ಬೀದಿಬದಿ ವ್ಯಾಪಾರಸ್ಥರಿಗೆ ಹಣಕಾಸಿನ ನೆರವು: CM Basavaraj Bommai

By Kannadaprabha NewsFirst Published Jul 19, 2022, 6:18 AM IST
Highlights

ಬೀದಿಬದಿ ವ್ಯಾಪಾರಸ್ಥರಿಗೆ ಹಣಕಾಸಿನ ನೆರವು. ಸ್ವ-ನಿಧಿ ಯೋಜನೆಯಡಿ ಆರ್ಥಿಕ ನೆರವು. ಸಣ್ಣ ವ್ಯಾಪಾರಿಗಳ ಆರ್ಥಿಕ ಬಲ ಹೆಚ್ಚಿಸಲು ಪ್ರಧಾನಿಯಿಂದ ಯೋಜನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರು (ಜು.19): ಬೀದಿ ಬದಿ ವ್ಯಾಪಾರಿಗಳಿಗೆ ಹಣಕಾಸಿನ ನೆರವು ಒದಗಿಸಿ ಅವರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಅನುಕೂಲ ಕಲ್ಪಿಸಿಕೊಡುವುದು ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆ ಮುಖ್ಯ ಉದ್ದೇಶ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸ್ವ-ನಿಧಿ ಮಹೋತ್ಸವ ಆತ್ಮ ನಿರ್ಭರ ಬೀದಿ ಬದಿ ವ್ಯಾಪಾರಸ್ಥರ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಎಲ್ಲರಿಗೂ ಪಾಲಿರಬೇಕು, ಎಲ್ಲರೂ ಪಾಲ್ಗೊಳ್ಳಬೇಕು. ಈ ಉದ್ದೇಶದಿಂದ ಅತ್ಯಂತ ಕೆಳಸ್ಥರದಲ್ಲಿ ದುಡಿಮೆ ಮಾಡುವ ವ್ಯಾಪಾರಸ್ಥರಿಗೆ ಎಲ್ಲಿ ಬ್ಯಾಂಕ್‌ ಸಾಲ, ಆರ್ಥಿಕ ನೆರವು ಸಿಗುವುದಿಲ್ಲವೋ, ಮೀಟರ್‌ ಬಡ್ಡಿಯಲ್ಲಿ ಸಾಲ ತೆಗೆದುಕೊಳ್ಳುವ ಅನಿವಾರ್ಯತೆ ಯಾರಿಗಿದೆಯೋ ಅಂತಹವರಿಗೆ ಮೀಟರ್‌ ಬಡ್ಡಿ ತಪ್ಪಿಸಿ, ನೇರವಾಗಿ ಸರ್ಕಾರ ನೆರವನ್ನು ಒದಗಿಸಬೇಕೆಂಬ ಚಿಂತನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವ-ನಿಧಿ ಯೋಜನೆ ಜಾರಿಗೆ ತಂದಿದ್ದಾರೆ. ಇದು ಕೇಂದ್ರ ಸರ್ಕಾರದ ಆರ್ಥಿಕ ನೆರವಿನಿಂದ ನಡೆಯುವ ಕಾರ್ಯಕ್ರಮ ಎಂದರು.

ಬೀದಿಬದಿ ವ್ಯಾಪಾರಸ್ಥರಿಗೆ ಮೊದಲು .10 ಸಾವಿರ ಸಾಲ ಕೊಡಲಾಗುತ್ತದೆ. ಅವರು ಪಡೆದ ಸಾಲವನ್ನು ಮರುಪಾವತಿ ಮಾಡಿದ ಬಳಿಕ .20 ಸಾವಿರ ಕೊಡಲಾಗುವುದು. ಅದನ್ನು ಕೂಡ ಅವರು ಚುಕ್ತಾ ಮಾಡಿದರೆ .50 ಸಾವಿರ ಕೊಡುತ್ತಾರೆ. ಕೊಟ್ಟಹಣ ದುಡಿಮೆಗೆ ಸದ್ವಿನಿಯೋಗ ಆಗಬೇಕೆಂಬುದು ಇದರ ಉದ್ದೇಶ. ದೇಶದ ಆರ್ಥಿಕ ಬೆಳವಣಿಗೆ ಕೆಳ ಹಂತದಲ್ಲಿ ದುಡಿಯುವವರಿಂದ ಸಾಧ್ಯ. ಯಾವುದೇ ಸಾಹುಕಾರನ ಕೈಯಲ್ಲಿ ದೇಶದ ಅಭಿವೃದ್ಧಿ ಇಲ್ಲ. ಸಾಹುಕಾರರು ಬ್ಯಾಂಕುಗಳಿಂದ ದುಡ್ಡು ತೆಗೆದುಕೊಂಡು ಉದ್ದಿಮೆ ಮಾಡುತ್ತಾರೆ. ಆದರೆ ಬಡಜನರು, ಬೀದಿಬದಿ ವ್ಯಾಪಾರಸ್ಥರು ಯಾವುದೇ ಬಂಡವಾಳ ಇಲ್ಲದಿದ್ದರೂ ತಮ್ಮ ಬೆವರನ್ನು ಸುರಿಸಿ ಹಗಲು ರಾತ್ರಿ ದುಡಿದು ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ತಲಾ .10 ಸಾವಿರ ಸ್ವ-ನಿಧಿ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್‌,  ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಉಪಸ್ಥಿತರಿದ್ದರು.

ವ್ಯಾಪಾರಿಗಳ ಸಂಭ್ರಮಾಚರಣೆ: ವಿಜೇತರಿಗೆ ಬಹುಮಾನ ವಿತರಣೆ
ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಯ ಸಲುವಾಗಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಗಾಜಿನ ಮನೆಯಲ್ಲಿ ಸ್ವ-ನಿಧಿ ಮಹೋತ್ಸವ-ಆತ್ಮ ನಿರ್ಭರ ಬೀದಿಬದಿಯ ವ್ಯಾಪಾರಸ್ಥರ ಸಂಭ್ರಮಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಾನಪದ ಗೀತೆ: ವೆಂಕಟಾದ್ರಿ(ಪ್ರಥಮ), ನಂಜಪ್ಪ (ದ್ವಿತೀಯ), ಗಂಗಾನರಸಿಂಹಯ್ಯ(ತೃತೀಯ). ಭಕ್ತಿಗೀತೆ: ವರ್ಷಿಣಿ (ಪ್ರಥಮ), ಶ್ವೇತಾ (ದ್ವಿತೀಯ), ರೂಪಾ ನಾರಾಯಣ (ತೃತೀಯ). ಚಿತ್ರಗೀತೆ: ಸೋಮಶೇಖರ್‌ (ಪ್ರಥಮ), ಭಾವನಾ (ದ್ವಿತೀಯ). ರಂಗೋಲಿ ಸ್ಪರ್ಧೆ: ಕವಿತಾ (ಪ್ರಥಮ), ಸುಭದ್ರಾ(ದ್ವಿತೀಯ), ಚಿತ್ರಾ (ತೃತೀಯ) ಬಹುಮಾನ ಪಡೆದರು. ನೃತ್ಯ: ನಂದಿನಿ (ಪ್ರಥಮ), ಭಾವನಾ ಶ್ರಾವ್ಯ (ದ್ವಿತೀಯ), ಮಂಜುನಾಥ (ತೃತೀಯ), ಏಕಪಾತ್ರಾಭಿನಯ: ನಂಜಪ್ಪ ಪ್ರಥಮ, ವೈಷ್ಣವಿ, ಚಲುವರಾಜು ಬಹುಮಾನ ಗಳಿಸಿದ್ದಾರೆ.

click me!