ಇತ್ತೀಚಿನ ದಿನಗಳಲ್ಲಿ ಬೇಗ ನಿವೃತ್ತಿಯಾಗಬೇಕು ಎಂಬ ಯೋಚನೆ ಹೊಂದಿರೋರ ಸಂಖ್ಯೆ ಹೆಚ್ಚುತ್ತಿದೆ. ಆದಷ್ಟು ಬೇಗ ಒಂದಿಷ್ಟು ಹಣ ಗಳಿಸಿ ಆ ನಂತರ ನೆಮ್ಮದಿಯಿಂದ ಬದುಕಬೇಕು ಎಂಬ ಟ್ರೆಂಡ್ ಹೆಚ್ಚುತ್ತಿದೆ. ಹಾಗಾದ್ರೆ ನಿವೃತ್ತಿ ಬದುಕಿಗೆ ಹಣ ಕೂಡಿಡೋದು ಹೇಗೆ? ಇಲ್ಲಿದೆ ಟಿಪ್ಸ್.
Business Desk: ನಿವೃತ್ತಿ ಜೀವನವನ್ನು ನೆಮ್ಮದಿಯಿಂದ ಕಳೆಯಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಇದು ಸಹಜ ಕೂಡ. ನಿವೃತ್ತಿ ನಂತರದ ಬದುಕಿನಲ್ಲಿ ಯಾವುದೇ ಹಣಕಾಸಿನ ಮುಗ್ಗಟ್ಟು ಎದುರಾಗಬಾರದು. ಮನಸ್ಸು ಬಯಸಿದ ಕಡೆ ಸುತ್ತಾಡಬೇಕು. ಯಾವುದೇ ತಲೆಬಿಸಿಗಳಿಲ್ಲದೆ ಆರಾಮವಾಗಿ ಜೀವನದ ಇಳಿಸಂಜೆ ಅನುಭವಿಸಬೇಕು ಎಂಬುದು ಅನೇಕರ ಕನಸು. ಆದರೆ, ನಿವೃತ್ತಿ ಬದುಕು ನೆಮ್ಮದಿಯಿಂದ ಕೂಡಿರಸಬೇಕು ಅಂದರೆ ಅದಕ್ಕಾಗಿ ನಾವು ದೊಡ್ಡ ಪ್ರಮಾಣದಲ್ಲಿ ಉಳಿತಾಯ ಕೂಡ ಮಾಡೋದು ಅಗತ್ಯ. ನಿವೃತ್ತಿಗೆ ಇನ್ನೂ ಅನೇಕ ವರ್ಷಗಳಿವೆ ಎಂದು ದುಡಿದ ಹಣವನ್ನೆಲ್ಲ ಖಾಲಿ ಮಾಡಿಕೊಂಡು ಕನಸು ಕಂಡರೆ ಏನು ಪ್ರಯೋಜನ? ಅದಕ್ಕಾಗಿ ಸೂಕ್ತ ಹೂಡಿಕೆ ಮಾಡೋದು ಕೂಡ ಅತೀಮುಖ್ಯ. ಯಾವುದೇ ಹೊರೆಯಾಗದಂತೆ ನಿವೃತ್ತಿ ಜೀವನಕ್ಕೆ ಕೂಡಿಡೋದು ಹೇಗೆ ಎಂಬ ಪ್ರಶ್ನೆ ಅನೇಕರನ್ನು ಕಾಡಬಹುದು. ತಿಂಗಳ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಂಡು ಉಳಿತಾಯ ಮಾಡೋದು ಅಷ್ಟು ಸುಲಭದ ಕೆಲಸವೇನಲ್ಲ. ಆದರೆ, ಸೂಕ್ತ ಯೋಜನೆಯಿದ್ದರೆ ಇದು ಕಷ್ಟದ ಕೆಲಸವೇನೂ ಅಲ್ಲ. ಹಾಗಾದ್ರೆ ಬೇಗ ನಿವೃತ್ತಿಯಾಗಿ ನೆಮ್ಮದಿಯ ಜೀವನ ನಡೆಸಬೇಕೆಂದ್ರೆ ನೀವು ಕೆಲವು ಹೂಡಿಕೆ ಸೂತ್ರಗಳನ್ನು ಅನುಸರಿಸೋದು ಅಗತ್ಯ.
1.ನಿವೃತ್ತಿ ಬಜೆಟ್ ಸಿದ್ಧಪಡಿಸಿ: ಮೊದಲಿಗೆ ನಿಮ್ಮ ನಿವೃತ್ತಿ ಜೀವನಕ್ಕೆ ಎಷ್ಟು ಹಣದ ಅಗತ್ಯವಿದೆ ಎಂಬುದನ್ನು ತಿಳಿಯೋದು ಅಗತ್ಯ. ಇದನ್ನು ನಿಖರವಾಗಿ ಲೆಕ್ಕಾಚಾರ ಹಾಕಲು ಖಂಡಿತಾ ಸಾಧ್ಯವಿಲ್ಲ. ಆದರೆ, ಅಂದಾಜು ವೆಚ್ಚವನ್ನು ಲೆಕ್ಕ ಹಾಕಬಹುದು. ಮನೆ, ಔಷಧ ವೆಚ್ಚ, ನಿತ್ಯದ ವೆಚ್ಚಗಳು, ಓಡಾಟದ ಖರ್ಚು ಹಾಗೂ ಪ್ರವಾಸ ಅಥವಾ ಮನೋರಂಜನೆ ನೀಡುವ ಕಾರ್ಯಗಳಿಗೆ ಎಷ್ಟು ಹಣ ಅಗತ್ಯವಿದೆ ಎಂಬುದನ್ನು ಲೆಕ್ಕ ಹಾಕಿ. ಆ ಬಳಿಕ ಪ್ರತಿ ತಿಂಗಳು ನೀವು ಎಷ್ಟು ಹಣ ಉಳಿತಾಯ ಮಾಡಿದರೆ ಅಷ್ಟು ಮೊತ್ತದ ಹಣವನ್ನು ಕೂಡಿಡಬಹುದು ಎಂಬುದರ ಲೆಕ್ಕಾಚಾರ ಮಾಡಿ.
ಶ್ರೀಮಂತರಾದ್ರೂ ಬೇಕಾಬಿಟ್ಟಿ ಖರ್ಚು ಮಾಡೋಲ್ಲ, ಇವನ್ನು ಮಾಡ್ಬೇಡಿ ಅಂತಾರೆ!
2.ಎಲ್ಲಿ ಹೂಡಿಕೆ ಮಾಡೋದು?: ನಿವೃತ್ತಿ ಬಜೆಟ್ ಸಿದ್ಧಪಡಿಸಿದ ಬಳಿಕ ಪ್ರತಿ ತಿಂಗಳು ನೀವು ಎಷ್ಟು ಹಣವನ್ನು ಹೂಡಿಕೆ ಮಾಡಲು ಬಯಸಿದ್ದೀರೋ ಅದನ್ನು ಎಲ್ಲಿ ಹೂಡಿಕೆ ಮಾಡೋದು ಎಂಬ ಬಗ್ಗೆ ಯೋಚಿಸಿ. ಎಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ ಸಿಗುತ್ತದೆ ಎಂಬುದನ್ನು ಲೆಕ್ಕ ಹಾಕಿ. ನಿವೃತ್ತಿ ಜೀವನಕ್ಕಾಗಿ ಈ ಕೆಳಗಿನ ಹೂಡಿಕೆ ವಿಧಾನಗಳನ್ನು ನೀವು ಆಯ್ಕೆ ಮಾಡಬಹುದು.
*ಷೇರು ಮಾರುಕಟ್ಟೆ: ನಿಮ್ಮ ನಿವೃತ್ತಿ ಜೀವನಕ್ಕೆ ತ್ವರಿತವಾಗಿ ಉಳಿತಾಯ ಮಾಡಲು ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಉತ್ತಮ ಆಯ್ಕೆ ಎಂದು ಹೇಳಬಹುದು. ವೈಯಕ್ತಿಕ ಷೇರುಗಳಲ್ಲಿ ಹೂಡಿಕೆ ಮಾಡಬಹುದು ಅಥವಾ ಇಟಿಎಫ್, ಈಕ್ವಿಟಿ ಅಥವಾ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಸಾಮಾನ್ಯ. ದೀರ್ಘಾವಧಿಯ ಹೂಡಿಕೆಗಳು ಹೆಚ್ಚಾಗಿ ಲಾಭ ತರುತ್ತವೆ. ಅಪಾಯವನ್ನು ತಗ್ಗಿಸಿಕೊಳ್ಳಲು ಒಂದೇ ಕಂಪನಿಯ ಷೇರುಗಳ ಬದಲಿಗೆ ಅನೇಕ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡೋದು ಉತ್ತಮ ನಿರ್ಧಾರ.
*ತೆರಿಗೆ ಪ್ರಯೋಜನ ಹೊಂದಿರುವ ಹೂಡಿಕೆ: ಕೆಲವೊಂದು ಹೂಡಿಕೆ ಅಥವಾ ಉಳಿತಾಯ ಯೋಜನೆಗಳು ತೆರಿಗೆ ಪ್ರಯೋಜನವನ್ನು ಹೊಂದಿರುತ್ತವೆ. ಇನ್ನು ಕೆಲವೊಂದು ಯೋಜನೆಗಳನ್ನು ನಿವೃತ್ತಿಗಾಗಿಯೇ ರೂಪಿಸಲಾಗಿರುತ್ತದೆ. ಇಂಥ ಯೋಜನೆಗಳಲ್ಲಿ ಹೂಡಿಕೆ ಮಾಡೋದ್ರಿಂದ ತೆರಿಗೆ ಹಣವನ್ನು ಕೂಡ ಉಳಿಸಬಹುದು.
ಒಂದೇ ದಿನದಲ್ಲಿ ಈ ಷೇರಿನಿಂದ 15 ಕೋಟಿಗೂ ಹೆಚ್ಚು ಲಾಭ ಗಳಿಸಿದ ಆಶಿಶ್ ಕಚೋಲಿಯಾ: ನಿಮ್ಮ ಬಳಿಯೂ ಇದ್ಯಾ ಈ ಸ್ಟಾಕ್?*ವರ್ಷಾಶನ ಹೊಂದಿರುವ ವಿಮಾ ಯೋಜನೆಗಳು: ವರ್ಷಾಶನ ಹೊಂದಿರುವ ಅನೇಕ ವಿಮಾ ಯೋಜನೆಗಳು ಲಭ್ಯವಿವೆ. ಇವುಗಳಲ್ಲಿ ಹೂಡಿಕೆ ಮಾಡೋದ್ರಿಂದ ನಿವೃತ್ತಿ ನಂತರ ಪ್ರತಿ ತಿಂಗಳು ಅಥವಾ ಅರ್ಧವಾರ್ಷಿಕ ಅಥವಾ ವರ್ಷಕ್ಕೊಮ್ಮೆ ಹಣವನ್ನು ಪಡೆಯಬಹುದು. ಎಲ್ಐಷಿ, ಎಚ್ ಡಿಎಫ್ ಸಿ ಸೇರಿದಂತೆ ಅನೇಕ ವಿಮಾ ಸಂಸ್ಥೆಗಳು ಇಂಥ ಯೋಜನೆಗಳನ್ನು ಹೊಂದಿವೆ.
*ಆರೋಗ್ಯ ವಿಮೆ: ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತೆ. ಹೀಗಾಗಿ ಆರೋಗ್ಯ ವಿಮೆ ಖರೀದಿಸೋದು ಅಗತ್ಯ. ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳ ನಿರ್ವಹಣೆಗೆ ಆರೋಗ್ಯ ವಿಮೆ ಅತ್ಯಗತ್ಯ. ದುಬಾರಿ ವೈದ್ಯಕೀಯ ವೆಚ್ಚಗಳ ಹೊರೆಯನ್ನು ಇದು ತಗ್ಗಿಸುತ್ತದೆ.
3.ಆದಾಯ ಹೆಚ್ಚಿಸಿಕೊಳ್ಳಿ: ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ. ಇದಕ್ಕಿರುವ ಮಾರ್ಗಗಳ ಬಗ್ಗೆ ಯೋಚಿಸಿ. ನಿಮ್ಮ ವೇತನದ ಜೊತೆಗೆ ಇತರ ಆದಾಯದ ಮೂಲಗಳನ್ನು ಹುಡುಕಿ. ಆದಾಯ ಹೆಚ್ಚಿದಾಗ ನಿಮ್ಮ ಉಳಿತಾಯ ಹಾಗೂ ಹೂಡಿಕೆ ಮೊತ್ತವನ್ನು ಕೂಡ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.
4.ಆದಷ್ಟು ಬೇಗ ಸಾಲ ತೀರಿ: ನೀವು ಸಾಲ ಹೊಂದಿದ್ದರೆ ಆದಷ್ಟು ಬೇಗ ಅದನ್ನು ತೀರಿಸಲು ಪ್ರಯತ್ನಿಸಿ. ನೀವು ಎಷ್ಟು ಬೇಗ ಸಾಲದಿಂದ ಮುಕ್ತರಾಗುತ್ತೀರೋ ಅಷ್ಟು ಒಳ್ಳೆಯದು. ಇದರಿಂದ ನಿಮ್ಮ ನಿವೃತ್ತಿ ಬದುಕಿಗೆ ಹೆಚ್ಚಿನ ಉಳಿತಾಯ ಮಾಡಬಹುದು.
5.ತುರ್ತು ನಿಧಿ ಇರಲಿ: ಅದೆಷ್ಟೇ ಹೂಡಿಕೆ ಅಥವಾ ಉಳಿತಾಯ ಮಾಡುತ್ತಿದ್ದರೂ ಅನಿರೀಕ್ಷಿತ ವೆಚ್ಚಗಳ ನಿರ್ವಹಣೆಗೆ ತುರ್ತು ನಿಧಿಯೊಂದನ್ನು ನಿರ್ವಹಣೆ ಮಾಡೋದು ಅಗತ್ಯ. ಹೀಗಾಗಿ ಒಂದಿಷ್ಟು ಹಣವನ್ನು ಇದಕ್ಕಾಗಿಯೇ ಎತ್ತಿಡಿ. ಈ ಹಣ ಯಾವುದೇ ಸಂದರ್ಭದಲ್ಲೂ ನಿಮಗೆ ಸುಲಭವಾಗಿ ಲಭ್ಯವಾಗಬೇಕು.