
ನವದೆಹಲಿ(ಫೆ.02): ಬಂಡವಾಳ ಹಿಂಪಡೆಯುವಿಕೆಯಿಂದ ಸರ್ಕಾರ 2020-21ನೇ ಸಾಲಿನಲ್ಲಿ 1.20 ಲಕ್ಷ ಕೋಟಿ ರು. ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ನಿರೀಕ್ಷಿಸಿರುವ 65,000 ಕೋಟಿ ರು.ಗೆ ಹೋಲಿಸಿದರೆ ದುಪ್ಪಟ್ಟಾಗಿದೆ.
ಕೇಂದ್ರ ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಏ.1ರಿಂದ ಆರಂಭವಾಗಲಿರುವ ಮುಂದಿನ ಹಣಕಾಸು ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಸರ್ಕಾರದ ಬಂಡವಾಳ ಹಿಂಪಡೆಯುವ ಮೂಲಕ 90,000 ಕೋಟಿ ರು. ಸಂಗ್ರಹ ನಿರೀಕ್ಷೆ ಹೊಂದಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್‌ನಲ್ಲಿ ಎಲ್‌ಐಸಿ ಹಾಗೂ ಐಬಿಬಿಐ ಬ್ಯಾಂಕಿನಲ್ಲಿ ಸರ್ಕಾರ ಸ್ವಲ್ಪ ಭಾಗವನ್ನು ಮಾರಾಟ ಮಾಡುವುದಾಗಿ ಪ್ರಕಟಿಸಿದ್ದಾರೆ. ಹೀಗಾಗಿ 2020-21ರಲ್ಲಿ ಬಂಡವಾಳ ಹಿಂಪಡೆಯುವಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ 1.20 ಲಕ್ಷ ಕೋಟಿ ರು. ಹರಿದುಬರಬಹುದು ಎಂದು ಅಂದಾಜಿಸಲಾಗಿದೆ.
ಐಡಿಬಿಐ ಬ್ಯಾಂಕ್ ಖಾಸಗಿಗೆ ಮಾರಾಟ
ಸಾರ್ವಜನಿಕ ಬ್ಯಾಂಕ್‌ಗಳ ಸಬಲೀಕರಣಕ್ಕಾಗಿ ಖಾಸಗಿ ಬಂಡವಾಳ ಹೂಡಿಕೆಯ ಅಗತ್ಯತೆಯನ್ನು ಒತ್ತಿ ಹೇಳಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಎಲ್‌ಐಸಿ ಹೂಡಿಕೆಯಿರುವ ಭಾರತೀಯ ಕೈಗಾರಿಕಾ ಅಭಿವೃದ್ಧಿ(ಐಡಿಬಿಐ) ಬ್ಯಾಂಕ್ ಅನ್ನು ಖಾಸಗಿ ಹೂಡಿಕೆದಾರರಿಗೆ ಮಾರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ. ದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ 1964ರಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ್ದ ಐಡಿಬಿಐ ಬ್ಯಾಂಕ್ ಇತ್ತೀಚಿನ ವರ್ಷಗಳಲ್ಲಿ ಬಹಳ ನಷ್ಟದಲ್ಲಿ ನಡೆಯುತ್ತಿತ್ತು. ಹೀಗಾಗಿ ಆಡಳಿತಾತ್ಮಕ ಉದ್ದೇಶಕ್ಕಾಗಿ ಕಳೆದ ವರ್ಷವಷ್ಟೇ ಖಾಸಗಿ ವಲಯದ ಬ್ಯಾಂಕ್ ಎಂದು ಘೋಷಿಸಿದ್ದು, ಐಎಲ್‌ಐ ಇದರಲ್ಲಿ ಬಂಡವಾಳ ಹೂಡಿಕೆ ಮಾಡಿತ್ತು. ಇದೀಗ ಸರ್ಕಾರ ಸಂಪೂರ್ಣವಾಗಿ ಖಾಸಗಿಗೆ ಬಿಟ್ಟುಕೊಡಲು ನಿರ್ಧರಿಸಿದೆ ಎಂದ ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.