ಮುಂಬೈ (ಸೆ.23): ಆರ್ಥಿಕ ಸಂಕಷ್ಟದಲ್ಲಿರುವ ಕರ್ನಾಟಕದ 5 ಸೇರಿದಂತೆ ದೇಶದ 21 ಸಹಕಾರ ಬ್ಯಾಂಕ್‌ಗಳ ಗ್ರಾಹಕರಿಗೊಂದು ಸಿಹಿಸುದ್ದಿ. ಸಂಸತ್ತಿನಲ್ಲಿ ಕಳೆದ ತಿಂಗಳು ಅಂಗೀಕರಿಸಿದ್ದ ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾರ್ಪೊರೇಷನ್ (ತಿದ್ದುಪಡಿ) ಮಸೂದೆ 2021ರ ಅನ್ವಯ, ಈ ಬ್ಯಾಂಕ್‌ಗಳ (Bank) ಠೇವಣಿದಾರರಿಗೆ ಶೀಘ್ರವೇ 5 ಲಕ್ಷ ರು. ವರೆಗೆ ಹಣ ಮರಳಿಸಲು ಅನುವಾಗುವಂತೆ, ಠೇವಣಿದಾರರ ಪಟ್ಟಿ ಸಿದ್ಧಪಡಿಸಲು ಆರ್‌ಬಿಐನ (RBI) ಅಂಗ ಸಂಸ್ಥೆಯಾದ ಡಿಐಸಿಜಿಐ (DICGI) ಸೂಚಿಸಿದೆ.
ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಸೇರಿದಂತೆ ರಾಜ್ಯದ 5 ಬ್ಯಾಂಕ್ ಸೇರಿವೆ. ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ ಮಸೂದೆ ಅನ್ವಯ, ಸಂಕಷ್ಟದಲ್ಲಿರುವ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿರ್ಬಂಧ ಹೇರಿದ 90 ದಿನಗಳ ಒಳಗಾಗಿ ಎಲ್ಲಾ ಗ್ರಾಹಕರಿಗೂ ಗರಿಷ್ಠ 5 ಲಕ್ಷ ರು. ವರೆಗೂ ಹಣ ಹಿಂದಕ್ಕೆ ಪಡೆಯಲು ಅವಕಾಶ ಸಿಗಲಿದೆ. ಆರ್ಥಿಕ ಅವ್ಯಹಾರಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬ್ಯಾಂಕಿನ ವ್ಯವಹಾರಗಳ ಮೇಲೆ ಆರ್‌ಬಿಐ ನಿರ್ಬಂಧಗಳನ್ನು ಹೇರಿತ್ತು.
ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿ ಹಣ ಕಳೆದುಕೊಂಡ ಠೇವಣಿದಾರರಿಗೆ ಗುಡ್ ನ್ಯೂಸ್
ಹಣ ಮರಳಿಸಲು ಮುಂದಾಗಿದ್ದ ಸಕ್ಷಮ ಪ್ರಾಧಿಕಾರ
ಹನ್ನೊಂದು ವರ್ಷದ ಅವಧಿಯಲ್ಲಿ ಬೆಂಗಳೂರಿನ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಸುಮಾರು 923 ಕೋಟಿ ರು. ನಷ್ಟು ಅಕ್ರಮ ನಡೆದಿದ್ದು, ಬ್ಯಾಂಕಿನಲ್ಲಿ 28 ಮಂದಿ ಆರೋಪಿಗಳಿಂದ 1050 ಕೋಟಿ ಆಸ್ತಿ ಜಪ್ತಿ ಮಾಡಲಾಗಿತ್ತು. ಸರ್ಕಾರದಿಂದ ರಚನೆಯಾಗಿದ್ದ ಸಕ್ಷಮ ಪ್ರಾಧಿಕಾರ ಈ ಆಸ್ತಿಯನ್ನು ಹರಾಜು ಹಾಕಿ ಗ್ರಾಹಕರಿಗೆ ಹಣ ಮರಳಿಸಲು ಮುಂದಾಗಿತ್ತು.
ಬ್ಯಾಂಕ್ ಸಮಸ್ಯೆ: ತೇಜಸ್ವಿ ಭಾಷಣಕ್ಕೆ ನಿರ್ಮಲಾ ಮೆಚ್ಚುಗೆ!
28 ಜನರ ವಿರುದ್ಧ ಆರೋಪ ಪಟ್ಟಿ
ಈ ಬ್ಯಾಂಕ್‌ನಲ್ಲಿ 2009ರಿಂದ 2020ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರ ಕುರಿತು ಶೋಧಿಸಿದ್ದ ಸಿಐಡಿ (CID), ಈಗ ವರ್ಷವಾರು ಲೆಕ್ಕಪರಿಶೋಧನೆ ನಡೆಸಿ ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಲು ನಿರ್ಧರಿಸಿತ್ತು. ಅಂತೆಯೇ 2009-10ನೇ ಸಾಲಿನಲ್ಲಿ 60 ರು. ಕೋಟಿ ಅಕ್ರಮ ನಡೆದಿದೆ ಎಂದು ಬ್ಯಾಂಕ್‌ನ ಮಾಜಿ ಅಧ್ಯಕ್ಷ ರಾಮಕೃಷ್ಣಯ್ಯ ಸೇರಿದಂತೆ 28 ಜನ ಆರೋಪಿಗಳ ವಿರುದ್ಧ ಸಿಐಡಿ ವಿಶೇಷ ನ್ಯಾಯಾಲಯಕ್ಕೆ ಮೊದಲ ಹಂತದ ಆರೋಪ ಪಟ್ಟಿಯನ್ನು ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.