ಗ್ರಾಹಕರಿಗೆ ಶುಭ ಸುದ್ದಿ: ಅಡುಗೆ ಎಣ್ಣೆ ಬೆಲೆ ಶೀಘ್ರದಲ್ಲೇ 10 - 12 ರೂ. ಇಳಿಕೆ..!

By BK AshwinFirst Published Aug 6, 2022, 1:57 PM IST
Highlights

ಅಡುಗೆ ಎಣ್ಣೆ ಬೆಲೆ ಜಾಸ್ತಿಯಾಗಿದೆ ಎಂಬ ಬಗ್ಗೆ ನಿಮಗೆ ಆತಂಕ ಹೆಚ್ಚಾಗಿದ್ಯಾ..? ಹಾಗಿದ್ರೆ ನಿಮಗೆ ಇಲ್ಲಿದೆ ಶುಭ ಸುದ್ದಿ. ಶೀಘ್ರದಲ್ಲೇ ಅಡುಗೆ ಎಣ್ಣೆಯ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. 

ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇಲ್ಲೊಂದು ಶುಭ ಸುದ್ದಿ ಇದೆ. ಶೀಘ್ರದಲ್ಲೇ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ಅಡುಗೆ ಎಣ್ಣೆ (Edible Oil) ಬೆಲೆ ಇಳಿಕೆಯಾಗಿತ್ತು. ಈಗ ಮತ್ತಷ್ಟು ಇಳಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು (Official) ಹೇಳಿಕೊಂಡಿದ್ದಾರೆ.  

‘’ಜಾಗತಿಕವಾಗಿ ಬೆಲೆ ಕಡಿಮೆಯಾಗಿರುವ ಕಾರಣ ಅಡುಗೆ ಎಣ್ಣೆ ಬೆಲೆಯನ್ನು ಮತ್ತೆ ರೂ. 10 - 12 ರಷ್ಟು ಇಳಿಕೆ ಮಾಡಲು ಅಡುಗೆ ಎಣ್ಣೆಯ ತಯಾರಕರು (Edible Oil Manufacturers) ಒಪ್ಪಿಕೊಂಡಿದ್ದಾರೆ. ನಾವು ಅವರೊಂದಿಗೆ ಉತ್ತಮ ಸಭೆ ನಡೆಸಿದ್ದು, ಅಲ್ಲಿ ನಾವು ಡೇಟಾದೊಂದಿಗೆ ವಿವರವಾದ ಪ್ರಸ್ತುತಿ ಮಾಡಿದ್ದೇವೆ’’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈಗಾಗಲೇ ಒಮ್ಮೆ ಅಡುಗೆ ಎಣ್ಣೆಯ ತಯಾರಕರು ಬೆಲೆ ಕಡಿಮೆ ಮಾಡಿದ್ದರೂ ಜಾಗತಿಕ ಬೆಲೆ ಕಡಿಮೆಯಾಗಿರುವ (Price Down) ಹಿನ್ನೆಲೆ ಮತ್ತಷ್ಟು ಬೆಲೆ ಇಳಿಕೆ ಮಾಡುವ ಅವಕಾಶವಿದೆ ಎಂದು ಸಚಿವಾಲಯ ಅಭಿಪ್ರಾಯ ಪಟ್ಟಿರುವ ಬಗ್ಗೆಯೂ ಆ ಅಧಿಕಾರಿ ಹೇಳಿಕೊಂಡಿದ್ದಾರೆ. 

ಹಬ್ಬಗಳ ಋತು ಶುರು..! ಅಡುಗೆ ಎಣ್ಣೆ ಬೆಲೆಯಲ್ಲಿ 30 ರೂಪಾಯಿ ಇಳಿಕೆ ಮಾಡಿದ ಅದಾನಿ ವಿಲ್ಮರ್‌!

ಭಾರತ ಮೂರಲ್ಲಿ ಎರಡು ಭಾಗದಷ್ಟು ಎಣ್ಣೆಯನ್ನು ಆಮದು (Import) ಮಾಡಿಕೊಳ್ಳುತ್ತದೆ. ಇನ್ನು, ರಷ್ಯಾ - ಉಕ್ರೇನ್‌ ಯುದ್ಧದ ಕಾರಣದಿಂದ ಕೆಲ ತಿಂಗಳುಗಳಿಂದ ಅಡುಗೆ ಎಣ್ಣೆ ಬೆಲೆ ಗಗನಕ್ಕೆ ಮುಟ್ಟಿತ್ತು. ಹಾಗೂ, ಅತಿ ದೊಡ್ಡ ರಫ್ತುದಾರ ಇಂಡೋನೇಷ್ಯಾ ಕೆಲ ಕಾಲ ತಾಳೆ ಎಣ್ಣೆ ರಫ್ತು (Export) ಮಾಡುವುದನ್ನೇ ನಿಲ್ಲಿಸಿದ್ದ ಕಾರಣಕ್ಕೂ ಬೆಲೆ ಹೆಚ್ಚಾಗಿತ್ತು. ಆದರೆ, ಇಂಡೋನೇಷ್ಯಾ ರಫ್ತು ಮಾಡುವುದನ್ನು ಮರು ಆರಂಭಿಸಿದ ಬಳಿಕ ಕಳೆದ 2 ತಿಂಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. 

ಇನ್ನೊಂದೆಡೆ, ಮೇ ತಿಂಗಳಿಂದ ಕೇಂದ್ರ ಸರ್ಕಾರ ಅಡುಗೆ ಎಣ್ಣೆಯ ತಯಾರಕರ ಜತೆ 3 ಬಾರಿ ಸಭೆ ನಡೆಸಿದ್ದು, ಬೆಲೆಗಳನ್ನು ಪರಿಶೀಲಿಸುವ ಬಗ್ಗೆ ಕೇಳಿಕೊಂಡಿತ್ತು. ಜುಲೈ 6 ರಂದು ಸಹ ಕೇಂದ್ರ ಸರ್ಕಾರ ಮತ್ತೆ ಸಬೆ ನಡೆಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಇಳಿಕೆಯಾಗಿರುವ ಹಿನ್ನೆಲೆ ಖಾದ್ಯ ತೈಲದ ಚಿಲ್ಲರೆ ಬೆಲೆ ಇಳಿಕೆ ಮಾಡುವಂತೆಯೂ ಮಾತುಕತೆ ನಡೆಸಿತ್ತು. ಅಲ್ಲದೆ, ಒಂದು ವಾರದಲ್ಲಿ 1 ಅಡುಗೆ ಎಣ್ಣೆಯ ಪ್ಯಾಕೆಟ್‌ ಎಂಆರ್‌ಪಿ ರೂ. 10 ರವರೆಗೆ ಇಳಿಕೆ ಮಾಡುವಂತೆಯೂ ಸೂಚಿಸಿತ್ತು. 

ಭಾರತ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲು ಇಂಡೋನೇಷ್ಯಾ ಹಾಗೂ ಮಲೇಷ್ಯಾ ಮೇಲೆ ಅವಲಂಬಿತವಾಗಿದೆ. ಹಾಗೂ, ಸೂರ್ಯಕಾಂತಿ ಎಣ್ಣೆ ಮತ್ತು ಸೋಯಾಬೀನ್‌ ಎಣ್ಣೆ ಆಮದಿಗೆ ಉಕ್ರೇನ್‌, ಅರ್ಜೆಂಟೀನಾ, ಬ್ರೆಜಿಲ್‌ ಹಾಗೂ ರಷ್ಯಾದ ಮೇಲೆ ಅವಲಂಬನೆ ಹೆಚ್ಚಿದೆ. ವರ್ಷಕ್ಕೆ ಸುಮಾರು 13 ಮಿಲಿಯನ್‌ ಟನ್‌ಗಳಷ್ಟು ಖಾದ್ಯ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಈ ಮಧ್ಯೆ, ಜುಲೈ 29 ರಂದು ತಾಳೆ ಎಣ್ಣೆಯ ಬೆಲೆ ಶೇ. 14 ರಷ್ಟು ಕಡಿಮೆಯಾಗಿದ್ದರೆ, ಸೋಯಾಬೀನ್‌ ಹಾಗೂ ಸೂರ್ಯಕಾಂತಿ ಎಣ್ಣೆಯ ಬೆಲೆ ಶೇ. 4 ರಿಂದ 14 ರಷ್ಟು ಇಳಿಕೆ ಕಂಡಿತ್ತು.

ಖಾದ್ಯ ತೈಲ ತಯಾರಕರು ಜಾಗತಿಕ ಬೆಲೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮತ್ತು ಮೇ ತಿಂಗಳಲ್ಲಿ ಆಮದು ಸುಂಕ ಕಡಿಮೆಯಾದ ಬಳಿಕ ಈಗಾಗಲೇ ಒಮ್ಮೆ ಬೆಲೆಗಳನ್ನು ಕಡಿತಗೊಳಿಸಿದ್ದಾರೆ. ದೇಶದ ಅತಿದೊಡ್ಡ ಖಾದ್ಯ ತೈಲ ಉತ್ಪಾದಕರಾದ ಅದಾನಿ ವಿಲ್ಮಾರ್ ಲಿಮಿಟೆಡ್ ತನ್ನ ಉತ್ಪನ್ನಗಳ ಬೆಲೆಯನ್ನು ₹10 ರಷ್ಟು ಕಡಿತಗೊಳಿಸಿದೆ. 'ಫಾರ್ಚೂನ್' ಬ್ರ್ಯಾಂಡ್‌ನ ಅಡಿಯಲ್ಲಿ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.

Edible Oil: ಖಾದ್ಯ ತೈಲ ಕಂಪನಿಗಳಿಂದ ಶೇ.10-15ರಷ್ಟು ಬೆಲೆ ಕಡಿತ!

ಬೆಲೆಗಳನ್ನು ತಗ್ಗಿಸಲು ಮತ್ತು ಗ್ರಾಹಕರ ಮೇಲಿನ ಹೊರೆಯನ್ನು ತಗ್ಗಿಸಲು, ಕೇಂದ್ರ ಸರ್ಕಾರ 2024 ರವರೆಗೆ ಪ್ರತಿ ವರ್ಷಕ್ಕೆ 20 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಚ್ಚಾ ಸೂರ್ಯಕಾಂತಿ ಮತ್ತು ಸೋಯಾಬೀನ್ ಎಣ್ಣೆಯನ್ನು ಸುಂಕ ರಹಿತ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಮೋದಿ ಸರ್ಕಾರವು ಕಚ್ಚಾ ತಾಳೆ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆಯ ಆಮದು ಬೆಲೆಗಳನ್ನು ಸಹ ಕಡಿಮೆ ಮಾಡಿದೆ.

click me!