ಪಾಕಿಸ್ತಾನದ ಜಿಡಿಪಿಗಿಂತ ಹೆಚ್ಚು ಎಲನ್‌ ಮಸ್ಕ್‌ ಸಂಪತ್ತು!

By Suvarna NewsFirst Published Oct 31, 2021, 12:20 PM IST
Highlights

* ಎಲಾನ್‌ ಮಸ್ಕ್‌ ಸಂಪತ್ತು 300 ಶತಕೋಟಿ ಡಾಲರ್‌

* ಇದು ಪಾಕಿಸ್ತಾನದ ಜಿಡಿಪಿಗಿಂತ ಹೆಚ್ಚು!

* ಇಷ್ಟು ಆಸ್ತಿ ಹೊಂದಿದ ವಿಶ್ವದ ಮೊದಲಿಗ

ವಾಷಿಂಗ್ಟನ್‌(ಅ.31): ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಎಂಬ ಹಿರಿಮೆ ಹೊಂದಿರುವ ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌ (Elon Musk) 300 ಶತಕೋಟಿ ಡಾಲರ್‌ (22.50 ಲಕ್ಷ ಕೋಟಿ ರು.) ಆಸ್ತಿ ಹೊಂದಿರುವ ವಿಶ್ವದ ಮೊದಲ ಧನಿಕ ಎನ್ನಿಸಿಕೊಂಡಿದ್ದಾರೆ. ಬ್ಲೂಮ್‌ಬರ್ಗ್‌ ಬಿಲಿಯನೇರ್‌ (BloombergBillionaire) ಇಂಡೆಕ್ಸ್‌ನಲ್ಲಿ ಮಸ್ಕ್‌ ಆಸ್ತಿ ಶನಿವಾರ 311 ಶತಕೋಟಿ ಡಾಲರ್‌ಗೆ ಏರಿದೆ. ಇದರೊಂದಿಗೆ 300 ಶತಕೋಟಿ ಡಾಲರ್‌ ಕ್ಲಬ್‌ ದಾಟಿದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಮಸ್ಕ್‌ ಅವರು ಟೆಸ್ಲಾ (Tesla) ವಾಹನ ಉದ್ಯಮ ಸೇರಿದಂತೆ ಹಲವು ಸಮೂಹಗಳ ಉದ್ದಿಮೆದಾರರು. ಅವರ ಕಂಪನಿಯ ಷೇರು ಮೌಲ್ಯಗಳು ಭಾರೀ ಏರಿಕೆ ಕಂಡಿದ್ದರಿಂದ ಹಾಗೂ 1 ಲಕ್ಷದಷ್ಟುಟೆಸ್ಲಾ ಎಲೆಕ್ಟ್ರಿಕ್‌ ವಾಹನಗಳು ಒಮ್ಮಿಂದೊಮ್ಮೆಲೇ ಮಾರಾಟ ಕಂಡಿದ್ದರಿಂದ ಅಕ್ಟೋಬರ್‌ 25ರಂದು ಅವರ ಆಸ್ತಿ ಮೌಲ್ಯ 292 ಶತಕೋಟಿ ಡಾಲರ್‌ಗೆ (22.50 ಲಕ್ಷ ಕೋಟಿ ರು.) ಏರಿತ್ತು. ಇದೀಗ ಐದೇ ದಿನದಲ್ಲಿ ಅವರ ಆಸ್ತಿ 1.42 ಲಕ್ಷ ಕೋಟಿ ರು.ನಷ್ಟುಹೆಚ್ಚಿದೆ.

ಬ್ಲೂಮ್‌ಬರ್ಗ್‌ ಇಂಡೆಕ್ಸ್‌ನಲ್ಲಿ ಮಸ್ಕ್‌ ನಂತರದ ಸ್ಥಾನದಲ್ಲಿ ಜೆಫ್‌ ಬೆಜೋಸ್‌ (Jeff Bwzos) (14.62 ಲಕ್ಷ ಕೋಟಿ ರು), ಬೆರ್ನಾರ್ಡ್‌ ಅರ್ನಾಲ್ಟ್‌ (12.52 ಲಕ್ಷ ಕೋಟಿ ರು) ಇದ್ದಾರೆ. ಈ ಪಟ್ಟಿಯಲ್ಲಿ ರಿಲಯನ್ಸ್‌ ಒಡೆಯ ಮುಕೇಶ್‌ ಅಂಬಾನಿ 71.2 ಲಕ್ಷ ಕೋಟಿ ರು. (11ನೇ ಸ್ಥಾನ) ಹಾಗೂ ಗೌತಮ್‌ ಅದಾನಿ 5.77 ಲಕ್ಷ ಕೋಟಿ ರು. ಆಸ್ತಿ (13ನೇ ಸ್ಥಾನ) ಹೊಂದಿದ್ದಾರೆ.

ಮಸ್ಕ್‌ ಆಸ್ತಿ ಪಾಕ್‌ ಜಿಡಿಪಿಗಿಂತಲೂ ಅಧಿಕ!

ವಾಷಿಂಗ್ಟನ್‌: ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿ ಎಂಬ ಖ್ಯಾತಿ ಪಡೆದಿರುವ ಉದ್ಯಮಿ ಎಲಾನ್‌ ಮಸ್ಕ್‌ ಆಸ್ತಿ ಈಗ ಪಾಕಿಸ್ತಾನದ ಜಿಡಿಪಿ ಮೌಲ್ಯಕ್ಕಿಂತ ಅಧಿಕವಾಗಿದೆ! ಹೌದು, ಮಸ್ಕ್‌ ಆಸ್ತಿ ಮೌಲ್ಯ 300 ಶತಕೋಟಿ ಡಾಲರ್‌ ಮೀರಿದೆ. ಇದು 22 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನದ 280 ಶತಕೋಟಿ ಡಾಲರ್‌ ಜಿಡಿಪಿಗಿಂತ ಹೆಚ್ಚಿನದು ಎಂಬುದು ವಿಶೇಷ. ಅಂದರೆ ಪಾಕಿಸ್ತಾನದ ಒಂದು ವರ್ಷದ ಒಟ್ಟು ಉತ್ಪಾದನೆಗಿಂತ ಮಸ್ಕ್‌ ಆಸ್ತಿಯೇ ಹೆಚ್ಚು.

ದಿಢೀರ್‌ ಏರಿಕೆ ಏಕೆ?

ಮಸ್ಕ್‌ ಒಡೆತನದ ಕಂಪನಿಗಳ ಷೇರು ಮೌಲ್ಯ ಕಳೆದ 2 ವರ್ಷದಿಂದ ಭಾರೀ ಏರಿಕೆ ಕಂಡಿದೆ. ಹೀಗಾಗಿ ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಅವರ ಆಸ್ತಿ ಮೌಲ್ಯ 11 ಲಕ್ಷ ಕೋಟಿ ರು.ಗಿಂತ ಹೆಚ್ಚಾಗುವ ಮೂಲಕ ಅವರು ವಿಶ್ವದ ನಂ.1 ಶ್ರೀಮಂತ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ವಿಶ್ವದ ಟಾಪ್‌ 3 ಸಿರಿವಂತರು

ಎಲಾನ್‌ ಮಸ್ಕ್‌ 23.32 ಲಕ್ಷ ಕೋಟಿ ರು.

ಜೆಫ್‌ ಬೆಜೋಸ್‌ 14.62 ಲಕ್ಷ ಕೋಟಿ ರು.

ಬೆರ್ನಾರ್ಡ್‌ ಅರ್ನಾಲ್ಟ್‌ 12.52 ಲಕ್ಷ ಕೋಟಿ ರು.

ಅಜೀಂ ಪ್ರೇಮ್‌ಜಿ ನಂ.1 ದಾನಿ,  2021ರಲ್ಲಿ 9,713 ಕೋಟಿ ದಾನ: ಅದಾನಿಗೆ 8ನೇ ಸ್ಥಾನ!

ಬೆಂಗಳೂರು ಮೂಲದ ಉದ್ಯಮಿ, ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಮತ್ತೊಮ್ಮೆ ಭಾರತದ ನಂ.1 ದಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 2021ರಲ್ಲಿ ಅಜೀಂ ನಿತ್ಯ 27 ಕೋಟಿ ರು.ನಂತೆ ಒಂದು ವರ್ಷದಲ್ಲಿ ಒಟ್ಟಾರೆ 9713 ಕೋಟಿ ರು.ಗಳನ್ನು ವಿವಿಧ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಎಡೆಲ್‌ಗೀವ್‌ ಹರೂನ್‌ ಇಂಡಿಯಾ ದಾನಿಗಳ ಪಟ್ಟಿಬಿಡುಗಡೆಯಾಗಿದ್ದು, ಅದರನ್ವಯ ಅಜೀಂ ಪ್ರೇಮ್‌ ಜಿ (9713 ಕೋಟಿ ರು.), ಎಚ್‌ಸಿಎಲ್‌ ಸಂಸ್ಥಾಪಕ ಶಿವ ನಾಡಾರ್‌ (1263 ಕೋಟಿ ರು.) ಮತ್ತು ರಿಲಯನ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (577 ಕೋಟಿ ರು.), ಆದಿತ್ಯ ಬಿರ್ಲಾ ಗ್ರೂಪ್‌ನ ಮುಖ್ಯಸ್ಥ ಕುಮಾರ ಮಂಗಲಂ ಬಿರ್ಲಾ (377 ಕೋಟಿ ರು.), ಇಸ್ಫೋಸಿಸ್‌ನ ಸಹ ಸಂಸ್ಥಾಪಕ ನಂದನ್‌ ನೀಲೇಕಣಿ (189 ಕೋಟಿ ರು.) ಟಾಪ್‌ 5 ಸ್ಥಾನ ಪಡೆದುಕೊಂಡಿದ್ದಾರೆ. ಭಾರತದ ನಂ.2 ಶ್ರೀಮಂತ ಗೌತಮ್‌ ಅದಾನಿ 130 ಕೋಟಿ ರು. ದಾನ ಮಾಡುವ ಮೂಲಕ 8ನೇ ಸ್ಥಾನದಲ್ಲಿದ್ದಾರೆ.

ಈ ದಾನದಲ್ಲಿ ಬಹಳಷ್ಟುಹಣ ಮೂಲಭೂತ ಸೌಕರ್ಯಗಳಾದ ಶಿಕ್ಷಣ, ಆರೋಗ್ಯ ಮುಂತಾದವುಗಳಿಗೆ ವ್ಯಯವಾಗಲಿದೆ. ಭಾರತದ ಅತಿ ಹೆಚ್ಚು ಪ್ರಮಾಣದ ಹೂಡಿಕೆದಾರ ರಾಕೇಶ್‌ ಜುಂಝುನ್‌ವಾಲಾ 50 ಕೋಟಿ ರು. ದಾನ ಮಾಡುವ ಮೂಲಕ ಮೊದಲ ಬಾರಿ ಈ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.

click me!