ಭಾರತದ ಅತೀಹೆಚ್ಚು ಶ್ರೀಮಂತರು ಮುಂಬೈ ನಗರದಲ್ಲಿ ನೆಲೆಸಿದ್ದಾರೆ.ಇನ್ನು ದೇಶದ ಅತೀಹೆಚ್ಚು ಶ್ರೀಮಂತರು ನೆಲೆಸಿರುವ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಎರಡನೇ ಸ್ಥಾನದಲ್ಲಿದ್ದರೆ, ರಾಜ್ಯ ರಾಜ್ಯಧಾನಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
Business Desk:ಭಾರತದಲ್ಲಿ ಪ್ರಸ್ತುತ 259 ಬಿಲಿಯನೇರ್ ಗಳಿದ್ದಾರೆ. ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2023ರ ಅನ್ವಯ ಇವರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅತ್ಯಂತ ಶ್ರೀಮಂತ ವ್ಯಕ್ತಿ. ಇನ್ನು ಹುರುನ್ ಇಂಡಿಯಾ ಹಾಗೂ 360 ನ್ ವೆಲ್ತ್ ಎರಡರ ಶ್ರೀಮಂತರ ಪಟ್ಟಿಯನ್ನು ಒಟ್ಟಿಗೆ ಸೇರಿಸಿ ನೋಡಿದರೆ ಭಾರತದ ಶ್ರೀಮಂತರ ಬಳಿ ಒಟ್ಟು 108 ಲಕ್ಷ ಕೋಟಿ ರೂ. ಸಂಪತ್ತಿದೆ. 2022ನೇ ಸಾಲಿಗೆ ಹೋಲಿಸಿದರೆ ಇವರ ಸಂಪತ್ತಿನಲ್ಲಿ ಶೇ.8.5 ರಷ್ಟು ಏರಿಕೆಯಾಗಿದೆ. ಭಾರತದಲ್ಲಿ ಈಗ 1,319 ವ್ಯಕ್ತಿಗಳು 1,000ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿದ್ದಾರೆ. ಅಂದರೆ ಅವರ ಸಂಪತ್ತಿನಲ್ಲಿ ಕಳೆದ ಐದು ವರ್ಷಗಳಲ್ಲಿ ಶೇ.76ರಷ್ಟು ಏರಿಕೆಯಾಗಿದೆ. ಇನ್ನು ಭಾರತದ ಈ ಶ್ರೀಮಂತರೆಲ್ಲ ಯಾವ ನಗರಗಳಲ್ಲಿ ವಾಸಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗೆಯೇ ಭಾರತದ ಯಾವ ನಗರದಲ್ಲಿ ಹೆಚ್ಚಿನ ಶ್ರೀಮಂತರು ವಾಸಿಸುತ್ತಾರೆ ಎಂಬ ಪ್ರಶ್ನೆಯೂ ಕಾಡುತ್ತದೆ. ಅಂದಹಾಗೇ ಅತೀಹೆಚ್ಚು ಶ್ರೀಮಂತರು ವಾಸಿಸುವ ಭಾರತದ ಟಾಪ್ 10 ನಗರಗಳ ಪಟ್ಟಿ-2023ರಲ್ಲಿ ಮುಖೇಶ್ ಅಂಬಾನಿ ನೆಲೆಸಿರುವ ಮುಂಬೈ ಮೊದಲ ಸ್ಥಾನದಲ್ಲಿದ. ಹಾಗಾದ್ರೆ ಈ ಪಟ್ಟಿಯಲ್ಲಿ ಯಾವೆಲ್ಲ ನಗರಗಳಿವೆ? ಅಲ್ಲಿ ಎಷ್ಟು ಶ್ರೀಮಂತರು ನೆಲೆಸಿದ್ದಾರೆ? ಇಲ್ಲಿದೆ ಮಾಹಿತಿ.
ಶ್ರೀಮಂತರು ವಾಸಿಸುವ ಭಾರತದ ಟಾಪ್ 10 ನಗರಗಳು
1.ಮುಂಬೈ: ದೇಶದ ಶ್ರೀಮಂತರಲ್ಲಿ ಅತ್ಯಧಿಕ ಮಂದಿ ಮುಂಬೈನಲ್ಲಿ ನೆಲೆಸಿದ್ದಾರೆ. 1000 ಕೋಟಿ ರೂ.ಗಿಂತ ಅಧಿಕ ನಿವ್ವಳ ಸಂಪತ್ತು ಹೊಂದಿರುವ 328 ಶ್ರೀಮಂತರು ಮುಂಬೈ ನಿವಾಸಿಗಳಾಗಿದ್ದಾರೆ. 2019ರಲ್ಲಿ 45 ಮಂದಿ ಶ್ರೀಮಂತರು ಮುಂಬೈನಲ್ಲಿದ್ದರು, ಆದರೆ ಕೇವಲ 4 ವರ್ಷಗಳಲ್ಲಿ ಅವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.
2.ನವದೆಹಲಿ: ರಾಷ್ಟ್ರ ರಾಜ್ಯಧಾನಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ನಗರದಲ್ಲಿ 199 ಅಗರ್ಭ ಶ್ರೀಮಂತರು ನೆಲೆಸಿದ್ದಾರೆ. ಇನ್ನು ನವದೆಹಲಿಯಲ್ಲಿ ನೆಲೆಸಿರುವ ಅತೀಶ್ರೀಮಂತ ಉದ್ಯಮಿ ಎಚ್ ಸಿಎಲ್ ಟೆಕ್ನಾಲಜೀಸ್ ಸ್ಥಾಪಕ ಶಿವ್ ನಡಾರ್. ಅವರ ಸಂಪತ್ತು 228,900 ಕೋಟಿ ರೂ.
ನವೆಂಬರ್‌ನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ: ಇದು ಈವರೆಗಿನ 3ನೇ ಅತಿ ಸಾರ್ವಕಾಲಿಕ ಗರಿಷ್ಠ ಪ್ರಮಾಣ
3.ಬೆಂಗಳೂರು: ಭಾರತದ ಐಟಿ ರಾಜ್ಯಧಾನಿ ಎಂದೇ ಜನಪ್ರಿಯತೆ ಗಳಿಸಿರುವ ಬೆಂಗಳೂರಿನಲ್ಲಿ 100 ಶ್ರೀಮಂತರು ನೆಲೆಸಿದ್ದಾರೆ. ಇಲ್ಲಿ ನೆಲೆಸಿರುವ ಅತೀಶ್ರೀಮಂತ ಉದ್ಯಮಿ ಆರ್ ಎಂಝುಡ್ ಕಾರ್ಪ್ ಗ್ರೂಪ್ ಚೇರ್ಮನ್ ಅರ್ಜುನ್ ಮೆಂಡ. ಇವರ ನಿವ್ವಳ ಸಂಪತ್ತು 37,000 ಕೋಟಿ ರೂ.
4.ಹೈದರಾಬಾದ್: ಇನ್ನು ಈ ಪಟ್ಟಿಯಲ್ಲಿ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ 87 ಮಂದಿ ಅಗರ್ಭ ಸಿರಿವಂತರು ನೆಲೆಸಿದ್ದಾರೆ. ದಿವೀಸ್ ಲ್ಯಾಬೋರೇಟರೀಸ್ ಸ್ಥಾಪಕ ಮುರಲಿ ದಿವಿ ಹೈದರಾಬಾದ್ ನಲ್ಲಿ ನೆಲೆಸಿರುವ ಅತೀಶ್ರೀಮಂತ ಉದ್ಯಮಿ. ಇವರ ಸಂಪತ್ತು 55,700 ಕೋಟಿ ರೂ.
5.ಚೆನ್ನೈ: ತಮಿಳುನಾಡಿನ ರಾಜ್ಯಧಾನಿ ಚೆನ್ನೈ ಐದನೇ ಸ್ಥಾನದಲ್ಲಿದೆ. 67 ಮಂದಿ ಶ್ರೀಮಂತರು ಇಲ್ಲಿ ನೆಲೆಸಿದ್ದಾರೆ. ಇವರಲ್ಲಿ ಅತ್ಯಧಿಕ ಸಂಪತ್ತು ಹೊಂದಿರುವ ಉದ್ಯಮಿಯೆಂದ್ರೆ ಜುಹೂ ಕಾರ್ಪ್ ಸಹಸಂಸ್ಥಾಪಕಿ ರಾಧಾ ವೆಂಬು. ಇವರು 36,000 ಕೋಟಿ ರೂ. ಸಂಪತ್ತು ಹೊಂದಿದ್ದಾರೆ.
6.ಅಹ್ಮದಾಬಾದ್: ಗುಜರಾತ್ ರಾಜ್ಯಧಾನಿ ಅಹ್ಮದಾಬಾದ್ ನಲ್ಲಿ 54 ಶ್ರೀಮಂತರು ನೆಲೆಸಿದ್ದು, ಅವರ ಒಟ್ಟು ಸಂಪತ್ತು 1000 ಕೋಟಿ ರೂ.ಗಿಂತಲೂ ಹೆಚ್ಚಿದೆ. ಅಹ್ಮದಾಬಾದ್ ನಲ್ಲಿ ನೆಲೆಸಿರುವ ಅತೀಶ್ರೀಮಂತ ಉದ್ಯಮಿ ಗೌತಮ್ ಅದಾನಿ. ಇವರ ಸಂಪತ್ತು 474,800 ಕೋಟಿ ರೂ.
7.ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜ್ಯಧಾನಿ ಕೋಲ್ಕತ್ತ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಇಲ್ಲಿ 51 ಶ್ರೀಮಂತರು ನೆಲೆಸಿದ್ದಾರೆ. ಶ್ರೀ ಸಿಮೆಂಟ್ ಮುಖ್ಯಸ್ಥ ಬೆನು ಗೋಪಾಲ್ ಬಂಗೂರ್ ಕೋಲ್ಕತ್ತದ ಶ್ರೀಮಂತ ಉದ್ಯಮಿಯಾಗಿದ್ದು, ಇವರ ಸಂಪತ್ತು 57,100 ಕೋಟಿ ರೂ.
8.ಪುಣೆ: ಇಲ್ಲಿ 39 ಶ್ರೀಮಂತರು ನೆಲೆಸಿದ್ದಾರೆ. ಸಿರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದ ಸ್ಥಾಪಕರಾದ ಸೈರಸ್ ಪೂನಾವಾಲಾ ಹಾಗೂ ಅವರ ಕುಟುಂಬ ಪುಣೆಯ ಅತ್ಯಂತ ಶ್ರೀಮಂತ ಉದ್ಯಮಿಗಳಾಗಿದ್ದಾರೆ. ಇವರ ಸಂಪತ್ತು 278,500 ಕೋಟಿ ರೂ.
ಆಟದಲ್ಲಿ ಮಾತ್ರವಲ್ಲ ಇನ್ವೆಸ್ಟ್‌ಮೆಂಟ್‌ನಲ್ಲೂ ಕಿಂಗ್ ನಮ್ಮ ಕೊಹ್ಲಿ!
9.ಸೂರತ್: ಗುಜರಾತ್ ನ ಈ ಇನ್ನೊಂದು ನಗರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇಲ್ಲಿ 27 ಶ್ರೀಮಂತರು ನೆಲೆಸಿದ್ದಾರೆ. ಇವರ ಒಟ್ಟು ಸಂಪತ್ತು 1,000 ಕೋಟಿ ರೂ.ಗಿಂತಲೂ ಹೆಚ್ಚಿದೆ. ಸೂರತ್ ನಲ್ಲಿ ನೆಲೆಸಿರುವ ಅತೀಶ್ರೀಮಂತ ವ್ಯಕ್ತಿ ಅಶ್ವಿನ್ ದೇಸಾಯಿ. ರಾಸಾಯನಿಕ ತಯಾರಿಕ ಸಂಸ್ಥೆ ಏಥರ್ ಇಂಡಸ್ಟ್ರೀಸ್ ಸ್ಥಾಪಕ. ಫೋರ್ಬ್ಸ್ ಮಾಹಿತಿ ಅನ್ವಯ ದೇಸಾಯಿ ಅವರ ಬಳಿ 9,000 ಕೋಟಿ ರೂ.ಗಿಂತಲೂ ಅಧಿಕ ಸಂಪತ್ತಿದೆ.
10.ಗುರ್ಗಾಂವ್ :ಇಲ್ಲಿ 18 ಮಂದಿ ಶ್ರೀಮಂತರು ನೆಲೆಸಿದ್ದಾರೆ. ಗುರ್ಗಾಂವ್ ಅತ್ಯಂತ ಶ್ರೀಮಂತ ಉದ್ಯಮಿ ನಿರ್ಮಲ್ ಕುಮಾರ್ ಮಿಂಡ.ಇವರು ಯುಎನ್ ಒ ಮಿಂಡ ಕಂಪನಿಯ ಮುಖ್ಯಸ್ಥರು ಹಾಗೂ ಎಂಡಿ. ಫೋರ್ಬ್ಸ್ ಪ್ರಕಾರ ಮಿಂಡ ಅವರ ಬಳಿ 20,800 ಕೋಟಿ ರೂ.ಗಿಂತಲೂ ಅಧಿಕ ಸಂಪತ್ತಿದೆ.