ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಹೈಕೋರ್ಟ್ ಬ್ಯಾನ್!

By Web DeskFirst Published Dec 13, 2018, 3:34 PM IST
Highlights

ಇ - ಫಾರ್ಮಾಸಿಸ್ಟ್‌ಗಳು ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ದೆಹಲಿ ಹೈಕೋರ್ಟ್ ವಿರೋಧ| ದೇಶಾದ್ಯಂತ ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ತಡೆ ನೀಡಿ ದೆಹಲಿ ಹೈಕೋರ್ಟ್ ಆದೇಶ| ತಕ್ಷಣದಿಂದಲೇ ಈ ಆದೇಶ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ| ಇಂಟರ್‌ನೆಟ್‌ನಲ್ಲಿ ಸರಿಯಾದ ನಿಯಂತ್ರಣವಿಲ್ಲದೆ ಲಕ್ಷಾಂತರ ಔಷಧಿಗಳನ್ನು ಮಾರಾಟ| ಆನ್‌ಲೈನ್‌ನಲ್ಲಿ ಮಾರಾಟಕ್ಕೆ ನಿರ್ಬಂಧ ವಿಧಿಸಬೇಕೆಂದು ವೈದ್ಯ ಜಹೀರ್ ಅಹ್ಮದ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ನವದೆಹಲಿ(ಡಿ.13): ಇ - ಫಾರ್ಮಾಸಿಸ್ಟ್‌ಗಳು ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದನ್ನು ದೇಶಾದ್ಯಂತ ಬ್ಯಾನ್‌ ಮಾಡಬೇಕೆಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ತಕ್ಷಣದಿಂದಲೇ ಈ ಆದೇಶ ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. 

ಪ್ರತಿದಿನ ಇಂಟರ್‌ನೆಟ್‌ನಲ್ಲಿ ಸರಿಯಾದ ನಿಯಂತ್ರಣವಿಲ್ಲದೆ ಲಕ್ಷಾಂತರ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ರೋಗಿಗಳಿಗೆ ಹಾಗೂ ವೈದ್ಯರಿಗೂ ಸಮಾನವಾದ ಅಪಾಯವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 

ಡ್ರಗ್‌ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ರಾಜ್ಯದ ಎಲ್ಲ ಔ‍ಷಧ ನಿಯಂತ್ರಣಕಾರರಿಗೆ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯನ್ನು ಕಾಪಾಡುವಂತೆ, ಆನ್‌ಲೈನ್‌ನಲ್ಲಿ ಮಾರಾಟಕ್ಕೆ ನಿರ್ಬಂಧ ವಿಧಿಸಬೇಕೆಂದು 2015ರಲ್ಲೇ ನಿರ್ದೇಶನ ನೀಡಿದ್ದರೂ ಆನ್‌ಲೈನ್‌ನಲ್ಲಿ ಲಕ್ಷಾಂತರ ಔಷಧಗಳು ಮಾರಾಟವಾಗುತ್ತಿದೆ ಎಂದು ಆರೋಪಿಸಿ ದೆಹಲಿ ಮೂಲದ ಚರ್ಮರೋಗ ವೈದ್ಯ ಜಹೀರ್ ಅಹ್ಮದ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 

1940ರ ಔಷಧ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ ಹಾಗೂ 1948ರ ಫಾರ್ಮಸಿ ಕಾಯ್ದೆಯಡಿ ಔಷಧಗಳ ಆನ್‌ಲೈನ್‌ ಮಾರಾಟಕ್ಕೆ ಅವಕಾಶವಿಲ್ಲ ಎಂದು ಅಹ್ಮದ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾಯಮೂರ್ತಿ ವಿ.ಕೆ.ರಾವ್ ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದನ್ನು ದೇಶಾದ್ಯಂತ ಬ್ಯಾನ್‌ ಮಾಡಬೇಕೆಂದು ತೀರ್ಪು ನೀಡಿದ್ದಾರೆ.

click me!