ಅದಾನಿ ಸಮೂಹದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ;ಎಸ್ ಬಿಐ, ಎಲ್ಐಸಿ ಹೂಡಿಕೆ ತನಿಖೆಗೂ ಮನವಿ

Published : Feb 14, 2023, 05:33 PM ISTUpdated : Feb 14, 2023, 05:34 PM IST
ಅದಾನಿ ಸಮೂಹದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ;ಎಸ್ ಬಿಐ, ಎಲ್ಐಸಿ ಹೂಡಿಕೆ ತನಿಖೆಗೂ ಮನವಿ

ಸಾರಾಂಶ

ಅದಾನಿ ಸಮೂಹದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಇಂದು ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಮಧ್ಯ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ. ಜಯಾ ಠಾಕೂರ್ ಈ ಅರ್ಜಿ ಸಲ್ಲಿಸಿದ್ದು, ಅದಾನಿ ಸಮೂಹದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಹಾಗೆಯೇ ಅದಾನಿ ಕಂಪನಿಗಳಲ್ಲಿ ಎಲ್ಐಸಿ ಹಾಗೂ ಎಸ್ ಬಿಐ ಮಾಡಿರುವ ಹೂಡಿಕೆ ಬಗ್ಗೆಯೂ ತನಿಖೆ ನಡೆಸುವಂತೆ ಕೋರಿದ್ದಾರೆ.   

ನವದೆಹಲಿ (ಫೆ.14): ಈಗಾಗಲೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಅದಾನಿ ಸಮೂಹ ಸಂಸ್ಥೆಗಳಿಗೆ ಒಂದರ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ಇದೀಗ ಅದಾನಿ ಸಮೂಹದ ಕಂಪನಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಗೆ ಕಾಂಗ್ರೆಸ್  ಅರ್ಜಿ ಸಲ್ಲಿಸಿದೆ. ಹಾಗೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಹಾಗೂ ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ಅದಾನಿ ಷೇರುಗಳಲ್ಲಿ ಅಧಿಕ ಬೆಲೆಗೆ ಹೂಡಿಕೆ ಮಾಡಿರುವ ನಿರ್ಧಾರವನ್ನು ಪ್ರಶ್ನಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ. ಮಧ್ಯ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ. ಜಯಾ ಠಾಕೂರ್ ಈ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅದಾನಿ ಎಂಟರ್ ಪ್ರೈಸಸ್ ಷೇರುಗಳ ಬೆಲೆ ಮಾರುಕಟ್ಟೆಯಲ್ಲಿ 1,600ರೂ. ಹಾಗೂ 1,800ರೂ. ನಡುವೆ ಇರುವಾಗ ಎಲ್ ಐಸಿ ಹಾಗೂ ಎಸ್ ಬಿಐ ಪ್ರತಿ ಷೇರಿಗೆ 3,200ರೂ. ದರದಲ್ಲಿ ಹೂಡಿಕೆ ಮಾಡಿರುವ ವಿಚಾರವನ್ನು ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಹಿಂಡನ್ ಬರ್ಗ್ ವರದಿ ಬೆನ್ನಲ್ಲೇ ಅದಾನಿ ಸಮೂಹ ಸಂಸ್ಥೆ ವಿರುದ್ಧ ಈ ವರ್ಷ ನ್ಯಾಯಾಲಯಕ್ಕೆ  ಸಲ್ಲಿಕೆಯಾಗಿರುವ ಮೂರನೇ ಅರ್ಜಿ ಇದಾಗಿದೆ. ಜನವರಿ 24ರಂದು ಅಮೆರಿಕ ಮೂಲದ ಹಿಂಡನ್ ಬರ್ಗ್ ತನ್ನ 100 ಪುಟಗಳ ವರದಿಯಲ್ಲಿ ಅದಾನಿ ಕಂಪನಿಗಳ ವಿರುದ್ಧ ವಂಚನೆ ಆರೋಪ ಮಾಡಿತ್ತು. ಇದಾದ ಬಳಿಕ ಅದಾನಿ ಸಮೂಹದ ಕಂಪನಿಗಳ ಷೇರುಗಳು ತೀವ್ರ ಕುಸಿತ ಅನುಭವಿಸಿವೆ.  ಗೌತಮ್ ಅದಾನಿ 120 ಬಿಲಿಯನ್‌ ಡಾಲರ್‌ಗಿಂತಲೂ ಅಧಿಕ ನಷ್ಟ ಅನುಭವಿಸಿದ್ದಾರೆ.

ವಿವಿಧ ಕಾನೂನುಗಳ ಅಡಿಯಲ್ಲಿ ಅದಾನಿ ಸಮೂಹದ ಕಂಪನಿಗಳ ವಿಚಾರಣೆ ನಡೆಸುವಂತೆ ಅರ್ಜಿಯಲ್ಲಿ ಕೋರಿರುವ ಅರ್ಜಿದಾರರು, ದಾವೆಯಲ್ಲಿಅದಾನಿ ಸಮೂಹದ ಹೊರತಾಗಿ  ಯೂನಿಯನ್ ಆಫ್ ಇಂಡಿಯಾ, ಕೇಂದ್ರ ಗೃಹ ಸಚಿವಾಲಯ, ಕೇಂದ್ರ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ), ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT),ಕಂದಾಯ ಗುಪ್ತಚರ ನಿರ್ದೇಶನಾಲಯ (DRI),ಮಾದಕ ದ್ರವ್ಯ ನಿಯಂತ್ರಣ ದಳ (NCB),ಸೆಕ್ಯುರಿಟೀಸ್ ಆಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI),ಭಾರತೀಯ ರಿಸರ್ವ್ ಬ್ಯಾಂಕ್ (RBI),ಗಂಭೀರ ವಂಚನೆ ತನಿಖಾ ಕಚೇರಿ (SFIO),ಎಲ್ಐಸಿ ಹಾಗೂ ಎಸ್ ಬಿಐ ಅನ್ನು ಕೂಡ ಹೆಸರಿಸಿದ್ದಾರೆ. 

ಮುಂದುವರಿದ ಅದಾನಿ ಗ್ರೂಪ್ ಷೇರು ಕುಸಿತ; ಲೋವರ್ ಸರ್ಕ್ಯೂಟ್ ನಲ್ಲಿ 6 ಷೇರುಗಳು!

ಅದಾನಿ ಗ್ರೂಪ್ ಹಾಗೂ ಸಹಸಂಸ್ಥೆಗಳ ವಿರುದ್ಧ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಒಬ್ಬರ ನೇತೃತ್ವದಲ್ಲಿ ತನಿಖೆಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇನ್ನು ಅದಾನಿ ಸಮೂಹದ ಎಫ್ ಪಿಒ ನಲ್ಲಿ ಎಲ್ಐಸಿ ಹಾಗೂ ಎಸ್ ಬಿಐ ಪ್ರತಿ ಷೇರಿಗೆ 3,200ರೂ. ದರದಲ್ಲಿ ದೊಡ್ಡ ಮೊತ್ತದ ಸಾರ್ವಜನಿಕರ ಹಣವನ್ನು ಹೂಡಿಕೆ ಮಾಡಿರುವ ಬಗ್ಗೆ ಕೂಡ ತನಿಖೆ ನಡೆಸುವಂತೆ ಅರ್ಜಿದಾರರಾದ ಜಯಾ ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ಅರ್ಜಿಯಲ್ಲಿನ ಪ್ರಮುಖಾಂಶಗಳು:
*ಹಿಂಡನ್ ಬರ್ಗ್ ವರದಿ ಬಹಿರಂಗಗೊಂಡ ಬಳಿಕ ಅದಾನಿ ಸಮೂಹದ ಸಂಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
*ಈ ವರದಿ ಅನ್ವಯ ಅದಾನಿ ಸಮೂಹ ತಮ್ಮ ಕಂಪನಿಗಳ ಷೇರುಗಳ ಬೆಲೆಗಳನ್ನು ತಿರುಚುವ ಮೂಲಕ ಸಾರ್ವಜನಿಕ ಹಾಗೂ ಖಾಸಗಿ ವಲಯದ ವಿವಿಧ ಬ್ಯಾಂಕುಗಳಿಂದ 82,000 ಕೋಟಿ ರೂ. ಮೌಲ್ಯದ ಸಾಲಗಳನ್ನು ಪಡೆದಿವೆ.
*ಅದಾನಿ ಸಮೂಹದ ಕಂಪನಿಗಳು ಹಾಗೂ ಅವರ ಪಾಲುದಾರರು ತೆರಿಗೆ ಸ್ವರ್ಗಗಳೆಂದೇ ಕರೆಯಲ್ಪಡುವ  ಮಾರಿಷಸ್, ಸೆಪ್ರಿಸ್, ಯುಎಇ, ಸಿಂಗಾಪುರ ಹಾಗೂ ಕೆರಿಬಿಯನ್ ದ್ವೀಪಗಳಲ್ಲಿ ಆಫ್ ಶೋರ್ ಶೆಲ್ ಕಂಪನಿಗಳನ್ನು ತೆರಿದಿದ್ದು, ಹವಾಲ ಮಾರ್ಗಗಳ ಮೂಲಕ ಹಣ ವರ್ಗಾವಣೆ ಮಾಡುತ್ತಿವೆ. ಈ ಮೂಲಕ ಅಕ್ರಮ ಹಣ ವರ್ಗಾವಣೆ ಕಾಯ್ದೆ 2002ರ ಸೆಕ್ಷನ್ 3ರ ಅಡಿಯಲ್ಲಿ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿವೆ. 

ಹಿಂಡನ್‌ಬರ್ಗ್‌ ವಿರುದ್ಧ ಅದಾನಿ ಕಾನೂನು ಸಮರ: ಅಮೆರಿಕದ ದುಬಾರಿ ಕಾನೂನು ಸಂಸ್ಥೆ ‘ವಾಚ್‌ಟೆಲ್‌’ ನೇಮಕ

*ಎಲ್ಐಸಿ, ಎಸ್ ಬಿಐ ಹಾಗೂ ಸಾರ್ವಜನಿಕ ವಲಯದ ಅನೇಕ ಕಂಪನಿಗಳು ದೊಡ್ಡ ಮೊತ್ತದ ಹಣವನ್ನು ಅದಾನಿ ಎಂಟರ್ ಪ್ರೈಸಸ್ ನಲ್ಲಿ  ಪ್ರತಿ ಷೇರಿಗೆ 3,200 ರೂ. ದರದಲ್ಲಿ ಹೂಡಿಕೆ ಮಾಡಿವೆ. ಆದರೆ, ಮಾರುಕಟ್ಟೆಯಲ್ಲಿ ಪ್ರತಿ ಷೇರಿಗೆ  1,600ರೂ. ಹಾಗೂ 1,800ರೂ. ನಡುವೆ ದರವಿತ್ತು. ಇದು ಎಲ್ಐಸಿ ಹಾಗೂ ಎಸ್ ಬಿಐ ಹಲವಾರು ಸಾವಿರ ಕೋಟಿ ಸಾರ್ವಜನಿಕ ಹಣವನ್ನು ಅಪಾಯದಲ್ಲಿ ಸಿಲುಕಿಸಿವೆ. 
*ಅದಾನಿ ಮಾಲೀಕತ್ವದ ಮುಂದ್ರ ಬಂದರಿನಲ್ಲಿ ಹಲವಾರು ಬಾರಿ ದೊಡ್ಡ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೂ ಅದಾನಿ ಪೋರ್ಟ್ಸ್ ಲಿ. ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ದಳ (NCB)ಸೇರಿದಂತೆ ಯಾವುದೇ ತನಿಖಾ ಸಂಸ್ಥೆ ಏನೂ ಕ್ರಮ ಕೈಗೊಂಡಿಲ್ಲ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!