ಪೆಟ್ರೋಲ್ ಅಸಲಿ ರೇಟ್ ಎಷ್ಟು?: ಸರ್ಕಾರ ಕಿತ್ಕೊತಿರೋದೆಷ್ಟು?

By Web DeskFirst Published 7, Sep 2018, 6:57 PM IST
Highlights

ಅಸಲಿ ಪೆಟ್ರೋಲ್ ಬೆಲೆ ಎಷ್ಟೆಂದು ಗೊತ್ತಾ?! ಪೆಟ್ರೋಲ್ ಮೂಲ ಬೆಲೆ ಕೇಳಿದ್ರೆ ನೀವು ಹೌಹಾರೋದು ಖಚಿತ! ಪೆಟ್ರೋಲ್ ಮೂಲ ಬೆಲೆ ಕೇವಲ 39.21 ರೂ.! ಪೆಟ್ರೋಲ್ ಮೇಲಿನ ವಿವಿಧ ತೆರಿಗೆ ಬೆಲೆಯೇ 39.94 ರೂ.! ಸೆ.10 ರ ಕಾಂಗ್ರೆಸ್ ಭಾರತ್ ಬಂದ್ ಪ್ರತಿಭಟನೆಗೆ ಬಲ?

ನವದೆಹಲಿ(ಸೆ.7): ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಶುಕ್ರವಾರ ದೆಹಲಿಯಲ್ಲಿ ಪೆಟ್ರೋಲ್​ ದರ ಮತ್ತೆ 48 ಪೈಸೆ ಏರಿಕೆಯಾಗುವ ಮೂಲಕ ಪ್ರತಿ ಲೀಟರ್ ಗೆ 79.99 ರು.ಗಳಿಗೆ ಮಾರಾಟವಾಗುತ್ತಿದೆ.

ನಿರಂತರ ತೈಲದರ ಏರಿಕೆ ಪ್ರತಿಪಕ್ಷಗಳಿಗೆ ಆಹಾರವಾಗಿದ್ದು, ಇದೇ ಸೆ.೧೦ ರಂದು ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್ ಪ್ರತಿಭಟನೆ ಹಮ್ಮಿಕೊಂಡಿದೆ. ಇದು ಮೋದಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇನ್ನು ತೈಲ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದಕ್ಕೆ ಕೇಂದ್ರ ಸರ್ಕಾರದ ಭಾರಿ ತೆರಿಗೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯೆ ಕಾರಣವಾಗಿದೆ. 

ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ) ಸೆಪ್ಟೆಂಬರ್ 3ರಂದು ನೀಡಿದ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ಮೂಲ ಬೆಲೆ 39.21 ರೂ. ಆಗಿದ್ದು, ಇದರ ಮೇಲೆ ಸರ್ಕಾರ 19.48 ರೂ. ಅಬಕಾರಿ ಸುಂಕ, 3.63 ರೂ. ಡೀಲರ್ ಕಮಿಷನ್ ಹಾಗೂ 16.83 ರೂ. ವ್ಯಾಟ್ ಸೇರಿ ಒಟ್ಟು 39.94 ರೂ. ತೆರಿಗೆ ವಿಧಿಸುತ್ತಿದೆ.

ಅಂದರೆ ಪೆಟ್ರೋಲ್ ಮೂಲ ಬೆಲೆಗಿಂತ ಹೆಚ್ಚಾಗಿ ತೆರಿಗೆ ಬೆಲೆಯೇ ಇದ್ದು, ಇಷ್ಟೊಂದು ಪ್ರಮಾಣದ ತೆರಿಗೆ ಯಾಕೆ ಎಂಬುದು ಜನಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

Last Updated 9, Sep 2018, 10:03 PM IST