
ಬೆಂಗಳೂರು (ಜು.16): ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರಸ್ತಾವನೆ ಅಂಗೀಕಾರವಾದರೆ, ಸಂಬಳ ಪಡೆಯುವ ನೌಕರರು ತಮ್ಮ ಉದ್ಯೋಗ ಕಳೆದುಕೊಳ್ಳುವವರೆಗೆ ಅಥವಾ ನಿವೃತ್ತರಾಗುವವರೆಗೆ ಪಿಂಚಣಿ ಹಣ ವಾಪಾಸ್ ಪಡೆಯಲು ಕಾಯಬೇಕಾಗಿಲ್ಲ. ನಿವೃತ್ತಿ ನಿಧಿಯಿಂದ ಹಣವನ್ನು ಹಿಂಪಡೆಯಲು ಇರುವ ಕಠಿಣ ನಿಯಮಗಳನ್ನು ಸಡಿಲಿಸಲು ಕೇಂದ್ರವು ಪರಿಗಣಿಸುತ್ತಿದೆ. ಇದು ಉದ್ಯೋಗಿಗಳಿಗೆ ಪ್ರತಿ 10 ವರ್ಷಗಳಿಗೊಮ್ಮೆ ಸಂಪೂರ್ಣ ನಿಧಿಯನ್ನು ಅಥವಾ ಅದರ ಒಂದು ಭಾಗವನ್ನು ಹಿಂಪಡೆಯಲು ಅವಕಾಶ ನೀಡಬಹುದು ಎಂದು ಇಬ್ಬರು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
"ಉದ್ಯೋಗಿಗಳಿಗೆ ತಮ್ಮ ಹಣಕಾಸು ನಿರ್ವಹಿಸಲು ಮತ್ತು ನಿವೃತ್ತಿಯನ್ನು ಯೋಜಿಸಲು ಫ್ಲೆಕ್ಸಿಬಿಲಿಟಿ ಹೊಂದಿರಬೇಕು" ಎಂದು ಅಧಿಕಾರಿಗಳಲ್ಲಿ ಒಬ್ಬರು ತಿಳಿಸಿದ್ದಾರೆ. "ಪ್ರತಿ 10 ವರ್ಷಗಳಿಗೊಮ್ಮೆ, ಪ್ರತಿಯೊಬ್ಬ ಇಪಿಎಫ್‌ಒ ಸದಸ್ಯರ ಸಂಗ್ರಹವಾದ ಕಾರ್ಪಸ್‌ಗೆ ಸ್ವಲ್ಪ ಸೇರ್ಪಡೆ ಇರುತ್ತದೆ... ಅವರು ಈ ಹಣವನ್ನು ಏನು ಮಾಡಬೇಕೆಂದು ನಿರ್ಧರಿಸಬೇಕು." ಎಂದು ತಿಳಿಸಿದ್ದಾರೆ.
ಪ್ರಸ್ತುತ, ಉದ್ಯೋಗಿ ಕೆಲಸದಿಂದ ನಿವೃತ್ತರಾದ ನಂತರ, ಸಾಮಾನ್ಯವಾಗಿ 58 ನೇ ವಯಸ್ಸಿನಲ್ಲಿ ಅಥವಾ ಎರಡು ತಿಂಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಯಾಗಿದ್ದರೆ ಮಾತ್ರ ಪೂರ್ಣ ಹಿಂಪಡೆಯುವಿಕೆಯನ್ನು ಅನುಮತಿಸಲಾಗುತ್ತದೆ.
ಬದಲಾವಣೆಗಳನ್ನು ಜಾರಿಗೆ ತಂದರೆ, ಉದ್ಯೋಗಿಗಳು ತಮ್ಮ 30 ರ ಹರೆಯದಲ್ಲಿ ಇಪಿಎಫ್‌ಓ ನಿಧಿಯನ್ನು ಸಂಪೂರ್ಣವಾಗಿ ಹಿಂಪಡೆಯಲು ಸಾಧ್ಯವಾಗಬಹುದು. "ಇದು ಸದಸ್ಯರಿಗೆ ತಮ್ಮ ಇಪಿಎಫ್ ಉಳಿತಾಯದೊಂದಿಗೆ ಏನು ಮಾಡಬೇಕೆಂಬುದನ್ನು ಆಯ್ಕೆ ಮಾಡಲು ಫ್ಲೆಕ್ಸಿಬಿಟಲಿಟಿ ನೀಡುತ್ತದೆ" ಎಂದು ಅಧಿಕಾರಿ ಹೇಳಿದರು. "ಪೂರ್ಣ ಮೊತ್ತವನ್ನು ಹಿಂಪಡೆಯಲು ಅನುಮತಿ ನೀಡದೇ ಇದ್ದಲ್ಲಿ, ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ಸಂಗ್ರಹವಾದ ನಿಧಿಯ ಕೇವಲ 60 ಪ್ರತಿಶತವನ್ನು ಮಾತ್ರ ಹಿಂಪಡೆಯಲು ಅನುಮತಿಸುವ ಸಾಧ್ಯತೆಯಂತೂ ಇದೆ. ಇದು ಪರಿಗಣನೆಯಲ್ಲಿದೆ" ಎಂದು ಅಧಿಕಾರಿ ಹೇಳಿದ್ದಾರೆ.ಇಪಿಎಫ್‌ಒ 7.4 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ನಿಧಿಯ ಮೂಲ ಮೊತ್ತ ಸುಮಾರು 25 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು ಎನ್ನಲಾಗಿದೆ. ಪ್ರಸ್ತುತ, ಭಾಗಶಃ ಹಿಂಪಡೆಯುವಿಕೆಗಳು ವಸತಿ, ವೈದ್ಯಕೀಯ ತುರ್ತುಸ್ಥಿತಿ, ಶಿಕ್ಷಣ ಅಥವಾ ಮದುವೆಯಂತಹ ವಿಶೇಷ ಅಗತ್ಯಗಳಿಗೆ ಸೀಮಿತವಾಗಿವೆ.
ಈ ತಿಂಗಳಿನಿಂದ, ಇಪಿಎಫ್ ಸದಸ್ಯರು ಭೂಮಿ ಖರೀದಿಸಲು ಅಥವಾ ಮನೆ ನಿರ್ಮಿಸಲು ತಮ್ಮ ನಿಧಿಯ 90 ಪ್ರತಿಶತದಷ್ಟು ಹಣವನ್ನು ಹಿಂಪಡೆಯಬಹುದು. ಇದಕ್ಕೂ ಮೊದಲು, ಸತತ ಐದು ವರ್ಷಗಳ ಕಾಲ ನಿರಂತರವಾಗಿ ಉಳಿತಾಯವನ್ನು ಕಂಡವರು ಮಾತ್ರ ವಸತಿ ಅಗತ್ಯಗಳಿಗಾಗಿ 90 ಪ್ರತಿಶತದಷ್ಟು ಹಣವನ್ನು ಹಿಂಪಡೆಯಲು ಅರ್ಹರಾಗಿದ್ದರು, ಆದರೆ ಈಗ ಮಿತಿಯನ್ನು ಮೂರು ವರ್ಷಗಳಿಗೆ ಸಡಿಲಿಸಲಾಗಿದೆ.
ಇಪಿಎಫ್‌ಒ, ನಿವೃತ್ತಿ ನಿಧಿಯಿಂದ ಹೆಚ್ಚುವರಿ ಅನುಮೋದನೆ ಅಗತ್ಯವಿಲ್ಲದ ಸ್ವಯಂ-ಇತ್ಯರ್ಥ ಮಿತಿಯನ್ನು ಮುಂಗಡ ಕ್ಲೇಮ್‌ಗಳಿಗೆ 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ, ಇದರಿಂದಾಗಿ ಸದಸ್ಯರು "ತುರ್ತು ಅಗತ್ಯದ ಸಮಯದಲ್ಲಿ ಹಣವನ್ನು ವೇಗವಾಗಿ" ಪಡೆಯಲು ಅವಕಾಶ ನೀಡುತ್ತದೆ ಎಂದು ಜೂನ್ 24 ರ ಪ್ರಕಟಣೆ ತಿಳಿಸಿದೆ.
ಯತಕಾಲಿಕವಾಗಿ ಹಣವನ್ನು ಹಿಂತೆಗೆದುಕೊಳ್ಳುವ ಪ್ರಸ್ತಾವನೆಯು ಒಳ್ಳೆಯ ಉದ್ದೇಶದಿಂದ ಕೂಡಿದ್ದರೂ, ಯೋಜನೆಯ ಮೂಲ ಉದ್ದೇಶವಾದ ದೀರ್ಘಾವಧಿಯ ಮತ್ತು ನಿರಂತರ ಸಂಯೋಜನೆಯ ಮೂಲಕ ಸುರಕ್ಷಿತ ನಿವೃತ್ತಿ ನಿಧಿಯನ್ನು ನಿರ್ಮಿಸುವ ಗುರಿಯನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದು ತಜ್ಞರು ಹೇಳುತ್ತಾರೆ.
ಈ ಬದಲಾವಣೆಗಳನ್ನು ಪರಿಚಯಿಸುವ ಮೊದಲು ಇಪಿಎಫ್‌ಒದ ಐಟಿ ಮೂಲಸೌಕರ್ಯವನ್ನು ಸುಧಾರಿಸುವುದು ಅತ್ಯಗತ್ಯ ಎಂದು ತಜ್ಞರು ಹೇಳುತ್ತಾರೆ. ಆಗಾಗ್ಗೆ ಬೇಡಿಕೆಗಳನ್ನು ಪೂರೈಸಲು ಮೂಲಸೌಕರ್ಯವು ಅಸಮರ್ಪಕವಾಗಿದೆ, ಇದು ಅನುಷ್ಠಾನ ಮತ್ತು ವಂಚನೆಯ ವಿಷಯದಲ್ಲಿ ಕಳವಳಕಾರಿಯಾಗಿದೆ.
ಇಪಿಎಫ್ ಒಂದು ಜನಪ್ರಿಯ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಉದ್ಯೋಗಿಯ ಸಂಬಳದ ಒಂದು ಭಾಗವನ್ನು ಕೊಡುಗೆಯಾಗಿ ನೀಡುತ್ತಾರೆ. ಈ ಹಣವು ಗಳಿಸಿದ ಬಡ್ಡಿಯೊಂದಿಗೆ ನಿವೃತ್ತಿಯ ನಂತರ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.