2020ರಲ್ಲಿ ಚೀನಾದ ಆರ್ಥಿಕತೆ ಶೇ.2.3 ಬೆಳವಣಿಗೆ| ಭಾರತ ಸೇರಿದಂತೆ ಎಲ್ಲಾ ಪ್ರಮುಖ ಆರ್ಥಿಕತೆ ಕುಸಿತ| ಕೊರೋನಾ ಜನಕ ಚೀನಾದ ಆರ್ಥಿಕತೆ ಮಾತ್ರ ಏರಿಕೆ
ಬೀಜಿಂಗ್(ಜ.19): ಕೊರೋನಾ ವೈರಸ್‌ನಿಂದಾಗಿ 2020ರಲ್ಲಿ ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ಎಲ್ಲಾ ಪ್ರಮುಖ ಆರ್ಥಿಕತೆಗಳು ಕುಸಿತ ಕಂಡಿದ್ದರೆ, ವೈರಸ್‌ನ ಜನಕನೆಂಬ ಕುಖ್ಯಾತಿ ಪಡೆದಿರುವ ಚೀನಾದ ಆರ್ಥಿಕತೆ ಮಾತ್ರ ಶೇ.2.3ರಷ್ಟುಏರಿಕೆ ಕಂಡಿದೆ. ಇದು ಚೀನಾದ 45 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಕಡಿಮೆ ಬೆಳವಣಿಗೆಯ ದರವಾಗಿದ್ದರೂ, ಕೊರೋನಾ ಅವಧಿಯಲ್ಲಿ ದಾಖಲಿಸಿದ ಅತ್ಯುತ್ತಮ ಅಭಿವೃದ್ಧಿ ದರವೆಂದು ತಜ್ಞರು ವಿಶ್ಲೇಷಿಸಿದ್ದಾರೆ.
ಚೀನಾದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 2020ರಲ್ಲಿ ಶೇ.2.3ರಷ್ಟು, ಅಂದರೆ ಸುಮಾರು 1156 ಲಕ್ಷ ಕೋಟಿ ರು.ನಷ್ಟುಬೆಳವಣಿಗೆ (15.42 ಲಕ್ಷ ಕೋಟಿ ಡಾಲರ್) ಕಂಡಿದೆ ಎಂದು ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ (ಎನ್‌ಬಿಎಸ್) ಸೋಮವಾರ ವರದಿ ಪ್ರಕಟಿಸಿದೆ.
undefined
2020ರ ಮೊದಲ ತ್ರೈಮಾಸಿಕದಲ್ಲಿ ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಚೀನಾದ ಆರ್ಥಿಕತೆ ಮೈನಸ್ ಶೇ.6.8ರಷ್ಟುಕುಸಿತ ಕಂಡಿತ್ತು. ನಂತರ ದೇಶದಲ್ಲಿ ಎಲ್ಲೆಲ್ಲಿ ಕೊರೋನಾ ಹಾವಳಿ ಹೆಚ್ಚಿದೆಯೋ ಅಲ್ಲಿ ಮಾತ್ರ ಸೀಮಿತ ಲಾಕ್‌ಡೌನ್ ಜಾರಿಗೊಳಿಸಿ, ಇನ್ನೆಲ್ಲಾ ಕಡೆ ಆರ್ಥಿಕ ಚಟುವಟಿಕೆ ನಡೆಯಲು ಅವಕಾಶ ನೀಡಿದ್ದರಿಂದ ಹಂತಹಂತವಾಗಿ ಆರ್ಥಿಕತೆ ಚೇತರಿಸಿಕೊಂಡಿದೆ. ಹೀಗಾಗಿ ಕೊನೆಯ ತ್ರೈಮಾಸಿಕದಲ್ಲಿ ಶೇ.6.5ರಷ್ಟುಹಾಗೂ ಮೂರನೇ ತ್ರೈಮಾಸಿಕದಲ್ಲಿ ಶೇ.4.9ರಷ್ಟುಬೆಳವಣಿಗೆ ಕಂಡಿದೆ. ಕೊರೋನಾ ಅವಧಿಯಲ್ಲಿ ಚೀನಾದ ವೈದ್ಯಕೀಯ ಕ್ಷೇತ್ರದ ರಫ್ತು ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಕೂಡ ಆರ್ಥಿಕತೆ ಬೆಳೆಯಲು ಕಾರಣವಾಗಿದೆ ಎಂದು ಎನ್‌ಬಿಎಸ್ ಹೇಳಿದೆ.
ಇದರೊಂದಿಗೆ 2020ರಲ್ಲಿ ಧನಾತ್ಮಕ ಪ್ರಗತಿ ಸಾಧಿಸಿದ ಜಗತ್ತಿನ ಏಕೈಕ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು ಚೀನಾ ಗಳಿಸಿದಂತಾಗಿದೆ. 2021ರಲ್ಲಿ ಚೀನಾ ಶೇ.8ಕ್ಕಿಂತ ಹೆಚ್ಚು ಅಭಿವೃದ್ಧಿ ಕಾಣಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭವಿಷ್ಯ ನುಡಿದಿದೆ.