ಇತ್ತೀಚೆಗೆ ಎಲಾನ್ ಮಸ್ಕ್ ಗೆ ಅದೃಷ್ಟ ಪದೇಪದೆ ಕೈಕೊಡುತ್ತಲೇ ಇದೆ. ಟ್ವಿಟ್ಟರ್ ಖರೀದಿ ಬಳಿಕ ಎಲ್ಲವೂ ಮಸ್ಕ್ ಕೈ ಮೀರಿ ಹೋಗುತ್ತಿದೆ. ಕಳೆದ ತಿಂಗಳು ವಿಶ್ವದ ನಂ.1 ಶ್ರೀಮಂತನ ಪಟ್ಟ ಕೈತಪ್ಪಿತ್ತು. ಈಗ ವಿಶ್ವದಲ್ಲೇ ಅತೀಹೆಚ್ಚು ವೈಯಕ್ತಿಕ ಸಂಪತ್ತು ಕಳೆದುಕೊಂಡ ವ್ಯಕ್ತಿ ಎಂದು ಮಸ್ಕ್ ಅವರನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗುರುತಿಸಿದೆ.
ನವದೆಹಲಿ (ಜ.10): ಟೆಸ್ಲಾ, ಟ್ವಿಟರ್ ಕಂಪನಿ ಮಾಲೀಕ ಎಲಾನ್ ಮಸ್ಕ್ ಹೆಸರಲ್ಲಿ ಈಗ ಹೊಸ ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿಯಾಗಿದೆ. ಇತಿಹಾಸದಲ್ಲೇ ಅತೀಹೆಚ್ಚು ಪ್ರಮಾಣದಲ್ಲಿ ವೈಯಕ್ತಿಕ ಸಂಪತ್ತು ಕಳೆದುಕೊಂಡ ವಿಶ್ವದ ಮೊದಲ ವ್ಯಕ್ತಿ ಮಸ್ಕ್ ಆಗಿದ್ದಾರೆ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಶುಕ್ರವಾರ (ಜ.6) ತಿಳಿಸಿದೆ. 2021ರ ನವೆಂಬರ್ ನಲ್ಲಿ ಮಸ್ಕ್ ಸಂಪತ್ತು 320 ಶತಕೋಟಿ ಡಾಲರ್ ಇದ್ದು, 2023ರ ಜನವರಿಯಲ್ಲಿ 137 ಶತಕೋಟಿ ಡಾಲರ್ ಗೆ ಇಳಿಕೆಯಾಗಿದೆ. ಅಂದರೆ ಸರಿಸುಮಾರು 200 ಶತಕೋಟಿ ಡಾಲರ್ ಸಂಪತ್ತನ್ನು ಮಸ್ಕ್ ಕಳೆದುಕೊಂಡಿದ್ದಾರೆ. 'ಖಚಿತವಾದ ಸಂಖ್ಯೆಯನ್ನು ನಿರ್ಧರಿಸಲು ಸಾಧ್ಯವಾಗದಿದ್ರೂ ಮಸ್ಕ್ ಸುಮಾರು 2021ರ ನವೆಂಬರ್ ನಿಂದ 182 ಶತಕೋಟಿ ಡಾಲರ್ ಸಂಪತ್ತು ಕಳೆದುಕೊಂಡಿದ್ದಾರೆ. ಈ ಮೂಲಕ 2020ರಲ್ಲಿ ಸೃಷ್ಟಿಯಾಗಿದ್ದ ಜಪಾನ್ ಮೂಲದ ಟೆಕ್ ಹೂಡಿಕೆದಾರ ಮಸಯೋಶಿ ಸನ್ ಅವರ 58.6 ಶತಕೋಟಿ ಡಾಲರ್ ಮೊತ್ತದ ವೈಯಕ್ತಿಕ ನಷ್ಟದ ದಾಖಲೆಯನ್ನು ಮುರಿದಿದ್ದಾರೆ. ಟೆಸ್ಲಾ ಷೇರುಗಳ ಕಳಪೆ ನಿರ್ವಹಣೆಯೇ ಮಸ್ಕ್ ಸಂಪತ್ತು ನಷ್ಟಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಟ್ವಿಟ್ಟರ್ ಖರೀದಿಗಾಗಿ ಎಲಾನ್ ಮಸ್ಕ್ 7 ಶತಕೋಟಿ ಡಾಲರ್ ಮೌಲ್ಯದ ಟೆಸ್ಲಾ ಷೇರುಗಳನ್ನು ಮಾರಾಟ ಆಡಿದ್ದರು. ನವೆಂಬರ್ ನಲ್ಲಿ ಮತ್ತೆ 4 ಶತಕೋಟಿ ಡಾಲರ್ ಮೌಲ್ಯದ ಟೆಸ್ಲಾ ಷೇರುಗಳನ್ನು ಮಾರಾಟ ಮಾಡಿದ್ದರು ಎಂದು ಔಟ್ ಲೆಟ್ ( outlet) ವರದಿ ಮಾಡಿದೆ. ಇನ್ನು ಕಳೆದ ತಿಂಗಳು ಮಸ್ಕ್ 3.58 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಹೀಗೆ 2022ರ ಏಪ್ರಿಲ್ ನಿಂದ ಡಿಸೆಂಬರ್ ತನಕ 23 ಶತಕೋಟಿ ಡಾಲರ್ ಗಿಂತಲೂ ಅಧಿಕ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಅದಾನಿ ಬದುಕಿನ ರೋಚಕ ಕತೆ: ಸ್ಕೂಟರ್ ಬಳಸ್ತಿದ್ದ, ಕಿಡ್ನಾಪ್ ಆಗಿದ್ದ ಉದ್ಯಮಿ
'ಮಸ್ಕ್ ಅದೃಷ್ಟ ಕೈಕೊಟ್ಟ ಕಾರಣದಿಂದ ವಿಶ್ವದ ನಂ.1 ಶ್ರೀಮಂತನ ಪಟ್ಟವನ್ನು ಲೂಯಿಸ್ ವೈಟ್ಟನ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರಿಗೆ ಬಿಟ್ಟುಕೊಡಬೇಕಾಯಿತು. ಅರ್ನಾಲ್ಟ್ ಅವರ ನಿವ್ವಳ ಸಂಪತ್ತು ಅಂದಾಜು 190 ಬಿಲಿಯನ್ ಡಾಲರ್' ಎಂದು ಜಿಆರ್ ಡಬ್ಲ್ಯು (GRW) ತಿಳಿಸಿದೆ. ಅಲ್ಲದೆ, ಮಸ್ಕ್ 44 ಶತಕೋಟಿ ಡಾಲರ್ ಗೆ ಟ್ವಿಟ್ಟರ್ ಖರೀದಿಸಿದ ಬಳಿಕ 2022ರ ಅಕ್ಟೋಬರ್ ನಿಂದ ಅವರ ಸಂಪತ್ತಿನಲ್ಲಿ ಇಳಿಕೆಯಾಗಿದೆ ಎಂದು ಜಿಆರ್ ಡಬ್ಲ್ಯು ಹೇಳಿದೆ.
200 ಬಿಲಿಯನ್ ಡಾಲರ್‌ಗೂ ಹೆಚ್ಚು ಅಸ್ತಿ ಮೌಲ್ಯ ಹೊಂದಿದ್ದ ಎಲಾನ್ ಮಸ್ಕ್ ಆಸ್ತಿ 2022 ರಲ್ಲಿ ಸಾಕಷ್ಟು ಇಳಿಕೆಯಾಗಿದೆ. ಇದಕ್ಕೆ 44 ಬಿಲಿಯನ್ ಡಾಲರ್ ವ್ಯಯಿಸಿ ಟ್ವಿಟ್ಟರ್ ಖರೀದಿಸಿರುವ ಜೊತೆಗೆ ಟೆಸ್ಲಾ ಷೇರುಗಳ ಬೆಲೆಯಲ್ಲಿ ಇಳಿಕೆಯಾಗಿರುವುದು ಕೂಡ ಕಾರಣವಾಗಿದೆ. ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ಕಂಪನಿಯಾಗಿದ್ದು, ಅಮೆರಿಕ ಬಿಟ್ಟರೆ ಚೀನಾದಲ್ಲೇ ದೊಡ್ಡ ಮಾರುಕಟ್ಟೆ ಹೊಂದಿದೆ. ಆದರೆ, ಕೋವಿಡ್ ನಿರ್ಬಂಧಗಳ ಪರಿಣಾಮ ಚೀನಾದಲ್ಲಿ ಟೆಸ್ಲಾ ಮಾರುಕಟ್ಟೆ ಕುಸಿತ ಕಂಡಿದ್ದು, ಷೇರುಗಳ ಮೌಲ್ಯದಲ್ಲಿ ಕೂಡ ಇಳಿಕೆಯಾಗಿದೆ. ಇನ್ನು ಟ್ವಿಟ್ಟರ್ ಕೂಡ ನಷ್ಟದ ಹಾದಿಯಲ್ಲಿದೆ ಎಂದು ಹೇಳಲಾಗಿದೆ. ಶೇ.60ಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ಮಸ್ಕ್ ಕಳೆದುಕೊಂಡಿದ್ದಾರೆ ಕೂಡ.
ಟೆಸ್ಲಾ ಹಾಗೂ ಟ್ವಿಟ್ಟರ್ ಮಾತ್ರವಲ್ಲದೆ ರಾಕೆಟ್ ಕಂಪನಿ ಸ್ಪೇಸ್ ಎಕ್ಸ್ ಹಾಗೂ ನ್ಯೂರಾಲಿಂಕ್ (Neuralink) ಎಂಬ ಸ್ಟಾರ್ಟಪ್‌ನ ಒಡೆಯರೂ ಆಗಿದ್ದಾರೆ. ಬ್ಲೂಮ್‌ಬರ್ಗ್ ವೆಲ್ತ್ ಇಂಡೆಕ್ಸ್ ಪ್ರಕಾರ ಕಳೆದ ವರ್ಷ ಎಲನ್ ಮಸ್ಕ್ ನಿವ್ವಳ ಆದಾಯ 340 ಬಿಲಿಯನ್ ಅಮೆರಿಕನ್ ಡಾಲರ್. ಆದರೆ ಈ ವರ್ಷ ಮಸ್ಕ್ ನಿವ್ವಳ ಆದಾಯ ಸರಿಸುುಮಾರು 100 ಬಿಲಿಯನ್‌ಗೂ ಹೆಚ್ಚು ಅಮೆರಿಕನ್ ಡಾಲರ್ ಕಡಿಮೆಯಾಗಿದೆ.
Budget 2023: ಒಂದೇ ವರ್ಷದಲ್ಲಿ ನಾಟಕೀಯ ಬದಲಾವಣೆಗೆ ಸಾಕ್ಷಿಯಾದ ಜಗತ್ತು!
ಟ್ವಿಟ್ಟರ್ ಖರೀದಿಗೆ ಸಾಕಷ್ಟು ಜಟಾಪಟಿ ನಡೆಸಿದ್ದ ಎಲಾನ್ ಮಸ್ಕ್ ಈ ಸಂಬಂಧ ಸದಾ ಒಂದಿಲ್ಲೊಂದು ಟ್ವೀಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಟ್ವಿಟ್ಟರ್ ಖರೀದಿ ಬಳಿಕ ಸಿಇಒ ಪರಾಗ್ ಅರ್ಗವಾಲ್ ಸೇರಿದಂತೆ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಿದ್ದರು ಕೂಡ.