
ಬೆಂಗಳೂರು(ಅ.26): ದುಬಾರಿ ಬೆಲೆ, ಪಟಾಕಿಯಿಂದಾಗುವ ವಿವಿಧ ರೀತಿಯ ಹಾನಿ, ಪಟಾಕಿ ಹಾರಿಸಲು ನಿರ್ಬಂಧದ ಪರಿಣಾಮ ದೀಪಾವಳಿಯ ಪಟಾಕಿ ವಹಿವಾಟು ಟುಸ್‌ಗುಟ್ಟಿದೆ. ನಿರೀಕ್ಷೆಯಷ್ಟು ವಹಿವಾಟು ನಡೆಯದ ಬಗ್ಗೆ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದು, ಈವರೆಗೆ ಶೇ. 50-60ರಷ್ಟು ಸರಕನ್ನೂ ಮಾರಿಲ್ಲ ಎಂದು ನಿರಾಶೆಗೊಂಡಿದ್ದಾರೆ. ಅಮವಾಸ್ಯೆ ದಿನದಂದು ಹೆಚ್ಚಿನ ಪ್ರಮಾಣದಲ್ಲಿ ಇರುತ್ತಿದ್ದ ಪಟಾಕಿ ವ್ಯಾಪಾರ ಸೂರ್ಯ ಗ್ರಹಣದ ಕಾರಣದಿಂದ ನೆಲಕಚ್ಚಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ. 10ರಷ್ಟು ವ್ಯಾಪಾರವೂ ನಡೆದಿಲ್ಲ. ಒಟ್ಟಾರೆ ದೀಪಾವಳಿಯ ವಹಿವಾಟು ಕುಸಿದಿದ್ದು, ಹಿಂದಿನ ಕೋವಿಡ್ ವರ್ಷಗಳ ನಷ್ಟ ತುಂಬಿಕೊಳ್ಳುವ ಭರವಸೆ ಹುಸಿಯಾಗಿದೆ ಎಂದು ಹೇಳಿದ್ದಾರೆ.
ಹಸಿರು ಪಟಾಕಿಯ ಬೆಲೆ ಶೇ. 40 ಮೀರಿರುವುದು ವಹಿವಾಟು ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಸಾಕಷ್ಟು ಬೇಡಿಕೆ ಇರುತ್ತಿದ್ದ ಸರ ಪಟಾಕಿಗಳಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿರುವುದು ಇದಕ್ಕೆ ಕಾರಣ. ಜತೆಗೆ ಹಲವು ಬಗೆಯ ಸಿಡಿಮದ್ದುಗಳು ಪೂರೈಕೆ ಆಗದಿರುವುದು ವಹಿವಾಟು ಕುಸಿಯಲು ಪ್ರಮುಖ ಕಾರಣವಾಗಿದೆ. ಅದಲ್ಲದೆ, ಹಬ್ಬದ ಹಿಂದಿನ ದಿನಗಳಲ್ಲಿ ಶನಿವಾರ, ಭಾನುವಾರ ಬಂದ ಕಾರಣ ಈ ಬಾರಿ ಹೆಚ್ಚಿನವರು ಊರುಗಳಿಗೆ ತೆರಳಿರುವುದು ಕೂಡ ಹಿನ್ನಡೆಯಾಗಿದೆ. ಇದರಿಂದ ಮಂಗಳವಾರ ಖರೀದಿದಾರರು ಇಲ್ಲದೆ ಮಳಿಗೆಗಳು ಭಣಗುಟ್ಟುತ್ತಿದ್ದವು. ಸಂಜೆ ನಂತರ ಗ್ರಾಹಕರು ಪಟಾಕಿ ಖರೀದಿಗೆ ಮುಂದಾಗಿದ್ದು ಕಂಡುಬಂತಾದರೂ ಹೆಚ್ಚಿನ ಜನರು ಕಂಡು ಬರಲಿಲ್ಲ.
ಪಟಾಕಿ ದುಬಾರಿ : ಅಂಗಡಿಗಳು ಖಾಲಿ ಖಾಲಿ
ಈ ಬಗ್ಗೆ ಮಾತನಾಡಿದ ಸುವರ್ಣ ಕರ್ನಾಟಕ ಪಟಾಕಿ ವರ್ತಕರ ಸಂಘದ ಮಂಜುನಾಥ ರೆಡ್ಡಿ, ಪಟಾಕಿ ವರ್ತಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಿವಕಾಶಿಯಿಂದ ಸುಮಾರು 150 ಪಟಾಕಿ ಪೆಟ್ಟಿಗೆ ತರಿಸಿದ್ದೆವು. ಆದರೆ, ಈವರೆಗೆ 60ರಷ್ಟನ್ನು ಮಾತ್ರ ತೆರೆದು ಮಾರಾಟ ಮಾಡುತ್ತಿದ್ದೇವೆ. ಹಬ್ಬ ಮುಕ್ತಾಯಕ್ಕೆ ಇನ್ನೊಂದೆ ದಿನ ಬಾಕಿ ಇದ್ದು, ನಿರೀಕ್ಷೆಯಷ್ಟು ವ್ಯಾಪಾರವಾಗುವ ಸಾಧ್ಯತೆ ಕಡಿಮೆ ಎಂದರು.
ಸಾಮಾನ್ಯವಾಗಿ ಮೂರು ದಿನಗಳ ಕಾಲ ವ್ಯಾಪಾರ ಆಗುತ್ತಿತ್ತು. ಆದರೆ, ಎರಡು ದಿನಗಳ ಕಾಲ ಮಾತ್ರ ಹಬ್ಬ ನಡೆಯುವ ಕಾರಣ ಈ ಬಾರಿ ವ್ಯಾಪಾರ ಕಡಿಮೆ. ಬಲಿಪಾಡ್ಯಮಿಗೆ ಹೆಚ್ಚಿನ ವ್ಯಾಪಾರ ನಿರೀಕ್ಷಿಸಲು ಸಾಧ್ಯವಿಲ್ಲ ಅಂತ ವ್ಯಾಪಾರಸ್ಥ ರಾಜೇಂದ್ರ ತಿಳಿಸಿದ್ದಾರೆ.
ಬಿಲ್ ಇಲ್ಲದೆ ವ್ಯಾಪಾರ
ಇನ್ನು ಪಟಾಕಿ ವ್ಯಾಪಾರದ ವೇಳೆ ಜಿಎಸ್‌ಟಿ ಹೊರತುಪಡಿಸಿ ಬಿಲ್ ನೀಡಲಾಗುತ್ತಿದೆ ಎಂಬ ಆರೋಪವಿದೆ. ಬೆಲೆ ಹೆಚ್ಚಳ ಕಾರಣಕ್ಕೆ ಶೇ. 18 ಜಿಎಸ್‌ಟಿ ಸೇರ್ಪಡೆಯಾದರೆ ಮತ್ತಷ್ಟುಬೆಲೆ ಹೆಚ್ಚಳ ನಮೂದಿಸಬೇಕಾಗುತ್ತದೆ. ವ್ಯಾಪಾರಿಗಳು ಲಾಭದ ಕಾರಣಕ್ಕೆ ಜಿಎಸ್‌ಟಿ ನಮೂದಿಸುತ್ತಿಲ್ಲ. ಜತೆಗೆ ಗ್ರಾಹಕರೂ ಹೆಚ್ಚಿನ ಬೆಲೆ ಕೊಡಬೇಕು ಎಂಬ ಕಾರಣಕ್ಕೆ ಜಿಎಸ್‌ಟಿ ಕುರಿತು ಪ್ರಶ್ನಿಸುತ್ತಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.