ನಿವೃತ್ತಿಗೂ ಮೊದಲೇ ನಿಮ್ಮ ಇಪಿಎಫ್ ಬಳಸುವ ಇರಾದೆ ಇದೆಯೇ?| ಸೇವಾವಧಿ ಮಧ್ಯೆಯೇ ಇಪಿಎಫ್ ಹಣ ಬಳಸಲು ಇದೆ ಅವಕಾಶ| ಯಾವ್ಯಾವ ಉದ್ದೇಶಕ್ಕಾಗಿ ಇಪಿಎಫ್ ಹಣ ಬಳಸಲು ಇದೆ ಅವಕಾಶ?| ನಿರ್ದಿಷ್ಟ ಉದ್ದೇಶಗಳಿಗಾಗಿ ಇಪಿಎಫ್ ಹಣ ವಿತ್‌ಡ್ರಾ ಮಾಡುವ ಅವಕಾಶ
ಬೆಂಗಳೂರು(ಜ.29): ನೌಕರರ ಭವಿಷ್ಯ ನಿಧಿ ಖಾತೆ(ಇಪಿಎಫ್) ನಿವೃತ್ತಿ ನಂತರದ ಉಳಿತಾಯ ಯೋಜನೆಯಾಗಿದ್ದು, ನಿವೃತ್ತಿ ನಂತರದ ಸ್ವಾವಲಂಬಿ ಜೀವನಕ್ಕೆ ಸಹಾಯಕಾರಿಯಾಗಿದೆ. ಕೇಂದ್ರ ಸರ್ಕಾರದ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ) ಮೂಲಕ ಇದು ನಿರ್ವಹಿಸಲ್ಪಡುತ್ತದೆ.
ಆದರೆ ನಿವೃತ್ತಿಗೂ ಮೊದಲೇ ಇಪಿಎಫ್ ಖಾತೆಯಲ್ಲಿನ ಹಣ ಬಳಸಲು ಉದ್ಯೋಗಿಗೆ ಅವಕಾಶ ನೀಡಲಾಗಿದ್ದು, ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ಇಪಿಎಫ್ ಹಣವನ್ನು ವಿತ್‌ಡ್ರಾ ಮಾಡಬಹುದಾಗಿದೆ.
undefined
ಇಪಿಎಫ್ ಮೊತ್ತ ಹಿಂಪಡೆಯುವಿಕೆ ಖಾತೆದಾರರ ತಿಂಗಳ ವೇತನ ಅಥವಾ ಕೊಡುಗೆ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಅದರಂತೆ ಇಪಿಎಫ್ ಖಾತೆಯಿಂದ ಯಾವ್ಯಾವ ಪ್ರಮುಖ ಉದ್ದೇಶಗಳಿಗೆ ಹಣ ಪಡೆಯಬಹುದು ಎಂಬುದನ್ನು ನೋಡುವುದಾದರೆ..
1. ಮದುವೆ:
ಪಿಎಫ್ ಖಾತೆಯಿಂದ ಉದ್ಯೋಗಿ ಅವನ/ಅವಳ ಅಥವಾ ಮಕ್ಕಳ ಮದುವೆ ಉದ್ದೇಶಕ್ಕಾಗಿ ಹಣ ವಿತ್ ಡ್ರಾ ಮಾಡಬಹುದು. ಕನಿಷ್ಟ ಏಳು ವರ್ಷಗಳ ಸೇವಾವಧಿಯನ್ನು ಪೂರೈಸಿರುವ ವ್ಯಕ್ತಿ ತನ್ನ ಖಾತೆಯಿಂದ ಶೇ. 50ರಷ್ಟು ಮೊತ್ತವನ್ನು ಹಿಂಪಡೆಯಬಹುದು.
2. ಮನೆ ನಿರ್ಮಾಣ ಅಥವಾ ಖರೀದಿ:
ಮನೆ ನಿರ್ಮಾಣ ಅಥವಾ ಪ್ಲಾಟ್ ಖರೀದಿಗಾಗಿ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹದು. ಇದಕ್ಕಾಗಿ ಖಾತೆದಾರರು ಕನಿಷ್ಟ ಐದು ವರ್ಷ ಸೇವಾವಧಿ ಪೂರೈಸಿರಬೇಕು. ಅಲ್ಲದೇ ತಮ್ಮ ಸೇವಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಮನೆ ನಿರ್ಮಾಣ ಉದ್ದೇಶಕ್ಕಾಗಿ ಉದ್ಯೋಗಿ ಪಿಎಫ್ ಹಣ ಬಳಸಬಹುದು.
3. ಮನೆ ದುರಸ್ತಿ ಅಥವಾ ಬದಲಾವಣೆ:
ಮನೆಯ ನವೀಕರಣ ಅಥವಾ ಬದಲಾವಣೆಗಾಗಿ ಪಿಎಫ್ ಖಾತೆಯಿಂದ ಮೊತ್ತ ಹಿಂಪಡೆಯಬಹುದು. ಇದಕ್ಕೂ ಕೂಡ ಖಾತೆದಾರರು ಕನಿಷ್ಟ ಐದು ವರ್ಷ ಸೇವಾವಧಿ ಪೂರೈಸಿರಬೇಕಾಗುತ್ತದೆ.
4. ಮನೆ ಸಾಲ ಮರುಪಾವತಿ:
ಮನೆಯ ಮೇಲಿನ ಸಾಲವನ್ನು ಮರುಪಾವತಿಸಲು ಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದು. ಇದಕ್ಕಾಗಿ ಉದ್ಯೋಗಿ ಕನಿಷ್ಟ ಹತ್ತು ವರ್ಷ ಸೇವಾವಧಿ ಪೂರೈಸಿರಬೇಕು.
5. ವೈದ್ಯಕೀಯ ಚಿಕಿತ್ಸೆ:
ಇಪಿಎಫ್ ಖಾತೆದಾರ ತನ್ನ, ಪಾಲಕರ, ಸಂಗಾತಿ ಮತ್ತು ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ಹಣ ವಿತ್ ಡ್ರಾ ಮಾಡಲು ಅವಕಾಶವಿರುತ್ತದೆ. ಒಟ್ಟು ಕಾರ್ಪಸ್ ಆಧಾರದ ಮೇಲೆ ವೈದ್ಯಕೀಯ ಚಿಕಿತ್ಸೆಗಾಗಿ ಹಣ ಪಡೆಯಬಹುದು.
6. ಶಿಕ್ಷಣ:
ಮಕ್ಕಳ ಶಿಕ್ಷಣಕ್ಕಾಗಿ ಖಾತೆದಾರರು ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದು. ಇದಕ್ಕೆ ಕನಿಷ್ಟ ಏಳು ವರ್ಷ ಸೇವೆ ಸಲ್ಲಿಸಿರಬೇಕು. ಮಕ್ಕಳ ವಿದ್ಯಾಬ್ಯಾಸಕ್ಕೆ ಸಂಬಂಧಿಸಿದ ಕೋರ್ಸ್ ಪ್ರಮಾಣಪತ್ರ, ಸಂಸ್ಥೆಯಿಂದ ಅಂದಾಜು ವೆಚ್ಚ ಪ್ರಮಾಣ ಪತ್ರ ಒದಗಿಸಬೇಕಾಗುತ್ತದೆ.
ಮೇಲೆ ಉಲ್ಲೇಖಿಸಿದ ಉದ್ದೇಶಗಳನ್ನು ಹೊರತುಪಡಿಸಿ ಇನ್ನಿತರ ಅನೇಕ ಕಾರಣಗಳಿಗಾಗಿ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದು. ಯಾವುದೇ ದೈಹಿಕ ಅಥವಾ ಮಾನಸಿಕ ಅಸಮರ್ಥತೆ, ಉತ್ತಮ ಉದ್ಯೋಗಕ್ಕಾಗಿ ವಿದೇಶಕ್ಕೆ ವಲಸೆ ಅಥವಾ ವಿದೇಶದಲ್ಲಿ ನೆಲೆಸುವುದಕ್ಕಾಗಿ ಹಣ ಹಿಂಪಡೆಯಬಹುದು.