
ನವದೆಹಲಿ (ಸೆ.16): ರೈಡ್-ಹೇಲಿಂಗ್ (ಆಟೋ ಹಾಗೂ ಬೈಕ್ ಟ್ಯಾಕ್ಸಿ) ಆಪ್‌ಗಳಲ್ಲಿ ಪ್ರಯಾಣ ಆರಂಭವಾಗುವ ಮುನ್ನವೇ ಗ್ರಾಹಕರಿಂದ ಹೆಚ್ಚುವರಿ ಹಣ ಅಥವಾ 'ಟಿಪ್ಸ್' ಪಡೆಯುವ ತಂತ್ರದ ವಿರುದ್ಧ 'ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ' (CCPA) ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ನಿಯಮ ಉಲ್ಲಂಘಿಸಿದ 'ರಾಪಿಡೋ' (Rapido) ಸಂಸ್ಥೆಗೆ ₹10 ಲಕ್ಷ ದಂಡ ವಿಧಿಸಿರುವ ಸಿಸಿಪಿಎ, ತನಿಖೆಯ ವೇಳೆ ನಿಯಮ ಉಲ್ಲಂಘನೆಯ ಫೀಚರ್ ತೆಗೆದುಹಾಕಿದ 'ನಮ್ಮ ಯಾತ್ರಿ' (Namma Yatri) ಆಪ್ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಸೇವೆಯನ್ನು ಒದಗಿಸುವ ಮುನ್ನವೇ ಪ್ರಯಾಣಿಕರಿಂದ ಹೆಚ್ಚುವರಿ ಹಣವನ್ನು ಕೇಳುವುದು, ಸ್ವಯಂಪ್ರೇರಿತವಾಗಿ ನೀಡಬೇಕಾದ 'ಟಿಪ್ಸ್' ವ್ಯವಸ್ಥೆಯನ್ನು ಬಲವಂತದ ಪಾವತಿಯನ್ನಾಗಿ ಬದಲಾಯಿಸುತ್ತದೆ ಮತ್ತು ಹೆಚ್ಚು ಹಣ ಪಾವತಿಸುವ ಸಾಮರ್ಥ್ಯವಿರುವವರಿಗೆ ಮಾತ್ರ ಸೇವೆಯನ್ನು ಲಭ್ಯವಾಗುವಂತೆ ಮಾಡುತ್ತದೆ ಎಂದು ಸಿಸಿಪಿಎ ಸ್ಪಷ್ಟಪಡಿಸಿದೆ.
ಮೇ 16, 2025 ರಂದು ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್‌ಗಳ ಪ್ರಿ-ರೈಡ್ ಟಿಪ್ಪಿಂಗ್ ಮತ್ತು ಬೆಲೆ ನಿಗದಿ ಪದ್ಧತಿಯ ವಿರುದ್ಧ ಬಂದ ಸಾರ್ವಜನಿಕ ದೂರಿನ ಆಧಾರದ ಮೇಲೆ ಸಿಸಿಪಿಎ ಈ ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ.
ರಾಪಿಡೋ ಆಪ್‌ನಲ್ಲಿದ್ದ “ಚಾಲಕರು (ಕ್ಯಾಪ್ಟನ್ಸ್) ₹60 ಕ್ಕೆ ನಿಮ್ಮ ಸವಾರಿ ಸ್ವೀಕರಿಸುತ್ತಿಲ್ಲ. +10, +20, +30 ರೂ. ಹೆಚ್ಚುವರಿ ಸೇರಿಸಿ ನೋಡಿ” ಹಾಗೂ “ಹೆಚ್ಚಿನ ಬೆಲೆ ನೀಡಿದರೆ, ರೈಡ್ ಸಿಗುವ ಸಾಧ್ಯತೆ ಹೆಚ್ಚು” ಎಂಬ ಸಂದೇಶಗಳ (Prompts) ವಿರುದ್ಧ ಸಿಸಿಪಿಎ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಅಡ್ವಾನ್ಸ್ ಟಿಪ್ಸ್ ಕಾನೂನುಬಾಹಿರ: ಸೇವೆ ಸಂಪೂರ್ಣವಾಗಿ ಪೂರ್ಣಗೊಂಡ ನಂತರ ಗ್ರಾಹಕರು ಸ್ವಇಚ್ಛೆಯಿಂದ ನೀಡುವ ಹಣವನ್ನು 'ಟಿಪ್ಸ್' ಎನ್ನಲಾಗುತ್ತದೆ. ಹೀಗಾಗಿ ಸೇವೆಯ ಆರಂಭಕ್ಕೂ ಮುನ್ನವೇ ಪಡೆಯುವ 'ಅಡ್ವಾನ್ಸ್ ಟಿಪ್ಸ್' (Advance Tip) ಪರಿಕಲ್ಪನೆಯು ಕಾನೂನುಬದ್ಧವಾಗಿ ಅನುಮೋದಿಸಲು ಸಾಧ್ಯವಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಡಾರ್ಕ್ ಪ್ಯಾಟರ್ನ್ಸ್ (Dark Patterns): ರಾಪಿಡೋ ಬಳಸಿರುವ ಈ ಇಂಟರ್‌ಫೇಸ್ 'ಗ್ರಾಹಕರ ಹಕ್ಕುಗಳ ರಕ್ಷಣೆ ಕಾಯ್ದೆ- 2023' ರ (Guidelines for Prevention and Regulation of Dark Patterns, 2023) ಅಡಿಯಲ್ಲಿ 'ಕನ್ಫರ್ಮ್ ಶಾಮಿಂಗ್' (Confirm shaming) ಮತ್ತು 'ಇಂಟರ್‌ಫೇಸ್ ಹಸ್ತಕ್ಷೇಪ' (Interface interference) ಉಲ್ಲಂಘನೆಯಾಗಿದೆ ಎಂದು ಸಿಸಿಪಿಎ ಕಂಡುಕೊಂಡಿದೆ.
ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ಹಾದಿತಪ್ಪಿಸುವ ಜಾಹೀರಾತು, ಅಸಮಾನ ವ್ಯಾಪಾರ ಪದ್ಧತಿ ಮತ್ತು ಡಾರ್ಕ್ ಪ್ಯಾಟರ್ನ್ ಬಳಸಿದ್ದಕ್ಕಾಗಿ ರಾಪಿಡೋಗೆ ₹10 ಲಕ್ಷ ದಂಡ ವಿಧಿಸಲಾಗಿದ್ದು, ಇಂತಹ ಸಂದೇಶಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ನಿರ್ದೇಶಿಸಲಾಗಿದೆ.
ನಮ್ಮ ಯಾತ್ರಿ ಆಪ್‌ನಲ್ಲಿ “ಅಧಿಕ ಬೇಡಿಕೆ ಇದೆ (High Demand), ಹೆಚ್ಚುವರಿ ಟಿಪ್ಸ್ ನೀಡುವುದರಿಂದ ನಿಮಗೆ ಬೇಗ ರೈಡ್ ಸಿಗಲಿದೆ” ಎಂಬ ಸಂದೇಶವನ್ನು ಪ್ರದರ್ಶಿಸಲಾಗುತ್ತಿತ್ತು. ಇದು ಕೂಡ ಗ್ರಾಹಕರನ್ನು ಹೆಚ್ಚುವರಿ ಹಣ ಪಾವತಿಸುವಂತೆ ಪ್ರಚೋದಿಸುತ್ತದೆ ಮತ್ತು ಹೆಚ್ಚುವರಿ ಹಣ ನೀಡದ ಗ್ರಾಹಕರಿಗೆ ಅನ್ಯಾಯವೆಸಗುತ್ತದೆ ಎಂದು ಸಿಸಿಪಿಎ ಅಭಿಪ್ರಾಯಪಟ್ಟಿತ್ತು.
ಈ ಫೀಚರ್ ಸಂಪೂರ್ಣವಾಗಿ ಐಚ್ಛಿಕವಾಗಿತ್ತು ಹಾಗೂ ಸಂಗ್ರಹವಾದ ಹೆಚ್ಚುವರಿ ಮೊತ್ತವು ನೇರವಾಗಿ ಚಾಲಕರಿಗೇ ತಲುಪುತ್ತಿತ್ತು ಎಂದು ನಮ್ಮ ಯಾತ್ರಿ ವಾದಿಸಿತು.
ಈ ಫೀಚರ್ ಅನ್ನು ಆಪ್‌ನಿಂದ ತೆಗೆದುಹಾಕಿದ್ದರಿಂದ ಕಂಪನಿಗೆ ಸುಮಾರು ₹50 ಕೋಟಿ ಆದಾಯದ ನಷ್ಟ ಉಂಟಾಗಿದೆ ಎಂದು ಸಂಸ್ಥೆ ತಿಳಿಸಿತು.
'ಹೆಚ್ಚುವರಿ ದರ' (Extra Fare) ನೀಡಿದ ಪ್ರಯಾಣಿಕರಿಗೂ ಆಟೋ ಸಿಗಲು ಹೆಚ್ಚಿನ ಸಮಯ ಹಿಡಿದಿದೆ ಮತ್ತು ಚಾಲಕರ ಸ್ವೀಕಾರ ದರ ಕಡಿಮೆಯಿದೆ ಎಂಬುದಕ್ಕೆ ಸಾಕ್ಷಿಯಾಗಿ ಡೇಟಾವನ್ನು ಒದಗಿಸಿದ ಸಂಸ್ಥೆ, ಹೆಚ್ಚು ಹಣ ನೀಡಿದ ಪ್ರಯಾಣಿಕರಿಗೆ ಯಾವುದೇ ವಿಶೇಷ ಆದ್ಯತೆ ಸಿಕ್ಕಿಲ್ಲ ಎಂದು ಪ್ರತಿಪಾದಿಸಿತು.
ಸಿಸಿಪಿಎ ಶೋಕಾಸ್ ನೋಟಿಸ್ ನೀಡುವ ಮುನ್ನವೇ ನಮ್ಮ ಯಾತ್ರಿ "ಹೈ ಡಿಮ್ಯಾಂಡ್" ಸಂದೇಶವನ್ನು ಹಿಂಪಡೆದಿತ್ತು. ತದನಂತರ 'ಎಕ್ಸ್‌ಟ್ರಾ ಫೇರ್' ಫೀಚರ್ ಅನ್ನೇ ಸಂಪೂರ್ಣವಾಗಿ ತೆಗೆದುಹಾಕಿದ್ದನ್ನು ಪರಿಗಣಿಸಿದ ಸಿಸಿಪಿಎ, ಸಂಸ್ಥೆಯ ವಿರುದ್ಧದ ವಿಚಾರಣೆಯನ್ನು ಮುಕ್ತಾಯಗೊಳಿಸಿತು.
ತನ್ನ ಆದೇಶದಲ್ಲಿ 'ಮೋಟರ್ ವೆಹಿಕಲ್ ಅಗ್ರಿಗೇಟರ್ ಗೈಡ್‌ಲೈನ್ಸ್ 2025' (Motor Vehicle Aggregator Guidelines, 2025) ಅನ್ನು ಉಲ್ಲೇಖಿಸಿರುವ ಸಿಸಿಪಿಎ, ಪ್ರಯಾಣ ಮುಗಿದ ನಂತರವಷ್ಟೇ ಸ್ವಯಂಪ್ರೇರಿತ ಟಿಪ್ಸ್ ನೀಡಲು ಅವಕಾಶವಿದೆಯೇ ಹೊರತು ಬುಕಿಂಗ್ ಹಂತದಲ್ಲಾಗಲಿ ಅಥವಾ ಪ್ರಯಾಣದ ಮಧ್ಯದಲ್ಲಾಗಲಿ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ರಾಪಿಡೋ ಪರವಾಗಿ ನ್ಯಾಯವಾದಿ ಕೌಸ್ತುಭ್ ಸೋಮ್ ವಾದ ಮಂಡಿಸಿದರೆ, ನಮ್ಮ ಯಾತ್ರಿ ಪರವಾಗಿ 'ಆರ್ಗಸ್ ಪಾರ್ಟ್‌ನರ್ಸ್'ನ (Argus Partners) ನ್ಯಾಯವಾದಿ ಭವ್ಯ ಮೋಹನ್ ವಾದ ಮಂಡಿಸಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.