ತೈಲ ದರ ಏರಿಕೆ ಮಧ್ಯೆ ರಾಜ್ಯಕ್ಕೆ ವಿದ್ಯುತ್‌ ಶಾಕ್‌: ಹೀಗಿದೆ ಹೊಸ ದರ!

By Kannadaprabha NewsFirst Published Jun 10, 2021, 7:36 AM IST
Highlights

* ವಿದ್ಯುತ್‌ ದರ, ಯೂನಿಟ್‌ಗೆ 10 ಪೈಸೆ ಹೆಚ್ಚಳ

* ಪೆಟ್ರೋಲ್‌, ಡೀಸೆಲ್‌ ದುಬಾರಿ ಬಳಿಕ ಮತ್ತೊಂದು ಆಘಾತ

* ಮೊದಲ ಸ್ಲ್ಯಾಬ್ 30ರಿಂದ 50 ಯೂನಿಟ್‌ಗೆ ಏರಿಕೆ

* ಏಪ್ರಿಲ್‌ 1ರಿಂದಲೇ ಹೊಸ ದರ ಜಾರಿ

ಬೆಂಗಳೂರು(ಜೂ.10): ಕೊರೋನಾ ಸಂಕಷ್ಟಹಾಗೂ ಪೆಟ್ರೋಲ್‌ ದರ 100 ರು. ದಾಟಿರುವ ನಡುವೆಯೇ ರಾಜ್ಯ ಸರ್ಕಾರ ವಿದ್ಯುತ್‌ ದರ ಏರಿಕೆಯ ಶಾಕ್‌ ನೀಡಿದೆ. ಪ್ರತಿ ಯೂನಿಟ್‌ಗೆ ಸರಾಸರಿ 30 ಪೈಸೆಯಂತೆ ವಿದ್ಯುತ್‌ ಶುಲ್ಕ ಹೆಚ್ಚಳ ಮಾಡಿದೆ. ಗೃಹ ಬಳಕೆ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 10 ಪೈಸೆ ಹೆಚ್ಚಳವಾಗಲಿದೆ.

ಗೃಹ ಬಳಕೆದಾರರಿಗೆ ಮೊದಲ ಸ್ಲ್ಯಾಬ್ ಪರಿಷ್ಕರಣೆ ಮಾಡಿದ್ದು 0-30 ಯೂನಿಟ್‌ವರೆಗೆ ಇದ್ದ ಮಿತಿಯನ್ನು 50 ಯೂನಿಟ್‌ವರೆಗೆ ವಿಸ್ತರಿಸಲಾಗಿದೆ. ಜತೆಗೆ, ನಿಗದಿತ ಶುಲ್ಕವನ್ನೂ ಹೆಚ್ಚಳ ಮಾಡಿದ್ದು ಪ್ರತಿ ಕಿಲೋ ವ್ಯಾಟ್‌ಗೆ 10 ರು.ಗಳಂತೆ ಪರಿಷ್ಕರಣೆ ಮಾಡಲಾಗಿದೆ.

ಈ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ದರ ಹೆಚ್ಚಳ ಆದೇಶ ಹೊರಡಿಸಿದ್ದು, ಎಲ್ಲಾ ಎಸ್ಕಾಂಗಳಿಗೂ ಏಕರೂಪದ ದರ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ಏ.1ರಿಂದಲೇ ಪೂರ್ವಾನ್ವಯವಾಗಲಿದ್ದು, ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಏಪ್ರಿಲ್‌, ಮೇ ತಿಂಗಳ ದರ ಪರಿಷ್ಕರಣೆ ಬಾಕಿಯನ್ನು ಯಾವುದೇ ಬಡ್ಡಿ ವಿಧಿಸದೆ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ವಸೂಲಿ ಮಾಡಲು ಎಸ್ಕಾಂಗಳಿಗೆ ಆದೇಶ ನೀಡಿದೆ.

ವಿವಿಧ ಎಸ್ಕಾಂಗಳು ಪ್ರತಿ ಯೂನಿಟ್‌ಗೆ ಸರಾಸರಿ 1.35 ರು.ನಂತೆ ದರ ಹೆಚ್ಚಳ ಮಾಡಲು ಕೆಇಆರ್‌ಸಿಗೆ ಮನವಿ ಮಾಡಿದ್ದವು. ಕೆಇಆರ್‌ಸಿಯು ಸರಾಸರಿ 30 ಪೈಸೆಯಂತೆ ದರ ಪರಿಷ್ಕರಣೆ ಮಾಡಿದ್ದು, ಗೃಹ ಬಳಕೆ, ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವಂತೆ ಪ್ರತಿ ಯೂನಿಟ್‌ಗೆ 10 ಪೈಸೆ ಮಾತ್ರ ಹೆಚ್ಚಳ ಮಾಡಲಾಗಿದೆ.

ಬೆಳಗ್ಗೆ ಹಾಗೂ ಸಂಜೆಯ ಪೀಕ್‌ ಅವರ್‌ನಲ್ಲಿ ಬಳಕೆ ಮಾಡುವವರಿಗೆ ಪ್ರತಿ ಯುನಿಟ್‌ಗೆ ವಿಧಿಸುತ್ತಿದ್ದ 1. ರು. ದಂಡವನ್ನು ತೆಗೆದು ಹಾಕಲಾಗಿದೆ. ಅಲ್ಲದೆ, ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪೀಕ್‌ ಅವರ್‌ ಅಲ್ಲದ ಸಮಯದಲ್ಲಿ ವಿದ್ಯುತ್‌ ಬಳಸುವವರಿಗೆ ನೀಡಲಾಗುತ್ತಿದ್ದ 1 ರು. ರಿಯಾಯಿತಿಯನ್ನು ಹಿಂಪಡೆಯಲಾಗಿದೆ.

ಉಳಿದಂತೆ ಬಿಎಂಆರ್‌ಸಿಎಲ್‌ಗೆ ಪೂರೈಸುವ ವಿದ್ಯುತ್‌ ದರ ಪರಿಷ್ಕರಣೆ ಮಾಡಿಲ್ಲ. ಬ್ಯಾಟರಿ ಚಾರ್ಜಿಂಗ್‌ ಕೇಂದ್ರಗಳಿಗೆ ರಿಯಾಯಿತಿ ಮುಂದುವರೆಸಿದ್ದು, ಪ್ರತಿ ಯುನಿಟ್‌ಗೆ 5 ರು. ನಿಗದಿ ಮಾಡಲಾಗಿದೆ.

ಪ್ರತಿ ಯೂನಿಟ್‌ಗೆ 10 ಪೈಸೆ ಹೆಚ್ಚಳ:

ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಹಾಗೂ ಪುರಸಭೆ ಪ್ರದೇಶಗಳಲ್ಲಿನ ಗೃಹ ಬಳಕೆದಾರರು, ಸರ್ಕಾರಿ, ಧರ್ಮಾರ್ಥ ಸಂಸ್ಥೆಗಳು ನಡೆಸುವ ವಿದ್ಯಾಸಂಸ್ಥೆ, ಆಸ್ಪತ್ರೆಗಳ ವಿದ್ಯುತ್‌ ಶಕ್ತಿ ದರವನ್ನು ಯೂನಿಟ್‌ಗೆ 10 ಪೈಸೆ ಹೆಚ್ಚಳ ಮಾಡಲಾಗಿದೆ. ಇತರೆ ಎಸ್ಕಾಂಗಳ ನಗರ ಪಾಲಿಕೆ ಹಾಗೂ ಪುರಸಭೆ ಪ್ರದೇಶ, ಗ್ರಾಮ ಪಂಚಾಯ್ತಿ ಪ್ರದೇಶಗಳಲ್ಲೂ ಪ್ರತಿ ಯೂನಿಟ್‌ ಬಳಕೆಗೆ 10 ಪೈಸೆಯಂತೆ ಹೆಚ್ಚಳ ಮಾಡಲಾಗಿದೆ.

0-50 ಯೂನಿಟ್‌ ಮಾಸಿಕ ಬಳಕೆ ಸ್ಲ್ಯಾಬ್‌ಗೆ ಪ್ರತಿ ಯೂನಿಟ್‌ಗೆ ಇದ್ದ 4 ರು.ಗಳನ್ನು 4.10 ರು., 51-100 ಯೂನಿಟ್‌ ಬಳಕೆಗೆ 5.45ರು.ಗಳಿಂದ 5.55 ರು., 101-200 ಯೂನಿಟ್‌ಗೆ 7 ರು.ಗಳಿಂದ 7.10 ರು., 200 ಯೂನಿಟ್‌ಗಳಿಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್‌ಗೆ 8.05 ರು. ಇದ್ದ ಶುಲ್ಕವನ್ನು 8.15ರು.ಗೆ ಏರಿಕೆ ಮಾಡಲಾಗಿದೆ.

ಉಳಿದಂತೆ ಬೆಸ್ಕಾಂ ವ್ಯಾಪ್ತಿಯ ಗ್ರಾಮ ಪಂಚಾಯ್ತಿ ಅಡಿಯ ಗೃಹ ಬಳಕೆದಾರರಿಗೆ 0-50 ಯೂನಿಟ್‌ಗೆ 3.90 ರಿಂದ 4 ರು., 51-100 ಯೂನಿಟ್‌ಗೆ 5.15ರಿಂದ 5.25ಕ್ಕೆ, 101-200 ಯೂನಿಟ್‌ಗೆ 6.70 ರು.ಗಳಿಂದ 6.80, 200 ಯೂನಿಟ್‌ ಮೇಲ್ಪಟ್ಟ ಬಳಕೆಗಿದ್ದ 7.55 ರು.ಗಳನ್ನು 7.65ಕ್ಕೆ ಪರಿಷ್ಕರಿಸಲಾಗಿದೆ.

ಏರಿಕೆ ಹೇಗೆ?

ನಗರಗಳು/ಪುರಸಭೆ

ಯೂನಿಟ್‌ ಹಳೇ ದರ   ಪರಿಷ್ಕೃತ
0-50  4 4.10
51-100  5.45 5.55
101-200  7  7.10
200+  8.05   8.15

ಗ್ರಾಮಗಳು

ಯೂನಿಟ್‌ ಹಳೇ ದರ   ಪರಿಷ್ಕೃತ
0-50   3.90 4
51-100  5.15  5.25
101-200  6.70 6.80
200+  7.55  7.65
click me!