ಜಿಡಿಪಿ ಪ್ರಗತಿಯಲ್ಲಿ ಮಹಾ ಕುಸಿತ: 7 ವರ್ಷಗಳಲ್ಲಿ ಕನಿಷ್ಟ!

By Web Desk  |  First Published Aug 31, 2019, 7:57 AM IST

ಜಿಡಿಪಿ ಪ್ರಗತಿಯಲ್ಲಿ ಮಹಾ ಕುಸಿತ| ಏಪ್ರಿಲ್‌- ಜೂನ್‌ ಅವಧಿಯಲ್ಲಿ ಶೇ.5ಕ್ಕೆ ಇಳಿಕೆ| ಇದು 7 ವರ್ಷಗಳ ಕನಿಷ್ಠ: ಆರ್ಥಿಕ ಹಿಂಜರಿತಕ್ಕೆ ಸಾಕ್ಷ್ಯ?


 ನವದೆಹಲಿ[ಆ.31]: ದೇಶದಲ್ಲಿ ಆರ್ಥಿಕ ಹಿಂಜರಿತ ಆವರಿಸಿದೆ ಎಂದು ವಿವಿಧ ಉದ್ಯಮ ವಲಯಗಳು ದೂರುತ್ತಿರುವಾಗಲೇ, ದೇಶದ ಒಟ್ಟು ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌- ಜೂನ್‌ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ.5ಕ್ಕೆ ಜಾರಿದೆ. ಇದು 7 ವರ್ಷಗಳ ಕನಿಷ್ಠವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

2012-13ನೇ ಸಾಲಿನ ಏಪ್ರಿಲ್‌- ಜೂನ್‌ ಅವಧಿಯಲ್ಲಿ ಶೇ.4.9 ಜಿಡಿಪಿ ದರ ದಾಖಲಾಗಿತ್ತು. 2018-19ನೇ ಸಾಲಿನ ಇದೇ ಅವಧಿಯಲ್ಲಿ ಶೇ.8ರಷ್ಟುಜಿಡಿಪಿ ಇತ್ತು. ಕೇಂದ್ರ ಸರ್ಕಾರ ದೇಶವನ್ನು 2024ರೊಳಗೆ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಮಾಡುವ ಮಹಾ ಗುರಿ ಇಟ್ಟುಕೊಂಡಿದೆ. ಇಂತಹ ಸಂದರ್ಭದಲ್ಲೇ ಜಿಡಿಪಿ ಶೇ.5ಕ್ಕೆ ಕುಸಿದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.

Latest Videos

ಇದೇ ವೇಳೆ ಉತ್ಪಾದನಾ ವಲಯದಲ್ಲಿ ಉತ್ಪಾದನೆಯಾದ ಸರಕು ಹಾಗೂ ಸೇವೆಗಳ ಒಟ್ಟೂಮೌಲ್ಯ ಪ್ರಮಾಣ (ಜಿಎವಿ) ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.12.1ರಿಂದ ಶೇ.0.6ಕ್ಕೆ ಇಳಿಕೆಯಾಗಿದೆ. ಅದೇರೀತಿ ಕೃಷಿ ವಲಯದ ಜಿಎವಿ ಶೇ.5.1ರಿಂದ ಶೇ.2ಕ್ಕೆ ಕುಸಿದಿದೆ. ನಿರ್ಮಾಣ ವಲಯದಲ್ಲಿ ಒಟ್ಟಾರೆ ಮೌಲ್ಯ ಶೇ.9.6ರಿಂದ ಶೇ.5.7ಕ್ಕೆ ಕುಸಿದಿದೆ. ಇದೇ ವೇಳೆ ಗಣಿಗಾರಿಕೆ ವಲಯದ ಬೆಳವಣಿಗೆ ಶೇ. 0.4ರಿಂದ ಶೇ.2.7ಕ್ಕೆ ಏರಿಕೆಗಿದೆ.

ಆರ್ಥಿಕ ಗತಿ ನಿರೀಕ್ಷಿತ ಮಟ್ಟದಲ್ಲಿ ಏರಿಕೆ ದಾಖಲಿಸದ ಹಿನ್ನೆಲೆಯಲ್ಲಿ ಆರ್‌ಬಿಐ 2019-​20ನೇ ಸಾಲಿನ ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇ.7ರ ಬದಲು ಶೇ.6.9ಕ್ಕೆ ಇಳಿಕೆ ಮಾಡಿದೆ. ಒಟ್ಟೂಬೇಡಿಕೆ ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುವುದನ್ನು ತಡೆಯಬೇಕಿದೆ ಎಂದು ಪ್ರತಿಪಾದಿಸಿದೆ.

ಈ ಮಧ್ಯೆ ಚೀನಾ ಕೂಡ ಆರ್ಥಿಕ ಹಿಂಜರಿತಕ್ಕೆ ತುತ್ತಾಗಿದ್ದು, 2019ರ ಮೊದಲ ತ್ರೈಮಾಸಿಕದ ಅವಧಿಯಲ್ಲಿ ಶೇ.6.2ರಷ್ಟುಆರ್ಥಿಕ ಪ್ರಗತಿ ದಾಖಲಿಸಿದ್ದು, ಕಳೆದ 27 ವರ್ಷಗಳಲ್ಲೇ ದುರ್ಬಲ ಎನಿಸಿಕೊಂಡಿದೆ.

click me!