* ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿಗೆ ಬಿಗ್ ಶಾಕ್
* ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯ ಪಟ್ಟ ಈಗ ಗೌತಮ್ ಅದಾನಿಗೆ
* ಷೇರು ಮಾರುಕಟ್ಟೆಯಲ್ಲಾದ ಬದಲಾವಣೆಯಿಂದ ಅಂಬಾನಿಗೆ ಹಿನ್ನಡೆ
ಮುಂಬೈ(ನ.24): ಸೋಮವಾರದ ನಂತರ, ಬುಧವಾರ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಷೇರುಗಳಲ್ಲಿ ಸುಮಾರು ಶೇಕಡಾ ಒಂದೂವರೆಯಷ್ಟು ಕುಸಿತಗೊಂಡ ಪರಿಣಾಮ ಕಂಪನಿ ಭಾರೀ ಹಿನ್ನಡೆ ಅನುಭವಿಸಿದೆ. ಈ ಬಗ್ಗೆ ವರದಿ ಮಾಡಿರುವ ಮಾಧ್ಯಮವೊಂದು ಮುಕೇಶ್ ಅಂಬಾನಿಯನ್ನು (Mukesh Ambani) ಹಿಂದಿಕ್ಕಿದ ಗೌತಮ್ ಅದಾನಿ (Gautam Adani) ಈಗ ಏಷ್ಯಾದ ಅತ್ಯಂತ ಶ್ರೀಮಂತ (Asia’s Richest Person) ವ್ಯಕ್ತಿಯಾಗಿದ್ದಾರೆ ಎಂದಿದೆ. ಹೀಗಿದ್ದರೂ ಈವರೆಗೆ, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ (Bloomberg Billionaires Index) ತಾಜಾ ಡೇಟಾವನ್ನು ನವೀಕರಿಸಲಾಗಿಲ್ಲ. ಇನ್ನು, ಸೋಮವಾರ ಮಾರುಕಟ್ಟೆಯಲ್ಲಾದ ಕುಸಿತದಿಂದಾಗಿ, ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರ ನಿವ್ವಳ ಮೌಲ್ಯದಲ್ಲಿ ಸುಮಾರು 3.6 ಬಿಲಿಯನ್ ಡಾಲರ್ ವ್ಯತ್ಯಾಸ ಕಂಡುಬಂದಿದೆ.
ಅಂಬಾನಿಯನ್ನು ಹಿಂದಿಕ್ಕಿದ ಅದಾನಿ
undefined
ಇಟಿ ನೌ ವರದಿಯ ಪ್ರಕಾರ, ಗೌತಮ್ ಅದಾನಿ, ಮುಖೇಶ್ ಅಂಬಾನಿಯನ್ನು (Mukesh Ambani) ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬ್ಲೂಮ್‌ಬರ್ಗ್‌ನಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ, ಮುಕೇಶ್ ಅಂಬಾನಿಯವರ ನಿವ್ವಳ ಮೌಲ್ಯ 91 ಶತಕೋಟಿ ಹೊಂದಿದ್ದರೆ, ಗೌತಮ್ ಅದಾನಿ 88.8 ಬಿಲಿಯನ್ ಡಾಲರ್‌ನೊಂದಿಗೆ ಹಿಂದುಳಿದಿದ್ದರು. ಮುಖೇಶ್ ಅಂಬಾನಿಯವರ 14.3 ಬಿಲಿಯನ್ ಡಾಲರ್‌ಗಳಿಗೆ ಹೋಲಿಸಿದರೆ ಗೌತಮ್ ಅದಾನಿ ತಮ್ಮ ಸಂಪತ್ತಿಗೆ ವರ್ಷದಿಂದ ವರ್ಷಕ್ಕೆ 55 ಬಿಲಿಯನ್ ಡಾಲರ್ ಅನ್ನು ಸೇರಿಸಿದ್ದಾರೆ.
ರಿಲಯನ್ಸ್ ಷೇರುಗಳು ಕುಸಿತ
ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳು ಇತ್ತೀಚೆಗೆ O2C ಒಪ್ಪಂದವನ್ನು ರದ್ದುಗೊಳಿಸಿದ ನಂತರ ಒತ್ತಡದಲ್ಲಿಯೇ ಉಳಿದಿವೆ ಮತ್ತು ಇಂದು ಬುಧವಾರದಂದು 1.48 ರಷ್ಟು ಕುಸಿದು 2,350.90 ರೂ. ನಲ್ಲಿ ವ್ಯವಹಾರ ಸ್ಥಗಿತಗೊಳಿಸಿವೆ. ರಿಲಯನ್ಸ್ ಷೇರುಗಳು ಈ ವಾರ ಸುಮಾರು ಶೇ. 5 ರಷ್ಟು ಕುಸಿತ ಕಂಡಿವೆ. ಇದರಿಂದಾಗಿ ಕಳೆದ ವಾರದ ಕೊನೆಯ ವಹಿವಾಟಿಗೆ ಹೋಲಿಸಿದರೆ ಕಂಪನಿಯ ಮಾರುಕಟ್ಟೆ ಮೌಲ್ಯವು ರೂ.77293.64 ಕೋಟಿಗಳಷ್ಟು ಕಡಿಮೆಯಾಗಿ ರೂ.14,91,256.53 ಕೋಟಿಗಳಿಗೆ ಇಳಿದಿದೆ.
ಅದಾನಿ ಸಮೂಹ ಕಂಪನಿಗ ಷೇರು ಮೌಲ್ಯ
ಮತ್ತೊಂದೆಡೆ, ಅದಾನಿ ಸಮೂಹದ ಕಂಪನಿಗಳ ಷೇರುಗಳು ಏರಿಕೆ ಕಂಡಿವೆ. ಅದಾನಿ ಎಂಟರ್‌ಪ್ರೈಸಸ್ ಶೇ.2.76ರಷ್ಟು ಏರಿಕೆಯಾಗಿ 1754.65 ರೂಪಾಯಿಗೆ ವ್ಯವಹಾರ ಸ್ಥಗಿತಗೊಳಿಸಿವೆ. ಅದಾನಿ ಪೋರ್ಟ್ಸ್ ಶೇ.4.59ರಷ್ಟು ಏರಿಕೆ ಕಂಡು 762.75 ರೂ.ಗೆ ತಲುಪಿದೆ. ಅದಾನಿ ಟ್ರಾನ್ಸ್‌ಮಿಷನ್ ಶೇಕಡಾ 0.36 ರಷ್ಟು ಏರಿಕೆಯಾಗಿ 1,948 ಕ್ಕೆ ತಲುಪಿದೆ. ಇತ್ತ ಅದಾನಿ ಪವರ್ ಷೇರುಗಳು ಸಹ ಶೇಕಡಾ 0.05 ರಷ್ಟು ಏರಿಕೆಯಾಗಿ 105.95 ಕ್ಕೆ ತಲುಪಿದೆ. ಆದರೆ ಅದಾನಿ ಗ್ರೀನ್ ಮತ್ತು ಅದಾನಿ ಟೋಟಲ್ ಗ್ಯಾಸ್ ಶೇ 1 ಕ್ಕಿಂತ ಹೆಚ್ಚು ಕುಸಿತದೊಂದಿಗೆ ವ್ಯವಹಾರ ನಿಲ್ಲಿಸಿವೆ.
ಕೌಟುಂಬಿಕ ಕಲಹ ತಪ್ಪಿಸಲು ಟ್ರಸ್ಟ್‌ಗೆ ಅಂಬಾನಿ ಆಸ್ತಿ ಹೊಣೆ
ಏಷ್ಯಾದ (Asia) ಅತ್ಯಂತ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಕಂಪನಿ (Reliance Company) ಮಾಲೀಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ (Mukesh Ambani) ತಮ್ಮ 15 ಲಕ್ಷ ಕೋಟಿ ಮೌಲ್ಯದ ಸಾಮ್ರಾಜ್ಯದ ಉತ್ತರಾಧಿಕಾರಕ್ಕಾಗಿ ವಾಲ್‌ಮಾರ್ಟ್ (Wall mart) ಸಂಸ್ಥಾಪಕ ವಾಲ್ಟನ್ ಕುಟುಂಬದ ಮಾದರಿಯಲ್ಲೇ ವಿಶಿಷ್ಟ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಮುಕೇಶ್ (64) ಇನ್ನೂ ತಾನು ಕಂಪನಿಯ ಜವಾಬ್ದಾರಿಗಳಿಂದ ನಿವೃತ್ತಿ ಘೋಷಿಸುವ ಬಗ್ಗೆ ಅಧೀಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ತಂದೆ ಧೀರು ಭಾಯಿ ಅಂಬಾನಿ (Dhirubai Ambani) ನಿಧನದ ನಂತರ ಆಸ್ತಿಗಾಗಿ ಅಂಬಾನಿ ಕುಟುಂಬದಲ್ಲಿ ನಡೆದಂತಹ ಒಳ ಜಗಳದ ಪುನರಾವರ್ತನೆಯನ್ನು ತಪ್ಪಿಸಲು ಮುಖೇಶ್ ತಮ್ಮ ಉತ್ತರಾಧಿಕಾರವನ್ನು ಟ್ರಸ್ಟ್‌ಗೆ (Trust) ಹಸ್ತಾಂತರಿಸಲು ನಿರ್ಧರಿಸಿದ್ದಾರೆ.
ಈ ಟ್ರಸ್ಟ್‌ನ ಸಂಪೂರ್ಣ ನಿಯಂತ್ರಣವು ರಿಲಯನ್ಸ್ ಇಂಡಸ್ಟ್ರೀಸ್ (reliance Industries) ಬಳಿ ಇರಲಿದ್ದು, ಇದು ಮುಖೇಶ್ ಪತ್ನಿ ನೀತಾ ಅಂಬಾನಿ (Neetha Ambani) ಮತ್ತು ಮೂವರು ಮಕ್ಕಳಾದ ಇಶಾ (Isha), ಆಕಾಶ್ ಮತ್ತು ಅನಂತ್ ಸೇರಿದಂತೆ ಎಲ್ಲ ಕುಟುಂಬದ ಸದಸ್ಯರನ್ನು ಒಳಗೊಳ್ಳಲಿದೆ. ರಿಲಯನ್ಸ್ ವ್ಯವಹಾರ (Business) ನೋಡಿಕೊಳ್ಳುವ ಘಟಕ ಮಂಡಳಿಯಲ್ಲಿ ಮುಖೇಶ್‌ನ ನಿಕಟ ಸಹವರ್ತಿಗಳನ್ನು ಸಹ ಇರಲಿದ್ದಾರೆ. ಜೊತೆಗೆ ಕುಟುಂಬಸ್ಥರ ಹೊರತಾಗಿ ಕಂಪನಿಯ ಮುಖ್ಯ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿರುವ ಹೊರಗಿನ ವ್ಯಕ್ತಿಪರರು ಕೂಡ ಟ್ರಸ್ಟ್‌ನ ಭಾಗವಾಗಿರಲಿದ್ದಾರೆ.