
ಬೆಂಗಳೂರು (ಜು.21): ಷೇರು ಮಾರುಕಟ್ಟೆಯ ಬಗ್ಗೆ ಜನಪ್ರಿಯ ಮಾತುಗಳಿವೆ. ಅದೇನೆಂದರೆ, ಅದೃಷ್ಟ ಕೈಹಿಡಿಯಿತು ಎಂದರೆ ರಾತ್ರೋರಾತ್ರಿ ನಮ್ಮ ಜೀವನವೇ ಬದಲಾಗುತ್ತೆ ಅಂತಾ. ಅಷ್ಟೇ ಅಪಾಯಕಾರಿಯೂ ಆಗಿರುವ ಷೇರು ಮಾರುಕಟ್ಟೆಯಲ್ಲಿ ನೀವು ತುಂಬಾ ಬುದ್ಧಿವಂತಿಕೆಯಿಂದ ಹಣವನ್ನು ಹೂಡಿಕೆ ಮಾಡಿದರೆ, ಅದು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಕೇವಲ ಒಂದು ದಿನದಲ್ಲಿ ಷೇರು ಮಾರುಕಟ್ಟೆಯಿಂದ ಕೋಟ್ಯಂತರ ರೂಪಾಯಿಗಳನ್ನು ಗಳಿಸಿದ್ದಾರೆ. ಈ ಗಳಿಕೆ ಸುಮಾರು 79 ಕೋಟಿ ರೂ. ಎಂದು ಹೇಳಲಾಗುತ್ತದೆ.
ವಿಚಾರ ಏನೆಂದರೆ, ನಾರಾ ಭುವನೇಶ್ವರಿ ಹೂಡಿಕೆ ಮಾಡಿರುವ ಷೇರುಗಳಲ್ಲಿ ಒಂದು ಭಾರಿ ಏರಿಕೆ ಕಂಡಿದೆ. ಈ ಷೇರು ಹೆರಿಟೇಜ್ ಫುಡ್ಸ್ ಲಿಮಿಟೆಡ್‌ನದ್ದಾಗಿದೆ. ಈ ಡೈರಿ ಕಂಪನಿ ಹೆರಿಟೇಜ್ ಫುಡ್ಸ್ ಲಿಮಿಟೆಡ್ ಅನ್ನು 1992 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇದು ದಕ್ಷಿಣ ಭಾರತದಲ್ಲೂ ಸಾಕಷ್ಟು ಜನಪ್ರಿಯವಾಗಿದೆ. ಚಂದ್ರಬಾಬು ನಾಯ್ಡು ಅವರ ಮಾಲೀಕತ್ವದ ಈ ಕಂಪನಿಯಲ್ಲಿ ನಾರಾ ಭುವನೇಶ್ವರಿ ಹೆಚ್ಚಿನ ಪಾಲು ಹೊಂದಿದ್ದಾರೆ ಎನ್ನಲಾಗಿದೆ.
ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಪ್ರಾರಂಭಿಸಿದ ಹೆರಿಟೇಜ್ ಫುಡ್ಸ್, ಡೈರಿ, ಚಿಲ್ಲರೆ ವ್ಯಾಪಾರ ಮತ್ತು ಕೃಷಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತದೆ. ಶುಕ್ರವಾರ ಷೇರು ಮಾರುಕಟ್ಟೆ ಕುಸಿದರೂ, ಈ ಕಂಪನಿಯ ಷೇರುಗಳು ಸುಮಾರು ಏಳು ಪ್ರತಿಶತದಷ್ಟು ಏರಿಕೆ ಕಂಡವು. ಇದರ ನಂತರ, ಷೇರಿನ ಮೌಲ್ಯವು 493.25 ರೂ.ಗೆ ಏರಿತು.
ಷೇರು ಬೆಲೆಯಲ್ಲಿನ ಈ ಏರಿಕೆಯ ನಂತರ, ನಾರಾ ಭುವನೇಶ್ವರಿ ಒಂದು ದಿನದಲ್ಲಿ 78,80,11,646 ರೂ.ಗಳ ಅಪಾರ ಮೊತ್ತವನ್ನು ಗಳಿಸಿದ್ದಾರೆ. ನಾರಾ ಭುವನೇಶ್ವರಿ ಹೆರಿಟೇಜ್ ಫುಡ್ಸ್ ಲಿಮಿಟೆಡ್‌ನ ಉಪಾಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕಿ. ಅವರು ಈ ಕಂಪನಿಯಲ್ಲಿ ಶೇಕಡಾ 24.37 ರಷ್ಟು ಪಾಲನ್ನು ಹೊಂದಿದ್ದಾರೆ. ಅಂದರೆ ಅವರ ಬಳಿಕ 2,26,11,525 ಷೇರುಗಳನ್ನು ಹೊಂದಿದ್ದರು. ನಾರಾ ಭುವನೇಶ್ವರಿ ಟಿಡಿಪಿ ಸಂಸ್ಥಾಪಕ ಮತ್ತು ತೆಲುಗು ಸಿನಿಮಾ ಸೂಪರ್‌ಸ್ಟಾರ್ ಎನ್.ಟಿ. ರಾಮರಾವ್ ಅವರ ಪುತ್ರಿ. ಚಂದ್ರಬಾಬು ನಾಯ್ಡು ಮತ್ತು ನಾರಾ ಭುವನೇಶ್ವರಿ 1981 ರಲ್ಲಿ ವಿವಾಹವಾದರು.
Disclaimer:(ಇಲ್ಲಿ ಒದಗಿಸಲಾದ ಮಾಹಿತಿಯು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ ಎಂಬುದನ್ನು ಇಲ್ಲಿ ಗಮನಿಸುವುದು ಮುಖ್ಯ. ಹೂಡಿಕೆದಾರರಾಗಿ ಹೂಡಿಕೆ ಮಾಡುವ ಮೊದಲು ಯಾವಾಗಲೂ ತಜ್ಞರ ಸಲಹೆಯನ್ನು ಪಡೆಯಿರಿ. ಏಷ್ಯಾನೆಟ್ ಸುವರ್ಣನ್ಯೂಸ ಹಣವನ್ನು ಹೂಡಿಕೆ ಮಾಡಲು ಎಂದಿಗೂ ಶಿಫಾರಸು ಮಾಡುವುದಿಲ್ಲ.)
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.