉತ್ತಮ ಗುಣಮಟ್ಟದ ಕೋಕೋ ಬೀನ್ಸ್‌ಗಳನ್ನು ಬಳಸಿ ಭಾರತೀಯ ಪದಾರ್ಥಗಳೊಂದಿಗೆ ಕಲಾತ್ಮಕವಾಗಿ ಬೆರೆಸಿದ ಚಾಕೋಲೆಟ್‌ಗಳು ಹೆಚ್ಚು ಪ್ರಚಲಿತಕ್ಕೆ ಬರಲಿವೆ.

10.ಕೆ-ಆಹಾರಕ್ಕೆ ಆದ್ಯತೆ

ಕೊರಿಯನ್ ಸಂಸ್ಕೃತಿಯ ಮುಖ್ಯ ಅಂಗವಾಗಿರುವ ಆಹಾರಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ. ಅದರ ಸುವಾಸನೆ ಮತ್ತು ವೈವಿಧ್ಯಮಯ ಭಕ್ಷ್ಯ ಭಾರತದಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಳ್ಳಲಿದೆ.

ಯುಪಿಐ ಬಳಸಿ ಕ್ಯಾಶ್ ಡೆಫಾಸಿಟ್ ಸೌಲಭ್ಯ ಘೋಷಿಸಿದ ಆರ್ ಬಿಐ; ಇದರ ಬಳಕೆ ಹೇಗೆ? ಇಲ್ಲಿದೆ ಮಾಹಿತಿ

11.ಪ್ರೋಟೀನ್ ಭರಿತ ಆಹಾರ, ಪಾನೀಯ

ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಹೆಚ್ಚು ಆದ್ಯತೆ ನೀಡುವ ಗ್ರಾಹಕರು, ಉತ್ತಮ ಗುಣಮಟ್ಟದ, ಪೌಷ್ಟಿಕಾಂಶ ಇರುವ, ಪ್ರೊಟೀನ್-ಸಮೃದ್ಧ ಆಹಾರಗಳು ಮತ್ತು ಪಾನೀಯಗಳಿಗೆ ಬೇಡಿಕೆ ಇಡಲಿದ್ದಾರೆ. ಚಿಕನ್‌ ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಲಿದೆ.

12.ಆಹಾರ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ

2024ರ ಭಾರತದ ಪಾಕಶಾಲೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸಲಿದ್ದಾರೆ. ಆಹಾರ ಉದ್ಯಮಿಗಳು, ಬಾಣಸಿಗರು, ಬಾರ್‌ ಟೆಂಡರ್‌ಗಳಾಗಿ, ಮಹಿಳೆಯರು ಭಾರತೀಯ ಆಹಾರ ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿದ್ದಾರೆ.

click me!