ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ಶುಲ್ಕ: ದಾವಣಗೆರೆಯ Zudio ಮಳಿಗೆಗೆ ₹ 30,000 ದಂಡ

Published : Aug 13, 2026, 07:22 AM IST
Zudio

ಸಾರಾಂಶ

ದಾವಣಗೆರೆಯಲ್ಲಿ, ಗ್ರಾಹಕರಿಂದ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿಯಾಗಿ ₹10 ಶುಲ್ಕ ವಿಧಿಸಿದ್ದಕ್ಕಾಗಿ ಜುಡಿಯೊ ಮಳಿಗೆಗೆ ಜಿಲ್ಲಾ ಗ್ರಾಹಕರ ಆಯೋಗ ₹30,000 ದಂಡ ವಿಧಿಸಿದೆ. ಕ್ಯಾರಿ ಬ್ಯಾಗ್‌ಗೆ ಶುಲ್ಕ ವಸೂಲಿ ಮಾಡುವುದು ಅನ್ಯಾಯದ ವ್ಯಾಪಾರ ಮತ್ತು ಸೇವಾ ನ್ಯೂನತೆ ಎಂದು ಆಯೋಗ ತೀರ್ಪು ನೀಡಿದ್ದು, ಈ ಆದೇಶ ಎಲ್ಲಾ ಮಳಿಗೆಗಳಿಗೂ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

ದಾವಣಗೆರೆ: ಗ್ರಾಹಕರಿಂದ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿಯಾಗಿ ದಂಡ ಅಥವಾ ಶುಲ್ಕ ವಸೂಲಿ ಮಾಡುವುದು ಅನ್ಯಾಯದ ವ್ಯಾಪಾರ ಹಾಗೂ ಸೇವೆಯಲ್ಲಾದ ನಿರ್ಲಕ್ಷ್ಯ ಎಂದು ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ.

ಪಿ.ಜೆ. ಬಡಾವಣೆಯ ಎವಿಕೆ ರಸ್ತೆಯ ಜುಡಿಯೊ (ತೋಶಾನಿ ಎಂಪೋರಿಯಂ ಅವೆನ್ಯೂ) ಮಳಿಗೆಯಲ್ಲಿ ಬಟ್ಟೆ ಖರೀದಿಸಿದ್ದ ದೂರುದಾರ ರಾಜೇಂದ್ರ ಎಂಬವರಿಂದ ಕ್ಯಾರಿ ಬ್ಯಾಗ್‌ಗಾಗಿ ಹೆಚ್ಚುವರಿಯಾಗಿ ₹10 ವಸೂಲಿ ಮಾಡಿದ್ದಕ್ಕಾಗಿ ಆಯೋಗವು ಈ ಆದೇಶ ಹೊರಡಿಸಿದೆ.

ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು

ಜುಡಿಯೊ ಮಳಿಗೆಯಲ್ಲಿ ಬಟ್ಟೆಗಳನ್ನು ಖರೀದಿಸಿದ ರಾಜೇಂದ್ರ ಅವರಿಂದ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿಯಾಗಿ ₹10 ಶುಲ್ಕ ಪಡೆಯಲಾಗಿತ್ತು. ಇದರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರು ಪರಿಶೀಲಿಸಿದ ಆಯೋಗವು, ಗ್ರಾಹಕರಿಂದ ಕ್ಯಾರಿ ಬ್ಯಾಗ್ ಶುಲ್ಕ ವಸೂಲಿ ಮಾಡುವುದು ಕಾನೂನುಬಾಹಿರ ಹಾಗೂ ಸೇವಾ ಲೋಪ ಎಂದು ಸ್ಪಷ್ಟಪಡಿಸಿದೆ.

ಸೇವೆಯಲ್ಲಾದ ನಿರ್ಲಕ್ಷ್ಯ, ಅನ್ಯಾಯದ ವ್ಯಾಪಾರ ಮತ್ತು ದೂರಿನ ಖರ್ಚು ಸೇರಿ ದೂರುದಾರರಿಗೆ ಒಟ್ಟು ₹10,000 ಪರಿಹಾರ ಹಾಗೂ ಪಾವತಿಸಿದ್ದ ₹10 ಹಿಂತಿರುಗಿಸುವಂತೆ ಜುಡಿಯೊ ಸಂಸ್ಥೆಗೆ ಆಯೋಗ ಆದೇಶಿಸಿದೆ. ಇದರೊಂದಿಗೆ ಗ್ರಾಹಕ ಕಾನೂನು ನೆರವು ಖಾತೆಗೆ ₹20,000 ಜಮಾ ಮಾಡಲು ಸಹ ಸೂಚಿಸಿದೆ. ಒಟ್ಟು ₹30,000 ಮೊತ್ತವನ್ನು ಆದೇಶದ ದಿನಾಂಕದಿಂದ ಒಂದು ತಿಂಗಳೊಳಗೆ ಪಾವತಿಸಲು ಆದೇಶಿಸಲಾಗಿದೆ.

ಎಲ್ಲಾ ಮಳಿಗೆಗಳಿಗೂ ಆದೇಶ ಅನ್ವಯ:

ಉತ್ಪನ್ನಗಳನ್ನು ಖರೀದಿಸುವ ಎಲ್ಲಾ ಗ್ರಾಹಕರಿಗೆ ಉಚಿತವಾಗಿ ಕ್ಯಾರಿ ಬ್ಯಾಗ್‌ಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಈ ಆದೇಶವು ಕೇವಲ ಸದರಿ ಮಳಿಗೆಗೆ ಮಾತ್ರವಲ್ಲದೆ ಎಲ್ಲಾ ಸಗಟು ವ್ಯಾಪಾರಿಗಳು, ರಿಟೇಲ್ ಮಾರಾಟಗಾರರು, ದೊಡ್ಡ ಮಾಲ್‌ಗಳು, ಮೋರ್, ರಿಲಯನ್ಸ್, ಟ್ರೆಂಡ್ಸ್ ಹಾಗೂ ಇನ್ನಿತರ ಎಲ್ಲಾ ಮಾರಾಟ ಮಳಿಗೆಗಳಿಗೂ ಅನ್ವಯಿಸುತ್ತದೆ ಎಂದು ಆಯೋಗ ತಿಳಿಸಿದೆ.

ಈ ಆದೇಶವನ್ನು ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷೆ ಎಚ್.ಎನ್. ಮೀನಾ, ಸದಸ್ಯ ಸಿ.ಎಸ್. ತ್ಯಾಗರಾಜನ್ ಅವರನ್ನು ಒಳಗೊಂಡ ಪೀಠವು ಹೊರಡಿಸಿದೆ ಎಂದು ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಚ್ಚರಿಯ ಬೆಳವಣಿಗೆ: ZUDIO ಶಾಪಿಂಗ್‌ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು! ಕಾರಣ ಏನು?

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಪ್ರಧಾನಿ ಮೋದಿಗೆ ಸಿಕ್ಕ ಉಡುಗೊರೆಗಳ ಹರಾಜಿನಿಂದ ಹರಿದುಬಂತು ಕೋಟಿ ಕೋಟಿ ಹಣ!
ಟ್ರೈನರ್ ಆಗಿ ಬಂದು ಅಧ್ಯಕ್ಷನಾಗುವವರೆಗೆ ಚಂದ್ರಶೇಖರನ್ ಪಯಣ, ಟಾಟಾ ಸನ್ಸ್‌ಗೆ ಹೊಸ ದಿಕ್ಸೂಚಿ ನೀಡಿದ ನಾಯಕ ಬೇಡವಾದ್ನಾ?