ನ.5ರೊಳಗೆ ಸಾಲಗಾರರ ಖಾತೆಗೆ ಚಕ್ರಬಡ್ಡಿ ವಾಪಸ್| ಸುಪ್ರೀಂಕೋರ್ಟ್‌ಗೆ ಕೇಂದ್ರ ಮಾಹಿತಿ
ನವದೆಹಲಿ(ಅ.28): ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಇಎಂಐ ಪಾವತಿ ಮುಂದೂಡಿಕೆ ಅವಕಾಶ ಬಳಸಿಕೊಂಡಿದ್ದ ಸಣ್ಣ ಸಾಲಗಾರರ ಖಾತೆಗೆ ಚಕ್ರಬಡ್ಡಿಯನ್ನು ನ.5ರೊಳಗೆ ಮರಳಿಸುವಂತೆ ಎಲ್ಲ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಸಾಲಗಾರರ ಖಾತೆಗೆ ಚಕ್ರಬಡ್ಡಿ ಮೊತ್ತವನ್ನು ಮರಳಿಸಿದ ಬಳಿಕ ಕೇಂದ್ರ ಸರ್ಕಾರದಿಂದ ಆ ಹಣವನ್ನು ಬ್ಯಾಂಕುಗಳು ಪಡೆದುಕೊಳ್ಳಬಹುದು ಎಂಬ ಮಾಹಿತಿಯುಳ್ಳ ಅಫಿಡವಿಟ್ ಅನ್ನು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ನಡುವೆ, ನ.5ರೊಳಗೆ ಚಕ್ರಬಡ್ಡಿ ಮನ್ನಾ ಮಾಡುವಂತೆ ಭಾರತೀಯ ರಿಸವ್‌ರ್ ಬ್ಯಾಂಕ್ ಕೂಡ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.
ಗೃಹ, ಶಿಕ್ಷಣ, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ, ಎಂಎಸ್‌ಎಂಇ ಸಾಲ, ಗೃಹೋಪಯೋಗಿ ವಸ್ತುಗಳ ಖರೀದಿ, ಇನ್ನಿತರೆ 2 ಕೋಟಿ ರು.ವರೆಗಿನ ಸಾಲಕ್ಕೆ ಚಕ್ರಬಡ್ಡಿ ಮನ್ನಾ ಅನ್ವಯವಾಗಲಿದೆ.
2 ಕೋಟಿ ರು.ವರೆಗಿನ ಸಾಲಗಾರರು ಇಎಂಐ ಪಾವತಿ ಮುಂದೂಡಿಕೆ ಸೌಲಭ್ಯವನ್ನು ಸಂಪೂರ್ಣ ಅಥವಾ ಭಾಗಶಃ ಪಡೆದಿದ್ದರೂ ಅಥವಾ ಪಡೆಯದೇ ಇದ್ದರೂ ಅವರಿಗೆ 2020ರ ಮಾ.27ರಿಂದ 2020ರ ಮೇ 23ರವರೆಗಿನ ಅವಧಿಯ ಚಕ್ರಬಡ್ಡಿಯನ್ನು ಮರಳಿಸಬೇಕು ಎಂದು ಕೇಂದ್ರ ಸರ್ಕಾರದ ಅಫಿಡವಿಟ್ ಹೇಳುತ್ತದೆ.