ಕೋವಿಡ್ ಟೈಂನಲ್ಲಿ ಎಣ್ಣೆ ಮರಗಾಣ ಹಾಕಿ ಗೆದ್ದ ಮಹಿಳಾ ಎಂಜಿನಿಯರ್: ಇಲ್ಲಿದೆ ಚಾರ್ವಿ ಯಶೋಗಾಥೆ

Published : Aug 07, 2025, 12:38 PM IST
Nalini Poorna

ಸಾರಾಂಶ

ಸಾಲು ಸಾಲು ಸಾವು, ಸಂಕಷ್ಟ ಕಂಡು ಕೊರೋನಾ ತೊಲಗಿದ ಮೇಲೆ ಮರದ ಗಾಣ ಓಡಲು ಶುರುವಾಗಿದ್ದು, ನಿರಂತರವಾಗಿ ಓಡುತ್ತಿದೆ. ಒಂದು ಇದ್ದ ಗಾಣ ಈಗ ಐದಾಗಿದೆ.

ಕೋವಿಡ್ ಎರಡನೇ ಅಲೆ ಏಳುವ ಮೊದಲು ದಾವಣಗೆರೆಯಲ್ಲಿ ಎಣ್ಣೆ ಮರದ ಗಾಣ ಹಾಕಿದರು ಈ ಮಹಿಳಾ ಎಂಜಿನಿಯರ್. ಇವರ ಮರದ ಗಾಣ ಆರಂಭವಾಗಿ ಎರಡೇ ತಿಂಗಳಲ್ಲಿ ಲಾಕ್ಡೌನ್ ಘೋಷಣೆಯಾಯ್ತು. ಸಾಲು ಸಾಲು ಸಾವು, ಸಂಕಷ್ಟ ಕಂಡು ಕೊರೋನಾ ತೊಲಗಿದ ಮೇಲೆ ಮರದ ಗಾಣ ಓಡಲು ಶುರುವಾಗಿದ್ದು, ನಿರಂತರವಾಗಿ ಓಡುತ್ತಿದೆ. ಒಂದು ಇದ್ದ ಗಾಣ ಈಗ ಐದಾಗಿದೆ. ದಾವಣಗೆರೆಯಲ್ಲೇ ಇವರ ಮತ್ತೊಂದು ಶಾಖೆಯೂ ಶುರುವಾಗಿದೆ. ಇದು ಚಾರ್ವಿ ಅಥೆಂಟಿಕ್ ಎಂಟರ್ಪ್ರೈಸೆಸ್ ಹುಟ್ಟಿ ಬೆಳೆದ ಕಥೆ. ಇದರ ಕಥಾ ನಾಯಕಿ ನಳಿನಿಪೂರ್ಣ. ಎಲೆಕ್ಟ್ರಾನಿಕ್ಸ್‌ ಅಂಡ್ ಕಮ್ಯೂನಿಕೇಷನ್ಸ್‌ ಎಂಜಿನಿಯರ್ ಆದ ನಳಿನಿಪೂರ್ಣ ಶಾಲಾ ದಿನಗಳಿಂದಲೂ ಫಸ್ಟ್ ಬೆಂಚ್ ವಿದ್ಯಾರ್ಥಿನಿ. ಇಂಡಿಯನ್ ಎಂಜಿನಿಯರಿಂಗ್ ಸರ್ವೀಸಸ್ ಪರೀಕ್ಷೆಯ ಪ್ರಿಲಿಮ್ಸ್ ಕೂಡ ಪಾಸು ಮಾಡಿದ್ದವರು.

ಕಾರಣಾಂತರಗಳಿಂದ ದಾವಣಗೆರೆಯಲ್ಲೇ ಉಳಿದರು. ಪತಿಯ ಸೋಲಾರ್ ಉದ್ಯಮಕ್ಕೆ ಸಹಕರಿಸುತ್ತಿದ್ದರು. ಆದರೆ, ಸ್ವಂತದ್ದೇನಾದರೂ ಸ್ವಾವಲಂಬಿಯಾಗಿ ಮಾಡಬೇಕು ಎನ್ನುವಾಗ ಹೊಳೆದದ್ದು ಈ ಮರದ ಗಾಣದ ಎಣ್ಣೆ ವ್ಯಾಪಾರ. ತನ್ನ ಉಳಿತಾಯದ ಹಣದಲ್ಲಿ ಕೋವಿಡ್ ಅಡೆತಡೆಗಳನ್ನ ದಾಟಿ ಒಂದು ಶೆಡ್‌ನಲ್ಲಿ ಗಾಣ ಶುರು ಮಾಡಿದರು. ಶೇಂಗಾ ಮತ್ತು ಕೊಬ್ಬರಿ ಎಣ್ಣೆ ಮಾತ್ರ ತೆಗೆಯತೊಡಗಿದರು. ದಿನಕ್ಕೆ 10 ಲೀಟರ್ ಮಾರುವುದು ಕೂಡ ಕಷ್ಟವಿತ್ತು. ಹೀಗಿರುವಾಗ ಒಮ್ಮೆ ಕೃಷಿ ಅಧಿಕಾರಿಯೊಬ್ಬರು ಭೇಟಿ ನೀಡಿ ಪರಿಶೀಲಿಸಿದರು.

ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದಿಂದ ಪಿಎಂಎಫ್ಎಂಇ ಸಾಲದ ವಿವರ ನೀಡಿ 20 ಲಕ್ಷ ರೂಪಾಯಿ ಸಾಲ ಕೊಡಿಸಿದರು. ಅದರ ನೆರವಿನಿಂದ ಮತ್ತೆರಡು ಗಾಣ ಹಾಕಿ, ಶೆಡ್ ಅನ್ನು ಸುಸಜ್ಜಿತ ಮಾಡಿ, ಶೆಡ್‌ನ ಪಕ್ಕದಲ್ಲೇ ಒಂದು ಔಟ್ಲೆಟ್ ಮಾಡಿ ಎಣ್ಣೆ ಮಾರಾಟ ಶುರು ಮಾಡಿದೆ. ಮೂರು ಗಾಣಗಳಾದ್ದರಿಂದ ಐದು ಬಗೆಯ ಎಣ್ಣೆ ಮಾರಾಟ ಶುರು ಮಾಡಿದೆ. ನಿಧಾನವಾಗಿ ಜನ ಬಂದು ಎಣ್ಣೆ ತೆಗೆಯೋದನ್ನ ನೋಡಿ ಕೊಳ್ಳಲು ಶುರು ಮಾಡಿದರು. ಎಣ್ಣೆಕಾಳು ಅರೆಯುವಾಗ ಹೊಮ್ಮುವ ಘಮ, ಸುವಾಸನೆ ಆನಂದಿಸಿ ಎಣ್ಣೆ ಕೊಳ್ಳುವುದರ ತೃಪ್ತಿಯೇ ಬೇರೆ. ಅವರೇ ಎಣ್ಣೆಕಾಳು ತಂದರೂ ಅರೆದು, ಎಣ್ಣೆ ತೆಗೆದುಕೊಡುತ್ತೇವೆ ಎಂದು ಚಾರ್ವಿ ಅಥೆಂಟಿಕ್ ಜರ್ನಿಯನ್ನು ವಿವರಿಸಿದರು ನಳಿನಿಪೂರ್ಣ.

ನೋ ಪ್ಲಾಸ್ಟಿಕ್ - ಸೋಲಾರ್ ಗಾಣ: ಪಿಎಂಎಫ್ಎಂಇ ಸಾಲವನ್ನು ಸರಿಯಾಗಿ ತೀರಿಸಿದ್ದರಿಂದ ಕೃಷಿ ಇಲಾಖೆಯಿಂದ ಮತ್ತೊಂದು ನೆರವು ಬಂತು. ಆ ಹಣದಿಂದ ಮತ್ತೆ ಎರಡು ಗಾಣ ಹಾಕಿದರು. ಈಗ ಐದು ಗಾಣದಿಂದ ಹತ್ತು ಬಗೆಯ ಎಣ್ಣೆ ತೆಗೆದು ಮಾರುತ್ತಿದ್ದಾರೆ. ಹೊಸದಾಗಿ ಹಾಕಿದ ಎರಡು ಗಾಣಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಸೋಲಾರ್ ಅಳವಡಿಸಿ ಮರದ ಗಾಣ ನಡೆಸುತ್ತಾ ಸೋಲಾರ್ ಬಳಕೆಗೂ ಇತರರಿಗೆ ಪ್ರೇರಣೆಯಾಗಿದ್ದಾರೆ. ಪ್ಲಾಸ್ಟಿಕ್ ಕ್ಯಾನಿನಲ್ಲಿ ಎಣ್ಣೆ ತುಂಬಿಡುವುದಿಲ್ಲ. ಸ್ಟೀಲ್ ಡ್ರಮ್‌ನಲ್ಲೇ ದಾಸ್ತಾನು ಮಾಡಿಡುತ್ತಾರೆ. ಗಾಜಿನ ಬಾಟಲಿ ಅಥವಾ ಸ್ಟೀಲ್ ಕ್ಯಾನ್ ತರುವಂತೆಯೇ ಜನರಿಗೆ ತಾಕೀತು ಮಾಡುವ ಮೂಲಕ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಯತ್ನದಲ್ಲಿದ್ದಾರೆ.

ಹೊರ ಊರಿಗೆ ಪಾರ್ಸೆಲ್ ಕಳಿಸುವಾಗ ಮಾತ್ರ ಅನಿವಾರ್ಯವಾಗಿ ಪ್ಲಾಸ್ಟಿಕ್ ಕ್ಯಾನಿನಲ್ಲಿ ಕಳಿಸುತ್ತಿದ್ದಾರೆ. ಪ್ರತಿ ನಿತ್ಯ 100ಕ್ಕೂ ಹೆಚ್ಚು ಲೀಟರ್ ಎಣ್ಣೆ ವ್ಯಾಪಾರ ಆಗುತ್ತಿದೆ. ಸ್ಥಳೀಯವಾಗಿಯೇ ಮಾರ್ಕೆಟ್ ಮಾಡಲು ಆದ್ಯತೆ ನೀಡುತ್ತಿದ್ದೇವೆ. ಹೆಚ್ಚೆಚ್ಚು ಶಾಖೆ ತೆರೆದು, ಜನ ಅಲ್ಲೇ ನೋಡಿ ಎಣ್ಣೆ ಖರೀದಿಸುವ ವ್ಯವಸ್ಥೆಗಳನ್ನು ಹೆಚ್ಚು ಮಾಡುವುದೇ ನಮ್ಮ ಗುರಿ. ಓದಿನಲ್ಲಿ ಮುಂದಿದ್ದ ನಾನು ಈ ಕೆಲಸಕ್ಕೆ ಕೈ ಹಾಕಿದಾಗ, ಅಷ್ಟು ಚನ್ನಾಗಿ ಓದಿ ಎಣ್ಣೆ ತೆಗಿತೀಯಾ ಅಂದವರೇ ಹೆಚ್ಚು. ಆದರೀಗ ಅಂತಹ ಮಾತುಗಳಿಲ್ಲ. ಹೇಗಿದೆ ಬ್ಯೂಸಿನೆಸ್ಸು. ಹೊಸ ಪ್ಲಾನ್ ಏನು ಅಂತ ಕೇಳೋರು ಹೆಚ್ಚಾಗಿದ್ದಾರೆ ಎಂದು ಖುಷಿ ಹಂಚಿಕೊಂಡರು ನಳಿನಿ.

ಆನ್‌ಲೈನ್ ನೆರವು ಬೇಕು: ಆನ್‌ಲೈನ್ ಮಾರ್ಕೆಟ್ ನೋಡಿದೆವು. ಅವರ ಕಮಿಷನ್ ಜಾಸ್ತಿ. ಅದರ ನಿರ್ವಹಣೆ ಖರ್ಚು ಜಾಸ್ತಿ ಇದೆ. ಕಪೆಕ್‌ನವರು ನಮ್ಮ ಉತ್ಪನ್ನಗಳಿಗೆ ಆನ್‌ಲೈನ್ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲ ಆಗಲಿದೆ. ದೆಹಲಿ, ಕಾಶ್ಮೀರ, ಓಡಿಸ್ಸಾ, ಗುಜರಾತ್‌ನಲ್ಲಿ ನೆಲೆಸಿರುವ ಅನೇಕ ಕನ್ನಡಿಗರಿಗೆ ಎಣ್ಣೆ ಕಳಿಸಿಕೊಟ್ಟಿದ್ದೇನೆ. ಮಿಲ್ಲೆಟ್ ಮಾಲ್ಟ್ ಪೌಡರ್, ಚಾರ್ವಿ ಡ್ರೈಫ್ರೂಟ್ಸ್ ಮಾಲ್ಟ್ ಪೌಡರ್ ಸಹ ತಯಾರಿಸಿ ಮಾರುತ್ತಿದ್ದೆವು. ಸದ್ಯಕ್ಕೆ ನಿಲ್ಲಿಸಿದ್ದೇವೆ. ಆರ್ಗ್ಯಾನಿಕ್ ಉತ್ಪನ್ನಗಳ ಅಂಗಡಿ ತೆರೆಯುವ ಯೋಚನೆ ಇದೆ. ಆ ಯೋಜನೆ ಜಾರಿಗೆ ಬರುವಾಗ ಮತ್ತೆ ಮಾಲ್ಟ್ ಪೌಡರ್ ಮಾರುಕಟ್ಟಗೆ ಬಿಡಲಿದ್ದೇವೆ. ನಾನೂ ಸೇರಿ ನಾಲ್ಕು ಜನಕ್ಕೆ ಚಾರ್ವಿ ಉದ್ಯೋಗ ನೀಡಿದೆ. ನಮ್ಮ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ನಮ್ಮ ಶಾಖೆ ತೆರೆಯುವುದೇ ನನ್ನ ಮುಂದಿನ ಗುರಿ ಎಂದರು ಚಾರ್ವಿ ಅಥೆಂಟಿಕ್ನ ನಳಿನಿಪೂರ್ಣ. ಚಾರ್ವಿ ಅಥೆಂಟಿಕ್ ಎಣ್ಣೆ ಉತ್ಪನ್ನಗಳಿಗಾಗಿ ಸಂಪರ್ಕಿಸಿ : 9902492838

15 ಲಕ್ಷ ರೂ. ಸಬ್ಸಿಡಿ ಪಡೆಯಿರಿ: ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!